ಶ್ರೀ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ನೂತನ ಗೃಹಸಚಿವರಾಗಿ 26-08-2019ರಂದು ಅಧಿಕಾರ ಸ್ವೀಕರಿಸಿದರು.
28-01-1960 ರಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಸುಪುತ್ರರಾಗಿ ಜನಿಸಿದ ಬಸವರಾಜ ಬೊಮ್ಮಾಯಿ ಅವರು ಬಿಇ ಮೆಕ್ಯಾನಿಕಲ್ ಪದವೀಧರರು. ಜನತಾದಳದೊಂದಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಶ್ರೀಯುತರು 1998 ಮತ್ತು 2004ರಲ್ಲಿ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ರಾಜ್ಯ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು. 2008ರ ಫೆಬ್ರವರಿಯಲ್ಲಿ ಜನತಾದಳ (ಸಂಯುಕ್ತ) ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದರು.
2008ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶ್ರೀಯುತರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. 2008 ರಿಂದ 2013ರ ತನಕ ಜಲಸಂಪನ್ಮೂಲಗಳ ಸಚಿವರಾಗಿ ಸೇವೆ ಸಲ್ಲಿಸಿದರು.
ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಮುಂಬರುವ ದಿನಗಳಲ್ಲಿ ಗೃಹ ಸಚಿವಾಲಯದಲ್ಲಿ ಮತ್ತು ಸಂಬಂಧಿತ ಇಲಾಖೆಗಳಲ್ಲಿ ಭಾರಿ ಸುಧಾರಣೆಗಳನ್ನು ತರುವುದಾಗಿ ಭರವಸೆ ನೀಡಿದರು. ಆಧುನಿಕ ತಂತ್ರಜ್ಞಾನಗಳ ಉಪಯೋಗ, ಆಧುನಿಕ ಶಸ್ತ್ರಾಸ್ತ್ರಗಳ ಬಳಕೆ ಮತ್ತು ಗೃಹ ಇಲಾಖೆಯ ಆಧುನೀಕರಣಕ್ಕೆ ತಮ್ಮ ಆದ್ಯತೆ ಎಂದು ಹೇಳಿದರು.
ಹಣಕಾಸು ಇಲಾಖೆಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನೇಮಕಾತಿ, ತರಬೇತಿ ಸೌಲಭ್ಯಗಳು ಮತ್ತು ನೈತಿಕ ಸ್ಥೈರ್ಯದ ಪ್ರವರ್ಧನೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಅಗ್ನಿಶಾಮಕದಳ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಕಾರಾಗೃಹ ಇಲಾಖೆಗಳಲ್ಲಿ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದಾಗಿ ತಿಳಿಸಿದರು.
ಸಕಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಾನೂನು ಸುವ್ಯವಸ್ಥೆ ಪಾಲನೆಗೆ ಪ್ರಥಮಾದ್ಯತೆ ನೀಡಬೇಕು ಎಂದು ತಾಕೀತು ಮಾಡಿದರು.
ಸಮಾಜ ವಿರೋಧಿ ಶಕ್ತಿಗಳನ್ನು ಮಟ್ಟಹಾಕಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಅವರು ಹೇಳಿದರು.
ಗಣೇಶೋತ್ಸವ ಮತ್ತು ಮೊಹರಂ ಹಬ್ಬಗಳು ಏಕಕಾಲದಲ್ಲಿ ಬಂದಿರುವುದರಿಂದ ಶಾಂತಿಯುತವಾಗಿ ನಡೆಸುವಂತೆ ಸೂಚಿಸಿರುವುದಾಗಿ ಅವರು ನುಡಿದರು.
ಪೊಲೀಸ್ ಠಾಣೆಗಳ ಆಧುನೀಕರಣಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗೆ ಅತ್ಯಾಧುನಿಕ ಉಪಕರಣಗಳು ಮತ್ತು ಸುಧಾರಿತ ಶಸ್ತ್ರಾಸ್ತ್ರಗಳನ್ನು ಒದಗಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸೈಬರ್ ಕ್ರೈಂ ಘಟಕವನ್ನು ಬಲಪಡಿಸಿ ಸೈಬರ್ ಅಪರಾಧಗಳನ್ನು ನಿಯಂತ್ರಿಸಲಾಗುವುದು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಚಿದರು.
