ಬೆಂಗಳೂರು ನಗರ ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತರಾಗಿರುವ 1996ರ ತಂಡದ ಐಪಿಎಸ್ ಅಧಿಕಾರಿ ಆರ್.ಹಿತೇಂದ್ರ ಅವರನ್ನು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ಸೇರ್ಪಡೆ ಮಾಡಲಾಗಿದೆ.
1996ರ ಶ್ರೇಣಿಯ ಐಪಿಎಸ್ ಅಧಿಕಾರಿಯಾಗಿರುವ ಕೋಲಾರ, ಚಿಂತಾಮಣಿ ಮೂಲದ ಹಿತೇಂದ್ರ ಅವರು ಮಂಗಳೂರು ಕಮೀಷನರೇಟ್‍ನ ಮುಖ್ಯಸ್ಥರಾಗಿ ವಾಪಸಾಗುವ ಮೊದಲು ಹಲವಾರು ಬಗೆಯ ಕರ್ತವ್ಯಗಳನ್ನು ನಿರ್ವಹಿಸಿದವರಾಗಿದ್ದಾರೆ.
ಮಂಗಳೂರಿಗೆ ನಿಯೋಜನೆಗೊಳ್ಳುವ ಮುನ್ನ ಹಿತೇಂದ್ರ ಅವರು ಬೆಂಗಳೂರು ಸಿಬಿಐನ ಬ್ಯಾಂಕಿಂಗ್ ಸುರಕ್ಷತೆ ಮತ್ತು ವಂಚನೆ ನಿಯಂತ್ರಣ ಘಟಕದಲ್ಲಿ 2006ರ ನವೆಂಬರ್ 1 ರಿಂದ 2010ರ ಮಾರ್ಚ್ 31ರ ತನಕ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಯಾಗಿ ಕಾರ್ಯನಿರ್ವಹಿಸಿದರು. 2010ರ ಏಪ್ರಿಲ್ 1 ರಿಂದ 2013ರ ಅಕ್ಟೋಬರ್ವರೆಗೆ ಶ್ರೀಯುತರು ಬೆಂಗಳೂರು ಸಿಬಿಐನ ಭ್ರಷ್ಟಾಚಾರ ನಿಗ್ರಹ ವಿಭಾಗದ ಡಿಐಜಿಯಾಗಿ ಸೇವೆ ಸಲ್ಲಿಸಿದರು. 2012ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶ್ರೀ ಹಿತೇಂದ್ರ ಅವರು ಶ್ರೇಷ್ಠ ಸೇವೆಗಾಗಿ ಪೊಲೀಸ್ ಪದಕವನ್ನು ಪಡೆದಿದ್ದಾರೆ. ಶ್ರೀಯುತರು ಬಿ.ಇ. ಎಲೆಕ್ಟ್ರಾನಿಕ್ಸ್ ಪದವೀಧರರು.
2014ರಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಹಿತೇಂದ್ರ ಅವರು ಅನಂತರ ರಾಜ್ಯ ಸರ್ಕಾರದಿಂದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ರ ಹುದ್ದೆಗೆ ಬಡ್ತಿ ಪಡೆದರು. ಮಂಗಳೂರು ಪೊಲೀಸ್ ಆಯುಕ್ತರಾಗಿ ಕೋಮುಗಲಭೆಗಳು ಮತ್ತು ಭೂಗತ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಅಪಾರವಾಗಿ ಶ್ರಮಿಸಿದವರು ಹಿತೇಂದ್ರ ಅವರು.
