ಶ್ರೀ ಭಾಸ್ಕರರಾವ್ ಐಪಿಎಸ್ ಅವರು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. 1990ರ ತಂಡದ ಐಪಿಎಸ್ ಅಧಿಕಾರಿಯಾಗಿರುವ ಶ್ರೀಯುತರು ಬೆಂಗಳೂರಿಗೆ ಚಿರಪರಿಚಿತರು.
ಬೆಂಗಳೂರಿನಲ್ಲಿ ಜನಿಸಿದ ಶ್ರೀಯುತರು ಶಾಲಾ ಶಿಕ್ಷಣವನ್ನು ಕುಮಾರನ್ಸ್ ಮತ್ತು ಕಮಲಾ ನೆಹರು ಮಕ್ಕಳ ಮಂದಿರದಲ್ಲಿ ಪೂರೈಸಿದರು. ಸಂತ ಜೋಸೆಫರ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಬಸವನಗುಡಿ ನ್ಯಾಷನಲ್ ಕಾಲೇಜಿನಿಂದ ಬಿಎ ಪದವೀಧರರಾದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಗಳಿಸಿದರು.
ಬಳಿಕ ರಾವ್ ಅವರು ಭಾರತೀಯ ಸೇನೆಗೆ ಸೇರಿದರು. ಒಂದು ವರ್ಷ ಅಲ್ಲಿ ಸೇವೆ ಸಲ್ಲಿಸಿದ ನಂತರ ಪೊಲೀಸ್ ಸೇವೆಗಳ ಪರೀಕ್ಷೆ ಬರೆಯಲು ನಿರ್ಧರಿಸಿದರು. ಎನ್‍ಎಂಕೆಆರ್‍ವಿ ಮಹಿಳೆಯರ ಕಾಲೇಜಿನಲ್ಲಿ ಅಲ್ಪಾವಧಿಗೆ ಅರ್ಥಶಾಸ್ತ್ರ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.
ಬೆಂಗಳೂರು ಪೊಲೀಸ್ ಆಯುಕ್ತರಾಗುವ ಮುನ್ನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‍ಆರ್‍ಪಿ) ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ರಾಗಿದ್ದರು. ಅದಕ್ಕೂ ಮೊದಲು ಎಡಿಜಿಪಿ ಕ್ರೈಮ್ಸ್, ಟೆಕ್ನಿಕಲ್ ಸರ್ವಿಸಸ್, ಫೊರೆನ್ಸಿಕ್ ಲ್ಯಾಬ್, ಎಡಿಜಿಪಿ ಕೇನೈನ್ ಸ್ಕ್ವ್ಯಾಡ್ (ಶ್ವಾನದಳ) ಎಡಿಜಿಪಿ, ನಾಗರಿಕ ಹಕ್ಕುಗಳ ಜಾರಿನಿರ್ದೇಶನಾಲಯ ಮತ್ತು ಮೈಸೂರು ಪೊಲೀಸ್ ಆಯುಕ್ತರಾಗಿದ್ದರು. ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ಸಮುದಾಯ ಸ್ನೇಹಿ ಪೊಲೀಸ್ ಸೇವೆ ಒದಗಿಸುವುದು ಮತ್ತು ಮಾದಕ ವಸ್ತು ಪಿಡುಗಿಗೆ ಅಂಕುಶ ಹಾಕುವುದು ನನ್ನ ಪ್ರಥಮಾದ್ಯತೆ ಎಂದು ನೂತನ ಪೊಲೀಸ್ ಆಯುಕ್ತರು ತಿಳಿಸಿದರು ನಗರವಾಸಿಗಳಿಗೆ ಪೊಲೀಸರಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸುವುದು ನನ್ನ ಉದ್ದೇಶವಾಗಲಿದೆ ಎಂದ ಅವರು ನಾನು ಬೆಂಗಳೂರಿನವನೇ ಆಗಿರುವುದರಿಂದ ನನಗೆ ನಗರದ ಪೊಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿರುವುದು ಒಂದು ಗೌರವ ಎಂದೇ ಭಾವಿಸಿದ್ದೇನೆ ಎಂದರು. ರಾವ್ ಅವರು ಬೆಂಗಳೂರು ಮಹಾನಗರದ 35ನೇ ಪೊಲೀಸ್ ಆಯುಕ್ತರು.
