ಯಾವುದೇ ಗಾಡ್ಫಾದರ್ಗಳ ಬೆಂಬಲ ಇಲ್ಲದೆ ಸ್ವಪ್ರಯತ್ನದಿಂದಲೇ ಸಿವಿಲ್ ಸರ್ವೀಸಸ್ ತೇರ್ಗಡೆಯಾಗಿ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಗೊಂಡು ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ರವಿ ಡಿ. ಚನ್ನಣ್ಣನವರ್ ನಿಜಾರ್ಥದಲ್ಲಿ ಪೊಲೀಸ್ ಇಲಾಖೆಯ ಆಸ್ತಿಯಾಗಿದ್ದಾರೆ.
23-07-1985ರಲ್ಲಿ ಗದಗ ಜಿಲ್ಲೆಯ ನೀಲಗುಂದ ಗ್ರಾಮದಲ್ಲಿ ರಾಮಪ್ಪ ಚೆನ್ನಣ್ಣನವರ್ ಮತ್ತು ರತ್ನಮ್ಮ ಅವರ ಪುತ್ರರಾಗಿ ಜನಿಸಿದ ರವಿ ಅವರು ಮೂಲತಃ ಕೃಷಿ ಕಾರ್ಮಿಕ ಕುಟುಂಬದಿಂದ ಬಂದವರು.
ನೀಲಗುಂದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ರವಿಯವರು ಮುಳಗುಂದ ಸರ್ಕಾರಿ ಶಾಲೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ತೇರ್ಗಡೆಯಾದರು. ಶಿಕ್ಷಣಕ್ಕೆ ಹಣಹೊಂದಿಸಲು ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಹುಲಕೋಟಿಯಲ್ಲಿ ಪಿಯುಸಿ ಓದುವಾಗ ರವಿ ಗದಗ್ನ ಮಹಾಲಕ್ಷ್ಮಿ ಚಿತ್ರಮಂದಿರದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಲೇ ಶೇ. 89ರಷ್ಟು ಅಂಕಗಳೊಂದಿಗೆ ಪಿ.ಯು.ಸಿ. ಪೂರೈಸಿದರು.
ದಿನಗೂಲಿ ನೌಕರರಾಗಿದ್ದ ತಂದೆ–ತಾಯಿಗೆ ನೆರವಾಗಲು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಯಲ್ಲಿ ಚೀಲಕ್ಕೆ ಮೆಣಸಿನಕಾಯಿ ತುಂಬಿಸುವ ಕೆಲಸ ಮಾಡುತ್ತಿದ್ದರು. ಬೇಸಿಗೆ ರಜೆಯ ಸಂದರ್ಭದಲ್ಲಿ ತಂದೆ–ತಾಯಿ ಜೊತೆ ಗೋವಾ, ಮಂಗಳೂರು, ಚಿಕ್ಕಮಗಳೂರು ಮುಂತಾದಕಡೆ ತೆರಳಿ ಕೂಲಿ ಕೆಲಸ ಮಾಡುತ್ತಿದ್ದರು.
ಬಡ ಕುಟುಂಬಕ್ಕೆ ಸೇರಿದ ರವಿ ಅವರು ಧಾರವಾಡದ ಕರ್ನಾಟಕ ಆಟ್ರ್ಸ್ ಕಾಲೇಜಿನಲ್ಲಿ ಬಿಎ ಪದವಿಗೆ ನೋಂದಾಯಿಸಿಕೊಂಡ ಬಳಿಕ ಶಿಕ್ಷಣ ವೆಚ್ಚ ಭರಿಸಲು ಹೋಟೆಲ್ನಲ್ಲಿ ಅರೆಕಾಲಿಕ ಉದ್ಯೋಗ ನಿರ್ವಹಿಸಿದರು. ಸಂಜೆ ಆರುಗಂಟೆಯಿಂದ ಮಧ್ಯರಾತ್ರಿಯ ವರೆಗೆ ಬಾರ್ನಲ್ಲಿ ನೌಕರಿ ಮಾಡುತ್ತಿದ್ದರು. ಶೇ 79ರಷ್ಟು ಅಂಕಗಳೊಂದಿಗೆ ಬಿಎ ತೇರ್ಗಡೆಯಾದರು.
