ಕರ್ನಾಟಕದ ಗೃಹ ವ್ಯವಹಾರಗಳ ಸಚಿವಾಲಯವು ಅಪರಾಧಿಗಳು ಮತ್ತು ಅಪರಾಧಗಳ ಪತ್ತೆಗಾಗಿ ಕಾರ್ಯಜಾಲ ಮತ್ತು ವ್ಯವಸ್ಥೆಗಳ (ಸಿಸಿಟಿಎನ್ಎಸ್) ಯೋಜನೆಯನ್ನು ರೂಪಿಸಿದೆ. ಇದನ್ನು ರಾಷ್ಟ್ರೀಯ ಇ–ಆಡಳಿತ ಯೋಜನೆಯಡಿ ರೂಪಿಸಲಾಗಿದೆ. ಸಿಸಿಟಿಎನ್ ಇ–ಎಸ್ ಯೋಜನೆಯು ಸಮಗ್ರ ಅಪರಾಧಗಳ ಕೂಲಂಕಷ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮತ್ತು ಪೊಲೀಸರ ಕಾರ್ಯ ನಿರ್ವಹಣೆಯ ದಕ್ಷತೆ ಮತ್ತು ಪರಿಣಾಮಕಾರತ್ವವನ್ನು ಸುಧಾರಿಸುವ ಗುರಿ ಹೊಂದಿದೆ.
ಸಿಸಿಟಿಎನ್ಎಸ್ ಯೋಜನೆಯು ಹಲವಾರು ಧ್ಯೇಯೋದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವೆಂದರೆ ಅಪರಾಧಗಳು ಮತ್ತು ಅಪರಾಧಿಗಳ ಪತ್ತೆಗೆ ರಾಷ್ಟ್ರವ್ಯಾಪಿ ಕಾರ್ಯಜಾಲದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಪೊಲೀಸ್ ಸೇವೆಯನ್ನು ನಾಗರಿಕ ಸ್ನೇಹಿ ಮತ್ತು ಪಾರದರ್ಶಕವನ್ನಾಗಿಸುವುದು, ಐಸಿಟಿ ಪರಿಣಾಮಕಾರಿ ಬಳಕೆಯ ಮುಖಾಂತರ ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುವುದು, ಅಪರಾಧ ತನಿಖೆಯಲ್ಲಿ ಸಾಧನ ಸಲಕರಣೆಗಳು, ತಂತ್ರಜ್ಞಾನ ಮತ್ತು ಮಾಹಿತಿಯನ್ನು ಒದಗಿಸುವುದು, ಕಾನೂನು ಸುವ್ಯವಸ್ಥೆ – ಸಂಚಾರ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಪೊಲೀಸರ ಕಾರ್ಯನಿರ್ವಹಣೆಯನ್ನು ಸುಧಾರಿಸುವುದು, ಸುರಕ್ಷಿತ ಕಾರ್ಯಜಾಲದಲ್ಲಿ ರಾಷ್ಟ್ರದಾದ್ಯಂತದ ಪೊಲೀಸ್ ಘಟಕಗಳ ನಡುವೆ ಸಂವಾದ ಮತ್ತು ಮಾಹಿತಿ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು, ನ್ಯಾಯಾಲಯಗಳಲ್ಲಿನದೂ ಸೇರಿದಂತೆ ಪ್ರಕರಣಗಳ ಪ್ರಗತಿಯ ಪರಿಶೀಲನೆಗೆ ಅನುವು ಮಾಡಿಕೊಡುವುದು ಸೇರಿವೆ.