ಶ್ರೀ ಭಾಸ್ಕರರಾವ್ ಅವರು ಮಾಲಿನ್ಯ (ಮೋಟಾರು) ರಹಿತ ವಾಹನ ಚಾಲನೆಯ ಪರ ಇರುವವರು ಮತ್ತು ಬೈಸಿಕಲ್ ಸಂಚಾರದ ಒಲವುಳ್ಳವರಾಗಿದ್ದಾರೆ. ನಗರದಲ್ಲಿ ಅಪರಾಧಗಳನ್ನು ಕನಿಷ್ಠಗೊಳಿಸಲು ಇವರು “ಹಲೋ ನೈಬರ್” ಪರಿಕಲ್ಪನೆಗೆ ಆದ್ಯತೆ ನೀಡಿದ್ದಾರೆ. ಇದು ನಗರವಾಸಿಗಳ ಪಾಲ್ಗೊಳ್ಳುವಿಕೆಯ ಯೋಜನೆಯಾಗಿದೆ.
“ನಗರದ ಪ್ರತಿಯೊಬ್ಬರೂ ಅವರ ನೆರೆಹೊರೆಯವರೊಂದಿಗೆ ಮಾತನಾಡಬೇಕು. ಅವರು ನಿಯಮಿತವಾಗಿ ಪರಸ್ಪರ ಮಾತನಾಡಿದಲ್ಲಿ ನಾವು ನಗರ ಅಪರಾಧಗಳ ಸಂಖ್ಯೆಯನ್ನು ತಗ್ಗಿಸಬಹುದು. ಬೆಂಗಳೂರು ‘ಅನಾಮಿಕ ನಗರ’ವಾಗಿ ಪರಿವರ್ತಿತವಾಗಿದೆ. ನೀವು ನಿಮ್ಮ ನೆರೆಯವರನ್ನು ಚೆನ್ನಾಗಿ ಬಲ್ಲಿರಾದರೆ ಅವರು ನಿಮ್ಮ ಸಮಸ್ಯೆಗಳಿಗೆ ಕೂಡಲೇ ಪ್ರತಿಸ್ಪಂದಿಸುತ್ತಾರೆ. ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುವವರು ತಮ್ಮದೇ ಕಟ್ಟಡದಲ್ಲಿ ವಾಸಿಸುವ ಇತರರನ್ನು ಅರಿತಿರುವುದಿಲ್ಲ. ಇದು ಒಂದು ಬಗೆಯ ಬೀಟ್ (ಗಸ್ತು) ವ್ಯವಸ್ಥೆಯಾಗಿದ್ದು ‘ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಇದರ ಭಾಗವಾಗಿವೆ” ಎಂದು ರಾವ್ ಪ್ರತಿಪಾದಿಸುತ್ತಾರೆ.
ಐಪಿಎಸ್ ತರಬೇತಿಯ ಬಳಿಕ ಕರ್ನಾಟಕಕ್ಕೆ ನಿಯೋಜಿತರಾದ ರಾವ್ ಅವರು 3 ದಶಕಗಳ ತಮ್ಮ ಸೇವಾವಧಿಯಲ್ಲಿ ಅನೇಕ ಸವಾಲಿನ ಮತ್ತು ಮಹತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಾರ್ವಜನಿಕರಿಗೆ ಪೊಲೀಸರ ಮೇಲಿನ ವಿಶ್ವಾಸದ ಮರುಸ್ಥಾಪನೆ, ಕಟ್ಟಕಡೆಯ ಪೊಲೀಸ್ ಪೇದೆಯ ಸಬಲೀಕರಣ ಇವರ ಆದ್ಯತೆಯಾಗಿದೆ. ಏಕೆಂದರೆ ಪೇದೆಯು ಪೊಲೀಸ್ ಆಯುಕ್ತರ ಮುಖವಾಗಿರುತ್ತಾನೆ. ಈ ನಿಟ್ಟಿನಲ್ಲಿ ರಾವ್ ಅವರು ಕಾರ್ಯೋನ್ಮುಖರಾಗಿದ್ದಾರೆ.
