ಸಿಎಎ-ಎನ್‍ಆರ್‍ಸಿ: ಪೊಲೀಸ್ ಹೊಣೆಗಾರಿಕೆ ಏನು?

0
963

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಟಿಜನ್‍ಶಿಪ್ ಅಮೆಂಡ್‍ಮೆಂಟ್ ಆ್ಯಕ್ಟ್-ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್‍ಶಿಪ್-ಎನ್‍ಆರ್‍ಸಿ) ಕಾಯ್ದೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಆಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಶೋಷಣೆಗೊಳಗಾಗಿ ನಿರಾಶ್ರಿತರಾಗಿ ಭಾರತಕ್ಕೆ ಬಂದು ಆಶ್ರಯ ಪಡೆಯಲಿಚ್ಛಿಸುವ ಹಿಂದೂ, ಬೌದ್ಧ, ಕ್ರೈಸ್ತ, ಜೈನ, ಪಾರಸಿ ಮತ್ತು ಸಿಖ್ ಜನಾಂಗದವರಿಗೆ ಭಾರತದ ಪೌರತ್ವ ನೀಡುವ ಉದ್ದೇಶ ಹೊಂದಿರುವ ಸಿಎಎಗೆ 11-12-2019ರಂದು ಸಂಸತ್ತಿನ ಅನುಮೋದನೆ ದೊರಕಿದೆ.

ಆದರೆ ಮೇಲೆ ತಿಳಿಸಿದ ರಾಷ್ಟ್ರಗಳಿಂದ ಬರುವ ಮುಸ್ಲಿಮರಿಗೆ ಭಾರತ ಪೌರತ್ವ ನೀಡಲಾಗುವುದಿಲ್ಲ ಎಂಬ ಸರ್ಕಾರದ ನಿಲುವಿನಿಂದ ಜನತೆ ಆಕ್ರೋಶಗೊಂಡಿದ್ದಾರೆ. ಸರ್ಕಾರದ ಈ ನಿಲುವಿನಿಂದ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಹಲವೆಡೆ ಹಿಂಸಾಚಾರ ನಡೆದು ಹಲವಾರು ಮಂದಿ ಮೃತಪಟ್ಟಿದ್ದಾರೆ. ಪೊಲೀಸರ ಗೋಲಿಬಾರ್‍ಗೂ ಅನೇಕರು ಬಲಿಯಾಗಿದ್ದಾರೆ.

ಸಿಎಎ ಜಾರಿಗೊಳಿಸುವುದರಿಂದ ಕೆಲವು ರಾಜ್ಯಗಳಲ್ಲಿ ಸ್ಥಳೀಯರೇ ಅಲ್ಪಸಂಖ್ಯಾತರಾಗಿಬಿಡುತ್ತಾರೆ ಎಂಬ ಆತಂಕ ಮನೆಮಾಡಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಿಎಎ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗದಿದ್ದರೂ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಜನರು ಕಾಯ್ದೆ ವಿರುದ್ಧ ಧ್ವನಿಯೆತ್ತಿದ್ದಾರೆ, ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

“ಕೆಲವೆಡೆ ಬಿಜೆಪಿಗೆ ಬಹುಮತ ಕೊಟ್ಟು ಗೆಲ್ಲಿಸಿದ್ದಕ್ಕೆ ರಾಷ್ಟ್ರದ ಪೌರತ್ವ ಸಾಬೀತು ಪಡಿಸುವಂತೆ ಕೇಳುತ್ತಿರುವುದು ಪ್ರತಿಫಲವೇ?” ಎಂದು ಜನರು, ರಾಜಕೀಯ ಮುಖಂಡರು ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಎ, ಎನ್‍ಆರ್‍ಸಿ ಕಾಯ್ದೆಗಳ ಅನುಷ್ಠಾನದಲ್ಲಿ ಪರ-ವಿರೋಧಗಳ ನಡುವೆ ಪೊಲೀಸ್ ಇಲಾಖೆಯ ಪಾತ್ರವೇನು ಎಂಬ ಜಿಜ್ಞಾಸೆ ಉಂಟಾಗಿದೆ.