ಹುಲಕೋಟಿಯಲ್ಲಿ ವ್ಯಾಪಾರೋದ್ಯಮಿ ಸುಭಾಷ್ ಸುಭಾಷ್ ಹಳ್ಳಿ ಅವರ ಪರಿಚಯವಾಗಿ ಅವರು ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ ಪಡೆಯಲು ನೆರವು ನೀಡಿದರು. ನವದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವ ಆಸಕ್ತಿ ಹೊಂದಿದ್ದರೂ ಗದಗ್ನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದಜಿ ಅವರು, ಪ್ರೊ.ಆರ್.ಎಸ್.ಪಾಟೀಲ್, ಮತ್ತು ಆಗಿನ ಧಾರವಾಡ ಸಹಾಯಕ ಆಯುಕ್ತರಾಗಿದ್ದ ಮಹಾಂತೇಶ್ ಬೀಳಗಿ ಯುಪಿಎಸ್ಸಿ ಪರೀಕ್ಷೆ ಬರೆಯುವಂತೆ ಸ್ಫೂರ್ತಿ ನೀಡಿದರು. ಸುಭಾಷ್ ಸಾಸ್ವಿಹಳ್ಳಿ ಅವರ ನೆರವಿನೊಂದಿಗೆ 2007ರ ಮೇನಲ್ಲಿ ಐಎಎಸ್ ಗೆ ಸೇರುವ ಗುರಿಹೊಂದಿದ್ದ ರವಿ ಅವರು 2008ರ ಸಿವಿಲ್ ಸರ್ವೀಸಸ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲೇ 703 ನೇ ರ್ಯಾಂಕ್ಗಳಿಸಿ ಐಪಿಎಸ್ಗೆ ಆಯ್ಕೆಯಾದರು. ರವಿ ಅವರು 2011ರಲ್ಲಿ ಬೆಳಗಾವಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದರು. ತರುವಾಯ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು, ಮೈಸೂರು, ದಾವಣಗೆರೆ, ಮತ್ತು ಶಿವಮೊಗ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ಮೈಸೂರಿನಿಂದ ಬೆಂಗಳೂರಿಗೆ ವರ್ಗವಾಗಿ ಪ್ರಸ್ತುತ ಬೆಂಗಳೂರು ನಗರ ಪಶ್ಚಿಮ ವಲಯದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೋಮುಗಲಭೆಗಳ ಸಂದರ್ಭದಲ್ಲಿ ಬಾಲಿವುಡ್ ಶೈಲಿಯ ಕಾರ್ಯನಿರ್ವಹಣೆಗೆ ಪ್ರಸಿದ್ಧರಾದರು. ಕಿಡಿಗೇಡಿಗಳ ಮನೆಗೆ ನುಗ್ಗಿ, ಅವರನ್ನು ಬಂಧಿಸಿದ ಎಂಟೆದೆ ಭಂಟ ರವಿ ಅವರ ಕಾರ್ಯ ವೈಖರಿಗೆ ‘ಕರ್ನಾಟಕ ಸಿಂಗಂ’ ಎಂದೇ ಹೆಸರು ಗಳಿಸಿದ್ದಾರೆ.
ಮಹಿಳಾ ಸುರಕ್ಷತೆಗಾಗಿ ಒನಕೆ ಓಬವ್ವ ಎಂಬ ಪಡೆಯನ್ನು ರಚಿಸಿದ್ದಾರೆ. ಈ ತಂಡವು ಇಬ್ಬರು ಮಹಿಳಾ ಪೊಲೀಸ್ ಉಪನಿರೀಕ್ಷಕರು, ಮತ್ತು 10 ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೊಂದಿದ್ದು ಮಹಿಳೆಯರನ್ನು ಹಿಂಬಾಲಿಸಿ ಕಿರುಕುಳ ನೀಡುವ, ಚುಡಾಯಿಸುವ ಬೀದಿ ಕಾಮಣ್ಣರನ್ನು ಮಟ್ಟ ಹಾಕುವಲ್ಲಿ ಕಾರ್ಯನಿರತವಾಗಿದೆ.
