ಹಸು ಕಂದಮ್ಮನಿಗೆ ಹಾಲೂಡಿಸಿದ ಅಮ್ಮ-ಶ್ರೀಮತಿ ಅರ್ದನಾ

0
1152

ಸೌಂದರ್ಯ ಹಾಳಾಗುತ್ತದೆ ಎಂದು ಹೆತ್ತ ಕೂಸಿಗೇ ಹಾಲೂಡಿಸುವುದನ್ನು ನಿಲ್ಲಿಸುವವರಿಗೆ ಇಂದು ಕಡಿಮೆ ಇಲ್ಲ. ಆದರೆ ತನ್ನದಲ್ಲದ ಅಪರಿಚಿತ ಮಗುವಿಗೆ ಎದೆ ಹಾಲುಣಿಸುವ ಮೂಲಕ ಮಾತೃತ್ವದ ಮಹಾ ಆದರ್ಶ ಮೆರೆದ ಹಿರಿಮೆ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್ಟೆಬಲ್ ಶ್ರೀಮತಿ ಅರ್ಚನಾ ಅವರದಾಗಿದೆ.

ತಮ್ಮ ಬಾಣಂತನದ ಅವಧಿಯಲ್ಲಿ ಯಾರೋ ಪರಿತ್ಯಜಿಸಿ ಹೋಗಿದ್ದ ಹಸುಗೂಸು ಪತ್ತೆಯಾಗಿತ್ತು. ಮಗುವು ಮಾತೃತ್ವದ ಆರೈಕೆಯಿಂದ ವಂಚಿತವಾಗಿತ್ತು. ಮಗುವಿನ ತುರ್ತು ಅಗತ್ಯ ಅರಿತ ಶ್ರೀಮತಿ ಅರ್ಚನಾ ಅದಕ್ಕೆ ಎದೆಹಾಲೂಡಿಸುವ ಮೂಲಕ ಮಾತೃತ್ವವನ್ನು ಮೆರೆದರು. ವಾರ್ತಾಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ನೋಡಿದವರ ಕಣ್ಣು ಹನಿಗೂಡಿತು.

ಆದರೆ ಅನಾಥ ಶಿಶುವು ಉಳಿಯಲಿಲ್ಲ ಎಂಬುದು ವಿಷಾದದ ಸಂಗತಿಯಾದರೂ ಶ್ರೀಮತಿ ಅರ್ಚನಾ ಅವರ ನಡೆ ಸರ್ವತ್ರ ಶ್ಲಾಘನೆ ಗಳಿಸಿತು. ಖಾಕಿ ಎಂದರೆ ದರ್ಪವಷ್ಟೇ ಅಲ್ಲ ಮಾನವೀಯ ಮುಖವೂ ಅದಕ್ಕಿದೆ ಎಂಬುದು ಜಗಜ್ಜಾಹೀರಾಯಿತು.

ಇತ್ತೀಚೆಗಷ್ಟೇ ಗಂಡು ಮಗುವಿನ ತಾಯಿಯಾಗಿದ್ದ ಅರ್ಚನಾ ವಾರದ ಹಿಂದೆಯಷ್ಟೇ ಹೆರಿಗೆ ರಜೆ ಮುಗಿಸಿ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. 2018ರ ಮೇ 30 ರಂದು ದೊಡ್ಡ ತೋಗೂರಿನ ಕಸದ ತೊಟ್ಟಿಯ ಬಳಿ ಯಾರೋ ನವಜಾತ ಶಿಶುವೊಂದನ್ನು ಎಸೆದು ಹೋಗಿರುವುದನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಹೊಯ್ಸಳ ಗಸ್ತು ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದ ಅರ್ಚನಾ ಅವರು ಆ ಶಿಶುವನ್ನು ಎತ್ತಿಕೊಂಡರು. ಮಗು ಅಳಲಾರಂಭಿಸಿದಾಗ ಮೂರು ನಿಮಿಷ ಹಾಲೂಡಿಸುವ ಮೂಲಕ ಮಗುವಿಗೆ ಮಾತೃತ್ವದ ಅನುಭೂತಿ ಮೂಡಿಸಿದರು. ಅನಂತರ ಶಿಶುವು ಅಳು ನಿಲ್ಲಿಸಿ ನಗತೊಡಗಿತ್ತು.

ಅಚಿದು ಠಾಣೆಗೆ ಕೆಲಸಕ್ಕೆ ಹಾಜರಾಗಿದ್ದ ಶ್ರೀಮತಿ ಅರ್ಚನಾ ಶಿಶು ಕಂಡುಬಂದಿರುವ ಕುರಿತು ನಿಯಂತ್ರಣಾ ಕೊಠಡಿಯಿಂದ ಕರೆ ಬಂದೊಡನೆ ಮಗುವಿನ ರಕ್ಷಣೆಯ ಉದ್ದೇಶದಿಂದಲೇ ಕ್ಷಿಪ್ರವಾಗಿ ಸ್ಥಳಕ್ಕೆ ತೆರಳಿದರು ಎಂದು ಸಹೋದ್ಯೋಗಿಗಳು ವಿವರಿಸಿದರು.