ಕರ್ನಾಟಕದಲ್ಲಿ ಮೆಸರ್ಸ್ ಹೆಚ್‍ಪಿ ಕಂಪನಿಯನ್ನು ಸಿಸಿಟಿಎನ್‍ಎಸ್ ಅನುಷ್ಠಾನದ ಸಿಸ್ಟಮ್ ಇಂಟಿಗ್ರೇಟರ್ ಆಗಿ ಮತ್ತು ಮೆಸರ್ಸ್ ಗ್ರ್ಯಾಂಟ್‍ಥಾರ್ನ್‍ಟನ್ ಸಂಸ್ಥೆಯನ್ನು ಯೋಜನಾ ಮೇಲುಸ್ತುವಾರಿ ಘಟಕವನ್ನಾಗಿ ಆಯ್ಕೆ ಮಾಡಲಾಗಿದೆ. ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ ವರದಿ ಮಾಡುವ
ಹೊಣೆಯನ್ನು ಈ ಸಂಸ್ಥೆಗಳಿಗೆ ವಹಿಸಲಾಗಿದೆ ಮತ್ತು ಇವು ಕಾರ್ಯ ಪ್ರಗತಿಯ ಪ್ರಮಾಣೀಕರಣ ಮಾಡುತ್ತವೆ.
ಮಾಹಿತಿ ಡಿಜಿಟಲೀಕರಣ, ಠಾಣಾ ತಯಾರಿ ತರಬೇತಿ, ದತ್ತಾಂಶ ಕೇಂದ್ರ ಮತ್ತು ವಿಕ್ಷೇಪ ಚೇತರಿಕೆ ಕೇಂದ್ರ, ಸಾಫ್ಟ್ವೇರ್ (ಪೊಲೀಸ್–ಐಟಿ–ಮಾಹಿತಿ ತಂತ್ರಜ್ಞಾನ) ಮತ್ತು ಹ್ಯಾಂಡ್ ಹೋಲ್ಡಿಂಗ್ ಇವು ಸಿಸಿಟಿಎನ್ಎಸ್ ಯೋಜನೆಯ ಅವಿಭಾಜ್ಯ ಅಂಗಗಳಾಗಿವೆ.
ತಾಣಸಿದ್ಧತೆಯ ಫಲಿತಾಂಶವೆಂದರೆ ಪೊಲೀಸ್ಠಾಣೆ, ಮತ್ತು ಕಚೇರಿ, ಉಪವಿಭಾಗೀಯ ಪೊಲೀಸ್ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿ, ಆಯುಕ್ತರ ಕಚೇರಿ ಮತ್ತು ಮುಖ್ಯ ಕಚೇರಿಗಳ ತಾಣವನ್ನು ಕಂಪ್ಯೂಟರ್ಗಳು ಮತ್ತು ಪೆರಿಫೆರಲ್ಗಳ ಅಳವಡಿಕೆಗೆ ಸಜ್ಜುಗೊಳಿಸುವುದು.
ಯೋಜನೆಯ ಮತ್ತೊಂದು ಕ್ರಮ ಹಾರ್ಡ್ವೇರ್ ಅಥವಾ ಕಕ್ಷಿದಾರರ ತಾಣದ ಕಮೀಷನಿಂಗ್. ಇದರನ್ವಯ ಪೊಲೀಸ್ ಠಾಣೆ, ವೃತ್ತ ಕಚೇರಿ, ಉಪವಿಭಾಗೀಯ ಪೊಲೀಸ್ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿ, ಆಯುಕ್ತರ ಕಚೇರಿ ಮತ್ತು ಮುಖ್ಯ ಕಚೇರಿಗೆ ಡೆಸ್ಕ್ ಟಾಪ್ಗಳು, ಪ್ರಿಂಟರ್, ಯುಪಿಎಸ್, ಸ್ವಿಚ್ಗಳು ಮತ್ತು ಇ–ಲೇಖನಿ ಗಳನ್ನು ಪೂರೈಸಲಾಗುವುದು.
ದತ್ತಾಂಶ ಕೇಂದ್ರ ಮತ್ತು ವಿಪತ್ತು (ವಿಕೋಪ) ಚೇತರಿಕೆ ಕೇಂದ್ರ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯ ಪೊಲೀಸ್ ದತ್ತಾಂಶ ಕೇಂದ್ರವನ್ನು ವಿಸ್ತರಿಸಲಾಗಿದೆ ಮತ್ತು ವಿಪತ್ತು ಚೇತರಿಕೆ ತಾಣವನ್ನು ಆ ಪ್ರಾಥಮಿಕ ಸ್ಥಳದಲ್ಲೇ ವಿಪತ್ತು ಸಂಭವಿಸಿದ್ದಲ್ಲಿ ದತ್ತಾಂಶ ರಕ್ಷಣೆಗಾಗಿ ಸೃಷ್ಟಿಸಲಾಗುವುದು.
