ಬೆಂಗಳೂರು ಸಿಟಿ ಗಿರಿನಗರದ ಪೊಲೀಸ್ ಇನ್‍ಸ್ಪೆಕ್ಟರ್ ಶ್ರೀ ಸಿ.ಎ. ಸಿದ್ಧಲಿಂಗಯ್ಯ ಅವರು ಆರೋಪಿಯೊಬ್ಬನಿಂದ ಇರಿತಕ್ಕೊಳಗಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಓರ್ವ ಸಂತ್ರಸ್ಥೆಯ ಜೀವ ರಕ್ಷಿಸಿದ್ದಕ್ಕಾಗಿ ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕಿ ಮತ್ತು ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀಮತಿ ನೀಲಮಣಿ ಎನ್.ರಾಜು ಅವರು ಮುಕ್ತಕಂಠದಿಂದ ಪ್ರಶಂಸೆ ಮಾಡಿದ್ದಾರೆ.
ಆರೋಪಿಯೊಬ್ಬನಿಂದ ಕ್ರೂರವಾಗಿ ಇರಿತಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸಂತ್ರಸ್ಥೆ ಇದ್ದ ಸ್ಥಳಕ್ಕೆ ತತ್‍ಕ್ಷಣವೇ ಧಾವಿಸಿದ ಸಿದ್ಧಲಿಂಗಯ್ಯನವರು ಆಕೆಯನ್ನು ಕಾಲವಿಳಂಬ ಮಾಡದೆ ಆಸ್ಪತ್ರೆಗೆ ಸ್ಥಳಾಂತರಿಸಿದರು. ಸಂತ್ರಸ್ಥೆಗೆ ತುರ್ತು ಚಿಕಿತ್ಸೆ ನಡೆಯುವಾಗ ಸ್ವತಃ ಎಬಿ ಪಾಸಿಟಿವ್ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಡಿಜಿ ಮತ್ತು ಐಜಿಪಿಯವರು ಈ ಸುತ್ಯರ್ಹ ಕಾರ್ಯದ ಬಗ್ಗೆ ತಿಳಿದು, ಸಿದ್ಧಲಿಂಗಯ್ಯನವರನ್ನು ತಮ್ಮ ಕಚೇರಿಗೆ ಬರಮಾಡಿಕೊಂಡು 20,000 ರೂಪಾಯಿಗಳ ನಗದು ಬಹುಮಾನ ಮತ್ತು ಶ್ಲಾಘನಾ ಪ್ರಮಾಣ ಪತ್ರ ನೀಡಿ ಸತ್ಕರಿಸಿದರು. ಡಿಜಿ ಮತ್ತು ಐಜಿಪಿಯವರು ”ಇಂಥ ಕಾರ್ಯಗಳು ಕರ್ನಾಟಕ ಪೊಲೀಸರ ಹೆಗ್ಗಳಿಕೆಯಾಗಿವೆ ಮತ್ತು ಈ ಅಧಿಕಾರಿ ಇತರರಿಗೆ ಒಂದು ಉದಾಹರಣೆಯಾಗಿದ್ದಾರೆ” ಎಂದು ಶ್ಲಾಘಿಸಿದರು.
ಬೆಂಗಳೂರು ನಗರದ ಅಂದಿನ ಪೊಲೀಸ್ ಆಯುಕ್ತರು ಈ ಅಧಿಕಾರಿಯ ಮಾನವೀಯ ಕಾರ್ಯವನ್ನು ಪತ್ರಿಕಾ ಗೋಷ್ಠಿಯಲ್ಲಿ ಕೊಂಡಾಡಿದರು ಮತ್ತು ಇನ್‍ಸ್ಪೆಕ್ಟರ್ ಶ್ರೀ ಸಿ.ಎ. ಸಿದ್ಧಲಿಂಗಯ್ಯ, ಸಬ್ ಇನ್ಸ್‍ಸ್ಪೆಕ್ಟರ್ ಕೆ.ಎಸ್. ವಿನಯ್, ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ) ಶ್ರೀ ವಾಲಿಪಾಕ್ಷಾ ಅವರನ್ನೊಳಗೊಂಡ ಇಡೀ ತಂಡವನ್ನು ಪ್ರಶಂಸಿಸಿದರು ಮತ್ತು ದಕ್ಷಿಣ ಡಿಸಿಪಿಯವರ ನೇತೃತ್ವದ ಇಡೀ ಪೊಲೀಸ್ ತಂಡಕ್ಕೆ 50,000 ರೂ.ಗಳ ನಗದು ಬಹುಮಾನವನ್ನು ಪ್ರಕಟಿಸಿದರು. ಅದರಲ್ಲೂ ಕರ್ತವ್ಯದ ವ್ಯಾಪ್ತಿಯಿಂದಾಚೆಗೂ ಇಂಥ ಮಾನವೀಯ ಕಾರ್ಯ ಮಾಡಿದ ಇನ್‍ಸ್ಪೆಕ್ಟರ್ ಸಿದ್ಧಲಿಂಗಯ್ಯ ಅವರ ಬಗ್ಗೆ ವಿಶೇಷವಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.