ಬೆಂಗಳೂರು ನಗರ ಸಂಚಾರ ಪೊಲೀಸ್ ಹೆಚ್ಚುವರಿ ಆಯುಕ್ತರಾಗಿ ಹಿತೇಂದ್ರ ಅವರು ಅಧಿಕಾರ ವಹಿಸಿಕೊಂಡ ಬಳಿಕ ಅವರು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ರಾಜ್ಯ ರಾಜಧಾನಿಯಲ್ಲಿ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಮರಣ ಹೊಂದುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾದವು. 2016ರಲ್ಲಿ ಬೆಂಗಳೂರಿನಲ್ಲಿ 5333 ರಸ್ತೆ ಅಪಘಾತಗಳು ಸಂಭವಿಸಿ 798 ಮಂದಿ ಬಲಿಯಾಗಿರುವುದು 2017ರಲ್ಲಿ ಅಪಘಾತಗಳ ಸಂಖ್ಯೆ 5065 ಕ್ಕೆ ಮತ್ತು ಮೃತರ ಸಂಖ್ಯೆ 641 ಕ್ಕೆ ಇಳಿಕೆ ಕಂಡವು. ಮರಣದ ರಹದಾರಿ ಎಂಬಂತಿದ್ದ ಹೆದ್ದಾರಿಗಳಲ್ಲಿ ಪಾದಚಾರಿಗಳು ಓಡಾಡಲು ತಕ್ಕ ವ್ಯವಸ್ಥೆ ಮತ್ತು ವೇಗಮಿತಿ ನಿಯಂತ್ರಣಕ್ಕೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಇದಕ್ಕೆ ಕಾರಣ.
ಬೆಂಗಳೂರಿನ ಯಲಹಂಕದಲ್ಲಿ ಬಳ್ಳಾರಿ ರಸ್ತೆಯಲ್ಲಿ ಗಂಟೆಗೆ ಸಹಸ್ರಾರು ವಾಹನಗಳು ಸಂಚರಿಸುತ್ತಿದ್ದು ಪ್ರತಿವರ್ಷ ಅತ್ಯಧಿಕ ಅಪಘಾತಗಳು ಜರುಗುತ್ತಿದ್ದವು. ಯಲಹಂಕ, ಹೆಬ್ಬಾಳ, ದೇವನಹಳ್ಳಿ, ಚಿಕ್ಕಜಾಲ, ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣಾ ವ್ಯಾಪ್ತಿಯ ರಸ್ತೆಗಳು ವಾಹನ ಸವಾರರಿಗೆ ಯಮಲೋಕದ ಹೆದ್ದಾರಿಗಳಾಗಿದ್ದವು. ಯಲಹಂಕ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ 59 ಜನರು ಪ್ರಾಣ ಕಳೆದುಕೊಂಡಿದ್ದರು. ಸಂಚಾರಿ ಪೊಲೀಸರು ಕೈಗೊಂಡ ಕಠಿಣ ಕ್ರಮದ ಮೇರೆಗೆ 2017ರಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾದವರ ಸಂಖ್ಯೆ 39 ಕ್ಕೆ ತಗ್ಗಿತು. ಅದೇ ರೀತಿ ಚಿಕ್ಕ ಜಾಲದಲ್ಲಿ 2016 ರಲ್ಲಿ ಬಲಿಯಾದವರು 40 ಮಂದಿಯಾಗಿದ್ದರೆ 2017ರಲ್ಲಿ ಈ ಸಂಖ್ಯೆ 25 ಕ್ಕೆ ತಗ್ಗಿತು.
ಎರ್ರಾಬಿರ್ರಿ ತಿರುವು ತೆಗೆದುಕೊಳ್ಳುತ್ತಿದ್ದ ಮತ್ತು ಎಲ್ಲೆಂದರೆ ಅಲ್ಲಿ ರಸ್ತೆ ದಾಟಲು ನುಗ್ಗುತ್ತಿದ್ದ ಪಾದಚಾರಿಗಳ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಯಿತು. ಇಂಟರ್ಸೆಪ್ಟರ್ ಮುಖಾಂತರ ಅತಿವೇಗದ ಚಾಲನೆ ಮಾಡುವವರನ್ನು ಹಿಡಿದು ದಂಡ ವಿಧಿಸುವ ಮತ್ತು ಅನಗತ್ಯ ಪಾದಚಾರಿ ಮಾರ್ಗಗಳನ್ನು ಬಂದ್ ಮಾಡುವ ಮೂಲಕ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲಾಯಿತು. ಅಪಘಾತ ಸಂಭವಿಸುತ್ತಿರುವ ಠಾಣಾ ವ್ಯಾಪ್ತಿಗಳ ಪ್ರದೇಶಗಳ ಮಾಹಿತಿ ಸ್ವೀಕರಿಸಿ ಆಯಾ ತಾಣಗಳ ಸನ್ನಿವೇಶದ ಸೂಕ್ಷ್ಮ ಪ್ರದೇಶಗಳ ಕುರಿತು ಅಧ್ಯಯನ ನಡೆಸಿ ಕ್ರಮ ಕೈಗೊಂಡಿರುವುದು ಉತ್ತಮ ಫಲಿತಾಂಶ ನೀಡಿತು. ಈ ಸಮಸ್ತ ಸಾಧನೆಯ ಶ್ರೇಯ ಹಿತೇಂದ್ರ ಅವರಿಗೆ ಸಲ್ಲಬೇಕು.