ಸಾಫ್ಟ್ವೇರ್ ಕಾರ್ಯಕ್ರಮದನ್ವಯ ಎನ್ಸಿಆರ್ಬಿ/ ಎಂಹೆಚ್ಎ ನಿರ್ದೇಶನದ ಮೇರೆಗೆ ಐಟಿ ಅಪ್ಲಿಕೇಷನ್ ಅನ್ನು ರೂಪಿಸಲಾಗಿದೆ. ನಾಗರಿಕರಿಗೆ 4 ಆನ್ಲೈನ್ ಸೇವೆಗಳಾಗಿ ಸಿಟಿಜನ್ ಸೆಂಟ್ರಿಕ್ ಪೋರ್ಟಲ್ಗಳನ್ನು ಸೃಷ್ಟಿಸಲಾಗಿದೆ. ಪೊಲೀಸ್ ಐಟಿ ಅಪ್ಲಿಕೇಷನ್ನಲ್ಲಿ ಪೊಲೀಸ್ ಅಧಿಕಾರಿಗಳಿಗಾಗಿ ಡಿಜಿಟಲ್ ಗ್ರಂಥಾಲಯ ಮತ್ತು ಡ್ಯಾಷ್ಬೋರ್ಡ್ಗಳನ್ನು ಸೃಷ್ಟಿಸಲಾಗಿದೆ.
ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮದಡಿ 60,690 ಪೊಲೀಸ್ ಸಿಬ್ಬಂದಿಗಳಿಗೆ ಮೂಲಭೂತ ಐಟಿ, ಪೊಲೀಸ್ ಐಟಿ, ಬದಲಾವಣೆ ನಿರ್ವಹಣೆ, ಮೂಲ ವ್ಯವಸ್ಥೆ ಆಡಳಿತಗಳಲ್ಲಿ ತರಬೇತಿ ನೀಡಲಾಗಿದೆ. ಇದರ ಜೊತೆಗೆ ವಿಡಿಯೋ ಟ್ಯುಟೋರಿಯಲ್ಸ್ ಅನ್ನು ಸ್ಥಾಪಿಸಲಾಗಿದೆ. ಮೇ1 ಹೆಚ್ಪಿಯ ನಿರ್ಗಮನದ ಬಳಿಕ ಆಂತರಿಕ ತರಬೇತುದಾರರನ್ನು ಸೃಷ್ಟಿಸಲು ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಸಹ ಸಂಘಟಿಸಲಾಗುತ್ತಿದೆ.
ಮಾನವ ಸಂಪನ್ಮೂಲ ಬಳಕೆ ಕಾರ್ಯಕ್ರಮದಡಿ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಸಂಬಂಧಿತ ಸಮಸ್ಯೆಗಳ ನಿವಾರಣೆಗಾಗಿ ಎರಡು ವರ್ಷಗಳ ಅವಧಿಗೆ ತಾಂತ್ರಿಕ ಪ್ರೋತ್ಸಾಹಕ ಎಂಜಿನಿಯರ್ ಸೇವೆಯನ್ನು ಪ್ರತಿ ಜಿಲ್ಲೆ ಮತ್ತು ನಗರಕ್ಕೆ ಒದಗಿಸಲಾಗುತ್ತಿದೆ.
ದತ್ತಾಂಶ ಡಿಜಿಟಲೀಕರಣ ಕಾರ್ಯಕ್ರಮವಾಗಿ ಕಳೆದ ಹತ್ತು ವರ್ಷಗಳ ಅಪರಾಧ ದತ್ತಾಂಶದ ಡಿಜಿಟಲೀಕರಣ ಮಾಡಲಾಗುವುದು. ಇದರನ್ವಯ 15,60,590 ಹಳೆಯ ಅಪರಾಧಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಮತ್ತು ರಾಷ್ಟ್ರೀಯ ದತ್ತಾಂಶ ಕೇಂದ್ರಕ್ಕೆ ರವಾನಿಸಲಾಗಿದೆ.
