ಬೆಂಗಳೂರು ನಗರ ಪೊಲೀಸರ ರಾತ್ರಿಗಸ್ತಿಗೆ ಅಸೀಮ ಬಲ ಪ್ರಾಪ್ತವಾಗಿದೆ. ರಾಣಾ ಮತ್ತು ನಿಧಿ ಎಂಬ ಶ್ವಾನ ಜೋಡಿಯನ್ನು ರಾತ್ರಿ ಗಸ್ತು ಪಡೆಗೆ ಸೇರ್ಪಡೆಗೊಳಿಸಲಾಗಿದೆ. ಇವುಗಳನ್ನು ನಗರದ ಕೇ9 ಸ್ಕ್ವಾಡ್‍ನಲ್ಲಿ ಗಸ್ತುಕಾರ್ಯಕ್ಕೆ ಬಳಸಲಾಗುತ್ತಿದೆ. ಇವು ಅಪರಾಧಿಗಳ ಪತ್ತೆ ಕಾರ್ಯದಲ್ಲಿ ವಿಶೇಷ ತರಬೇತಿ ಪಡೆದಿವೆÉ. ರಾಣಾ ಮತ್ತು ನಿಧಿಯನ್ನು ವೈಟ್‍ಫೀಲ್ಡ್ ಉಪವಿಭಾಗಕ್ಕೆ ಪ್ರಾಮುಖ್ಯತೆ ಆಧಾರದಲ್ಲಿ ತೊಡಗಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಇವು ಬೆಲ್ಜಿಯಂನ ಮಲಿನಾಯ್ಸ್ ತಳಿಯ ನಾಯಿಗಳಾಗಿದ್ದು ಇವುಗಳನ್ನು ಜಗತ್ತಿನಾದ್ಯಂತ ಕಾನೂನು ಅನುಷ್ಠಾನ ಮತ್ತು ಸೇನಾ ಘಟಕಗಳಲ್ಲಿ ಉಪಯೋಗಿಸಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಈ ತಳಿಯ ಈ ಎರಡು ಶ್ವಾನಗಳನ್ನು ಕರ್ನಾಟಕ ಪೊಲೀಸ್ ಪಡೆಯಲ್ಲಿ ನಿಯೋಜಿಸಲಾಗಿದೆ. ಒಸಾಮಾ ಬಿನ್ ಲಾಡೆನ್ ಸಂಹಾರಕ್ಕಾಗಿ ನಡೆದ ಅಬ್ಬೋಟಾಬಾದ್ ಕಾರ್ಯಾಚರಣೆಯಲ್ಲಿ ಅಮೆರಿಕ ನೌಕಾದಳವು ಈ ತಳಿಯ ಶ್ವಾನಗಳನ್ನು ಬಳಕೆ ಮಾಡಿತ್ತು.
“ಈ ಎರಡೂ ನಾಯಿಗಳಿಗೆ ವಾಸನೆ ಮೂಲಕ ಶಂಕಿತರನ್ನು ಸೆರೆ ಹಿಡಿಯಲು ಸೂಕ್ತ ತರಬೇತಿ ನೀಡಲಾಗಿದೆ. ಇವುಗಳನ್ನು ರಾತ್ರಿ ಗಸ್ತು ಕಾರ್ಯಕ್ಕೆ ನಿಯುಕ್ತಿ ಮಾಡಲಾಗುತ್ತಿದೆ. ತನ್ಮೂಲಕ ಇವು ದುಷ್ಕರ್ಮಿಗಳನ್ನು ಬೆನ್ನಟ್ಟಿ ಹಿಡಿಯಲು ನೆರವಾಗಲಿವೆÉ” ಎಂದು ಅಂದಿನ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಟಿ. ಸುನೀಲ್‍ಕುಮಾರ್ ಅವರು ತಿಳಿಸಿದರು.
ರಾಣಾ ಮತ್ತು ನಿಧಿ ಇಬ್ಬರನ್ನೂ ಅವು ಕೇವಲ ನಾಲ್ಕು ತಿಂಗಳ ಮರಿಗಳಾಗಿದ್ದಾಗ ಮೊದಲ ಬಾರಿಗೆ ಆಡುಗೋಡಿಯ ನಗರ ಸಶಸ್ತ್ರ ಮೀಸಲು (ಅಂಖ) ಪಡೆಗೆ ಕರೆತರಲಾಯಿತು. ಅವುಗಳಿಗೆ ಆರಂಭಿಕ ತರಬೇತಿಯ ಭಾಗವಾಗಿ ಕಟ್ಟುನಿಟ್ಟಿನ ಪಥ್ಯದಲ್ಲಿರಿಸಲಾಯಿತು. ಅವುಗಳನ್ನು ಬೆಳೆಸುವ ಕಾರ್ಯದಲ್ಲಿ ನ್ಯೂಜಿಲೆಂಡಿನಿಂದ ಶ್ವಾನ ಮನಃಶಾಸ್ತ್ರಜ್ಞ ಅಮೃತ್ ಎಸ್. ಹಿರಣ್ಣ ಅವರನ್ನು ಕರೆಸಿ ನೆರವು ಪಡೆಯಲಾಯಿತು. ಇವರನ್ನು ಬೆಂಗಳೂರಿಗೆ ಕರೆತರಲಾಗಿದ್ದು ಅವರೀಗ ರಾಣಾ ಮತ್ತು ನಿಧಿಯ ತರಬೇತಿ ಕಾರ್ಯದಲ್ಲಿ ನಗರ ಪೊಲೀಸರಿಗೆ ಸಹಕರಿಸುತ್ತಿದ್ದಾರೆ.