ಇಲಾಖೆಯು ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ಪರವಾನಗಿ ಪಡೆಯದಿದ್ದರೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ 3264 ಪ್ರಕರಣಗಳನ್ನು ದಾಖಲಿಸಿ 433000 ರೂ. ಗಳಷ್ಟು ದಂಡವನ್ನು ವಸೂಲು ಮಾಡಲಾಯಿತು.
ಅಪಘಾತಗಳ ಅಪಾಯ ತಗ್ಗಿಸುವ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೂ ಹೆಲ್ಮೆಟ್ ಧಾರಣೆಯನ್ನು ಕಡ್ಡಾಯಗೊಳಿಸಲಾಯಿತು. ಆದರೆ ಕೆಲವರು ಅರ್ಧ ಹೆಲ್ಮೆಟ್ ಧರಿಸಿ ಸಂಚರಿಸುತ್ತಿದ್ದುದು ಕಂಡು ಬಂದಿತ್ತು, ನಗರ ಸಂಚಾರ ಪೊಲೀಸ್ ಇಲಾಖೆಯು 2018 ರ ಫೆಬ್ರವರಿ 1 ರಿಂದ ‘ಆಪರೇಷನ್ ಸೇಫ್ರೈಡ್‘ ಎಂಬ ಕಾರ್ಯಾಚರಣೆಯನ್ನು ಹಮ್ಮಿಕೊಂಡು ಪೊಲೀಸ್ ಸಿಬ್ಬಂದಿಗೆ ಕೂಡ ಅರ್ಧ ಹೆಲ್ಮೆಟ್ ಧರಿಸದಂತೆ ಸೂಚನೆ ನೀಡಿತು. ಪೊಲೀಸ್ ಸಿಬ್ಬಂದಿ ಅಧಿಕವಾಗಿ ಅರ್ಧ ಹೆಲ್ಮೆಟ್ ಧರಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಹೀಗೆ ಮಾಡದಂತೆ ಕಠಿಣ ಸೂಚನೆ ನೀಡಲಾಯಿತು. ವ್ಯಕ್ತಿಗತ ದ್ವಿಚಕ್ರ ವಾಹನದ ಚಾಲನೆಯ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆಯೂ ಸೂಚಿಸಲಾಯಿತು. ಐಎಸ್ಐ ಮತ್ತು ಬಿಐಎಸ್ ಮುದ್ರೆ ಇರುವ ಹೆಲ್ಮೆಟ್ಗಳನ್ನು ಮಾತ್ರ ಧರಿಸುವ ಹಾಗೆ ಸಲಹೆ ಮಾಡಲಾಯಿತು. ಪೊಲೀಸ್ ಇಲಾಖೆಯ ಸಿಬ್ಬಂದಿ ಪ್ರಾಥಮಿಕವಾಗಿ ನಿಯಮ ಪಾಲನೆ ಮಾಡಬೇಕು. ಈ ದಿಶೆಯಲ್ಲಿ ಅವರು ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಾಲನೆ ಮಾಡುವರೇ ಎಂಬ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಸಂಚಾರ ಇಲಾಖೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಆರ್ ಹಿತೇಂದ್ರ ಅವರು ವಿವರಿಸಿದರು.
