ಕಾರ್ಯಬಾಹುಳ್ಯದ ಮತ್ತು ಬಿಡುವೇ ಇರದ ಇಲಾಖೆ ಎಂದೇ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ತಮ್ಮ ವಿಭಿನ್ನ-ವಿಶಿಷ್ಟ ಸೇವೆ ಮತ್ತು ಕಲಾವಂತಿಕೆಯಿಂದ ಓರ್ವ ವ್ಯಕ್ತಿ ಗಮನ ಸೆಳೆಯುತ್ತಾರೆ. ಅವರೇ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೆಡ್‍ಕಾನ್‍ಸ್ಟೆಬಲ್ ಆಗಿರುವ ಶ್ರೀ ಶಿವಕುಮಾರ್ ಕೆ.ಆರ್.
22-12-1976 ರಂದು ಕುಣಿಗಲ್‍ನಲ್ಲಿ ಕೆ.ಸಿ. ರಂಗಸ್ವಾಮಿ-ಜಯಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿರುವ ಶಿವಕುಮಾರ್ 1999ರ ತಂಡದ ಪೊಲೀಸ್ ಸಿಬ್ಬಂದಿಯಾಗಿದ್ದು 05-05-1999ರಂದು ಸೇವೆಗೆ ಸೇರ್ಪಡೆಯಾದರು. ಇವರ ಸಹೋದರ ಡಾ. ಗಿರೀಶ್‍ಗೌಡ ಅವರು ಲಂಡನ್‍ನಲ್ಲಿ ಪ್ರಸಿದ್ಧ ವೈದ್ಯರಾಗಿದ್ದಾರೆ.
ಶಿವಕುಮಾರ್ ಅವರು ಬಾಲ್ಯದಿಂದಲೂ ಕ್ರೀಡೆ, ಕಲೆ, ಅಥ್ಲೆಟಿಕ್ಸ್, ಮ್ಯಾರಥಾನ್, ಬಾಡಿ ಬಿಲ್ಡಿಂಗ್ (ದೇಹದಾಢ್ರ್ಯ) ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಎನ್‍ಸಿಸಿಯಲ್ಲಿ ಇವರು ಪ್ರೋಟೋ ಮಾನಿಟರ್ ಆಗಿದ್ದರು. ಎನ್‍ಸಿಸಿ ಕೋಟಾದಡಿಯಲ್ಲೇ ಇವರಿಗೆ ಪೊಲೀಸ್ ನೌಕರಿ ಸಿಕ್ಕಿತು.
ಶ್ರೀಮತಿ ಸವಿತಾ ಹಂಡೆ ಐಪಿಎಸ್ ರವರು ಇವರಿಗೆ ಪೊಲೀಸ್ ಇಲಾಖೆಯಲ್ಲಿ ಮಾರ್ಗದರ್ಶಕರಾಗಿದ್ದರು. ಅವರನ್ನು ಶಿವಕುಮಾರ್‍ರವರು “ಮದರ್ ಇಂಡಿಯಾ” ಎಂದೇ ಕೃತಜ್ಞತೆಯಿಂದ ನೆನೆಯುತ್ತಾರೆ.
ಶಿವಕುಮಾರ್ ಅವರು 2000ರಲ್ಲಿ ಪೊಲೀಸ್ ತರಬೇತಿ ಪೂರೈಸಿ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ‘ವಾಕಿ’ಯಾಗಿ ನಿಯೋಜಿತರಾದರು. ಇವರಿಗೆ ಉತ್ತಮೋತ್ತಮ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡುವ ಅಪೂರ್ವ ಅವಕಾಶ ಲಭಿಸಿತು. ಕೆ.ವಿ. ಶರತ್‍ಚಂದ್ರ ಐಪಿಎಸ್‍ರವರ ಅಧೀನ ಸಿಬ್ಬಂದಿಯಾಗಿ 8 ವರ್ಷ ಕಾರ್ಯನಿರ್ವಹಿಸುವ ಸುವರ್ಣಾವಕಾಶ ದೊರೆತು ಅವರಿಂದ ಬಹಳಷ್ಟು ವಿಷಯಗಳನ್ನು ಕಲಿತುಕೊಂಡರು. ನೈತಿಕತೆ, ಪ್ರಾಮಾಣಿಕತೆ, ವೃತ್ತಿನಿಷ್ಠೆ ಮೊದಲಾದ ಸದ್ಗುಣಗಳನ್ನು ಬೆಳೆಸಿಕೊಂಡರು.
