ಸ್ಥೈರ್ಯದ ಸಿಂಹಿಣಿ: ಇಶಾಪಂತ್ ಐಪಿಎಸ್

0
821

ಕರ್ನಾಟಕದ ಕೆಚ್ಚೆದೆಯ ಪೊಲೀಸ್ ಅಧಿಕಾರಿಗಳಾದ ಶ್ರೀ ಸಾಂಗ್ಲಿಯಾನ ಮತ್ತು ಶ್ರೀ ಕೆಂಪಯ್ಯ ಅವರ ಹೆಸರಿನಲ್ಲಿ ಚಲನಚಿತ್ರಗಳು ತಯಾರಾಗಿವೆ. ಅದೇ ರೀತಿ ನಿಯಮಪಾಲಕ, ಪ್ರಾಮಾಣಿಕ, ನಿಸ್ಪಹ ಮಹಿಳಾ ಐ.ಪಿ.ಎಸ್. ಅಧಿಕಾರಿಯೊಬ್ಬರ ಜೀವನಗಾಥೆ ಚಲನಚಿತ್ರಕ್ಕೆ ಸ್ಫೂರ್ತಿಯಾಗಿದೆ. ಪ್ರಸ್ತುತ ಬೆಂಗಳೂರು ನಗರ ಆಗ್ನೇಯ ವಿಭಾಗದ ಡಿಸಿಪಿಯಾಗಿರುವ ಇಶಾ ಪಂತ್ ಅವರೇ ಈ ಅಧಿಕಾರಿಣಿಯಾಗಿದ್ದು, ಇವರ ಜೀವನದಿಂದ ಸ್ಫೂರ್ತಿ ಪಡೆದು “ಜೈ ಗಂಗಾ ಜಲ್” ಚಿತ್ರ ನಿರ್ಮಾಣಗೊಂಡಿದೆ. ಈ ಚಲನಚಿತ್ರವು ಇತ್ತೀಚೆಗೆ ಜಗತ್ತಿನಾದ್ಯಂತ ಬಿಡುಗಡೆಯಾಯಿತು. ಪ್ರಿಯಾಂಕಾ ಛೋಪ್ರಾ ಮುಖ್ಯ ಭೂಮಿಕೆಯ ಈ ಚಿತ್ರ ವಿಶ್ವದೆಲ್ಲೆಡೆ ಪ್ರಶಂಸೆ ಗಳಿಸಿತು.

ಈ ಚಿತ್ರದ ಮುಖ್ಯ ಪಾತ್ರ ಇಶಾಪಂತ್ ರವರ ಅಸಾಧಾರಣ ಕೆಚ್ಚಿನ ಸೇವೆಯ ಸ್ಫೂರ್ತಿ ಪಡೆದು ರೂಪಿತವಾಗಿದೆ.

ಬೆಂಗಳೂರು ನಗರ ಆಗ್ನೇಯ ವಿಭಾಗದ ಡಿಸಿಪಿಯಾಗುವ ಮುನ್ನ ಇವರು ವಿಧಿವಿಜ್ಞಾನ ತಜ್ಞ ವಿಭಾಗದ ಎಸ್‍ಪಿ ಮತ್ತು ನಿರ್ದೇಶಕರಾಗಿದ್ದರು.

1984ರ ಜೂನ್ 23ರಂದು ಜನಿಸಿರುವ ಇಶಾಪಂತ್ ರವರು ನಾಲ್ವರು ಸಹೋದರಿಯರಲ್ಲಿ ಅತಿ ಕಿರಿಯರು. ಈ ನಾಲ್ಕೂ ಸಹೋದರಿಯರು, ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇವರ  ಹಿರಿಯ  ಸಹೋದರಿ  ಐ.ಎಫ್.ಎಸ್. ಅಧಿಕಾರಿಯಾಗಿದ್ದಾರೆ. ಮತ್ತೋರ್ವ ಸಹೋದರಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ. ಇವರ ಮೂರನೇ ಸಹೋದರಿ ಭಾರತೀಯ ವಾಯುಪಡೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿದ್ದಾರೆ.