ನಿಯಮಗಳನ್ನು ಬದಲಾಯಿಸಿ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಆರ್. ಹಿತೇಂದ್ರ ಅವರ ಮಾರ್ಗದರ್ಶನದಲ್ಲಿ ಸಂಚಾರ ಪೊಲೀಸರು ಯಶಸ್ವಿಯಾಗಿದ್ದಾರೆ. 2014 ರಲ್ಲಿ ರಸ್ತೆ ಅಪಘಾತಗಳಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದವರು 754, ಮರಣ ಹೊಂದಿದವರ ಒಟ್ಟು ಸಂಖ್ಯೆ 793, ಗಂಭೀರವಾಗಿ ಗಾಯಗೊಂಡಿರುವವರ ಸಂಖ್ಯೆ 6,752, ಗಾಯಗೊಂಡವರ ಸಂಖ್ಯೆ 4,193 ಆಗಿತ್ತು ಇದು 2017ರ ನವೆಂಬರ್ ವರೆಗೆ ಕ್ರಮವಾಗಿ 560, 593, 4088, 3880 ಕ್ಕೆ ಇಳಿಯಿತು, ನಂಬರ್ ಪ್ಲೇಟ್ನ ದೋಷಗಳ ಕುರಿತು ಸಂಚಾರ ಇಲಾಖೆ ಕಠಿಣ ಕ್ರಮ ಕೈಗೊಂಡಿತು.2017ರ ಕೊನೆಯ ನಾಲ್ಕು ತಿಂಗಳುಗಳಲ್ಲಿ ದೋಷ ಸಹಿತ ನಂಬರ್ ಪ್ಲೇಟ್ಗಳನ್ನು ಹೊಂದಿರುವ 97 ಸಾವಿರ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು. ಫ್ಯಾನ್ಸಿ ಅಕ್ಷರಗಳಿಲ್ಲದ, ಹೆಸರು, ಚಿತ್ರಗಳಿಲ್ಲದ, ಸಾರಿಗೆ ಇಲಾಖೆ ನಿಗದಿಪಡಿಸಿದ ಮುಂಬದಿ ಮತ್ತು ಹಿಂಬದಿ ವಾಹನ ಸಂಖ್ಯಾ ಫಲಕಗಳಿಗೆ ಮಾತ್ರ ಅವಕಾಶ ನೀಡಬಾರದು. ದ್ವಿಚಕ್ರ ವಾಹನದಲ್ಲಿ ಬಿಳಿ ಪ್ಲೇಟ್ ಮೇಲೆ ಕಪ್ಪು ಬಣ್ಣದ ಸಂಖ್ಯೆಯು ಕಾಣುವಂತಿರುವುದನ್ನು, ವಾಣಿಜ್ಯ ಉದ್ದೇಶದ ನಾಲ್ಕು ಚಕ್ರದ ವಾಹನದ ಹಳದಿ ಬಣ್ಣದ ಪ್ಲೇಟ್ ಮೇಲೆ ಕಪ್ಪುಬಣ್ಣದ ಸಂಖ್ಯೆ ಎದ್ದು ಕಾಣುವುದನ್ನು ಕಡ್ಡಾಯಗೊಳಿಸಲಾಯಿತು.
ಮೋಟಾರು ವಾಹನಗಳ ಹಿಂಭಾಗ ಮತ್ತು ಮುಂಭಾಗದಲ್ಲಿ ಪ್ಲೇಟ್‍ಗಳಲ್ಲಿ ಸಂಖ್ಯೆ ನಿಖರವಾಗಿ ಓದುವಂತಿರಬೇಕು. ಸಾರಿಗೆ ಇಲಾಖೆಯ ಹೊಸ ಆದೇಶದ ಪ್ರಕಾರ ವಾಹನಗಳ ಸಂಖ್ಯಾ ಫಲಕದಲ್ಲಿ ಕನ್ನಡದ ಅಂಕಿಗಳನ್ನು ಬಳಸುವಹಾಗಿಲ್ಲ. ಏಕೆಂದರೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ತತ್‍ಕ್ಷಣವೇ ಕನ್ನಡದ ಅಂಕಿಗಳನ್ನು ಪತ್ತೆ ಮಾಡಲು ಆಗುವುದಿಲ್ಲ. ಜೊತೆಗೆ ಪರರಾಜ್ಯಗಳಿಗೆ ತೆರಳುವ ವಾಹನಗಳ ಕನ್ನಡ ಅಂಕಿಗಳನ್ನು ಗುರುತಿಸಲು ಅಲ್ಲಿಯ ಸಾರಿಗೆ ಮತ್ತು ಸಂಚಾರ ವಿಭಾಗದ ಪೊಲೀಸರಿಗೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ವಾಹನಗಳ ಸಂಖ್ಯಾ ಫಲಕದಲ್ಲಿ ಆಂಗ್ಲ (ಇಂಗ್ಲಿಷ್) ಅಂಕಿಗಳಿಗೆ ಪ್ರಾಮುಖ್ಯ ನೀಡಲಾಗಿದೆ. ನಂಬರ್ ಪ್ಲೇಟ್ಗಳಲ್ಲಿ ಸ್ಟಿಕ್ಕರ್ ಬಳಕೆಯನ್ನು ನಿರ್ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿತೇಂದ್ರ ಅವರು ತಿಳಿಸಿದರು.
