ಶ್ರೀ ಎಂ.ಬಿ. ಪಾಟೀಲ್ ಈಗ ಮಾನ್ಯ ಗೃಹಸಚಿವರು

0
1608

ಕರ್ನಾಟಕದ ಗಣ್ಯ ರಾಜಕೀಯ ಮುಖಂಡರಲ್ಲಿ ಓರ್ವರೆನಿಸಿರುವ ಶ್ರೀ ಎಂ.ಬಿ. ಪಾಟೀಲ್ ಅವರು ಈಗ ಕರ್ನಾಟಕದ ಜೆಡಿಎಸ್ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಗೃಹಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಆಪ್ತರಾಗಿರುವ ಪಾಟೀಲರು ಗೃಹಖಾತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ಸಚಿವ ಸಂಪುಟ ಪುನಾರಚನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿಶ್ವಾಸ ಗಳಿಸಲು ಸಫಲರಾಗಿದ್ದಾರೆ. ಶ್ರೀಯುತರು ಗೃಹಸಚಿವರಾಗಿ ನೇಮಕಗೊಂಡಿದ್ದಾರೆ. ಇವರು ಸಿದ್ಧರಾಯಯ್ಯ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.

ಇವರು ದಿನಾಂಕ: 07-10-1964 ರಂದು ಜನಿಸಿದರು. ವಿಜಯಪುರದ ಮೂಲದ ಮಲ್ಲನಗೌಡ ಬಸನಗೌಡ ಪಾಟೀಲರು ಎಂ.ಬಿ. ಪಾಟೀಲ್ ಎಂದೇ ಜನಪ್ರಿಯರು.

ಪ್ರಸ್ತುತ ಬಿ.ಎಲ್.ಡಿ.. ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಇದು ಗ್ರಾಮೀಣ ಜನತೆಗೆ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ವಿವಿಧ ಶಿಸ್ತುಗಳಲ್ಲಿ ಶಿಕ್ಷಣವನ್ನು ಒದಗಿಸುತ್ತದೆ.

ವಿಜಯಪುರದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ (ಬಿಇ) ವ್ಯಾಸಂಗ ಮಾಡಿರುವ ಪಾಟೀಲ್ ಅವರು ತಮ್ಮ ತಂದೆ ರಾಜಕಾರಣಿ ಮತ್ತು ಶಿಕ್ಷಣತಜ್ಞರಾಗಿ ಖ್ಯಾತಿ ಪಡೆದಿದ್ದ ಶ್ರೀ ಬಿ.ಎಂ. ಪಾಟೀಲ್ ಅವರ ನಿಧನದ ತರುವಾಯ 1991ರಲ್ಲಿ ರಾಜಕೀಯರಂಗ ಪ್ರವೇಶಿಸಿದರು. ಎಂ.ಬಿ. ಪಾಟೀಲರು ನಾಲ್ಕು ಬಾರಿ ವಿಧಾನಸಭೆಗೆ ಮತ್ತು ಒಂದು ಬಾರಿ ಲೋಕಸಭೆಗೆ ಚುನಾಯಿತರಾದವರು.

ನೂತನ ಗೃಹ ಸಚಿವರಾದ ಬಳಿಕ ಪಾಟೀಲರು ಇತ್ತೀಚೆಗೆ ಐಪಿಎಸ್ ಅಧಿಕಾರಿಗಳ ಜೊತೆಗೆ ಸಂವಾದ ನಡೆಸಿದರು. ಕಾನ್ಸ್ಟೆಬ್ಯುಲರಿಯ ಸುಧಾರಣೆಗೆ ಅಪಾರ ಒತ್ತು ನೀಡುವುದಾಗಿ ಹೇಳಿದರು. ಇದಲ್ಲದೆ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಪೂರೈಕೆಯಾಗುತ್ತಿರುವ ಮಾದಕ ವಸ್ತುಗಳ ನಿಗ್ರಹಕ್ಕೆ ತಮ್ಮ ಆದ್ಯತೆ ಎಂದು ನುಡಿದರು.

ರಾಜ್ಯ ಪೊಲೀಸ್ ಪೇದೆಗಳು ಕಾರ್ಯಬಾಹುಳ್ಯದಿಂದ ಅತಿಯಾಗಿ ಶ್ರಮ ಪಡುತ್ತಿದ್ದು, ಇದರಿಂದ ಕಾರ್ಯದಕ್ಷತೆ ಕುಂಠಿತವಾಗಿದೆ. ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ನಾನು ರಾಜ್ಯದ ಜನತೆಗೆ ಭದ್ರತೆ ಒದಗಿಸುವ ಮಹತ್ತರ ಹೊಣೆ ಹೊತ್ತಿದ್ದೇನೆ. ಸಂಚಾರ ನಿರ್ವಹಣೆ ಹಾಗೂ ಪೇದೆಗಳ ಜೀವನಮಟ್ಟ ಮತ್ತು ಕಾರ್ಯದಕ್ಷತೆಯ ಉತ್ತಮತೆಗೆ ಆದ್ಯತೆ ನೀಡುತ್ತೇನೆ. ಪೇದೆಗಳ ವೇತನ, ವಸತಿ, ಮತ್ತಿತರ ಆವಶ್ಯಕತೆಗಳ ಈಡೇರಿಕೆಗೆ ಪ್ರಾಮುಖ್ಯ ನೀಡಬೇಕಿದೆ. ಪೇದೆಗಳಸೇವೆ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಪಾಟೀಲರು ಸಂವಾದದ ವೇಳೆ ನುಡಿದರು.