ಭೋಪಾಲ್ ಮೂಲದ 2011ರ ಐ.ಪಿ.ಎಸ್. ತಂಡದ ಅಧಿಕಾರಿಯಾಗಿರುವ ಇಶಾಪಂತ್ ರವರು ಮಧ್ಯಪ್ರದೇಶ ಶ್ರೇಣಿಗೆ ಸೇರ್ಪಡೆಯಾದರು. ಆರಂಭದಲ್ಲಿ ಜಬಲ್‍ಪುರದ ಹೆಚ್ಚುವರಿ  ಪೊಲೀಸ್  ವರಿಷ್ಠಾಧಿಕಾರಿಯಾಗಿ ನೇಮಕಗೊಂಡರು.  ಆನಂತರ  ಗ್ವಾಲಿಯರ್‍ಗೆ ನಿಯೋಜಿತರಾದರು.

ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ) ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 191ನೇ ರ್ಯಾಂಕ್ ಪಡೆದು ಹೈದರಾಬಾದ್‍ನಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎಸ್.ವಿ.ಪಿ.ಎನ್.ಪಿ.ಎ.) ಪೊಲೀಸ್ ತರಬೇತಿಯನ್ನು ಪೂರೈಸಿದರು.

2012ರಲ್ಲಿ ಇವರು ಅತ್ಯುತ್ತಮ ಸರ್ವಾಂಗೀಣ ಪೊಲೀಸ್ ಪ್ರೊಬೇಷನರ್ (ಐ.ಪಿ.ಎಸ್.) ಪ್ರಶಸ್ತಿ ಪಡೆದರು. ಜೊತೆಗೆ ಪ್ರಧಾನಮಂತ್ರಿಯವರ ಬೇಟನ್, ಮತ್ತು ಗೃಹಸಚಿವರ ರಿವಾಲ್ವರ್ ಅನ್ನು 64ನೇ ದೀಕ್ಷಾಂತ ಪಥಸಂಚಲನದ (ಎಸ್.ವಿ.ಪಿ.ಎನ್.ಪಿ.ಎ) ಸಂದರ್ಭದಲ್ಲಿ ಪಡೆದರು.

ಜಬಲ್‍ಪುರದಲ್ಲಿ ಸೇವೆ ಸಲ್ಲಿಸುವಾಗ ಡ್ರಗ್ ಮಾಫಿಯಾಗಳು ಮತ್ತು ಅಕ್ರಮ ಮದ್ಯ ಮಾರಾಟಗಾರರಿಗೆ ಸಂಬಂಧಪಟ್ಟ ಹಲವಾರು ಪ್ರಕರಣಗಳನ್ನು ಇತ್ಯರ್ಥಪಡಿಸಿದರು.

ಇವರು ತುಮಕೂರಿನ ಪ್ರಪ್ರಥಮ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲೆಯ 36ನೇ ಎಸ್.ಪಿ. ಯೆಂಬ ಹಿರಿಮೆ ಗಳಿಸಿದರು.

ಇಶಾಪಂತ್ ಅವರ ತಂದೆ, ಭಾರÀತ್ ಹೆವಿ ಎಲೆಕ್ಟ್ರಿಕಲ್ಸ್‍ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರು. ಇವರ ಪತಿ ಅನಿರುದ್ಧ್ ಶ್ರವಣ್ ಪಿ. ಕರ್ನಾಟಕ ಶ್ರೇಣಿಯ ಐ.ಎ.ಎಸ್. ಅಧಿಕಾರಿ. ತುಮಕೂರಿಗೆ ಲಭಿಸಿದ ದಕ್ಷ ಅಧಿಕಾರಿಯೆನಿಸಿಕೊಂಡವರು.

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಶಾಪಂತ್ ರವರು ಅನೇಕ ಕ್ರಮಗಳನ್ನು ಕೈಗೊಂಡಿದ್ದರು. ತುಮಕೂರು ಜಿಲ್ಲೆಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಜರುಗಿಸಿದ್ದರು. ಗಣರಾಜ್ಯೋತ್ಸವದ ದಿನ ಸಂಚಾರಿ ನಿಯಮಗಳನ್ನು ಪಾಲಿಸುವ ಸಾರ್ವಜನಿಕರಿಗೆ ಪ್ರಶಂಸಾ ಪತ್ರಗಳ ವಿತರಣೆ ಮಾಡಿದ್ದಾರೆ, ಹೆಲ್ಮೆಟ್ ಧರಿಸಿದ ಪ್ರತಿಯೊಬ್ಬ ದ್ವಿಚಕ್ರವಾಹನ ಸವಾರರಿಗೆ ಒಂದೊಂದು ಗುಲಾಬಿ ಹೂ ನೀಡುವ ಮೂಲಕ ಪ್ರೋತ್ಸಾಹ ನೀಡಿದ್ದರು. ತುಮಕೂರು ಎಸ್.ಪಿ.ಯವರ ವತಿಯಿಂದ ನಾಲ್ಕು ನೂತನ ಹೆದ್ದಾರಿ ಗಸ್ತು ವಾಹನಗಳ ಸಂಚಾರಕ್ಕೆ ಚಾಲನೆ ನೀಡಿದ್ದರು.

ತುಮಕೂರು ಎಸ್.ಪಿ.ಯಾಗಿ ಅಧಿಕಾರ ಸ್ವೀಕರಿಸಿದಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಶಾರವರು ಮಧ್ಯಪ್ರದೇಶದಲ್ಲಿ ಮಾದಕ ವಸ್ತುಗಳು, ಕಳ್ಳಭಟ್ಟಿ ಸಾರಾಯಿ ನಿಷೇಧಿಸಿದ ಕ್ರಮ ತಮ್ಮ ಸೇವಾವಧಿಯಲ್ಲಿಯೇ ಅವಿಸ್ಮರಣೀಯ ಎಂದು ನುಡಿದಿದ್ದರು. ತುಮಕೂರು ಜಿಲ್ಲಾ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ದಿವಸದ 24 ಗಂಟೆಗಳೂ ಸಾರ್ವಜನಿಕರ ಸುರಕ್ಷತೆಗೆ ಸ್ಪಂದಿಸುವ ಭರವಸೆ ನೀಡಿ ಅದರಂತೆ ನಡೆದರು.

ಇತ್ತೀಚೆಗೆ ಇವರು ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕ್ರಿಯಾಶೀಲ ಮತ್ತು ಉತ್ಸಾಹಿ ನಿವಾಸಿಗಳೊಂದಿಗೆ ಫಲಪ್ರದ ಸಂವಾದ ನಡೆಸಿದರು. ತನ್ಮೂಲಕ ನಿವಾಸಿಗಳ ಕುಂದು-ಕೊರತೆ, ದುಃಖ-ದುಮ್ಮಾನಗಳನ್ನು ಅರಿತುಕೊಂಡರು.

ಸಮುದಾಯ ಮತ್ತು ಪೊಲೀಸರ ನಡುವೆ ಸಂಬಂಧಗಳನ್ನು ಬಲಗೊಳಿಸಲು  ಕೋರಮಂಗಲ  ಪ್ರದೇಶದ ನಿವಾಸಿಗಳೊಂದಿಗೆ ಸಭೆ ಏರ್ಪಡಿಸಿದ್ದರು. ಖುದ್ದಾಗಿ ಈ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಂಕಷ್ಟಗಳ ಪ್ರಾಥಮಿಕ ಅಂದಾಜು ನಡೆಸಿದರು.

“ಈ ಮುನ್ನ ಪೊಲೀಸ್ ಇಲಾಖೆಯಲ್ಲಿ ಪುರುಷರದೇ ಪ್ರಾಬಲ್ಯವಿತ್ತು. ಆದರೀಗ ಕಾಲ ಬದಲಾಗಿದೆ. ಅಲ್ಲಿ ಮಹಿಳೆಯರೂ ಹೆಚ್ಚು ಹೆಚ್ಚಾಗಿ ಸೇರ್ಪಡೆಗೊಂಡು ಸ್ತುತ್ಯರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳಾ ಪೊಲೀಸ್ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಷ್ಟೇ ಅಲ್ಲದೆ ಉದ್ಯೋಗ ಸ್ಥಳದ ವಾತಾವರಣವೂ ಉತ್ತಮಗೊಳ್ಳುತ್ತಿದೆ”. ಇದು ಇಶಾಪಂತ್ ಅವರ ಅನಿಸಿಕೆಯಾಗಿದೆ.