ಶಾಲಾ ವಾಹನಗಳ ಚಾಲಕರು ಕುಡಿದು ವಾಹನ ಚಲಾಯಿಸುತ್ತಿರುವ ಪ್ರಕರಣಗಳ ಬಗ್ಗೆ ಚಿಂತಿತರಾಗಿರುವ ಸಂಚಾರಿ ಪೊಲೀಸರು ಹಿತೇಂದ್ರ ಅವರ ನೇತೃತ್ವದಲ್ಲಿ ಇಂಥ ಪ್ರಕರಣಗಳ ಸುಧಾರಣೆಗೆ ವಿಶೇಷ ಕ್ರಮ ಕೈಗೊಂಡರು. ವಾರಕ್ಕೆ 60 ಶಾಲಾ ಬಸ್ ಮತ್ತು ಆಂಬ್ಯುಲೆನ್ಸ್ಗಳ ಚಾಲಕರು ಕುಡಿದು ವಾಹನ ಚಲಾಯಿಸುತ್ತಿರುವುದರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಶಾಲಾ ಮತ್ತು ಆಂಬ್ಯುಲೆನ್ಸ್ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿ ಅಗತ್ಯ ಕಂಡೆಡೆ ಸೂಕ್ತ ಕ್ರಮ ಕೈಗೊಳ್ಳಲಾಯಿತು. ವಾರದಲ್ಲಿ ದಾಖಲಾಗುವ 200 ಪಾನಮತ್ತಿನಲ್ಲಿ ವಾಹನ ಚಾಲನಾ ಪ್ರಕರಣಗಳಲ್ಲಿ 60 ರಷ್ಟು ಶಾಲಾ ಮತ್ತು ಆಂಬ್ಯುಲೆನ್ಸ್ ವಾಹನ ಚಾಲಕರು ಎಂಬುದು ಆತಂಕದ ವಿಷಯ.
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು, ವ್ಹೀಲಿಂಗ್ ಮಾಡುವುದು, ಮುಂತಾದವುಗಳಿಂದ ಸಂಭವಿಸುತ್ತಿರುವ ವಾಹನ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 2015 ರಲ್ಲಿ ಕರ್ನಾಟಕ ಹೈ ಕೋರ್ಟ್ ಒಂದು ಆದೇಶ ನೀಡಿತು. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಕಂಡು ಬಂದಲ್ಲಿ ಅವರ ಪೋಷಕರ ಮೇಲೆ ಸೆಕ್ಷನ್ 184 ರ ಅಡಿ ಪ್ರಕರಣ ದಾಖಲಿಸುವಂತೆ ಆದೇಶದಲ್ಲಿ ಹೈಕೋರ್ಟ್ ಸಂಚಾರಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿತು. ಈ ಕಾಯ್ದೆಯಡಿ ತಪ್ಪಿತಸ್ಥರಾದ ಪೋಷಕರಿಗೆ ಆರು ತಿಂಗಳವರೆಗೆ ಸೆರೆವಾಸ ಮತ್ತು ದಂಡ ವಿಧಿಸಲು ಅವಕಾಶವಿದೆ. ಈ ಆದೇಶ ಜಾರಿಯಾದ ಬಳಿಕ ಪ್ರತಿವರ್ಷ 7000 ಪೋಷಕರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ಟೋಬರ್ ತಿಂಗಳಿನಲ್ಲೇ 600 ಪೋಷಕರ ಮೇಲೆ ಕೇಸುಗಳು, ದಾಖಲಾದವು.
