ಹಿರಿಯ ಐಪಿಎಸ್ ಅಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆಎಸ್‍ಆರ್ ಚರಣ್‍ರೆಡ್ಡಿ ಅವರು ದೀರ್ಘಕಾಲದ ಅಸ್ವಸ್ಥತೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 13-03-2020ರಂದು ವಿಧಿವಶರಾದರು.
ಕರ್ನಾಟಕ ಕಂಡ ಅತ್ಯಂತ ದಕ್ಷ ಐಪಿಎಸ್ ಅಧಿಕಾರಿಗಳಲ್ಲಿ ಓರ್ವರಾದ ರೆಡ್ಡಿ ಅವರು ಪ್ರಾಮಾಣಿಕ ವೃತ್ತಿಪರತೆ ಮತ್ತು ನಿಷ್ಕಳಂಕ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದರು. ಸ್ವಯಂ ಪ್ರಗತಿಗಾಗಿ ಅವರು ರಾಜಕೀಯ ಲಾಬಿಯನ್ನು ಎಂದೂ ನಡೆಸಿದವರಲ್ಲ. ಐಜಿಪಿ ಮತ್ತು ಅಂದಿನ ಲೋಕಾಯುಕ್ತ ಎಸ್‍ಐಟಿಯ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ರೆಡ್ಡಿ ಅವರು ರಾಜ್ಯದ ಘಟಾನುಘಟಿ ರಾಜಕಾರಣಿಗಳನ್ನೇ ಬಂಧಿಸುವ ಸ್ಥೈರ್ಯ-ಕೆಚ್ಚೆದೆ ಪ್ರದರ್ಶಿಸಿದ್ದರು.
ಬಳಿಕ, ಸಿಐಡಿ ಡಿಐಜಿಯಾಗಿದ್ದ ಅವಧಿಯಲ್ಲಿ ವಿವಾದಾತ್ಮಕ ದೇವಮಾನವ ನಿತ್ಯಾನಂದ ಸ್ವಾಮಿ ವಿರುದ್ಧದ ಲೈಂಗಿಕ ದೌರ್ಜನ್ಯ ಹಗರಣದ ತನಿಖೆ ನಡೆಸುತ್ತಿದ್ದರು. ಸಾಕ್ಷ್ಯನಾಶ ಆರೋಪದ ಮೇರೆಗೆ ನಿತ್ಯಾನಂದರ ನಿಕಟವರ್ತಿ ಮತ್ತು ಅನುಯಾಯಿಯನ್ನು ದಸ್ತಗಿರಿ ಮಾಡಿದ್ದರು.
“ಚರಣ್‍ರೆಡ್ಡಿ ಅವರು 13 ವರ್ಷಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು. ಆದರೆ ಜೀವಿತದ ಕೊನೆಯ ತನಕ ಅವರು ಕರ್ತವ್ಯ ನಿರ್ವಹಿಸಿದರು. ಕಿಮೋಥೆರಪಿ ಮತ್ತು ರೇಡಿಯೋ ಥೆರಪಿ ಚಿಕಿತ್ಸೆಯ ಹಿಂಸೆ ತಾಳಲಾರದೆ ಬೇರೆ ಯಾರಾದರೂ ಅಗಿದ್ದರೆ ಬೇಗನೆ ಕೊನೆಯುಸಿರೆಳೆಯುತ್ತಿದ್ದರು. ಆದರೆ ರೆಡ್ಡಿಯವರು ಈ ವಿಷಯದಲ್ಲೂ ವಿಭಿನ್ನತೆ ಮೆರೆದವರು” ಎಂದು ಚರಣ್‍ರೆಡ್ಡಿ ಅವರೊಂದಿಗೆ ಕೆಲಸ ಮಾಡಿರುವ ಡಿಜಿ ಮತ್ತು ಐಜಿಪಿ ಪ್ರವೀಣ್‍ಸೂದ್ ಅವರು ಕಂಬನಿ ಮಿಡಿದಿದ್ದಾರೆ.
ಯಾವುದೇ ಮೂಲಾಜಿಗೂ ಒಳಗಾಗದೆ ಖಡಕ್ ಐಪಿಎಸ್ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಚರಣ್‍ರೆಡ್ಡಿ ಅವರ ಅಗಲಿಕೆಗೆ ಪೊಲೀಸ್ ಇಲಾಖೆ, ಸಾರ್ವಜನಿಕ ವಲಯದಿಂದ ಭಾವಪೂರ್ಣ ಶ್ರದ್ಧಾಂಜಲಿ ವ್ಯಕ್ತವಾಗಿದೆ. “ಪತ್ರಿಕೆ” ಸಹ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತದೆ.