ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ (35) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ಕರ್ನಾಟಕದ ಸಿಂಗಂ’ ಎಂದೇ ಹೆಸರಾದ, ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಭಾರತೀಯ ಪೊಲೀಸ್ ಸೇವೆಗೆ ವಿದಾಯ ಹೇಳಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯನ್ನು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
“ರಾಜೀನಾಮೆ ನಿರ್ಧಾರ ಮರುಪರಿಶೀಲಿಸಿ. ಏಕೆಂದರೆ ರಾಜ್ಯದ ಜನತೆಗೆ ಮತ್ತು ಪೊಲೀಸ್ ಇಲಾಖೆಗೆ ನಿಮ್ಮ ಸೇವೆಯ ಅuÀತ್ಯವಿದೆ” ಎಂದು ಅಂದಿನ ಸಿಎಂ. ಹೇಳಿದರೆನ್ನಲಾಗಿದ್ದು ಅಣ್ಣಾಮಲೈ ಅವರು ತಮ್ಮ ನಿರ್ಧಾರ ಅಚಲ ಎಂದು ಪುನರುಚ್ಚರಿಸಿದ ಕಾರಣ ಕುಮಾರಸ್ವಾಮಿಯವರು ಅವರಿಗೆ ಶುಭ ಕೋರಿ ಕಳುಹಿಸಿದರೆಂದು ಮಾಧ್ಯಮಗಳು ವರದಿ ಮಾಡಿದವು. ಈ ಸಂದರ್ಭದಲ್ಲಿ ಕರ್ನಾಟಕದ ಗೃಹಸಚಿವ ಎಂ.ಬಿ. ಪಾಟೀಲ್ ಅವರು ಉಪಸ್ಥಿತರಿದ್ದರು.
ಅಣ್ಣಾಮಲೈ ಅವರಿಗೆ ನಿಕಟವಾದ ಕೆಲವು ಮೂಲಗಳ ಪ್ರಕಾರ ಅವರು ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಸೇರುವರೆನ್ನಲಾಗಿದ್ದು ಅಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳುವರೆನ್ನಲಾಗಿದೆ.
ಅಣ್ಣಾಮಲೈ ಅವರಿಗೆ ಆಪ್ತರಾದ ಕೆಲವು ಐಪಿಎಸ್ ಅಧಿಕಾರಿಗಳು ಕೂಡ ಅವರು ಸುದೂರು ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವರೆಂದು ಖಚಿತಪಡಿಸಿದ್ದಾರೆ. ಆದರೆ ಸ್ವತಃ ಅಣ್ಣಾಮಲೈ ಅವರು ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಅವರು ಕುಟುಂಬಕ್ಕೆ, ವಿಶೇಷವಾಗಿ ಅವರ ಮಗನಿಗೆ ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ‘ಸಿಂಗಂ’ ಎಂದೇ ಖ್ಯಾತರಾದ ಅಣ್ಣಾಮಲೈ ಅವರು ಅಪರಾಧಿಗಳನ್ನು ದಮನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವರು ಸಾರ್ವಜನಿಕವಾಗಿ ಸಹ ಉತ್ತಮ ವಚಸ್ಸು ಹೊಂದಿದ್ದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು ‘ನಾನು ಐಪಿಎಸ್‍ನಿಂದ ನಿರ್ಗಮಿಸುತ್ತಿದ್ದೇನೆ. ಪೊಲೀಸ್ ಸೇವೆ ತೊರೆಯುವ ಬಗ್ಗೆ ಬಹುತೇಕ ಒಂದು ವರ್ಷದಿಂದ ಯೋಚನೆ ಮಾಡುತ್ತಿದ್ದೆ. ನಾನು ನನ್ನ ಪೊಲೀಸ್ ಸೇವೆಯನ್ನು ನಿರ್ವಹಿಸಿದ್ದೇನೆ ಮತ್ತು ಖಾಕಿ ಸಮವಸ್ತ್ರವನ್ನು ಅಪಾರ ಹೆಮ್ಮೆಯಿಂದ ಧರಿಸಿದ್ದೇನೆ. ಆದರೆ ನಾನು ಯಾವಾಗಲೂ ನಂಬುವ ಹಾಗೆ ನಮ್ಮ ಜೀವನದಲ್ಲಿ ಇತರ ಕೆಲವು ಕೆಲಸಗಳನ್ನು ನಿರ್ವಹಿಸಬಹುದಾಗಿದೆ. ನಾನು ಹೆಮ್ಮೆ ಮತ್ತು ಸಂತೋಷದಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಅವರೊಂದಿಗೆ ಕೆಲಸ ನಿರ್ವಹಿಸಿದ ನಿಕಟವರ್ತಿಗಳ ಪ್ರಕಾರ ಅಣ್ಣಾಮಲೈ ಅವರು ರಾಜಕೀಯ ಸೇರಲು ಬಯಸಿದ್ದಾರೆ.
