|| ಅದ್ವಿತೀಯ ಅಧಿಕಾರಿ ||ಅಲೋಕ್‍ಕುಮಾರ್ ಐಪಿಎಸ್

0
832

ಖಡಕ್  ಪೊಲೀಸ್  ಅಧಿಕಾರಿ  ಎಂದೇ ಹೆಸರುವಾಸಿಯಾಗಿರುವ ಶ್ರೀ ಅಲೋಕ್ ಕುಮಾರ್ ಐಪಿಎಸ್ ಅವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ನೇಮಕಗೊಂಡವರು. ಪೊಲೀಸ್ ಇಲಾಖೆಯ ಭಾರಿ ಪುನಾರಚನೆ ಮಾಡಿದ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆಪ್ತರೆಂದೇ ಪರಿಗಣಿತರಾಗಿರುವ ಶ್ರೀ ಅಲೋಕ್‍ಕುಮಾರ್ ಸೇರಿದಂತೆ ಸುಮಾರು 18 ಪೊಲೀಸ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು.

ಅಲೋಕ್ ಕುಮಾರ್ ಅವರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಂಆಉP) ಹುದ್ದೆಗೆ ಭಡ್ತಿ ನೀಡಿ ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಆಗಿ ನೇಮಿಸಲಾಗಿತ್ತು. ಅಲೋಕ್ ಕುಮಾರ್ ಅವರು ನಿರ್ಗಮಿತ ಪೊಲೀಸ್ ಆಯುಕ್ತ ಶ್ರೀ ಟಿ. ಸುನೀಲ್‍ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು. ಹೆಚ್ಚು ಕಡಿಮೆ ಎರಡು ವರ್ಷಗಳಷ್ಟು ಕಾಲ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸುನೀಲ್ ಕುಮಾರ್ ಅವರು ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್  ಮಹಾನಿರ್ದೇಶಕರಾಗಿ  ಅಧಿಕಾರ ವಹಿಸಿಕೊಂಡರು. ಶ್ರೀ ಸುನೀಲ್‍ಕುಮಾರ್ ಅವರು ಅಲೋಕ್‍ಕುಮಾರ್ ಅವರಿಗೆ ಅಧಿಕಾರ ಬೇಟನ್ ಹಸ್ತಾಂತರಿಸಿದ್ದರು.

ಅಲೋಕ್ ಕುಮಾರ್ ಅವರು ಈ ಮುನ್ನ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.

ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನೂತನ ಆಯುಕ್ತ ಅಲೋಕ್ ಕುಮಾರ್ ಅವರು ತಮ್ಮನ್ನು ಈ ಉನ್ನತ ಹುದ್ದೆಗೆ ನೇಮಿಸಿದ್ದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ತಮ್ಮ ಹಿರಿಯ ಅಧಿಕಾರಿಗಳ ಸಲಹೆ-ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸಿ ಈ ಹುದ್ದೆಗೆ ನ್ಯಾಯ ಒದಗಿಸುವುದಾಗಿ ಅವರು ತಿಳಿಸಿದರು.

”ನನ್ನ ಮೇಲಧಿಕಾರಿ ಶ್ರೀ ಸುನೀಲ್ ಸರ್ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದೇನೆ. ಎಲ್ಲ ಅಧಿಕಾರಿಗಳು ಅವರ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಮತ್ತು ನಗರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ಎಲ್ಲಿಯೇ ಆಗಲಿ, ಸುಧಾರಣೆಗೆ ಅವಕಾಶವಿದ್ದರೆ ನಾನು ಮತ್ತು ನನ್ನ ಸಹೋದ್ಯೋಗಿಗಳು ಖಂಡಿತ ಅದನ್ನು ಸಾಧಿಸಿಕೊಡುತ್ತೇವೆ. ಸಧ್ಯದ ಮಟ್ಟಿಗೆ ನನಗೆ ಯಾವುದೇ ದೊಡ್ಡ ಸಮಸ್ಯೆಗಳು ಕಾಣುತ್ತಿಲ್ಲ. ನಾವು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ. ಮತ್ತು ನಮ್ಮ ಗೌರವಾನ್ವಿತ ಮುಖ್ಯಮಂತ್ರಿ, ಗೌರವಾನ್ವಿತ ಗೃಹಸಚಿವರು, ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಆದೇಶಗಳನ್ನು ಅನುಸರಿಸುತ್ತೇವೆ” ಎಂದು ಅಲೋಕ್ ಕುಮಾರ್ ಭರವಸೆ ನೀಡಿದರು.