ಪೊಲೀಸ್ ವ್ಯವಸ್ಥೆಯು ಕಲ್ಯಾಣರಾಜ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪೊಲೀಸ್ ಠಾಣೆಗೆ ಬರುವವರನ್ನು ಸೌಹಾರ್ದಯುತವಾಗಿ ನಡೆಸಿಕೊಳ್ಳಬೇಕು ಮತ್ತು ಅಪರಾಧಿಗಳನ್ನು ದಮನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಝೀರೋ ಟ್ರಾಫಿಕ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ ಎಂದು ಪ್ರತಿಪಾದಿಸಿದರು. ಇತ್ತೀಚೆಗೆ ಕೆಲವು ಸಮಾಜಘಾತಕ ಶಕ್ತಿಗಳು ಸನ್ನಿವೇಶಗಳ ದುರ್ಲಾಭ ಪಡೆಯಲು ಮುಂದಾಗಿವೆ. ಇಂಥ ದುಷ್ಟಶಕ್ತಿಗಳ ಹುಟ್ಟಡಗಿಸಬೇಕು. ರಾಜ್ಯದ ಯಾವುದೇ ಪ್ರದೇಶದಲ್ಲಿ ಅಹಿತಕರ ಘಟನೆಗಳು ಜರುಗಿದಲ್ಲಿ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದುಷ್ಕರ್ಮಿಗಳು ಎಷ್ಟೇ ಪ್ರಭಾವ ಹೊಂದಿದ್ದರೂ ಯಾವುದೇ ಮುಲಾಜಿಗೆ ಮಣಿಯದೆ ದಾಷ್ರ್ಟದ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ದೇಶದ ನಾನಾ ಭಾಗಗಳಿಂದ ನುಸುಳಿರುವ ದುಷ್ಟ ಶಕ್ತಿಗಳು ಉಗ್ರ ಕೃತ್ಯಗಳನ್ನೆಸಗಲು ಹುನ್ನಾರ ಹಾಕಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಅನುಮತಿ ಪಡೆಯದೇ ವಾಸ ಮಾಡುತ್ತಿರುವ ವಿದೇಶೀ ಪ್ರಜೆಗಳ ಮೇಲೆ ಹದ್ದಿನ ಕಣ್ಗಾವಲು ಇರಿಸಬೇಕು. ಅವರ ವೀಸಾ ಅವಧಿ ಪೂರ್ಣಗೊಂಡಿದ್ದರೆ ಪಾಸ್ ಪೋರ್ಟ್‍ಗಳನ್ನು ಜಪ್ತಿ ಮಾಡಬೇಕು ಎಂದು ಸೂಚÀನೆ ನೀಡಿದರು.
ಇತ್ತೀಚೆಗೆ NIA (ರಾಷ್ಟ್ರೀಯ ತನಿಖಾದಳ)ನ ಅಧಿಕಾರಿಗಳು ದೊಡ್ಡಬಳ್ಳಾಪುರ, ರಾಮನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತಿತರೆಡೆ ಕೆಲವು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವರು. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಅಬಾಧಿತವಾಗಿರಬೇಕಿದೆ. ಈ ನಿಟ್ಟಿನಲ್ಲಿ ಶಂಕಿತರ ಪತ್ತೆಯಾದಲ್ಲಿ ಅವರ ಮೇಲೆ ಕಣ್ಗಾವಲು ಇರಿಸಬೇಕು ಎಂದು ಸಚಿವರು ಪ್ರತಿಪಾದಿಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸಲಾಗುವುದು. ಇದರಲ್ಲಿ ಸಂಶಯವೇ ಬೇಡ. ಗೋಹತ್ಯೆ ನಿಷೇಧ ಕಾಯಿದೆ ಹೊಸದೇನಾಗಿಲ್ಲ. ಇದು 1960ರಿಂದಲೇ ಕೇಂದ್ರ ಸರ್ಕಾರದಿಂದ ಜಾರಿಗೊಂಡಿದೆ. ಪ್ರಸ್ತುತ ರಾಜ್ಯದಲ್ಲಿ ಗೋಹತ್ಯೆಗೆ ಕಡಿವಾಣ ಹಾಕಲಾಗುವುದು. ಈ ಕುರಿತ ಕಾಯ್ದೆ ಕರ್ನಾಟಕವಷ್ಟೇ ಅಲ್ಲದೆ ಇತರ ಕೆಲವು ರಾಜ್ಯಗಳಲ್ಲೂ ಜಾರಿಗೊಂಡಿದ್ದು ಆ ರಾಜ್ಯಗಳಲ್ಲಿ ಅನುಷ್ಠಾನಗೊಂಡಿರುವ ಬಗೆಯನ್ನು ಅಧ್ಯಯನ ಮಾಡಲಾಗುವುದು. ಸಾಧಕ-ಬಾಧಕಗಳನ್ನು ಅರಿತ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾಡಹಬ್ಬ ದಸರಾ ವೇಳೆಗೆ ರಾಜ್ಯ ಪೊಲೀಸರಿಗೆ ವೇತನ ಹೆಚ್ಚಳದ ಉಡುಗೊರೆ ಲಭಿಸಲಿದೆ. ಈ ನಿಟ್ಟಿನಲ್ಲಿ ಔರಾದ್ಕರ್ ವರದಿಯನ್ನು ಖemove ಜಾರಿಗೆ ತರಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿಶ್ಚಯಿಸಲಾಗಿದೆ. ಇಲ್ಲಿ ಗೊಂದಲಕ್ಕೆಡೆಯಿಲ್ಲ. ದಸರಾ ವೇಳೆಗೆ ರಾಜ್ಯ ಪೊಲೀಸರು ವೇತನ ಹೆಚ್ಚಳದ ಉಡುಗೊರೆ ಪಡೆಯಲಿದ್ದಾರೆ.
ಔರಾದ್ಕರ್ ವರದಿಯ ಶಿಫಾರಸಿನ ಮೇರೆಗೆ ಪೇದೆಯಿಂದ ಡಿವೈಎಸ್‍ಪಿವರೆಗಿನ ಸಿಬ್ಬಂದಿಯ ವೇತನ ಪರಿಷ್ಕರಿಸಲಾಗುವುದು ಜೊತೆಗೆ ಕಾರಾಗೃಹ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಯ ವೇತನ ಪರಿಷ್ಕರಣೆ ನಿಟ್ಟಿನಲ್ಲಿಯೂ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಅರುಹಿದರು.
ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದರೆ ಈ ನಿಟ್ಟಿನಲ್ಲಿ ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಕೇಂದ್ರ ಸರ್ಕಾರವೇ ಇದನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಮತ್ತು ಜನತೆಯ ಭಾವನೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.