ಸಂಚಾರಿ ಪೇದೆಗಳು ನಗರಗಳ ವಾಹನದಟ್ಟಣೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದ್ದು ಇದರಿಂದ ರಕ್ಷಣೆ ಪಡೆಯಲು ಅಗತ್ಯ ಸಾಧನಗಳ ಪೂರೈಕೆಗಾಗಿ ಮಂಡಿಸಿರುವ ಬೇಡಿಕೆಗಳ ಈಡೇರಿಕೆಗೆ ಆದ್ಯಗಮನ ಹರಿಸುತ್ತೇನೆ. ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ನಾವು ಕಾಳಜಿ ವಹಿಸಬೇಕಾಗಿದೆ ಎಂದು ಗೃಹ ಸಚಿವರು ಪ್ರತಿಪಾದಿಸಿದರು.

ಬೆಂಗಳೂರು ಮತ್ತು ಇತರ ನಗರಗಳಲ್ಲಿ ಸುಗಮ ವಾಹನ ಸಂಚಾರ ವ್ಯವಸ್ಥೆ ತಮ್ಮ ಮತ್ತೊಂದು ಆದ್ಯತೆ ಎಂದು ಸಚಿವರು ತಿಳಿಸಿದರು.

ರಿಂಗ್ ರಸ್ತೆಗಳು ಮತ್ತು ಮೇಲ್ಸೇತುವೆಗಳು ದೀರ್ಘಕಾಲಿಕ ಪರಿಹಾರಗಳಾಗಿವೆ. ಈ ಇಕ್ಕಟ್ಟಿನ ನಿವಾರಣೆಗೆ ನಾವು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನೇ ಎಷ್ಟು ದಕ್ಷತೆಯಿಂದ ಬಳಸಿಕೊಳ್ಳಬಹುದೆಂಬುದರತ್ತ ಗಮನ ಹರಿಸಬೇಕಾಗಿದೆ ಎಂದರು. ಅನೇಕ ದೇಶಗಳು ಉತ್ತಮ ವಾಹನ ಸಂಚಾರ ನಿರ್ವಹಣೆಗೆ ಅಸ್ತಿತ್ವದಲ್ಲಿರುವ ಮೂಲ ಸೌಕರ್ಯಗಳನ್ನೇ ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿವೆ. ನಾವು ಕೂಡ ಇದೇ ಹಾದಿಯಲ್ಲಿ ಸಾಗಬೇಕಾಗಿದೆ ಎಂದು ಪಾಟೀಲರು ಹೇಳಿದರು.

ನನ್ನ ಮುಂದಿರುವ ಸವಾಲುಗಳ ಅರಿವು ನನಗೆ ಚೆನ್ನಾಗಿ ಆಗಿದೆ. ನಾನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಮತ್ತು ಇತರ ರಾಜ್ಯಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಪಾಟೀಲರ ವೈಶಿಷ್ಟ್ಯ ಏನೆಂದರೆ ಗೃಹ ಸಚಿವರಾದ ಕೂಡಲೇ ತಮಗೆ ಝೀರೋ ಟ್ರಾಫಿಕ್ ವ್ಯವಸ್ಥೆಯ ಅಗತ್ಯ ಇಲ್ಲ ಎಂದು ಹೇಳಿದ್ದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಅವರಿಗೆ ಪತ್ರ ಬರೆಯುವ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಿಂದ ಜನರಿಗೆ ತೊಂದರೆಯಾಗುವ ಕಾರಣ ಅದರ ಅಗತ್ಯ ತಮಗಿಲ್ಲ ಎಂದು ಗೃಹಸಚಿವರು ಸ್ಪಷ್ಟಪಡಿಸಿದ್ದಾರೆ.

ನೂತನ ಗೃಹಸಚಿವ ಶ್ರೀ ಎಂ.ಬಿ. ಪಾಟೀಲರು ವಿನಯಶೀಲರಾಗಿದ್ದು ತಮ್ಮ ವಿನಮ್ರತೆ ಮತ್ತು ಸೌಜನ್ಯಪರ ಗುಣಗಳಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಜೊತೆಗೆ ಗೃಹ ಇಲಾಖೆಯ ಸಮಗ್ರ ಮಾಹಿತಿಯನ್ನು ಅರಿತುಕೊಳ್ಳಲು ಕಾತರರಾಗಿದ್ದಾರೆ.

ಶ್ರೀಯುತ ಎಂ.ಬಿ. ಪಾಟೀಲರು ಇತಿಹಾಸ ಮತ್ತು ತತ್ತ್ವಶಾಸ್ತ್ರದ ಅಧ್ಯಯನದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದು ಇವರ ಹವ್ಯಾಸ.