ಸುಮಾರು 16 ವರ್ಷಗಳಿಂದ ಪ್ರತಿವರ್ಷ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುವುದು ಇವರ ವೈಶಿಷ್ಟ್ಯ. ಪ್ರತಿವರ್ಷವೂ ಇವರ ಜೊತೆ ಇಲಾಖೆಯಲ್ಲಿರುವ ಆರೇಳು ಸಿಬ್ಬಂದಿ ಸೇರಿದಂತೆ ಸುಮಾರು 20-25 ಜನರು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಪರಾಧ ವಿಭಾಗದ ಸಿ. ನಾಗೇಶ್, ಕಲಾಸಿಪಾಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್‍ಸ್ಟೆಬಲ್ ನೀಲಕಂಠ, ಜೆ.ಜೆ. ನಗರ ಪೊಲೀಸ್ ಠಾಣೆಯ ರೇಣುಕುಮಾರ್, ಸಂಚಾರ ವಿಭಾಗದ ಗಂಗರಾಜು, ನಿವೃತ್ತ ಎಎಸ್‍ಪಿ ಕೆ.ಸಿ. ರಂಗಸ್ವಾಮಿ ಸೇರಿದಂತೆ ಹಲವಾರು ಜನರ ತಂಡಕ್ಕೆ ಶಿವಕುಮಾರ್‍ರವರೇ ಮುಂದಾಳಾಗಿ ಧರ್ಮಸ್ಥಳಕ್ಕೆ ಕರೆದೊಯ್ಯುತ್ತಾರೆ.
ಇನ್‍ಸ್ಪೆಕ್ಟರ್, ಎಸಿಪಿ, ಡಿಸಿಪಿ, ಕಮಿಷನರ್ ಯಾರೇ ಇದ್ದರೂ ಇವರಿಗೆ ಪ್ರತಿವರ್ಷ 15 ದಿನಗಳ ಇಎಲ್ ರಜೆ ಮಂಜೂರು ಮಾಡಿ ಇವರ ಧರ್ಮಸ್ಥಳ ಯಾತ್ರೆಗೆ ಪ್ರೋತ್ಸಾಹ ನೀಡುತ್ತಾರೆ.
ಪಾದಯಾತ್ರೆಯ ವೇಳೆಯಲ್ಲಿ ಇವರು ಪೊಲೀಸರೆಂದು ಅರಿತಾಕ್ಷಣ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡುವ ಹಲವಾರು ಮಂದಿ ಪರಾರಿಯಾಗಿದ್ದಾರೆ. ಗಾಂಜಾ ಸೇವನೆಯಿಂದ ಸಂಭವಿಸುತ್ತಿದ್ದ ಅಪಘಾತಗಳಿಗೂ ಇವರು ತಡೆಯೊಡ್ಡಿದಂತಾಗಿದೆ. ತನ್ಮೂಲಕ ಇವರು ದೇವರ ಸೇವೆಯ ಜೊತೆಗೆ ಪೊಲೀಸ್ ಕರ್ತವ್ಯವನ್ನೂ ದಕ್ಷ ರೀತಿ ನಿರ್ವಹಿಸುತ್ತಿದ್ದಾರೆ.