ಸ್ವಯಂ ಸುರಕ್ಷತಾ ತರಬೇತಿ, ಜನಸ್ನೇಹಿ ಪೊಲೀಸ್ ಮತ್ತು ಗ್ರಾಮ ವಾಸ್ತವ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಯ ನೆರವಿಗಾಗಿ ಪೊಲೀಸ್ ಕ್ಯಾಂಟೀನ್, ಮತ್ತು ಪೊಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ರೈತರಿಗೆ ನೆರವಾಗಲು ‘ನಮ್ಮೂರಲೊಬ್ಬ ಸಾಧಕ‘ ಕಾರ್ಯಕ್ರಮ, ವಿದ್ಯಾರ್ಥಿಗಳ ನೆರವಿಗಾಗಿ ಉಚಿತ ಯುಪಿಎಸ್ಸಿ ತರಬೇತಿ ಕಾರ್ಯಕ್ರಮ ಆರಂಭಿಸಿದ್ದಾರೆ.
ಬೆಂಗಳೂರು ಪಶ್ಚಿಮವಲಯ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರೌಡಿಗಳು, ಸಮಾಜವಿರೋಧಿ ಶಕ್ತಿಗಳನ್ನು ಹದ್ದುಬಸ್ತಿನಲ್ಲಿರಿಸಿದ್ದಾರೆ. ವಿಶೇಷವಾಗಿ ಮೆಜೆಸ್ಟಿಕ್ ಸುತ್ತಲಿನ ಪ್ರದೇಶಗಳಲ್ಲಿ ಹೊರ ಊರಿನಿಂದ ಬಂದವರಿಗೆ ಅನ್ಯಾಯ, ವಂಚನೆ ಆಗದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ವೇಶ್ಯಾವಾಟಿಕೆ, ಜೂಜಿನ ಅಡ್ಡ, ಮುಂತಾದ ಕಾನೂನುಬಾಹಿರ ದಂಧೆಗಳಿಗೆ ಕಡಿವಾಣ ಹಾಕುತ್ತಿದ್ದಾರೆ.
ರವಿ ಅವರು 12-03-2012 ರಂದು ಡಾ| ತ್ರಿವೇಣಿ ಅವರನ್ನು ವಿವಾಹವಾಗಿದ್ದು ಅನ್ಯೋನ್ಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಹೆಸರಿಗೆ ತಕ್ಕಂತೆ ಸೂರ್ಯನ ಹಾಗೆ ಅಕ್ರಮಗಳ ಅಂಧಕಾರ ನಿವಾರಿಸಿ ಸಕ್ರಮಗಳ ಬೆಳಕನ್ನು ನೀಡುತ್ತಿರುವ ರವಿ ಡಿ ಚೆನ್ನಣ್ಣನವರ್ ಅವರಂಥ ದಕ್ಷ ಅಧಿಕಾರಿ ದೊರೆತಿರುವುದು ನಾಡಿನ ಭಾಗ್ಯ. ಅವರಿಗೆ ಭಗವಂತನು ಹೆಚ್ಚಿನ ಆಯುರಾರೋಗ್ಯ, ಸಿರಿ ಸಂಪದಗಳನ್ನು, ಶಕ್ತಿ ಸಾಮಥ್ರ್ಯಗಳನ್ನು ಅನುಗ್ರಹಿಸಲಿ, ತನ್ಮೂಲಕ ರವಿ ಅವರ ಸೇವೆ ಅಧಿಕಾಧಿಕವಾಗಿ ಲಭಿಸುವಂತಾಗಿ ನಾಡಿನ ಜನತೆಯ ಬದುಕು ಹಸನಾಗಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.