“ಹಿಂದೆ ಮೇಲ್ವಿಚಾರಣಾ ಪಾತ್ರಗಳಿಗೆ ಮಹಿಳೆಯರ ಪ್ರಾತಿನಿಧ್ಯವನ್ನು ಅಂಗೀಕರಿಸುತ್ತಿರಲಿಲ್ಲ. ಈಗ ನಾವು ಶ್ರೀಮತಿ ನೀಲಮಣಿ ಎನ್. ರಾಜು ಅವರಂಥ ಡಿಜಿ ಮತ್ತು ಐಜಿಪಿಯವರನ್ನು ಹೊಂದಲು ಸಾಧ್ಯವಾಗಿರುವುದು ಮಹಿಳೆಯರ ದಿಗ್ವಿಜಯಕ್ಕೆ ಒಂದು ನಿದರ್ಶನವಾಗಿದೆ”.

“ಹೀಗಿದ್ದರೂ ಇಲಾಖೆಯ ಕೆಳಹಂತಗಳ ಪಡೆಗಳಲ್ಲಿ ಮಹಿಳೆಯರ  ಪ್ರಾತಿನಿಧೈ ಹೆಚ್ಚಲೇಬೇಕಿದೆ. ಕಾನ್‍ಸ್ಟೆಬಲ್‍ಗಳಿಂದ ಇನ್‍ಸ್ಪೆಕ್ಟರ್‍ಗಳವರೆಗಿನ ಶ್ರೇಣಿಯ ಕಾರ್ಯ ನಿರ್ವಾಹಕ ಹುದ್ದೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕಾಗಿದೆ”.

“ಕಾನೂನು ಸುವ್ಯವಸ್ಥೆಗೆ ಮಹಿಳೆಯರ ನೇತೃತ್ವದ ಪೊಲೀಸ್ ಠಾಣೆಗಳ ಸಂಖ್ಯೆ ಅಧಿಕವಾಗಬೇಕಿದೆ. ಅಪರಾಧ ಪ್ರಕರಣಗಳ ತನಿಖೆಯಲ್ಲಿಯೂ  ಮಹಿಳಾ  ಸಿಬ್ಬಂದಿಯ  ಪಾತ್ರ ಅಮೂಲ್ಯವಾಗಿದೆ”.

“ಮಹಿಳೆಯರಿಗೆ ಗರ್ಭಧಾರಣೆ ಮತ್ತು ಪ್ರಸವಾನಂತರದ ಅವಧಿಯಂತಹ ಸಂದರ್ಭಗಳಲ್ಲಿ ವಿಶೇಷ ಆರೈಕೆಯ ಅಗತ್ಯವಿರುತ್ತದೆ. ಈ ಬಗ್ಗೆ ಗಮನ ಹರಿಸಬೇಕಾಗಿದೆ. ಆದರೆ ಅವರನ್ನು ಕಾರ್ಯಾತ್ಮಕವಾದುದಲ್ಲದ ಹುದ್ದೆಗಳಿಗಷ್ಟೇ ಸೀಮಿತಗೊಳಿಸಬಾರದು”. ಎಂದು ಇಶಾ ಪಂತ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು ನಗರ ಆಗ್ನೇಯ ವಿಭಾಗದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತು ದುವ್ರ್ಯಸನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಇಶಾಪಂತ್‍ರವರು ಪೊಲೀಸ್ ಇಲಾಖೆಯ ಸಿಂಹಿಣಿ ಎಂದೇ ಶ್ಲಾಘನೆಗೆ  ಪಾತ್ರರಾಗಬಲ್ಲರು.  ಈ  ಇಲಾಖೆಗೆ ಅಪೇಕ್ಷಣೀಯವಾದ ಧೈರ್ಯ, ಸ್ಥೈರ್ಯ, ದೈಹಿಕ ಕ್ಷಮತೆ, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಗಳಂತಹ ಸದ್ಗುಣಗಳು ಇವರಲ್ಲಿ  ಉಜ್ವಲವಾಗಿವೆ.  ಇವರಿಗೆ  ವೃತ್ತಿಯಲ್ಲಿ ಉನ್ನತೋನ್ನತ ಸ್ಥಾನ ಮತ್ತು ಸಫಲತೆ ಪ್ರಾಪ್ತವಾಗಲಿ, ತನ್ಮೂಲಕ ನಾಡಿನ ಜನತೆಯ ಜೀವನವೂ ಹಸನಾಗಲಿ ಎಂದು ಪತ್ರಿಕೆ ಶುಭ ಹಾರೈಸುತ್ತದೆ.