ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಿಂದ ಪೊಲೀಸ್ ಇಲಾಖೆಗೆ ಕಾಯಕಲ್ಪ

0
1377

ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಖಚಿತಪಡಿಸಿಕೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ.

ವಿಧಾನಸೌಧದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯಸರ್ಕಾರವು ರಾಜ್ಯದೆಲ್ಲೆಡೆ, ವಿಶೇಷವಾಗಿ ರಾಜಧಾನಿಯಲ್ಲಿ ಯಾವುದೇ ಸಮಾಜವಿರೋಧಿ ಚಟುವಟಿಕೆಯನ್ನು ಸಹಿಸುವುದಿಲ್ಲ, ರಾಜ್ಯದ ಯಾವುದೇ ಭಾಗದಲ್ಲಿ ಸೌಹಾರ್ದವನ್ನು ಕದಡುವ ಯಾವುದೇ ಘಟನೆಗಳನ್ನು ತಡೆಗಟ್ಟಲು ಅಧಿಕಾರಿಗಳು ಕಟ್ಟೆಚ್ಚರದಲ್ಲಿರಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಮಕ್ಕಳ ಕಳ್ಳರ ಕುರಿತ ವದಂತಿಗಳ ಹಿನ್ನೆಲೆಯಲ್ಲಿ ವ್ಯಕ್ತಿ ಹತ್ಯೆ ಬಳಿಕದ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಮಾಹಿತಿ ಸಿಎಂ ನೀಡಿದರು. ಪೊಲೀಸ್ ಮಹಾನಿರ್ದೇಶಕಿ ಮತ್ತು ಪೊಲೀಸ್ ಮಹಾ ನಿರೀಕ್ಷಕಿ ನೀಲಮಣಿ ಎನ್.ರಾಜು ಅವರು ಇಂತಹ ಘಟನೆಗಳನ್ನು ತಡೆಗಟ್ಟಲು ಪೊಲೀಸರು ಸನ್ನದ್ಧರಾಗಿದ್ದು  ಸಮಸ್ಯೆ ಬಗ್ಗೆ ಅರಿವು ಮೂಡಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೋಮುವಾದಿಗಳ ಮೇಲೆ ಕಣ್ಗಾವಲಿಗೆ ಕರೆ

ರಾಜ್ಯದಲ್ಲಿ ಸಮಾಜವಿರೋಧಿ ಶಕ್ತಿಗಳು ಅಥವಾ ಮಾಫಿಯಾದೊಂದಿಗೆ ಸಂಪರ್ಕ ಹೊಂದದಂತೆ ಮುಖ್ಯಮಂತ್ರಿಯವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಡಿಜಿಪಿ ಮತ್ತು ಐಜಿಪಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ, ಕುಮಾರಸ್ವಾಮಿ  “ನಾನು ಮುಖ್ಯಮಂತ್ರಿಯಾಗಿರುವ ತನಕ ರಾಜ್ಯದಲ್ಲಿ ಯಾವುದೇ ಕೋಮು ಹಿಂಸಾಚಾರ ನಡೆದರೆ ಸಹಿಸಲಾರೆ ಎಂದು ಗುಡುಗಿದರು. ಕೋಮುಗಲಭೆಗಳನ್ನು ನಡೆಸುವ ಸಮಾಜವಿರೋಧಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜನತೆಯ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವಂಥ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಸೂಚನೆ ನೀಡಿದರು.

ನಕಲಿ ಎನ್‍ಕೌಂಟರ್‍ಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ ಅವರು ಕಳೆದ ವರ್ಷ ಇಚಿಡಿ ತಾಲ್ಲೂಕಿನ, ಕೊಂಕಣಗಾಂವ್‍ನಲ್ಲಿ ಕುಖ್ಯಾತ ಶಾರ್ಪ್ ಶೂಟರ್ ಮತ್ತು ಸುಪಾರಿ ಹಂತಕ ಧರ್ಮರಾಜ್ ಚಡಚಣನನ್ನು ಇದೇ ರೀತಿ ಹತ್ಯೆ ಮಾಡಿರುವುದರ ವಿರುದ್ಧ ಉತ್ತರ ವಲಯದ ಐಜಿಪಿಯವರಿಗೆ ಎಚ್ಚರಿಕೆ ನೀಡಿದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಅವರು ಪೊಲೀಸ್ ಇಲಾಖೆಯು ಅಪರಾಧಗಳ ಸಂಖ್ಯೆ ತಗ್ಗಿಸಲು ಕಠಿಣವಾಗಿ ಶ್ರಮಿಸಬೇಕೆಂದು ನುಡಿದರು. “ಕರ್ನಾಟಕವು ಅಪರಾಧಗಳ ವಿಷಯದಲ್ಲಿ 10ನೆಯ ಸ್ಥಾನದಲ್ಲಿದೆ. ಅಪರಾಧಗಳ ಸಂಖ್ಯೆ ಇಳಿಕೆಯಾಗಲು ಪೊಲೀಸ್ ಇಲಾಖೆ ಶ್ರಮಿಸಬೇಕಿದೆ ಮತ್ತು ಜನ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.