ಭಾರತ ಸರ್ಕಾರದ ನೇತೃತ್ವ ವಹಿಸಿರುವ ಭಾರತೀಯ ಜನತಾಪಾರ್ಟಿ ಈ ಹಿಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ನೆರೆರಾಷ್ಟ್ರಗಳಲ್ಲಿ ಧಾರ್ಮಿಕ ಶೋಷಣೆಗೊಳಗಾಗಿ ಭಾರತಕ್ಕೆ ಬರುವ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವುದಾಗಿ ಘೋಷಣೆ ಮಾಡಿತ್ತು. 2019ರ ತಿದ್ದುಪಡಿಯಡಿ ಭಾರತಕ್ಕೆ 2014ರ ಡಿಸೆಂಬರ್ 31ಕ್ಕೆ ಮುನ್ನ ಪ್ರವೇಶಿಸಿದ ವಲಸಿಗರಿಗೆ ಮತ್ತು ಅವರು ನೆಲೆಸಿದ್ದ ರಾಷ್ಟ್ರದಲ್ಲಿ ಧಾರ್ಮಿಕ ಶೋಷಣೆಗೆ ಗುರಿಯಾದ ಅಥವಾ ಗುರಿಯಾಗುವ ಭಯದಿಂದ ಭಾರತಕ್ಕೆ ಬರುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ಪಡೆಯುವ ಅರ್ಹತೆ ನೀಡಲಾಗಿದೆ.

ಈ ತಿದ್ದುಪಡಿಯು ನಿವಾಸಿಗಳಿಗೆ ಈ ವಲಸಿಗರಿಗೆ 12 ವರ್ಷಗಳಿಂದ 6 ವರ್ಷಗಳ ಕಾಲ ಸಾಮಾನ್ಯೀಕರಣದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲವು ನಿಬಂಧನೆಗಳ ಸಡಿಲಿಕೆಯನ್ನು ನೀಡಿದೆ.

ಗುಪ್ತಚರ ಇಲಾಖೆ ದಾಖಲೆಗಳ ಪ್ರಕಾರ 30,000 ತತ್‍ಕ್ಷಣದ ಫಲಾನುಭವಿಗಳಿದ್ದು ಈ ತಿದ್ದುಪಡಿಯನ್ನು ಅದು ಧಾರ್ಮಿಕ ತಾರತಮ್ಯ ನಡೆಸುತ್ತಿದೆ, ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ   ಎಂದು   ವ್ಯಾಪಕವಾಗಿ ಟೀಕಿಸಲಾಗುತ್ತಿದೆ.