ಪೋಷಕರು ಯಾವತ್ತಿಗೂ ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡಬಾರದು. ಇದು ಒಂದು ಮಾನಸಿಕ ಸಮಸ್ಯೆಗಿಂತ ಹೆಚ್ಚಿನದು ಎಂದು ಹಿತೇಂದ್ರ ಅವರು ಮನವಿ ಮಾಡಿದ್ದರು.
ಹೆಲ್ಮೆಟ್ ಧಾರಣೆಯನ್ನು ಕಡ್ಡಾಯ ಮಾಡಿರುವ ಬೆಂಗಳೂರು ಸಂಚಾರಿ ಪೊಲೀಸರ ಕ್ರಮ ಸಚಿನ್ ತೆಂಡೂಲ್ಕರ್ ಅವರಂತಹ ಸೆಲೆಬ್ರೆಟಿಗಳ ಮೆಚ್ಚುಗೆಗೂ ಪಾತ್ರವಾಗಿತ್ತು. ತಮ್ಮ ಟ್ವಿಟರ್ನಲ್ಲಿ ಸಚಿನ್ ಬೆಂಗಳೂರು ಸಂಚಾರಿ ಪೊಲೀಸರನ್ನು ಶ್ಲಾಘಿಸಿ ಕೇರಳದ ಹೆಲ್ಮಟ್ ಧರಿಸದ ಹಿಂಬದಿ ವಾಹನ ಸವಾರರಿಗೆ ಕಿವಿಮಾತು ಹೇಳಿದ್ದರು. ಇದು ಹಿತೇಂದ್ರ ಅವರ ನೇತೃತ್ವದ ಬೆಂಗಳೂರು ನಗರ ಸಂಚಾರಿ ಪೊಲೀಸ್ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿತ್ತು.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ವರದಿ ಮಾಡಲು ನಾಗರಿಕರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಅಳವಡಿಸಿಕೊಂಡಿರುವ ‘ಪಬ್ಲಿಕ್ ಐ‘ ಆ್ಯಪ್ಗೆ ‘ಗ್ಲೋಬಲ್ ಮೊಬೈಲ್ ಆ್ಯಪ್ಸ್ ಸಮ್ಮಿಟ್ ಆ್ಯಂಡ್ ಅವಾರ್ಡ್‘ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಆರ್. ಹಿತೇಂದ್ರ ಅವರು ಜನತೆಯ ಆಯ್ಕೆಯ ವರ್ಗದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇತ್ತೀಚೆಗೆ ಸುರಿದ ಭಾರಿ ಮಳೆಯ ಕಾರಣ ರಸ್ತೆಯಲ್ಲಿ ನಿಂತ ನೀರನ್ನು ಚರಂಡಿಗೆ ಹರಿಸಲು ಸಂಚಾರ ಪೊಲೀಸ್ ಸಿಬ್ಬಂದಿಯು ಬಿಬಿಎಂಪಿ ಸಿಬ್ಬಂದಿ ಬರುವವರೆಗೆ ಕಾಯದೆ ಸ್ವತಃ ಗುದ್ದಲಿ, ಹಾರೆಗಳನ್ನು ಹಿಡಿದು ನೀರಿಗಿಳಿದು ಶ್ರಮಿಸಿದ ಕಾರ್ಯ ಭಾರಿ ಪ್ರಶಂಸೆಗೆ ಪಾತ್ರವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ಕೆ ಶ್ಲಾಘನೆ ಹೊರಹೊಮ್ಮಿದೆ. ಶ್ರೀ ಆರ್. ಹಿತೇಂದ್ರ ಅವರ ಸ್ಫೂರ್ತಿದಾಯಕ ನಾಯಕತ್ವವೇ ಈ ಪ್ರಶಂಸಾರ್ಹ ಕಾರ್ಯಕ್ಕೆ ಪ್ರೇರೇಪಕ. ಸಂಚಾರ ಪೊಲೀಸರ ಈ ಸಮಯ ಸ್ಫೂರ್ತಿಯಿಂದ ಇಡೀ ದಿನ ಸಂಚಾರ ಮತ್ತು