ತುಮಕೂರು–ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ಮೋಟಾರ್ ವಾಹನಗಳ ಸವಾರರಿಗೆ ಇತ್ತೀಚೆಗೆ ಒಂದು ದಿನ ಅಚ್ಚರಿ ಕಾದಿತ್ತು. ನೆಲಮಂಗಲದ ಲಂಕೋಟೋಲ್ಗೇಟ್ನಲ್ಲಿ ನಿಯಮ ಉಲ್ಲಂಘಿಸಿದ ವಾಹನ ಚಾಲಕರನ್ನು ಸಮೀಪಿಸಿದ ತೃತೀಯ ಲಿಂಗಿಗಳು ಮತ್ತು ಸಂಚಾರಿ ಪೊಲೀಸರು ವಾಹನ ಚಲಾಯಿಸುವಾಗ ಸೀಟ್ ಬೆಲ್ಟ್ಗಳನ್ನು ಕಟ್ಟಿಕೊಳ್ಳುವ ಮತ್ತು ಸಂಚಾರ ನಿಯಮಗಳ ಪಾಲನೆ ಮಾಡುವ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.
ಬೆಂಗಳೂರು ಜಿಲ್ಲಾ ಸಂಚಾರಿ ಪೊಲೀಸರು ಮುಂಬೈ ಪೊಲೀಸರು ಕೈಗೊಂಡಂತಹ ಮಾದರಿಯಲ್ಲೇ ಈ ಕ್ರಮ ಕೈಗೊಂಡರು. ವಿಶೇಷವೆಂದರೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಅಂದು ದಂಡ ವಿಧಿಸುವ ಬದಲಿಗೆ ತೃತೀಯ ಲಿಂಗಿಗಳ ಮೂಲಕ ಗಮನ ಸೆಳೆದು ಹಿತವಚನ ಹೇಳಿಸಲಾಯಿತು. ಚಾಲಕರಿಗೆ ಸುರಕ್ಷಿತ ವಾಹನ ಚಾಲನೆ ಮತ್ತು ಸಂಚಾರ ನಿಯಮಗಳ ಪಾಲನೆಯ ಕುರಿತ ಕರಪತ್ರಗಳನ್ನು ವಿತರಿಸಲಾಯಿತು.