ಭಾರತ ಸರ್ಕಾರವು ಹೇಳುತ್ತಿರುವುದೇನೆಂದರೆ “ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲಿಮರು ಅಲ್ಲಿ ಧಾರ್ಮಿಕ ಶೋಷಣೆಗೆ ಗುರಿಯಾಗುವ ಸಾಧ್ಯತೆಗಳು ಕಡಿಮೆ. ಹೀಗಿದ್ದರೂ ಕೆಲವು ಮುಸ್ಲಿಂ ಸಮುದಾಯಗಳು, ಉದಾಹರಣೆಗೆ ಹಜಾರಾಗಳು, ಅಹ್ಮದಿಗಳು ಮುಂತಾದವರು ಈ ದೇಶಗಳಲ್ಲಿ ಧಾರ್ಮಿಕ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಈ ಶಾಸನಕ್ಕೆ ಸಂಸದೀಯ ಅನುಮೋದನೆ ದೊರೆತಿರುವುದು ದೇಶದಾದ್ಯಂತ   ಜನತೆಯಲ್ಲಿ ಆಕ್ರೋಶವನ್ನುಂಟುಮಾಡಿದೆ. ಅಸ್ಸಾಂ ಮತ್ತು ಇತರ ಉತ್ತರ ಭಾರತದ ರಾಜ್ಯಗಳು ಮಾತ್ರವಲ್ಲದೆ ದಕ್ಷಿಣದ ಕರ್ನಾಟಕದಲ್ಲಿ ಕೂಡ ಈ ಮಸೂದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಉಂಟಾಗಿವೆ. ನಿರಾಶ್ರಿತರಿಗೆ ಮತ್ತು ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವುದರಿಂದ ತಮ್ಮ “ರಾಜಕೀಯ ಹಕ್ಕುಗಳು, ಸಂಸ್ಕøತಿ ಮತ್ತು ಭೂಮಿಯ ಹಕ್ಕು”ಗಳನ್ನು ಕಸಿದುಕೊಂಡಂತಾಗುತ್ತದೆ. ಎಂಬ ಆತಂಕವೇ ಈ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಕೆಲವು ಪ್ರತಿಭಟನೆಕಾರರು ಈ ಮಸೂದೆಯು ಮುಸ್ಲಿಮರ ಬಗ್ಗೆ ತಾರತಮ್ಯ ಮಾಡುತ್ತಿದೆ, ಮುಸ್ಲಿಂ ನಿರಾಶ್ರಿತರು ಮತ್ತು ವಲಸಿಗರಿಗೂ ಭಾರತೀಯ ಪೌರತ್ವ ಕೊಡಬೇಕಿದೆ ಎಂದು ಒತ್ತಾಯಿಸುತ್ತಿದ್ದಾರೆ. ಈ ಮಸೂದೆಯ ವಿರುದ್ಧ ಪ್ರಮುಖ ಪ್ರತಿಭಟನೆಗಳು ಭಾರತದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿವೆ. ಅಲೀಗಢ ಮುಸ್ಲಿಂ ವಿಶ್ವವಿದ್ಯಾನಿಲಯ, ಜಾಮಿಯಾ-ಮಿಲಿಯಾ-ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪೊಲೀಸರು ತಮ್ಮ ಮೇಲೆ ಕ್ರೂರವಾಗಿ ಪ್ರತಿಕ್ರಿಯಿಸುತ್ತಿದ್ದು ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ದೂರಿದ್ದಾರೆ. ಪ್ರತಿಭಟನೆ ವೇಳೆ ಅನೇಕರು ಪ್ರಾಣತೆತ್ತಿದ್ದಾರೆ. ವಿದ್ಯಾರ್ಥಿಗಳು, ಪೊಲೀಸರು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.

ಸಿಎಎಗೆ ಸಂಸದೀಯ ಅನುಮೋದನೆ ದೊರೆತು ರಾಷ್ಟ್ರಪತಿಯವರ ಅಂಕಿತ ಬಿದ್ದು ಕಾಯಿದೆಯಾದ ಕೆಲವೇ ಕಾಲದ ಬಳಿಕ ಮತ್ತೊಂದು ಕ್ರಮವಾದ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ ಬಗ್ಗೆ ಗುಸುಗುಸು ಶುರುವಾಯಿತು. ಎನ್‍ಆರ್‍ಸಿ ಎಂದರೇನು? ಅದು ಸಿಎಎ ಜೊತೆಗೆ ದೇಶದ ಜನತೆಗೆ ನಿಜಕ್ಕೂ ತೊಂದರೆ ತಂದೊಡ್ಡಲಿದೆಯೇ? ಸಿಎಎ ಮತ್ತು ಎನ್‍ಆರ್‍ಸಿಯ ನಡುವಣ ವ್ಯತ್ಯಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ.

ಎನ್‍ಆರ್‍ಸಿ ಎಚಿದರೇನು?

ಎನ್‍ಆರ್‍ಸಿ ಎಂದರೆ ರಾಷ್ಟ್ರೀಯ ಪೌರತ್ವ ನೋಂದಣಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್) ಯಾಗಿದೆ. ಎನ್‍ಆರ್‍ಸಿ ಮೂಲಕ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಅಸ್ಸಾಂನ ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ. ಇದು ಒಂದು ರಾಜ್ಯಕ್ಕೆ ನಿರ್ದಿಷ್ಟವಾದ ಕಸರತ್ತಾಗಿದ್ದು ಅದು ತನ್ನ ಜನಾಂಗೀಯ  ವಿಶಿಷ್ಟತೆಯನ್ನು  ತಿರುಚದಂತೆ ಕಾಪಾಡಿಕೊಳ್ಳುವ ಕ್ರಮವಾಗಿದೆ. ಅನೇಕ ಉನ್ನತ ಬಿಜೆಪಿ ನಾಯಕರು, ಗೃಹಸಚಿವರು ಎನ್‍ಆರ್‍ಸಿ ಅಸ್ಸಾಂನಲ್ಲಿರುವಂತೆ ರಾಷ್ಟ್ರವ್ಯಾಪಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಇದು ಸರ್ಕಾರಕ್ಕೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಒಳನುಸುಳುಕೋರರನ್ನು ಪತ್ತೆ ಮಾಡಲು ಸಮರ್ಥವನ್ನಾಗಿಸುವ, ಅವರನ್ನು ವಶಕ್ಕೆ ಪಡೆಯುವ ಮತ್ತು ಅವರು ಎಲ್ಲಿಂದ ಬಂದರೋ ಆ ಪ್ರದೇಶಕ್ಕೆ ಗಡೀಪಾರು ಮಾಡುವ ಅಧಿಕಾರವನ್ನು ಒದಗಿಸುತ್ತದೆ.