ಇವರ ಇನ್ನೊಂದು ವೈಶಿಷ್ಟ್ಯವೆಂದರೆ ಮಿಮಿಕ್ರಿ, ಜೊತೆಗೆ ನಾಟಕಗಳಲ್ಲೂ ಅಭಿನಯಿಸುತ್ತಾರೆ ಮತ್ತು ಶಾಲೆಗಳಿಗೆ ತೆರಳಿ ಅಕ್ಷರಾಭ್ಯಾಸ ಮಾಡಿಸುವ ‘ಅಕ್ಷರ ದಾಸೋಹ’ ಎಂಬ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದಾರೆ.
ಟಿವಿ9 ವಾಹಿನಿಯಲ್ಲಿ ಖಾಕಿಯಲ್ಲೊಬ್ಬ ಕಲಾವಿದ ಎಂಬ ಮಿಮಿಕ್ರಿ ಕಾರ್ಯಕ್ರಮದಲ್ಲಿ ಹೆಸರಾಂತ ನಟನಟಿಯರು, ಪತ್ರಕರ್ತರು ಮತ್ತು ಅಪರೂಪದ ಪಕ್ಷಿಗಳ ಮಿಮಿಕ್ರಿ ಮಾಡಿ ವೀಕ್ಷಕರನ್ನು ರಂಜಿಸಿದ್ದಾರೆ.
ಗಾಂಜಾ ಸೇವಿಸುವ ಕಾಲೇಜು ಯುವಕರು ಮತ್ತು ಚಿಕ್ಕ ಮಕ್ಕಳನ್ನು ಕಂಡಲ್ಲಿ ಅವರಿಗೆ ಬುದ್ಧಿವಾದ ಹೇಳಿ ಪೋಷಕರಿಗೂ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಬಗ್ಗೆ ತಮ್ಮ ಅಧಿಕಾರದ ಮಿತಿಯಲ್ಲೇ ಆಪ್ತಸಲಹೆ ನೀಡುತ್ತಾರೆ.
ಇತ್ತೀಚೆಗೆ ಇವರ ಇಷ್ಟೆಲ್ಲಾ ಸಮಾಜಸೇವೆ ಮತ್ತು ಕಾರ್ಯನಿಷ್ಠೆ ಗುರುತಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಭಾಸ್ಕರರಾವ್ ಐಪಿಎಸ್‍ರವರು ಖುದ್ದಾಗಿ ಠಾಣೆಗೆ ಬಂದು ಇವರನ್ನು ಸನ್ಮಾನಿಸಿದ್ದಾರೆ. ಅಲ್ಲದೆ ಧರ್ಮಸ್ಥಳ ಯಾತ್ರೆ ಕೈಗೊಳ್ಳುವ ಇವರ ತಂಡವನ್ನೂ ಅಭಿನಂದಿಸಿದ್ದಾರೆ. ಇವರ ಜೊತೆಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವ ಎಲ್ಲರಿಗೂ ಒಳಿತಾಗಿದೆ ಎಂದು ಶಿವಕುಮಾರ್ ಹೇಳುತ್ತಾರೆ.
ಈ ರೀತಿ ಸಕಲಕಲಾವಲ್ಲಭನಂತೆ ಪೊಲೀಸ್ ಇಲಾಖೆಯಲ್ಲಿ “ಆಲ್‍ರೌಂಡರ್” ಎಂದೇ ಶಿವಕುಮಾರ್ ಹೆಸರು ಗಳಿಸಿದ್ದಾರೆ. ಭಗವಂತನು ಶ್ರೀಯುತರಿಗೆ ಮತ್ತು ಅವರ ಪರಿವಾರಕ್ಕೆ ಹಾಗೂ ಇವರ ಧರ್ಮಸ್ಥಳ ಪಾದಯಾತ್ರಾ ತಂಡಕ್ಕೆ ಸಕಲ ಸೌಭಾಗ್ಯಗಳನ್ನು ಅನುಗ್ರಹಿಸಲಿ ಮತ್ತು ಇವರಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.