ಜನತೆ ನಿರ್ಭೀತರಾಗಿ ಪೊಲೀಸ್‍ರೊಂದಿಗೆ ಮಾತನಾಡುವಂಥ ವಾತಾವರಣ ನಿರ್ಮಾಣ, ಕಾಲವಿಳಂಬ ಇಲ್ಲದೆ ಜನತೆಯ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಇವರು ಪ್ರಾಮುಖ್ಯತೆ ನೀಡಿದ್ದಾರೆ.
ಗೂಂಡಾಗಿರಿ, ಸುಲಿಗೆ, ಲೂಟಿ ಮತ್ತು ವಂಚನೆಗಳಂತಹ ದುಷ್ಕøತ್ಯಗಳನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡುತ್ತಾರೆ.
ನಾನು ಬೆಂಗಳೂರಿನವನಾಗಿರುವುದರಿಂದ ಮಾದಕ ವಸ್ತು ಕಳ್ಳಸಾಗಣೆಕೆದಾರರ ಇರುವು ಮತ್ತು ಚಟುವಟಿಕೆಗಳ ಪತ್ತೆ ಮತ್ತು ಮಾದಕ ವಸ್ತು ವ್ಯಸನದ ಪಿಡುಗಿನ ದಮನ ಸುಲಭವಾಗಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಮಾದಕ ವಸ್ತು ಪಿಡುಗಿನ ದಮನಕ್ಕೆ ನಾನು ಹಾಸ್ಟೆಲ್ ವಾರ್ಡನ್ ಮತ್ತು ಕಾಲೇಜು ಪ್ರಿನ್ಸಿಪಾಲರ ಮೇಲೂ ಪ್ರಕರಣ ದಾಖಲಿಸಲು ಹಿಂಜರಿಯುವುದಿಲ್ಲ. ಎಂದು ರಾವ್ ಗುಡುಗಿದ್ದಾರೆ.
ರಾತ್ರಿ ಪಾರ್ಟಿಗಳ ನಿಯಂತ್ರಣಕ್ಕಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ನುಡಿಯುತ್ತಾರೆ. ಪೊಲೀಸ್ ವ್ಯವಸ್ಥೆಯ ಮೂಲಕ ಜನಸ್ನೇಹಿ ಆಡಳಿತ ಒದಗಿಸಲು ಪ್ರಾಮುಖ್ಯತೆ ನೀಡಿದ್ದಾರೆ. ಇತ್ತೀಚೆಗೆ ಅವರು ಮಾರಣಾಂತಕ ಕಾಯಿಲೆಗೆ ಗುರಿಯಾಗಿದ್ದ ಐದು ಮಕ್ಕಳಿಗೆ ಪೊಲೀಸ್ ಆಯುಕ್ತರಾಗುವ ಹಂಬಲ ಈಡೇರಿಸಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಪುನರುಚ್ಚರಿಸಿದರು.
2000 ರಲ್ಲಿ ಕೊಸೋವೋ (ಈ ಹಿಂದಿನ ಯುಗೋಸ್ಲಾವಿಯಾ)ದಲ್ಲಿನ ಯುದ್ಧ ಪ್ರದೇಶದಲ್ಲಿ ಸಲ್ಲಿಸಿದ ಸೇವೆಗಾಗಿ ಇವರಿಗೆ ವಿಶ್ವಸಂಸ್ಥೆ ಸೇವಾ ಪದಕ ಲಭಿಸಿದೆ. 2008ರಲ್ಲಿ ಪ್ರತಿಭಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ದೊರಕಿದೆ.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪೂರ್ಣ ಚಂದ್ರ ತೇಜಸ್ವಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸೇವೆಯಲ್ಲಿ ಹಲವಾರು ಪ್ರಕರಣಗಳ ಸಮರ್ಥ ನಿಭಾವಣೆಗಾಗಿ ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಿಂದ ಪ್ರಶಂಸಾ ಪತ್ರಗಳÀನ್ನು ಗಳಿಸಿದ್ದಾರೆ.