ಪ್ರಸ್ತಾವಿತ ಎನ್‍ಆರ್‍ಸಿ ಮಸೂದೆ ಇಲ್ಲಿಯವರೆಗೂ   ಒಂದು ಪ್ರಸ್ತಾವನೆಯಾಗಿಯೇ ಉಳಿದಿದೆ, ಇದನ್ನು ಜಾರಿಗೊಳಿಸಿದಲ್ಲಿ ಇದು ಭಾರತದಲ್ಲಿನ ಅಕ್ರಮ ವಲಸಿಗರನ್ನು ಗುರಿಯಾಗಿಸಲಿದೆ.   ಆದರೆ ಹಿಂದೂಗಳು, ಬೌದ್ಧರು, ಕ್ರೈಸ್ತರು, ಜೈನರು, ಸಿಖ್ಖರು ಮತ್ತು ಪಾರಸಿಗಳು ಆಫ್ಘಾನಿಸ್ತಾನ,   ಪಾಕಿಸ್ತಾನ ಮತ್ತು   ಬಾಂಗ್ಲಾದೇಶದಿಂದ ಬಂದವರಾಗಿದ್ದರೂ ಅವರ ಮೇಲೆ ಕಾಯಿದೆ ಯಾವುದೇ ಪರಿಣಾಮ ಬೀರುವುದಿಲ್ಲ, ಅವರು ತಮ್ಮ ಮೂಲ ನೆಲೆಯಾದ    ದೇಶದಲ್ಲಿ ಧಾರ್ಮಿಕ  ದೌರ್ಜನ್ಯ  ಮತ್ತು ಪ್ರತ್ಯೇಕತೆಗೆ ಒಳಗಾಗಿರುವುದಾಗಿ ಪ್ರತಿಪಾದಿಸಿದರೂ ಕೂಡ ಇದರರ್ಥ ರಾಷ್ಟ್ರವ್ಯಾಪಿ ಎನ್‍ಆರ್‍ಸಿ ಪ್ರಸ್ತಾವಿತ ರೀತಿಯಲ್ಲಿ   ಜಾರಿಗೊಂಡರೆ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಹೊರತು ಪಡಿಸಿ ಇತರ ಯಾವುದೇ ದೇಶದಿಂದ ವಲಸೆ ಬಂದು ಅಕ್ರಮವಾಗಿ ಇಲ್ಲಿ ನೆಲೆಸಿದವರ ಮೇಲೆ ಪರಿಣಾಮವಾಗುತ್ತದೆ. ಮತ್ತು ಈ ಮೂರು ರಾಷ್ಟ್ರಗಳಿಂದ ಬರುವ ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೆ ಅವರ ಮೇಲೂ ಪರಿಣಾಮವಾಗುತ್ತದೆ. ಏಕೆಂದರೆ ಅವರನ್ನು ಸಿಎಎನಲ್ಲಿ ಸೇರಿಸಿಲ್ಲ.

