ಮನೆಬಾಗಿಲಿಗೆ ಪೊಲೀಸರು ಬಂದರೆ?

0
743

ಪೊಲೀಸರು ರಾತ್ರಿ ಹೊತ್ತು ಮನೆಗೆ ಬಂದು ಬಾಗಿಲು ತಟ್ಟಿದರೆ ಯಾರಿಗೆ ಗಾಬರಿಯಾಗುವುದಿಲ್ಲ?! ಹೊಸವರ್ಷದ ದಿನ ಈ ರೀತಿಯ ಘಟನೆಗೆ ಬೆಂಗಳೂರು ಮಹಾನಗರ ಸಾಕ್ಷಿಯಾಯಿತು. ಬೆಂಗಳೂರಿನ ಕೆಲವು ಮನೆ ಮಾಲೀಕರಿಗೆ ಪೊಲೀಸರು ಈ ರೀತಿಯ ಆಘಾತ ನೀಡಿದರು. ಸಿಬ್ಬಂದಿ ಮಾತ್ರವಲ್ಲದೆ ಹಿರಿಯ ಅಧಿಕಾರಿಗಳು ಮನೆಯ ಬಳಿಗೆ ಬಂದು “ಒಳಗೆ ಯಾರಿದ್ದೀರಿ, ಬಾಗಿಲು ತೆಗೆಯಿರಿ” ಎಂದು ಕೂಗಿದರು. ಬಾಗಿಲು ತೆರೆದರೆ ಎದುರಿಗೆ ಪೊಲೀಸರು! ದಿಗ್ಭ್ರಮೆಗೊಳಗಾದ ಮನೆಯವರಿಗೆ ಸಪ್ರೈಸ್ (ಅಚ್ಚರಿ) ಕಾದಿತ್ತು. ಪೊಲೀಸರು ಹೊಸವರ್ಷದ ಶುಭಾಶಯಗಳನ್ನು ಕೋರಿ ಆಯಾ ಮನೆಯವರು ಕಳೆದುಕೊಂಡಿದ್ದ ಆಭರಣಗಳನ್ನು ಹಸ್ತಾಂತರಿಸಿದಾಗ ಮನೆಯವರಿಗೆ ಡಬಲ್ ಧಮಾಕಾ!

ಕಳವಾಗಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದ ಬೆಂಗಳೂರು ನಗರ ಪೊಲೀಸರು ಅವುಗಳನ್ನು ಮಾಲೀಕರಿಗೆ ಅಚ್ಚರಿ ಉಂಟುಮಾಡುವ ಮೂಲಕ ಹಸ್ತಾಂತರಿಸಲು ನಿರ್ಧರಿಸಿದ್ದರು. ಹೊಸವರ್ಷದ ಮುನ್ನಾದಿನ ರಾತ್ರಿ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್, ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ರವಿ ಚನ್ನಣ್ಣನವರ್, ಅಂದಿನ ಡಿಸಿಪಿ ಅಣ್ಣಾಮಲೈ ಮತ್ತು ಇತರ ಅಧಿಕಾರಿಗಳು  ಸ್ವರ್ಣಾಭರಣಗಳನ್ನು ಕಳೆದುಕೊಂಡವರ  ಮನೆಗಳಿಗೆ  ಭೇಟಿನೀಡಿ ಆಭರಣಗಳನ್ನು ಹಿಂದಿರುಗಿಸಿದ್ದಾರೆ. ಕಳೆದುಹೋದ ಸ್ವರ್ಣಾಭರಣಗಳನ್ನು ಹೊಸವರ್ಷದ ದಿನವೇ ಮರಳಿ ಪಡೆದದ್ದಕ್ಕೆ ಮನೆಗಳ ಮಾಲೀಕರು ದುಪ್ಪಟ್ಟು ಖುಷಿ ಅನುಭವಿಸಿದ್ದಾರೆ ಮತ್ತು ಮನೆಗೆ ಆಗಮಿಸಿ ಚಿನ್ನ ವಾಪಸ್ ನೀಡಿದ ಪೊಲೀಸರಿಗೆ ಕೃತಜ್ಞತೆಗಳನ್ನು ­ತಿಳಿಸಿ ಹೊಸವರ್ಷದ ಶುಭಾಶಯ ಕೋರಿದರು.