ಕರ್ನಾಟಕದ ರಾಯಚೂರಿನ ಹಟ್ಟಿ ಚಿನ್ನದಗಣಿಯ ಗೃಹರಕ್ಷಕದಳದ ಕಮಾಂಡೆಂಟ್ ಶ್ರೀ ವರದರಾಜ್ ಕುಲಕರ್ಣಿ ವಂದಲಿ ಅವರು ಪ್ರಾಮಾಣಿಕ ಸೇವೆಗೆ ಸರ್ವತ್ರ ಆದರಣೀಯರಾಗಿ ಬಹು ಜನಪ್ರಿಯತೆ ಪಡೆದಿರುವುದು ಸಂತೋಷದ ಸಂಗತಿಯಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವಂದಲಿಯಲ್ಲಿ ಗುರುಭೀಮರಾವ್ ಕುಲಕರ್ಣಿ ವಂದಲಿ ಮತ್ತು ದ್ವಾರಕಾಬಾಯಿ ಕುಲಕರ್ಣಿ ವಂದಲಿ ದಂಪತಿಯ ಸುಪುತ್ರರಾಗಿ 15-01-1970ರಲ್ಲಿ ಜನಿಸಿರುವ ಶ್ರೀ ವರದರಾಜ್ ಕುಲಕರ್ಣಿ ವಂದಲಿ ಅವರು ಬಿ.ಎ. ಪದವೀಧರರು. 01-04-1989ರಲ್ಲಿ ಗೃಹರಕ್ಷಕ ಸೇವೆಗೆ ಸೇರ್ಪಡೆಯಾದರು.
ಜನತೆಗೆ ನಿಷ್ಕಾಮ ಸೇವೆ ಸಲ್ಲಿಸುವುದು ಶ್ರೀಯುತರ ಏಕೈಕ ಧ್ಯೇಯೋದ್ದೇಶವಾಗಿದೆ. ತಂದೆ, ಅಣ್ಣಂದಿರು ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದು ಅವರಿಂದಲೇ ಸ್ಪೂರ್ತಿ ಪಡೆದು ಗೃಹರಕ್ಷಕ ದಳದಲ್ಲಿ ಶ್ರೀ ವರದರಾಜ್ ಅವರು ಅಮೂಲ್ಯ ರೀತಿಯಲ್ಲಿ ಸೇವೆ ಸಂದಾಯ ಮಾಡುತ್ತಿದ್ದಾರೆ.
ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಸಂಕ್ಷಿಪ್ತ ಸಮಯದಲ್ಲಿ ಗರಿಷ್ಠ ಸಂಖ್ಯೆಯ ಗೃಹರಕ್ಷಕರನ್ನು ಸಂಘಟಿಸಿರುವುದು ಶ್ರೀ ವರದರಾಜ್ ಅಗ್ಗಳಿಕೆಯಾಗಿದೆ.
2009 ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಈ ಜಿಲ್ಲೆ ಸೇರಿದಂತೆ ಇಡೀ ಉತ್ತರಕರ್ನಾಟಕ ನೆರೆ ಹಾವಳಿಯಿಂದ ತತ್ತರಿಸಿತ್ತು. ಆಗ ಶ್ರೀ ವರದರಾಜ್ ಮತ್ತು ಅವರ ತಂಡ ಅನೇಕರ ಜೀವ ಮತ್ತು ಆಸ್ತಿ ಪಾಸ್ತಿಗಳನ್ನು ರಕ್ಷಿಸಿತು. ಈ ಪ್ರಾಮಾಣಿಕ ಸೇವೆಗಾಗಿ ಅನೇಕ ಸಾಮಾಜಿಕ ಸಂಘಟನೆಗಳು ಮತ್ತು ಮಾನ್ವಿ ಕ್ಷೇತ್ರದ ಶಾಸಕ ಜಿ. ಹಂಪಯ್ಯ ನಾಯಕ್ ಬಲ್ಲಟಗಿ ಸೇರಿದಂತೆ ಹಲವಾರು ರಾಜಕೀಯ ಧುರೀಣರು ಶ್ಲಾಘಿಸಿದರು. ಅವರ ಈ ಸವಾಲಿನ, ಕೆ ಚ್ಚೆದೆಯ ಮತ್ತು ಸಮರ್ಪಿತ ಸೇವೆ ಪರಿಗಣಿಸಿ 2015-16 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಯಿತು.
ಹಲವಾರು ರಾಜಕೀಯ ನೇತಾರರು ಮತ್ತು ಸಾಮಾಜಿಕ ಸೇವಾ ಸಂಘಟನೆಗಳಿಂದ ಪ್ರಶಂಸಾ ಪತ್ರಗಳನ್ನು ಸ್ವೀಕರಿಸಿದ್ದಾರೆ. ಮಾನ್ವಿ ತಾಲ್ಲೂಕಿನ ತಹಸೀಲ್ದಾರ್, ಸಿಂಧನೂರು ಪೊಲೀಸ್ ಉಪವರಿಷ್ಠಾಧಿಕಾರಿ ಕೂಡ ಶ್ರೀ ವರದರಾಜ್ ಅವರ ಗೃಹರಕ್ಷಕ ಸಂಘಟನಾ ಚಾತುರ್ಯವನ್ನು ಕೊಂಡಾಡಿದ್ದಾರೆ.
ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಇವರ ಚುನಾವಣಾ ಕರ್ತವ್ಯ ನಿರ್ವಹಣೆ ಸರ್ವತ್ರ ಮೆಚ್ಚುಗೆ ಗಳಿಸಿತ್ತು. ಕರ್ನಾಟಕದ ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇವರು ವಹಿಸಿದ ಶ್ರದ್ಧೆ ಅನನ್ಯ ಮತ್ತು ಅನುಕರಣೀಯ.
2013ರ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡುವಂತೆ ಮತದಾರರ ಮನವೊಲಿಕೆ ಮಾಡುವಲ್ಲಿ ಶ್ರೀಯುತರು ಅಪಾರ ಶ್ರಮ ವಹಿಸಿದರು. ಇದಕ್ಕಾಗಿ ರಾಯಚೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಶಂಸಾ ಪತ್ರ ನೀಡಿದರು.
ಶ್ರೀ ವರದರಾಜ್ ಅವರು ಪ್ರಾಮಾಣಿಕರಾಗಿದ್ದು ಮೇಲಧಿಕಾರಿಗಳ ಸೂಚನೆಗಳನ್ನು ಚಾಚೂತಪ್ಪದಂತೆ ಪಾಲಿಸುವ ನಿಷ್ಠಾವಂತರಾಗಿದ್ದಾರೆ. ಎಲ್ಲಾ ಸಂದರ್ಭಗಳಲ್ಲಿ ಕ್ರಿಯಾಶೀಲರಾಗಿ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. 30 ವರ್ಷಗಳ ಸೇವಾವಧಿಯಲ್ಲಿ ತಮ್ಮ ನಿಸ್ಪಹ ಸೇವೆಯ ಮೂಲಕ ಹೋಂಗಾರ್ಡ್ (ಗೃಹರಕ್ಷಕ) ದಳ ಮತ್ತು ಜನತೆಗೆ ಚಿರಪರಿಚಿತರಾಗಿದ್ದು ಅಪಾರ ಜನಪ್ರಿಯತೆ ತಮ್ಮದಾಗಿಸಿಕೊಂಡಿದ್ದಾರೆ.
ಶಿಸ್ತಿನ ಸಂಘಟನೆಯಾಗಿರುವ ಗೃಹರಕ್ಷಕ ದಳದಲ್ಲಿ ಇವರ ಸಮಯ ಪಾಲನೆ, ನಾಯಕತ್ವ ಗುಣಗಳು, ಚಟುವಟಿಕೆಯ ಕಾರ್ಯನಿರ್ವಹಣೆ ಗುರುತಿಸಲೇಬೇಕಾದ ಅಂಶಗಳಾಗಿವೆ. ಗೃಹರಕ್ಷಕ ದಳದ ಬಗ್ಗೆ ಅಪಾರ ತಿಳಿವಳಿಕೆ ಹೊಂದಿರುವುದು ಶ್ರೀಯುತರ ಕಾರ್ಯನಿರ್ವಹಣೆಗೆ ನೆರವು ನೀಡಿದೆ. ಅವರ ಶಿಸ್ತು ಪೊಲೀಸ್ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.
ಶ್ರೀ ವರದರಾಜ್ ಕುಲಕರ್ಣಿ ವಂದಲಿ ಅವರ ಇಂಥ ಶ್ರೇಷ್ಠ ಸೇವಾದಾಖಲೆಯನ್ನು ಗುರುತಿಸಿ ಭಾರತ ಸರ್ಕಾರವು 2020ರಲ್ಲಿ ಪ್ರತಿಷ್ಠಿತ ರಾಷ್ಟ್ರಪತಿ ಪದಕ ನೀಡಿ ಗೌರವಿಸಿತು.
ಶ್ರೀ ವರದರಾಜ್ ಕುಲಕರ್ಣಿ ವಂದಲಿ ಅವರಂಥ ಶಿಸ್ತಿನ ಸಿಪಾಯಿ, ಕ್ರಿಯಾಶೀಲ ಮತ್ತು ನಿಷ್ಠಾವಂತರ ಅಗತ್ಯ ಗೃಹರಕ್ಷಕದಳಕ್ಕೆ ಇದೆ. ಭಗವಂತನು ಶ್ರೀಯುತರಿಗೆ ಆಯುರಾರೋಗ್ಯ, ಸಿರಿ ಸಂಪತ್ತುಗಳನ್ನು ಅನುಗ್ರಹಿಸಲಿ, ತನ್ಮೂಲಕ ಶ್ರೀಯುತರ ಕಾರ್ಯದಕ್ಷತೆ ಹೆಚ್ಚಾಗಿ ನಾಡಿಗೆ ಇವರ ಸೇವೆಯ ಅಮೂಲ್ಯ ಪ್ರಯೋಜನ ಲಭ್ಯವಾಗುವಂತಾಗಲಿ ಎಂದು ‘ಪತ್ರಿಕೆ’ ಹೃತ್ಪೂರ್ವಕವಾಗಿ ಹಾರೈಸುತ್ತದೆ.