ಸಿಎಎ ಕಾಯಿದೆ ವಿರುದ್ಧ ಕರ್ನಾಟಕದಲ್ಲಿ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಮತ್ತು ಈಗಲೂ ಮುಂದುವರಿದಿವೆ. ಮೈಸೂರಿನಲ್ಲಿ ನೂರಾರು ಪ್ರತಿಭಟನೆಕಾರರು ಬೀದಿಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದ್ದರು. ಇದರಿಂದ ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಜನತೆ ಬೈಕ್ ರ್ಯಾಲಿಯನ್ನು ನಡೆಸಿದ್ದರು. ಬೆಂಗಳೂರಿನಲ್ಲಿ ಐಐಎಸ್‍ಸಿ ವಿದ್ಯಾರ್ಥಿಗಳು ದೆಹಲಿ ಮತ್ತು ದೇಶದ ಇತರ ಭಾಗಗಳ ವಿದ್ಯಾರ್ಥಿಗಳೊಂದಿಗೆ ಸಹಮತ ವ್ಯಕ್ತಪಡಿಸಿ ಮೌನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಶಿವಮೊಗ್ಗದಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ನಗರದ ಗಾಂಧಿ ಪಾರ್ಕ್ ಬಳಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆ ಹಿಂಸಾತ್ಮಕವಾಗಿ ಪರಿಣಮಿಸುತ್ತಿದೆ ಎಂದು ಆರೋಪಿಸಿ ಪ್ರಸನ್ನಕುಮಾರ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಬಳ್ಳಾರಿ, ಬೀದರ್, ಕಲಬುರಗಿ, ಕೊಡಗು ಮತ್ತು ಉಡುಪಿಗಳಲ್ಲಿ ಕೂಡ ಪ್ರತಿಭಟನೆಗಳು ನಡೆದವು. ರಾಯಚೂರಿನಲ್ಲಿ ಸಿಎಎ  ಘೋಷಣೆಯ ಬಳಿಕ ಪ್ರತಿಭಟನೆಗಳು ಜರುಗಿದವು. ಪ್ರತಿಭಟನಾಕಾರರು ಸಿಎಎ ಜಾರಿಯಾದರೆ ಸಿಂಧನೂರು ಶಿಬಿರದಲ್ಲಿರುವ 20,000 ಬಾಂಗ್ಲಾದೇಶಿ ವಲಸಿಗರ ಪೈಕಿ ಅಂದಾಜು 5000 ಮಂದಿಗೆ ಭಾರತೀಯ ಪೌರತ್ವ ಲಭಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಬೆಂಗಳೂರಿನ ಪುರಭವನ (ಟೌನ್‍ಹಾಲ್)ದ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡರು. ಬೆಂಗಳೂರಿನಲ್ಲಿ ನೂರಾರು ಪ್ರತಿಭಟನೆಕಾರರು ರ್ಯಾಲಿಯಲ್ಲಿ ಭಾಗವಹಿಸಿ ಮೋದಿ ಸರ್ಕಾರವು ಧರ್ಮದ ಆಧಾರದಲ್ಲಿ ಭಾರತವನ್ನು ವಿಭಜಿಸುತ್ತದೆ ಎಂದು ಟೀಕಿಸಿದರು. ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ನಷ್ಟ ಮುಂತಾದವುಗಳಿಗೆ ಎಡೆಮಾಡಿಕೊಟ್ಟು ಆರ್ಥಿಕತೆಯ ಧ್ವಂಸಕ್ಕೆ ಕಾರಣವಾಗಿದೆ ಎಂದು  ಪ್ರತಿಭಟನೆಕಾರರು  ಆರೋಪಿಸಿದರು. ಪ್ರತಿಭಟನಾಕಾರರನ್ನು ನಗರದಾದ್ಯಂತ ವಿಧಿಸಲಾಗಿದ್ದ ಅಖPಅ ಸೆಕ್ಷನ್ 144 ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ವಶಕ್ಕೆ ತೆಗೆದುಕೊಳ್ಳಲಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು 80 ಕ್ಕೂ ಅಧಿಕ ಸಂಘಟನೆಗಳು ಸಿಎಎ ಪರ ಮತ್ತು ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದು ಪ್ರತಿಭಟನೆಗಳನ್ನು ನಡೆಸಲು ಪೊಲೀಸ್ ಭದ್ರತೆಯನ್ನು ಕೋರಿದ್ದವು ಎಂದು ತಿಳಿಸಿದರು.