ಬೆಂಗಳೂರನ್ನು ಕಾಡುತ್ತಿರುವ ವಾಹನದಟ್ಟಣೆಯ ಸಮಸ್ಯೆಯ ಬಗ್ಗೆಯೂ ಸಿಎಂ ಚರ್ಚೆ ನಡೆಸಿದರು ಮತ್ತು ಸಮಸ್ಯೆ ನಿವಾರಣೆಗೆ ಕ್ರಿಯಾಯೋಜನೆ ರೂಪಿಸುವಂತೆ ಪೊಲೀಸರಿಗೆ ಸೂಚಿಸಿದರು.

ವಿಧಾನಸೌಧದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕುಮಾರಸ್ವಾಮಿ ಅವರು

“ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಮುಖ್ಯಮಂತ್ರಿಯಾಗಿ ನನ್ನ ಹಸ್ತಕ್ಷೇಪವೇನಿರುವುದಿಲ್ಲ. ಅಂತೆಯೇ ಕರ್ತವ್ಯ, ನಿರತರಾಗಿರುವಾಗ ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಮಣಿಯದೇ ಕೆಲಸಮಾಡಿ. ಯಾವುದೇ ಸಂದರ್ಭದಲ್ಲೂ ರಾಜಕೀಯ ಒತ್ತಡಗಳಿಗೆ ತಲೆಬಾಗಬೇಡಿ”  ಎಂದು ಕಿವಿಮಾತು ಹೇಳಿದರು.

ಪೊಲೀಸ್ ಮಹಾನಿರ್ದೇಶಕಿ ಮತ್ತು ಪೊಲೀಸ್ ಮಹಾನಿರೀಕ್ಷಕಿ ಶ್ರೀಮತಿ ನೀಲಮಣಿರಾಜು, ಪೊಲೀಸ್ ಮಹಾನಿರ್ದೇಶಕ (ಅಗ್ನಿಶಾಮಕ ಮತ್ತು ತುರ್ತುಸೇವೆಗಳು) ಶ್ರೀ ಎಂ.ಎನ್.ರೆಡ್ಡಿ, ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಡಿಜಿಪಿ ಪಿ.ಕೆ.ಗಾರ್ಗ್, ಅಂದಿನ ಮುಖ್ಯ ಕಾರ್ಯದರ್ಶಿ ಶ್ರೀಮತಿ ಕೆ.ರತ್ನಪ್ರಭಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಶ್ರೀ ರಜನೀಶ್ ಗೋಯಲ್ ಮುಂತಾದ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

ಇದು ಜೆಡಿಎಸ್ಕಾಂಗ್ರೆಸ್ ಮೈತ್ರಿ ಸರ್ಕಾರದ ಉನ್ನತ ನಾಯಕರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಪ್ರಥಮ ಸಭೆಯಾಗಿತ್ತು. “ರಾಜ್ಯದಲ್ಲಿ ಎಲ್ಲಿಯೇ ಆಗಲಿ, ಶಾಂತಿ ಮತ್ತು ಭದ್ರತೆಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕೈಗೊಳ್ಳಬೇಕು. ಕೋಮುಗಲಭೆಯಲ್ಲಿ ತೊಡಗುವವರನ್ನು ಜಾತಿ ಮತ್ತು ಸಮುದಾಯಗಳ ಪರಿಗಣನೆ ಇಲ್ಲದೆ ಶಿಕ್ಷಿಸಬೇಕು. ಸಮಾಜದ ಜಾತ್ಯತೀತ ಸೌಹಾರ್ದವನ್ನು ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆದಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದುಎಂದು ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಎದ್ಚರಿಸಿದರು,

ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗುವ ಯಾವುದೇ ಸಂಘ ಸಂಸ್ಥೆಗಳು ಅಥವಾ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಪೊಲೀಸ್ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ತಿಳಿಸಿದರು.

