ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಲವೆಡೆ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ವಾಹನ ಸವಾರರಿಗೆ, ಸಾರ್ವಜನಿಕರ ಸಂಚಾರಕ್ಕೆ ನರಕಸದೃಶ ಪರಿಸ್ಥಿತಿ ಉಂಟಾಗಿದೆ. ನಗರದಾದ್ಯಂತ ವಾಹನದಟ್ಟಣೆಗೆ ಇದು ಕಾರಣವಾಗಿದೆ.
ರಸ್ತೆ ಗುಂಡಿಗಳನ್ನು ಮುಚ್ಚುವ ಹೊಣೆಹೊತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ದಿವ್ಯ ನಿರ್ಲಕ್ಷ ವಹಿಸಿರುವ ಕಾರಣ ಬೆಂಗಳೂರು ಸಂಚಾರ ವಿಭಾಗದ ಪೊಲೀಸರೇ ಆ ಕೆಲಸ ಕೈಗೆತ್ತಿಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸಿರುವುದು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.
ಇತ್ತೀಚಿನ ಕೆಲವು ದಿನಗಳಲ್ಲಿ ಗುಂಡಿ ಗುರುತಿಸುವ ಕಾರ್ಯಾಚರಣೆಯನ್ನು ಬೆಳಿಗ್ಗೆ ಎಂಟು ಗಂಟೆಗೇ ಆರಂಭಿಸಿದ ಟ್ರಾಫಿಕ್ ಪೊಲೀಸರು ಸುಮಾರು 221 ರಸ್ತೆ ಗುಂಡಿಗಳನ್ನು ಮುಚ್ಚಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಟ್ಟು 44 ಸಂಚಾರ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಶ್ರೀ ಪಿ. ಹರಿಶೇಖರನ್ ಅವರ ನೇತೃತ್ವದಲ್ಲಿ ಟ್ರಾಫಿಕ್ ಮತ್ತು ಸಿಮೆಂಟ್ ಮಿಕ್ಸರ್ ಲಾರಿಗಳು ಒಳಗೊಂಡಂತೆ ವಿವಿಧ ವಾಹನಗಳಲ್ಲಿ ಟಾರು (ಡಾಂಬರು), ಮಣ್ಣು ಮತ್ತು ಕಾಂಕ್ರೀಟ್ ಸುರಿದು ಗುಂಡಿಗಳನ್ನು ಮುಚ್ಚಲಾಗಿದೆ.
ರಾಜಾಜಿನಗರ, ಹೆಬ್ಬಾಳ, ಜೆ.ಬಿ.ನಗರ, ಹಲಸೂರು, ಕೆ.ಎಸ್. ಲೇಔಟ್, ಕೃಷ್ಣರಾಜಪುರ, ಸಂಚಾರ ವಿಭಾಗದ ಪೊಲೀಸರು ಅತ್ಯಧಿಕ ಪ್ರಮಾಣದ ಗುಂಡಿಗಳನ್ನು ಮುಚ್ಚಿ ಮೆಚ್ಚುಗೆಗೆ ಗಳಿಸಿದ್ದಾರೆ. ಅಂದಹಾಗೆ ಇತರ ಠಾಣೆಗಳ ಸಿಬ್ಬಂದಿಯ ಕಾರ್ಯ ಸಹ ನಗಣ್ಯವೇನಲ್ಲ/
ಸಂಚಾರ ಪೊಲೀಸರ ಈ ಸೇವೆಗೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ಸಾರ್ವಜನಿಕ ವಲಯಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.