ಸಮಸ್ಯೆಯಾಗಬಹುದೆಂದು ಊಹಿಸಿದ ಪೊಲೀಸರು ಪ್ರತಿಭಟನೆಗಳಿಗೆ ಅವಕಾಶ ನೀಡಿರಲಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಮತ್ತು ಕಾನೂನು-ಸುವ್ಯವಸ್ಥೆ ಹದಗೆಡದಂತೆ ರಕ್ಷಣೆ ನೀಡಲು ನಾವು ನಿರ್ಧರಿಸಿದ್ದೆವು. ಎಂದು ರಾವ್ ಹೇಳಿದರು.

ಬೆಂಗಳೂರು ಪೊಲೀಸರು ಶ್ಲಾಘನೆಯ ಸುರಿಮಳೆಗೆ ಪಾತ್ರರಾದರು. ಮಾನವೀಯ ಮುಖದ ಪ್ರದರ್ಶನ ತೋರಿದ್ದಕ್ಕೆ ಈ ಶ್ಲಾಘನೆ ಏರ್ಪಟ್ಟಿತು. ಪ್ರತಿಭಟನಾಕಾರರ ಬಂಧನದ ವೇಳೆ ಬೆಂಗಳೂರು ಪೊಲೀಸರು ಮಾನವೀಯ ನಡವಳಿಕೆ ತೋರಿದ್ದರು. ನಗರದ ಹೃದಯಭಾಗದಲ್ಲಿ ನಡೆದ ಪ್ರತಿಭಟನೆಯ ವೇಳೆ ನೂರಾರು ಜನರನ್ನು ಮಂಗಳ ಕಲ್ಯಾಣ ಮಂಟಪಕ್ಕೆ ಕರೆದೊಯ್ಯಲಾಯಿತು. ಈ ಛತ್ರವು ಕೋರಮಂಗಲದಲ್ಲಿದೆ. ಬಂಧಿತರಲ್ಲಿ ಅನೇಕರು ಮಧುಮೇಹ ಪೀಡಿತರೂ, ವಯೋವೃದ್ಧರೂ   ಆಗಿದ್ದು ಸುಸ್ತಾಗುತ್ತಿರುವುದಾಗಿ ತಿಳಿಸಿದರು. ಪೊಲೀಸರು ಮಧುಮೇಹ ಪೀಡಿತರಿಗೆ ಗ್ಲೂಕೋಸ್ ಪೊಟ್ಟಣಗಳನ್ನು ತರಿಸಿಕೊಟ್ಟರು. ಅದು ಊಟದ ಸಮಯವಾಗಿದ್ದರಿಂದ ಮಡಿವಾಳ ಪೊಲೀಸ್ ಸಹಾಯಕ ಆಯುಕ್ತ ಕರಿಬಸವಣ್ಣ ಅವರು ಹೀಗೆ ಹೇಳಿದರು “ನಾವು ಕೂಡ ಮನುಷ್ಯರೇ. ಹೀಗಾಗಿ ಊಟದ ಸಮಯದಲ್ಲಿ 120 ಪ್ರತಿಭಟನಾಕಾರರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ಮುಷ್ಕರನಿರತರು ಹಸಿದಿರುವುದು ನಮ್ಮ ಗಮನಕ್ಕೆ ಬಂದೊಡನೆ ಸಮೀಪದ ಹೋಟೆಲ್‍ನಿಂದ ಊಟ ತರಿಸಿಕೊಡಲಾಯಿತು. ಬಂಧಿತರನ್ನು ಬಿಡುಗಡೆ ಮಾಡುವಾಗ ಅವರೆಲ್ಲ ನಮ್ಮ ಬಳಿ ಬಂದು ನಮ್ಮ ಆತಿಥ್ಯದ ಬಗ್ಗೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದರು. ಮಾನವೀಯತೆಗೆ ಮೊದಲ ಪ್ರಾಶಸ್ತ್ಯ. ನಾವು ಮಾನವತಾವಾದಿಯಾಗಿದ್ದರಿಂದ ಈ ರೀತಿ ನಡೆದುಕೊಂಡೆವು”.

