ಎರಡು ದಶಕಗಳ ಹಿಂದೆ ಕೂಗುಮಾರಿ ಬಂದು ಮನೆಗೆ ತೊಂದರೆ ಮಾಡುತ್ತದೆ, ಅದಕ್ಕೆ ಮನೆಯ ಬಾಗಿಲು, ಗೋಡೆಗಳ ಮೇಲೆ ‘ನಾಳೆ ಬಾ‘ ಎಂದು ಬರೆದರೆ ಸಮಸ್ಯೆ ಇರುವುದಿಲ್ಲ ಎಂಬ ವದಂತಿ ಹೇಗೋ ಹಬ್ಬಿಬಿಟ್ಟಿತ್ತು. ಅದೇ ಕಾರಣಕ್ಕೆ ಎಲ್ಲರ ಮನೆಯ ಬಾಗಿಲ ಮೇಲೆ ‘ನಾಳೆ ಬಾ‘ ಎಂದು ಬರೆಯಲಾಗಿತ್ತು. ಬುದ್ಧಿ ಜೀವಿಗಳು ಮತ್ತು ವಿಚಾರವಾದಿಗಳು ಇದನ್ನು ಮೂಢನಂಬಿಕೆ ಎಂದು ಜರಿದರು. ಆದರೆ ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.
ಅದೇ ರೀತಿ ಕೆಲ ತಿಂಗಳ ಹಿಂದೆ ನಗರ-ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ಕಳ್ಳರ ತಂಡ ಕಾರ್ಯಾಚರಿಸುತ್ತಿದೆ ಎಂಬ ವದಂತಿ ಹಬ್ಬಿತು. ಜನ ಹೆದರಿದರು, ಆಕ್ರೋಶಭರಿತರಾದರು. ದೊಣ್ಣೆಗಳನ್ನು ಹಿಡಿದು ಗುಂಪು ಗುಂಪಾಗಿ ಪಟ್ಟಣ, ಗ್ರಾಮಗಳಲ್ಲಿ ಕಾವಲು ಕಾಯತೊಡಗಿದರು. ಭಿಕ್ಷೆಗೆಂದೋ, ಇನ್ಯಾವ ಕಾರಣಕ್ಕೋ ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಮಾಯಕರನ್ನು ಮಕ್ಕಳ ಕಳ್ಳರೆಂದು ಅನುಮಾನಿಸಿ ಮನಬಂದಂತೆ ಥಳಿಸಿ ಒಬ್ಬಿಬ್ಬರ ಸಾವಿಗೂ ಕಾರಣರಾದರು. ಈ ಹಿನ್ನೆಲೆಯಲ್ಲಿ ಮಕ್ಕಳ ಕಳ್ಳರ ಬಗ್ಗೆ ಹರಡಿದ ಸುಳ್ಳು ವದಂತಿಗಳ ಬಗ್ಗೆ ಬೆಂಗಳೂರಿನ ವಿವಿಧೆಡೆ ಕರಪತ್ರಗಳನ್ನು ಹಂಚಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.