ನಮ್ಮಲ್ಲಿ ವೈದ್ಯೋ ನಾರಾಯಣೋ ಹರಿಃ ಎಂಬ ಸೂಕ್ತ ಗಾದೆ ಇದೆ. ಇದರಲ್ಲಿ ವೈದ್ಯನಿಗೆ ದೇವರ ಸ್ಥಾನಮಾನ ನೀಡಲಾಗಿದೆ. ವೈದ್ಯನನ್ನು ಅಭಿನವ ಧನ್ವಂತರಿ ಎಂದೇ ಪ್ರಶಂಸಿಸಲಾಗುತ್ತದೆ. ಅಂತೆಯೇ ವೈದ್ಯಕೀಯ ಪದವಿ ಪಡೆದವರೊಬ್ಬರು ಸಾರ್ವಜನಿಕ ಸೇವೆಗೆ ಐ.ಪಿ.ಎಸ್. ಪಾಸುಮಾಡಿ ಸಾಮಾಜಿಕ ಸ್ವಾಸ್ಥ್ಯದ ಒಟ್ಟಂದಕ್ಕೆ ಶ್ರಮಿಸುತ್ತಿರುವ ಯಶೋಗಾಥೆ ಇಲ್ಲಿದೆ.
ಅವರೇ ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಡಾ|| ಪಿ.ಎಸ್. ಹರ್ಷ. ಚಿತ್ರದುರ್ಗ ಜಿಲ್ಲೆಯ ಮೂಲದವರಾದ ಶ್ರೀಯುತರು ಬೆಂಗಳೂರಿನ ಡಾ|| ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ 2001ರಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದಿದ್ದಾರೆ. 2003ರಲ್ಲಿ ಯು.ಪಿ.ಎಸ್.ಸಿ.ಯ ಸಿವಿಲ್ ಸರ್ವೀಸಸ್ ಪರೀಕ್ಷೆ ತೇರ್ಗಡೆಯಾಗಿ 2004ರಲ್ಲಿ ಕರ್ನಾಟಕ ಕೇಡರ್ನ ಭಾರತೀಯ ಪೊಲೀಸ್ ಸೇವೆ (ಐ.ಪಿ.ಎಸ್)ಗೆ ಸೇರ್ಪಡೆಗೊಂಡರು. ಹೈದರಾಬಾದ್ನಲ್ಲಿ ಮೂಲಭೂತ ತರಬೇತಿ ಮತ್ತು ಕಲಬುರಗಿಯಲ್ಲ್ಲಿ ಪ್ರಾಯೋಗಿಕ ತರಬೇತಿ ಪಡೆದು ಪುತ್ತೂರಿನ ಎ.ಎಸ್.ಪಿ.ಯಾಗಿ ವೃತ್ತಿಜೀವನ ಆರಂಭಿಸಿದರು.
ಇವರು ವೈದ್ಯಕೀಯ ಪದವೀಧರರಾಗಿರುವುದರಿಂದ ಸಿಬ್ಬಂದಿ ವರ್ಗದವರನ್ನು ಇಲಾಖೆಯ ಆಧಾರಸ್ತಂಭವೆಂದು ಪರಿಗಣಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುತ್ತಾರೆ.
ತಮ್ಮ ಅಧೀನ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಅವರನ್ನು ಅಭಿನಂದಿಸಿ ಪೊಲೀಸ್ ಆಯುಕ್ತರ ಬಹುಮಾನ ನೀಡಿಕೆಗೆ ಶಿಫಾರಸು ಮಾಡುತ್ತಾರೆ. ಶ್ರೀಯುತರು ಏನೇ ಕೆಲಸ ಮಾಡಿದರೂ ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವುದು ವಿಶೇಷ.
ಇವರು ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸ್ ಉಪಾಯುಕ್ತ (ಡಿಸಿಪಿ) ರಾಗಿದ್ದಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇವರ ಕಾರ್ಯವ್ಯಾಪ್ತಿಯಲ್ಲಿ ಬರುತ್ತಿದ್ದುದರಿಂದ ಬಹಳ ಒತ್ತಡವಿದ್ದರೂ ವಿದೇಶಿಯರೂ ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದರು. ರಿಯಲ್ ಎಸ್ಟೇಟ್ ವಹಿವಾಟು ಅತ್ಯಧಿಕವಾಗಿ ನಡೆಯುವ ಈ ಪ್ರದೇಶದಲ್ಲಿ ವಂಚನೆಗಳ ನಿಗ್ರಹ ಕಾರ್ಯ ಕೈಗೊಂಡು ತಪ್ಪಿತಸ್ಥರಿಗೆ, ರೌಡಿಗಳಿಗೆ, ಪಾತಕಿಗಳಿಗೆ “ಶ್ರೀಕೃಷ್ಣ ಜನ್ಮಸ್ಥಾನ” ದರ್ಶನ ಮಾಡಿಸಿದ್ದಾರೆ. ಬೆಂಗಳೂರಿನಲ್ಲಿ ವ್ಯಾಪಕವಾಗಿರುವ ಮಾದಕವಸ್ತು ಮಾಫಿಯಾ ನಿಯಂತ್ರಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ್ದಾರೆ.