ಬೆಂಗಳೂರಿನ ಜ್ಯೋತಿನಿವಾಸ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾಗ ಸಿಎಎ ಪರ ಪ್ರತಿಭಟನಾಕಾರರು ಸಿಎಎ ಪರ ಬ್ಯಾನರ್‍ಗೆ ಸಹಿ ಮಾಡುವಂತೆ ಒತ್ತಾಯಿಸಿದಾಗ ನಿರಾಕರಿಸಿದರು. ಅವರಿಂದ ಬಲವಂತವಾಗಿ ಸಿಎಎ ಪರ ಘೋಷಣೆಗೆ ಸಹಿ ಮಾಡಿಸಿಕೊಳ್ಳುವ ಪ್ರಯತ್ನ ನಡೆಯಿತು ಎಂದು ಆರೋಪಿಸಿ ವಿದ್ಯಾರ್ಥಿನಿಯರು ಮತ್ತೊಮ್ಮೆ ನಗರದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಿಎಎ ಪರ ಪ್ರತಿಭಟನಾಕಾರರು ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಜ್ಯೋತಿನಿವಾಸ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪಾಕಿಸ್ತಾನಕ್ಕೆ ಹೋಗುವಂತೆ ಧಮಕಿ ಹಾಕಿದರು ಎಂದು ವಿದ್ಯಾರ್ಥಿನಿಯರು ದೂರಿದರು. ಈ ಹಿನ್ನೆಲೆಯಲ್ಲಿ ಇನ್ನೊಮ್ಮೆ ಮೌನ ಪ್ರತಿಭಟನೆ ಹಮ್ಮಿಕೊಂಡರು.

ಇದರಿಂದ ಪೊಲೀಸರು ಎಚ್ಚೆತ್ತು ಅಹಿತಕರ ಘಟನೆ ನಡೆಯದಂತೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಂಡರು.

ಸಿಎಎ ಪರ ಮಾತನಾಡಿದ ಪ್ರಸಿದ್ಧ ಪ್ರವಚನಕಾರ ಚಕ್ರವರ್ತಿ ಸೂಲಿಬೆಲೆ ಮತ್ತು ಸಂಸದ ತೇಜಸ್ವಿ ಸೂರ್ಯ ಅವರನ್ನು ಗುರಿಯಾಗಿಸಿ ಒಳಸಂಚು ರೂಪಿಸಲಾಗಿತ್ತು. ಪುರಭವನದ ಬಳಿ ಪ್ರತಿಭಟನೆ ನಡೆಸುವಾಗ ತೇಜಸ್ವಿ ಸೂರ್ಯ ಅವರು ಸಿಎಎ ವಿರುದ್ಧ ಪ್ರತಿಭಟಿಸುವವರನ್ನು ಟೀಕಿಸಿದರು ಮತ್ತು ಚಕ್ರವರ್ತಿ ಸೂಲಿಬೆಲೆ ಹಾಗೂ ಅವರ ಸಂಗಡಿಗರು ಸಿಎಎಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ಅವರು ಹೆದರಬೇಕಿಲ್ಲ ಎಂದು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ಅವರ ಮೇಲೆ ಕಲ್ಲೆಸೆದ. ಆದರೆ ಅಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ತೇಜಸ್ವಿ ಸೂರ್ಯ ಅವರಿಗಾಗಲಿ ಚರ್ಕವರ್ತಿ ಸೂಲಿಬೆಲೆ ಅವರಿಗಾಗಲಿ ಯಾವುದೇ ತೊಂದರೆಯಾಗಲಿಲ್ಲ. ಇದರಿಂದ ಹತಾಶನಾದ  ಕಿಡಿಗೇಡಿ  ಅಲ್ಲಿಯೇ  ಇದ್ದ ಪ್ರತಿಭಟನಾಕಾರನೊಬ್ಬನ ಮೇಲೆ ಹಲ್ಲೆ ನಡೆಸಿದ. ಪೊಲೀಸರು ಬಹಳ ಗಂಭೀರ ತನಿಖೆ ನಡೆಸಿದಾಗ ಈ ಹಲ್ಲೆ ಪೂರ್ವ ನಿಯೋಜಿತ ಎಂಬ ಅಂಶ ತಿಳಿದುಬಂದಿತು.