ರಾವ್ ಅವರು ಸಾಹಿತ್ಯದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ರಾಬರ್ಟ್ ಗ್ರೀನಿ ಅವರ ‘ಪವರ್’, ಚಾಣಕ್ಯನ ‘ಅರ್ಥಶಾಸ್ತ್ರ’, “ಬಯಾಗ್ರಫಿ ಆಫ್ ಅಲೆಕ್ಸಾಂಡರ್ ದಿ ಗ್ರೇಟ್” ಇವರ ಮೆಚ್ಚಿನ ಪುಸ್ತಕಗಳಾಗಿವೆ.
ಇವರು ಸಂಗೀತದಲ್ಲಿಯೂ ತೀವ್ರ ಅಭಿರುಚಿ ಹೊಂದಿದ್ದು ಗಾಯನ ಸಮಾಜದಲ್ಲಿ ಜರುಗುತ್ತಿದ್ದ ಸಂಗೀತ ಕಛೇರಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದರು. ಈಗ ಬಿಡುವಿನ ಕೊರತೆ ಇದೆ. ಇವರು ಧಾರವಾಡದಲ್ಲಿದ್ದಾಗ ಗಾನಕೋಗಿಲೆಗಳಾದ ಡಾ|| ಗಂಗೂಬಾಯಿ ಹಾನಗಲ್ ಮತ್ತು ಪಂಡಿತ್ ಭೀಮಸೇನ ಜೋಷಿ ಅವರನ್ನು ಭೇಟಿಯಾಗಿದ್ದು ಅವಿಸ್ಮರಣೀಯ ಎಂದು ನೆನಪಿಸಿಕೊಳ್ಳುತ್ತಾರೆ.
ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಬೆಳೆಯಲಿ. ಇದಕ್ಕಾಗಿ ಬಿಬಿಎಂಪಿ ಮತ್ತು ಬಿಎಂಟಿಸಿಯೊಂದಿಗೆ ಪೊಲೀಸ್ ಇಲಾಖೆಯೂ ಕೈಜೋಡಿಸಲಿದೆ ಎಂಬುದು ಬೆಂಗಳೂರಿಗಾಗಿ ಇವರ ಮುನ್ನೋಟವಾಗಿದೆ.
ಜನತೆ ಭಯರಹಿತರಾಗಿ ಪೊಲೀಸರನ್ನು ಸಂಪರ್ಕಿಸುವಂತಾಗಬೇಕು ಎನ್ನುವುದೇ ಇವರು ಸಮಾಜಕ್ಕೆ ನೀಡುವ ಸಂದೇಶವಾಗಿದೆ.
ಶ್ರೀ ಭಾಸ್ಕರರಾವ್ ಅವರ ಪ್ರತಿಭೆ ಮತ್ತು ಪರಿಣತಿಯ ಸೇವೆ ನಗರಕ್ಕೆ ಅಧಿಕಾಧಿಕವಾಗಿ ಲಭಿಸುವಂತಾಗಲಿ, ತನ್ಮೂಲಕ ಬೆಂಗಳೂರು ಅಪರಾಧಮುಕ್ತ ನಗರವಾಗಲಿ. ಈ ನಿಟ್ಟಿನಲ್ಲಿ ಭಗವಂತನು ಶ್ರೀಯುತರಿಗೆ ಸಕಲ ಸಾಮಥ್ರ್ಯಗಳನ್ನು ಒದಗಿಸಲಿ ಎಂದು ಪತ್ರಿಕೆಯು ಹೃತ್ಪೂರ್ವಕವಾಗಿ ಹಾರೈಸುತ್ತದೆ.