ವಾಹನ ದಟ್ಟಣೆಯ ಕಿರಿಕಿರಿಗೆ ತಡೆಯೊಡ್ಡಿತು ಎನ್ನಬಹುದು. ಸಾರ್ವಜನಿಕರೂ ಈ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ವರ್ಷ ಆಯುಧ ಪೂಜೆಯ ಸಂದರ್ಭದಲ್ಲಿ ಸಾಲು ಸಾಲು ರಜೆ ಇರುವ ಕಾರಣ ಹೊರ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಬೆಂಗಳೂರಿನ ಮೆಜೆಸ್ಟಿಕ್ ಸುತ್ತಮುತ್ತ ವಾಹನ ದಟ್ಟಣೆ ಸರ್ವೇಸಾಮಾನ್ಯ. ಪ್ರಯಾಣಿಕರು ಈ ವಾಹನ ದಟ್ಟಣೆಯಲ್ಲಿ ಗಂಟೆಗಟ್ಟಲೆ ಸಿಲುಕಿ ಕಿರಿಕಿರಿ ಅನುಭವಿಸುವುದು ಸಹ ಮಾಮೂಲು. ಆದರೆ ಕಳೆದ ವರ್ಷ ಆಯುಧ ಪೂಜೆ ಸಂದರ್ಭದಲ್ಲಿ ನಾಲ್ಕುದಿನ ರಜೆ ಇದ್ದು ಕೆಎಸ್ಆರ್ಟಿಸಿ 1500 ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು. ಖಾಸಗಿ ಸಾರಿಗೆ ಸಂಸ್ಥೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳ ವ್ಯವಸ್ಥೆ ಮಾಡಿದ್ದವು. ಸಂಚಾರ ಪೊಲೀಸರು ಒಂದು ದಿನ ಮೊದಲೇ ಮೆಜೆಸ್ಟಿಕ್ ಸುತ್ತಮುತ್ತ ವಾಹನ ನಿಲುಗಡೆ ನಿಷೇಧಿಸಿ ದೂರದ ಊರುಗಳ ಕೆಎಸ್ಆರ್ಟಿಸಿ ಬಸ್ಗಳನ್ನು ಸ್ಯಾಟಲೈಟ್ ಹಾಗೂ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ ಕಾರಣ ಮೆಜೆಸ್ಟಿಕ್ ಪ್ರದೇಶ ವಾಹನ ದಟ್ಟಣೆಯಿಂದ ಮುಕ್ತವಾಯಿತು. ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳನ್ನು ಬಳಸಿಕೊಳ್ಳುವಂತೆ ಮುಂದಾಗಿಯೇ ಸೂಚಿಸಿದ್ದ ಸಂಚಾರಿ ಪೊಲೀಸರು ವಾಹನ ದಟ್ಟಣೆಗೆ ಬ್ರೇಕ್ ಹಾಕಿದ್ದು ಶ್ಲಾಘನೀಯ ನಡೆಯಾಗಿತ್ತು.
ಶ್ರೀ ಆರ್. ಹಿತೇಂದ್ರ ಅವರು ಯಾವ ಹುದ್ದೆಯ ಹೊಣೆಯನ್ನೇ ವಹಿಸಿಕೊಂಡರೂ ಅವರ ಕಾರ್ಯ ನಿರ್ವಹಣೆ ಅತ್ಯುನ್ನತ ಮಟ್ಟದ್ದಾಗಿರುತ್ತದೆ. ಈ ದಕ್ಷ, ಪ್ರತಿಭಾನ್ವಿತ ಅಧಿಕಾರಿಗೆ ಭಗವಂತನು ಹೆಚ್ಚಿನ ಆಯುರಾರೋಗ್ಯ, ಸಿರಿಸಂಪದಗಳನ್ನು ಅನುಗ್ರಹಿಸಲಿ, ತನ್ಮೂಲಕ ಅವರ ದಕ್ಷ ಸೇವೆಯ ಪ್ರಯೋಜನ ಅಧಿಕಾಧಿಕವಾಗಿ ಲಭಿಸಿ ನಾಡಿನ ಜನಜೀವನ ಹಸನಾಗಲಿ ಎಂದು ‘ಪತ್ರಿಕೆ’ ತುಂಬು ಹೃದಯದಿಂದ ಹಾರೈಸುತ್ತದೆ.