ಸಿಸಿಟಿಎನ್ಎಸ್ ಯೋಜನೆಯನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ನವದೆಹಲಿಯ ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ ಈ ನಿಟ್ಟಿನಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಎರಡನೆಯ ಸ್ಥಾನದಲ್ಲಿರುವುದಾಗಿ ಘೋಷಿಸಿದೆ.
ಸುಪ್ರೀಂಕೋರ್ಟಿನ ನಿರ್ದೇಶನಗಳ ಮೇರೆಗೆ ಕರ್ನಾಟಕದಾದ್ಯಂತ ದಾಖಲಾದ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಗಳ ಪ್ರತಿಯನ್ನು ಕರ್ನಾಟಕ ಪೊಲೀಸ್ ವೆಬ್ಸೈಟ್ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
2016ರ ಆಗಸ್ಟ್ 26ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಗತಿ (ಕ್ರಿಯಾಶೀಲ ಆಡಳಿತ ಮತ್ತು ಸಕಾಲಿಕ ಅನುಷ್ಠಾನ) ಯೋಜನೆಯಡಿ ಸಿಸಿಟಿಎನ್ಎಸ್ ಯೋಜನೆಯನ್ನು ಪರಾಮರ್ಶಿಸಿದರು. ಇದರಲ್ಲಿ ಅವರು ಮಾಹಿತಿ ವಿನಿಮಯಕ್ಕೆ ಸಮಾನ ವೇದಿಕೆಯ ಅಗತ್ಯ ಮತ್ತು ಅಪರಾಧ ಪತ್ತೆ ಹಾಗೂ ಪ್ರಾಸಿಕ್ಯೂಷನ್ನ ದಕ್ಷತೆಯ ಸುಧಾರಣೆಗೆ ಒತ್ತು ನೀಡಿದರು.
ಅದೇ ರೀತಿ 2016ರ ನವೆಂಬರ್ 18ರಂದು ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ (ಸಿಸಿಇಎ) ಗೃಹ ಸಚಿವಾಲಯದ ಐಸಿಜೆಎಸ್ ಪ್ರಸ್ತಾವನೆಯನ್ನು ಅನುಮೋದಿಸಿ ಪೊಲೀಸ್, ಪ್ರಾಸಿಕ್ಯೂಷನ್, ನ್ಯಾಯಾಲಯ, ಬಂದೀಖಾನೆಗಳು, ಬಾಲಮಂದಿರಗಳು, ವಿಧಿವಿಜ್ಞಾನ ಪ್ರಯೋಗಾಲಯಗಳು, ಬೆರಳು ಮುದ್ರೆ ಮತ್ತು ಮುಖಚಹರೆ ಪತ್ತೆ ವ್ಯವಸ್ಥೆಗಳನ್ನು ಸಮಗ್ರಗೊಳಿಸಿತು.
ಐಸಿಜೆಎಸ್ನ ಎಲ್ಲ ಅಂಶಗಳು ಆನ್ಲೈನ್ನಲ್ಲಿ ವಿವಿಧ ಸಾಫ್ಟ್ವೇರ್ ಅಪ್ಲಿಕೇಷನ್ಗಳಲ್ಲಿ ಲಭ್ಯವಿರುವುದರಿಂದ ಮಾನವಿಕ ಮಾಹಿತಿ ವಿನಿಮಯ ತೆಗೆದುಕೊಳ್ಳುತ್ತಿದ್ದ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ ಲಭ್ಯವಿದೆ. ತನ್ಮೂಲಕ ಅಪರಾಧ ಪತ್ತೆ ಮತ್ತು ನ್ಯಾಯವಿತರಣೆಯ ವಿಳಂಬ ತಗ್ಗಿಸಿ ತ್ವರಿತಗೊಳಿಸಿದೆ.
ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಐಸಿಜೆಎಸ್ ಅಪ್ಲಿಕೇಷನ್ ಅನ್ನು ಜಾರಿಗೊಳಿಸಲಾಗಿದ್ದು ಇಲಾಖೆಯ ಸಕಲ ಪಾಲುದಾರರು ಬಳಸುತ್ತಿದ್ದಾರೆ. ಐಸಿಜೆಎಸ್ನ ಇತರ ಪಾಲುದಾರರೊಂದಿಗೆ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲು ಸಿದ್ಧವಾಗಿದೆ. ಇಲ್ಲಿ ಐಸಿಜೆಎಸ್ನ ಅವಕಾಶವನ್ನು ಒದಗಿಸಲಾಗಿದೆ.
ಬಂದೀಖಾನೆಗಳ ವಿಷಯದಲ್ಲಿ ಇ–ಪ್ರಿಸನ್ ಮೂಲಕ ಬಂದೀಖಾನೆಯ ಸಾಫ್ಟ್ವೇರ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ಐಸಿಜೆಎಸ್ ಅವಕಾಶ ಒದಗಿಸಲಾಗಿಲ್ಲ.
ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಇ-ಕೋರ್ಟ್ ಸಾಫ್ಟ್‍ವೇರ್ ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಎಫ್ಎಸ್ಎಲ್ ಮತ್ತು ಆರ್ಎಫ್ಎಸ್ಎಲ್ಗಳು ಪೊಲೀಸ್ ಐಟಿ ಸಾಫ್ಟ್ವೇರ್ ಅನ್ನು ಬಳಸುತ್ತಿವೆ. ಐಸಿಜೆಎಸ್ನ ಇತರ ಪಾಲುದಾರರ ಆವಶ್ಯಕತೆಗೆ ಅನುಗುಣವಾಗಿ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಎಫ್ಪಿಬಿಗಳು ಹಳೆಯ ಎಎಫ್ಐಎಸ್ ಸಾಫ್ಟ್ವೇರ್ ಅನ್ನು ಬಳಸುತ್ತಿವೆ. ನೂತನ ಎಎಫ್ಐಎಸ್ಗೆ ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದೆ.
ಪ್ರಾಸಿಕ್ಯೂಷನ್ಗೆ ಯಾವುದೇ ಸಾಫ್ಟ್ವೇರ್ ಬಳಕೆಯಾಗುತ್ತಿಲ್ಲ. ಬಾಲಾಪರಾಧಿಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಯಾವುದೇ ಸಾಫ್ಟ್ವೇರ್ ಅನ್ನು ಬಳಸುತ್ತಿಲ್ಲ.
ಗೃಹವ್ಯವಹಾರಗಳ ಸಚಿವಾಲಯದ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈ ಕೆಳಕಂಡ ಅನೇಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಸೆಂಟ್ರಲ್ ಸಿಎಎಸ್ (ಎನ್ಸಿಸಿ) ಗೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಪೊಲೀಸ್ ಠಾಣೆಗಳು ರಾಷ್ಟ್ರೀಯ ದತ್ತಾಂಶಗಳನ್ನು ಶೋಧಿಸಬಹುದಾಗಿದೆ.
ಸಕಲ ಪೊಲೀಸ್ ಠಾಣೆಗಳಿಗೆ ಐಸಿಜೆಎಸ್ ಪೋರ್ಟಲ್‍ಗೆ ಅವಕಾಶ ಒದಗಿಸಲಾಗಿದೆ, ಬಳಕೆದಾರರನ್ನು ಸೃಷ್ಟಿಸಲಾಗಿದೆ. ಪೊಲೀಸ್ ಠಾಣೆಯು ರಾಷ್ಟ್ರೀಯ ಪೊಲೀಸ್ ದತ್ತಾಂಶದ ಕುರಿತು ಅಪರಾಧ ಮತ್ತು ಅಪರಾಧಿ ಮಾಹಿತಿಯನ್ನು ಶೋಧಿಸಲು ಅವಕಾಶವಿದೆ.