ಅಪಾರ ದೇಶಭಕ್ತರಾಗಿರುವ ಶ್ರೀಯುತರು ಪೊಲೀಸ್ ಠಾಣಾ ಮಟ್ಟಗಳಲ್ಲಿ ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮಗಳನ್ನೇರ್ಪಡಿಸಿ ಪೊಲೀಸ್ ಇಲಾಖೆಯ ನಾಗರಿಕ ಕೇಂದ್ರಿತ ಮುಖವನ್ನು ತೋರಿಸುವ ಸ್ತುತ್ಯರ್ಹ ಕೆಲಸಗಳನ್ನು ಮಾಡುತ್ತಿದ್ದಾರೆ. ಕ್ಯಾಟ್ ರಾಜ ಮತ್ತು ಅವನ ಎಂಟು ಸಹಚರರನ್ನು ದಸ್ತಗಿರಿ ಮಾಡುವಲ್ಲಿ ಕೆಚ್ಚೆದೆಯಿಂದ ಕಾರ್ಯನಿರ್ವಹಿಸಿದ್ದಾರೆ. ಮೊಬೈಲ್ಫೋನ್, ಸಿಮ್ಡೀಲರ್ಗಳಿಗೆ ಕಾರ್ಯಾಗಾರಗಳನ್ನು ಆಚಿiÉೂೀಜಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ದೇಶೀ ಮತ್ತು ವಿದೇಶಿ ಅತಿಗಣ್ಯರು ಆಗಮಿಸುವಾಗ ಅವರ ಭದ್ರತೆಯ ಹೊಣೆ ಇವರದ್ದೇ ಆಗಿರುತ್ತಿತ್ತು. ವಿದೇಶಗಳಿಂದ ಬರುವ ಭಾರತೀಯರ ಪಾರ್ಥಿವ ಶರೀರಗಳನ್ನು ಸ್ವೀಕರಿಸಿ ಸಂಬಂಧಪಟ್ಟವರಿಗೆ ಸುಗಮವಾಗಿ ಹಸ್ತಾಂತರಿಸುವ ಕಾರ್ಯ ಹಲವಾರು ಬಾರಿ ಮಾಡಿದ್ದಾರೆ.
ಮಹಿಳೆಯರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಹರ್ಷ ಅವರು ತಮ್ಮ ವ್ಯಾಪ್ತಿಯಲ್ಲಿ ಬರುತ್ತಿದ್ದ ಕಂಪನಿಗಳ ಮಾನವ ಸಂಪನ್ಮೂಲ (ಹೆಚ್.ಆರ್.) ಅಧಿಕಾರಿಗಳು, ಸೌಕರ್ಯ ವ್ಯವಸ್ಥಾಪಕರೊಂದಿಗೆ ಉದ್ಯೋಗ ಸ್ಥಳದಲ್ಲಿ ಮಹಿಳಾ ಉದ್ಯೋಗಿಗಳ ಸುರಕ್ಷಿತತೆ ಕುರಿತು ಸಂವಾದಗಳನ್ನು ಆಯೋಜಿಸುತ್ತಿದ್ದರು.
ಶಾಲೆಗಳಿಗೆ ಭೇಟಿ ನೀಡಿ ಪೊಲೀಸ್ ಇಲಾಖೆಯಿಂದ ಲಭಿಸತಕ್ಕ ಯಾವುದೇ ನೆರವು ನೀಡಲು ಸಿದ್ಧ ಎಂಬು ಭರವಸೆ ನೀಡುತ್ತಾರೆ. ಪುಟ್ಟ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ವಿರುದ್ಧ ಉಗ್ರ ಹೋರಾಟವನ್ನೇ ಮಾಡುತ್ತಾ ಬಂದಿದ್ದಾರೆ. ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ನೈತಿಕತೆ, ನಾಗರಿಕ ಹೊಣೆಗಾರಿಕೆಗಳೇ ಯಶಸ್ಸಿನ ಮೂಲ ಎಂಬ ಪಾಠ ಹೇಳುತ್ತಾರೆ. ಸಂವಾದ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಾರೆ.
ಎ.ಎಸ್.ಪಿ. ಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಬಳಿಕ ಹಲವಾರು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.
ಈ ಹಿಂದೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ (ಕೆ.ಎಸ್.ಟಿ.ಡಿ.ಸಿ.) ವ್ಯವಸ್ಥಾಪಕ ನಿರ್ದೇಶಕರಾಗಿಯೂ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇದು ರಾಜ್ಯ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದ್ದು ಸಾರ್ವಜನಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನೀತಿಗಳನ್ನು ಪ್ರಚುರ ಪಡಿಸುವ ಅಗಾಧ ಹೊಣೆ ಹೊತ್ತಿದೆ. ಇಲಾಖೆಯ ನೇತೃತ್ವ ವಹಿಸಿರುವ ಡಾ|| ಶ್ರೀ ಹರ್ಷ ಅವರು ಸಮರ್ಥ ಸೇವೆ ಸಲ್ಲಿಸುವ ಜೊತೆಗೆ ಇಲಾಖೆಯ ಅಪಾರ ಅಭ್ಯುದಯಕ್ಕೆ ಕಾರಣರಾಗಿದ್ದಾರೆ.
ಅತಿ ಕಿರಿಯ ವಯಸ್ಸಿನಲ್ಲೇ ಸಾಕಷ್ಟು ಕೀರ್ತಿ ಸಂಪನ್ನರಾಗಿರುವ ಶ್ರೀಯುತರಿಗೆ ಭಗವಂತನು ಇನ್ನಷ್ಟು ಉನ್ನತೋನ್ನತ ಸ್ಥಾನಮಾನಗಳು, ಆಯರಾರೋಗ್ಯ, ಸಂಪದಭಿವೃದ್ಧಿಯನ್ನು ದಯಪಾಲಿಸಲಿ, ಡಾ: ಹರ್ಷ ಅವರು ಸದಾ ಹರ್ಷಚಿತ್ತರಾಗಿಯೇ ಇರಲಿ ಎಂದು ಪತ್ರಿಕೆ ಹಾರೈಸುತ್ತದೆ.