“ಈಗ ಘೋರ ಅಪರಾಧಿಗಳು ಮುಂಚಿನ ಹಾಗೆ ಇಲ್ಲ ನಗರದಲ್ಲಿ ಸಂಘಟಿತ ರೌಡಿ ಮೂಲಗಳು ಇಲ್ಲ ಆದರೆ ಬಿಳಿ-ಕಾಲರ್ ಅಪರಾಧಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಂಚನೆ ಹಗರಣಗಳಲ್ಲಿ ಭಾಗಿಯಾಗುವವರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಇಂಥವರಿಗೆ ನೀಡುವ ಶಿಕ್ಷೆ ಕಠೋರವಾಗಿಲ್ಲ” ಎಂದು ಅವರು ನುಡಿದರು.

ಪೊಲೀಸ್ ಠಾಣೆಗಳನ್ನು ಜನಸ್ನೇಹಿಯನ್ನಾಗಿಸುವುದಕ್ಕೆ ನನ್ನ ಆದ್ಯತೆ ಮತ್ತು ಸಾರ್ವಜನಿಕರು ನ್ಯಾಯ ಪಡೆಯಲು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವಂಥ ಸನ್ನಿವೇಶಗಳನ್ನು ಕಡಿಮೆ ಮಾಡಲಾಗುತ್ತದೆ. ಠಾಣಾ ಮಟ್ಟದಲ್ಲಿಯೇ ಅವರಿಗೆ ನೆರವು, ನ್ಯಾಯ ದೊರಕಿಸಿಕೊಡುವಂತೆ ವ್ಯವಸ್ಥೆ ಮಾಡಲಾಗುವುದು” ಎಂದು ಅವರು ಖಚಿತ ಆಶ್ವಾಸನೆ ನೀಡಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಅಲೋಕ್ ಕುಮಾರ್ ಅವರಿಗೆ ಸಲ್ಲಿಕೆಯಾದ ಮೊದಲ ದೂರು ವರದಕ್ಷಿಣೆ ಕಿರುಕುಳ ಪ್ರಕರಣದ್ದಾಗಿತ್ತು. ಇದು ಭೋಪಾಲ್‍ನಲ್ಲಿ ದಾಖಲಾದ ಪ್ರಕರಣ. ದೂರುದಾರ ಮಹಿಳೆಯು “ನನ್ನ ಪತಿ ನನಗೆ ವರದಕ್ಷಿಣೆ ಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದೆ. ಈಗ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಾನು ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ. ಬಂಧÀನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಪತಿ ನನ್ನ ಬಳಿ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿದ್ದಳು.

ಇದಕ್ಕೆ ಕೂಡಲೇ ಸ್ಪಂದಿಸಿದ ಅಂದಿನ ಆಯುಕ್ತ ಅಲೋಕ್ ಕುಮಾರ್‍ರವರು ಆ ವ್ಯಾಪ್ತಿಗೆ ಬರುವ ಪೊಲೀಸರಿಗೆ ಈ ಪ್ರಕರಣವನ್ನು ಕೈಗೆತ್ತಿಕೊಂಡು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿರುವ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆದೇಶಿಸಿದರು. ಜೊತೆಗೆ ದೂರುದಾರರ ವಿವರಗಳನ್ನು ಕಂಪ್ಯೂಟರ್‍ನಲ್ಲಿ ದಾಖಲಿಸುವಂತೆ, ಸಂದರ್ಶಕರ ದಾಖಲೆಗಳನ್ನು ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು ಮತ್ತು ದೂರಿನ ಪ್ರತಿದಿನದ ಪ್ರಗತಿಯ ಬಗ್ಗೆ ತಮಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಅಲೋಕ್ ಕುಮಾರ್ ಅವರ ತನಿಖಾ ಕೌಶಲ್ಯ ಮನಗಂಡು ಅಂದಿನ ಸಿಎಂ ಕುಮಾರಸ್ವಾಮಿಯವರು ಅವರನ್ನು ಈ ಪ್ರತಿಷ್ಠಿತ ಹುದ್ದೆಗೆ ನೇಮಕ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಪತ್ರಕರ್ತೆ, ಹೋರಾಟಗಾರ್ತಿ ಗೌರಿಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು (ಎಸ್‍ಐಟಿ) ಪ್ರಗತಿ ಸಾಧಿಸುವಲ್ಲಿ ಶ್ರೀ ಅಲೋಕ್ ಕುಮಾರ್ ಅವರ ಕೊಡುಗೆಯೂ ಸಾಕಷ್ಟಿತ್ತು ಎನ್ನುವಲ್ಲಿ ಸಂದೇಹಕ್ಕೆ ಎಡೆ ಇರದು.

ಅಚಿದಿನ ಪೊಲೀಸ್ ಆಯುಕ್ತರಿಂದ ನಿರೀಕ್ಷಿತ ಸಾಧನೆಗಳು-ಸುಧಾರಣೆಗಳು ಬಹಳಷ್ಟಿದ್ದವು. ಮುಖ್ಯವಾಗಿ ನಗರದಲ್ಲಿ ಸರಗಳ್ಳರ, ಬೀದಿ ಕಾಮಣ್ಣರ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ. ವ್ಹೀಲಿಂಗ್ ಮಾಡುವ ಕಿಡಿಗೇಡಿಗಳನ್ನು ಹದ್ದುಬಸ್ತಿನಲ್ಲಿಡಬೇಕಾಗಿದೆ.  ಮಹಿಳೆಯರಿಗೆ, ವಯೋವೃದ್ಧರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕಾಗಿದೆ. ಮುಖ್ಯವಾಗಿ ನಗರವನ್ನು ಅಪರಾಧಮುಕ್ತಗೊಳಿಸಬೇಕಾಗಿದೆ.

ಜನತೆ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಹೆದರುವ-ಹಿಂಜರಿಯುವ ಪ್ರವೃತ್ತಿಯನ್ನು ನಿವಾರಿಸಿ ಪೊಲೀಸ್ ಠಾಣೆಗಳನ್ನು ಜನಸ್ನೇಹಿಯನ್ನಾಗಿಸುವ ಪ್ರಯತ್ನ ಕೈಗೊಳ್ಳುವ ಭರವಸೆ ಶ್ರೀ ಅಲೋಕ್ ಕುಮಾರ್ ಅವರಿಂದ ಹೊರಹೊಮ್ಮಿದ್ದು ನಗರದ ಜನತೆಯ ಪಾಲಿಗೆ ಆಶಾದಾಯಕವಾಗಿದೆ ಮತ್ತು ಕಾನೂನು ಸುವ್ಯವಸ್ಥೆ ಸಹ ಉತ್ತಮಗೊಳ್ಳುವ ನಿರೀಕ್ಷೆ ಮೂಡಿತ್ತು. ಆದರೆ ಸರ್ಕಾರ ಬದಲಾಗಿ ಸನ್ನಿವೇಶಗಳು ಪಲ್ಲಟಗೊಂಡು ಶ್ರೀ ಭಾಸ್ಕರ್‍ರವರು ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡರು.

ಶ್ರೀ ಅಲೋಕ್ ಕುಮಾರ್ ಅವರು ನಗರದ ಜನತೆಯ ಜೀವನವನ್ನು ಹಸನಾಗಿಸಲಿ ಎಂದು ‘ಪತ್ರಿಕೆ’ಯು ಹೃತ್ಪೂರ್ವಕವಾಗಿ ಹಾರೈಸುತ್ತದೆ.