ಈ ರೀತಿ ಸಿಎಎ ಪರ ಮತ್ತು ವಿರುದ್ಧದ ಪ್ರತಿಭಟನೆಕಾರರಿಂದ ಪೊಲೀಸರು ಭದ್ರತೆ, ರಕ್ಷಣೆ ಒದಗಿಸುತ್ತಾ ಬಂದಿದ್ದಾರೆ.

ಇಷ್ಟೆಲ್ಲಾ ಮುನ್ನೆಚ್ಚರಿಕೆಗಳ ನಡುವೆಯೂ ಸಿಎಎ ವಿರುದ್ಧ ಪ್ರತಿಭಟನೆ ನಡೆಯುವ ವೇಳೆ ಭಾರಿ ಪ್ರಮಾಣದಲ್ಲಿ ಕಲ್ಲುತೂರಾಟ, ದೊಂಬಿ, ಲೂಟಿಗಳಂಥ ಹಿಂಸಾತ್ಮಕ ರೂಪ ತಳೆಯಿತು. ಪೊಲೀಸರಿಗೆ ಗೋಲಿಬಾರ್ ಮಾಡದೆ ಅನ್ಯ ಮಾರ್ಗವಿರಲಿಲ್ಲ ಎಂದು ಪೊಲೀಸರು ಹೇಳಿದರು.

ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿಪ್ರಹಾರ, ಅಶ್ರುವಾಯು ಸೆಲ್ ಪ್ರಯೋಗ ವಿಫಲವಾದ ಬಳಿಕ ಅನಿವಾರ್ಯವಾಗಿ ಗೋಲಿಬಾರ್ ನಡೆಸಬೇಕಾಯಿತು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದರು. ಈ ಗೋಲಿಬಾರ್‍ನಿಂದ ಇಬ್ಬರು ಮೃತಪಟ್ಟರು. ಈ ಘಟನೆ ರಾಜಕೀಯ ಬಣ್ಣ ಪಡೆದುಕೊಂಡು ಪ್ರತಿಪಕ್ಷ ನಾಯಕರು ಈ ಘಟನೆ ಅನಪೇಕ್ಷಣೀಯ ಎಂದು ಕಟುವಾಗಿ ಟೀಕಿಸಿದರು. ಕೆಲವು ರಾಜಕೀಯ ನಾಯಕರು ಇದು ನಕಲಿ ಕಾರ್ಯಾಚರಣೆ, ಇದು ಬೇಕಾಗಿರಲಿಲ್ಲ ಎಂದು ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಆಯುಕ್ತ ಡಾ.ಪಿ.ಎಸ್.ಹರ್ಷ ಅವರೂ ಸುದ್ದಿಗೋಷ್ಠಿ ನಡೆಸಿ ಕೆಲವೊಂದು ವಿಡಿಯೋಗಳನ್ನು ಬಿಡುಗಡೆ ಮಾಡಿದರು.

ಪ್ರತಿಭಟಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಭಂಗವಾಗದಂತೆ, ಆಕ್ರೋಶ ಪೊಲೀಸರ ಮೇಲೆ ತಿರುಗದಂತೆ ಪ್ರತಿಭಟನೆಗಳನ್ನು ಹಮ್ಮಿಕೊಂಡರೆ ಉತ್ತಮ.

ಪರ-ವಿರೋಧü ಏನೇ ಇದ್ದರೂ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳದಂತೆ   ಶಾಂತಿಯುತವಾಗಿ   ಮುಷ್ಕರ- ಪ್ರತಿಭಟನೆಗಳನ್ನು ನಡೆಸಿದರೆ ಅವರಿಗೂ ಕ್ಷೇಮ, ಸಾಮಾಜಿಕ ಸ್ವಾಸ್ಥ್ಯಕ್ಕೂ  ಉತ್ತಮ.

ಪೊಲೀಸರು ಯಾವುದೇ ತಾರತಮ್ಯ ಇಲ್ಲದೆ ಕರ್ತವ್ಯ ನಿರ್ವಹಣೆ ಮಾಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪ್ರತಿಯೊಬ್ಬರನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ಸಿಎಎ ಪರ-ವಿರೋಧ ಪ್ರತಿಭಟನೆಗಳ ಪ್ರಸಂಗಗಳನ್ನು ರಾಜ್ಯದ ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದೇ ಹೇಳಬಹುದಾಗಿದೆ.