ರಾಷ್ಟ್ರೀಯ ಖೈದಿ ದತ್ತಾಂಶದ ಮೇಲೆ ಪೊಲೀಸ್ ಠಾಣೆಗಳು ಖೈದಿಗಳ ಮಾಹಿತಿಯನ್ನು ಕೂಡ ಶೋಧಿಸಬಹುದಾಗಿದೆ, ರಾಷ್ಟ್ರೀಯ ದತ್ತಾಂಶ ಮೂಲದಲ್ಲಿ ಪೊಲೀಸ್ ಠಾಣೆಗಳು ಕಳುವಾದ ಮತ್ತು ವಶಪಡಿಸಿಕೊಂಡ ವಾಹನಗಳ ಮಾಹಿತಿಯನ್ನು, ನಾಪತ್ತೆಯಾದ ಮಕ್ಕಳು ಮತ್ತು ಮಹಿಳೆಯರ ಮಾಹಿತಿಯನ್ನು ಶೋಧಿಸಬಹುದಾಗಿದೆ, ಸಕಲ ಪೊಲೀಸ್ ಠಾಣೆಗಳಿಗೆ ಸೈಬರ್ ಕ್ರೈಂ ಪೋರ್ಟಲ್ನ ಲಭ್ಯತೆಯನ್ನು ಒದಗಿಸಲಾಗಿದೆ. ಯೂಸರ್ ಐಡಿ ಗಳ ಸೃಷ್ಟಿ ಕಾರ್ಯ ಪ್ರಗತಿಯಲ್ಲಿದೆ.
ನ್ಯಾಷನಲ್ ಡೇಟಾಬೇಸ್ನಲ್ಲಿ ಒಂದು ಗುಂಡಿ (ಬಟನ್) ಒತ್ತುವ ಮೂಲಕ ರಾಜ್ಯದ ಪೊಲೀಸ್ ಅಧಿಕಾರಿಗಳು ಅಂತರರಾಜ್ಯ ಅಪರಾಧಗಳ ವಿವರಗಳನ್ನು ತಿಳಿಯಬಹುದಾದಂತೆ ಅಪರಾಧಗಳು ಮತ್ತು ಅಪರಾಧಿಗಳ ಶೋಧನಾ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದು ಇಲಾಖೆಯ ಸಮಯ ಮತ್ತು ಪ್ರಯತ್ನ ಹಾಗೂ ಸರ್ಕಾರಕ್ಕೆ ಹಣದ ಉಳಿತಾಯ ಮಾಡಿಕೊಡುತ್ತದೆ.
ಪೊಲೀಸ್ ಕಂಪ್ಯೂಟರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಡಾ| ಪಿ. ರವೀಂದ್ರನಾಥ್ ಐಪಿಎಸ್ ರವರು ಈ ಎಲ್ಲ ಮಾಹಿತಿ ನೀಡಿದ್ದಾರೆ. ಅವರನ್ನು ಯಾವಾಗಲೇ ಭೇಟಿಯಾದರೂ ಈ ರೀತಿ ಅಮೂಲ್ಯ ಮಾಹಿತಿಯನ್ನು ಒದಗಿಸುವ ಮೂಲಕ ಸಹಕರಿಸುವ ಔದಾರ್ಯ ಹೊಂದಿರುವ ಡಾ|
ರವೀಂದ್ರನಾಥ್ ಅವರಿಗೆ ಭಗವಂತನು ಹೆಚ್ಚಿನ ಆಯುರಾರೋಗ್ಯ, ಸಿರಿಸಂಪತ್ತುಗಳನ್ನು ಅನುಗ್ರಹಿಸಲಿ. ಅವರ ಪ್ರತಿಭೆಯ ಪ್ರಯೋಜನ ನಾಡಿನ ಜನತೆಗೆ ಹೆಚ್ಚಾಗಿ ಲಭ್ಯವಾಗುವಂತಾಗಿ ನಾಡಿನ ಜನಜೀವನ ಉತ್ತಮಗೊಳ್ಳಲಿ ಎಂದು ‘ಪತ್ರಿಕೆ’ ಹೃತ್ಪೂರ್ವಕವಾಗಿ ಹಾರೈಸುತ್ತದೆ.