ಸಮಾಜದ ಶಾಂತಿಗೆ ಧಕ್ಕೆ ತರುವವರನ್ನುದಂಡಿಸಲಾಗುವುದು ಎಂದು ಡಿಸಿಎಂ, ಗೃಹಸಚಿವ ಡಾ| ಜಿ. ಪರಮೇಶ್ವರ್ ನುಡಿದರು.

ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರನ್ನು ಸೆರೆಹಿಡಿದ ವಿಶೇಷ ತನಿಖಾ ತಂಡ (ಎಸ್ಐಟಿ)   ಪ್ರಯತ್ನಗಳನ್ನು ಸಿಎಂ ಮತ್ತು ಡಿಸಿಎಂ ಶ್ಲಾಘಿಸಿದರು. “ಗೌರಿಲಂಕೇಶ್ ಹತ್ಯೆಯ ತನಿಖೆಯ ಅವಧಿಯಲ್ಲಿ ನಮ್ಮ ಪೊಲೀಸ್ ಅಧಿಕಾರಿಗಳು ಅಪಾರ ವಿವರಗಳನ್ನು ಅನಾವರಣ ಮಾಡಿದ್ದಾರೆ. ಎಸ್ಐಟಿಯಿಂದ ಕೂಲಂಕಷ ತನಿಖೆ ನಡೆಯುತ್ತಿದೆ. ಎಸ್ಐಟಿಯ ಕಾರ್ಯಸಾಧನೆಯನ್ನು ಮುಖ್ಯಮಂತ್ರಿ ಅಭಿನಂದಿಸಿದ್ದಾರೆ. ಪ್ರಕರಣದ ತಾರ್ಕಿಕ ಅಂತ್ಯಕ್ಕಾಗಿ ತಂಡಕ್ಕೆ ಸಕಲ ಸಹಕಾರವನ್ನು ನೀಡಲಾಗುವುದು ಎಂದು  ಡಿಸಿಎಂ ಅರುಹಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದಕ್ಕೆ ಮುನ್ನ ನಡೆದ ರಹಸ್ಯ ಸಭೆಯೊಂದರಲ್ಲಿ ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಜಾನುವಾರು ವ್ಯಾಪಾರಿಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳು ಬಂಧನಕ್ಕೊಳಗಾಗಿರುವುದರ ಕುರಿತು ಸಿಎಂ ಆಕ್ರೋಶ ವ್ಯಕ್ತಪಡಿಸಿದರೆನ್ನಲಾಗಿದೆ. ಕರಾವಳಿ ಕರ್ನಾಟಕದ ಪೊಲೀಸರ ಬಗ್ಗೆ ತಮಗೆ ಗಮನವಿದೆ, ಪೊಲೀಸ್ ಸಿಬ್ಬಂದಿ ನಿಷ್ಪಕ್ಷಪಾತವಾಗಿ, ತಟಸ್ಥ ಧೋರಣೆಯಿಂದ ಕೆಲಸ ಮಾಡಬೇಕು ಎಂದು ಸಿಎಂ ಹೇಳಿದರೆಂದು ಮೂಲಗಳು ಹೇಳಿವೆ. ಭೂಗತ ಪಾತಕ ಲೋಕದ ಸಂಪರ್ಕ ಹೊಂದಿದವರು ಯಾರೇ ಆಗಲಿ ಶಿಕ್ಷಿಸದೆ ಬಿಡುವುದಿಲ್ಲ ಎಂದು ಸಿಎಂ ಖಡಕ್ ಮಾತುಗಳಲ್ಲಿ ಎಚ್ಚರಿಸಿದರೆಂದು ಗೊತ್ತಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದು ನಿರಪರಾಧಿಗಳನ್ನು ಬಂಧಿಸಿ ಹಿಂಸಿಸುತ್ತಿದ್ದಾರೆ ಎಂಬ ಹಿಂದೂತ್ವ ಸಂಘಟನೆಗಳ ಆರೋಪದ ವಿರುದ್ಧ ಕುಮಾರಸ್ವಾಮಿ ಅವರು ಪೊಲೀಸರನ್ನು ಸಮರ್ಥಿಸಿಕೊಂಡರು. “ಸಂಶಯದ ಮೇಲೆ ಅನೇಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸಾಬೀತಾದ ಬಳಿಕ ಬಿಡುಗಡೆ ಮಾಡಲಾಗಿದೆ” ಎಂದು ಸಿಎಂ ಪ್ರತಿಪಾದಿಸಿದರು. ಪೊಲೀಸರು ಕಾನೂನಿನ ಚೌಕಟ್ಟಿನೊಳಗಡೆಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.