ಜನತೆಯ ಸಮಸ್ಯೆಗಳನ್ನು ಬೇರುಮಟ್ಟದಲ್ಲಿ ಅರಿತುಕೊಳ್ಳಲು ಪೊಲೀಸ್ ಸೇವೆಗೆ ಸೇರ್ಪಡೆಗೊಂಡಿದ್ದಾಗಿ ಅಣ್ಣಾಮಲೈ ಅವರು ಹೇಳಿದ್ದರು.
ನಾನು ನನ್ನ ಪೊಲೀಸ್ ಸೇವೆಯಲ್ಲಿನ ಅನುಭವಗಳನ್ನಾಧರಿಸಿ ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಬಯಸುತ್ತೇನೆ ಎಂದು ಅಣ್ಣಾಮಲೈ ಅವರು ತಮ್ಮ ಆಪ್ತ ಸಹಾಯಕರಿಗೆ ಹೇಳಿರುವರೆನ್ನಲಾಗಿದೆ.
”ನಾಗರಿಕ ಸೇವೆಗಳಿಗೆ ಸೇರುವುದಕ್ಕೂ ಬಹಳ ಮುಂಚೆಯೇ ಬಹುವಿಧ ಕಾರ್ಯಗಳನ್ನು ನೆರವೇರಿಸುವ ಬಗ್ಗೆ ಕನಸು ಕಂಡಿದ್ದೆ. ಈಗ ನಾನು ಪೊಲೀಸ್ ಆಗಿ ಸೇವೆ ಸಲ್ಲಿಸಿದ್ದೇನೆ. ನಮಗೆ ಮುಂದೆ ಒಂದು ಜೀವನವಿದೆ ಮತ್ತು ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿದೆ. ರಾಜಕೀಯ ಸೇರುವ ಬಗ್ಗೆ ನಾನಿನ್ನೂ ನಿರ್ಧಾರ ತಳೆದಿಲ್ಲ. ಕೆಲವು ಸಮಯ ನನಗೆ ಬಿಡುವು ಬೇಕಾಗಿದೆ. ಜೀವನದಲ್ಲಿ ಕಳೆದುಕೊಂಡಿರುವ ಅನೇಕ ಸಂತಸದ ಕ್ಷಣಗಳನ್ನು ಆನಂದಿಸಲು ಬಯಸಿದ್ದೇನೆ. ಕೃಷಿಕನಾಗಿ ಜೀವನ ಮುನ್ನಡೆಸಲೂ ಇಚ್ಛಿಸಿದ್ದೇನೆ. ನನ್ನ ಮಗ ಬೆಳೆಯುತ್ತಿದ್ದಾನೆ. ಪೊಲೀಸ್ ಸೇವೆಯ ಕಾರ್ಯಬಾಹುಳ್ಯದಿಂದ ಅವನಿಗೆ ಹೆಚ್ಚಿನ ಸಮಯ ಮೀಸಲಿರಿಸಲು ಸಾಧ್ಯವಾಗಿಲ್ಲ. ನನ್ನ ಪ್ರೀತಿಪಾತ್ರರ ಅನೇಕ ಕಾರ್ಯಕ್ರಮಗಳು, ಸಮಾರಂಭಗಳನ್ನು ತಪ್ಪಿಸಿಕೊಂಡಿದ್ದೇನೆ. ನನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವುದು ನನ್ನ ಇಂಗಿತವಾಗಿದೆ” ಎಂದು ಅಣ್ಣಾಮಲೈ ಅರುಹಿದರು.
ಇದುವರೆವಿಗೂ ಯಾವುದೇ ರಾಜಕೀಯ ಪಕ್ಷ ಅಥವಾ ಮುಖಂಡರ ಜೊತೆಗೆ ಮಾತುಕತೆ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ನಾನು ಲೋಕಸಭಾ ಚುನಾವಣೆಗಳಿಗೂ ಮೊದಲೇ ಹುದ್ದೆ ತೊರೆಯಲು ನಿರ್ಧರಿಸಿದ್ದೆ. ಆದರೆ ನನ್ನಿಂದ ಯಾವುದೇ ಅನನುಕೂಲ ಆಗಬಾರದು ಎಂಬ ಕಾರಣಕ್ಕೆ ಚುನಾವಣೆ ಮುಗಿದ ಬಳಿಕ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಅವರು ಪ್ರತಿಪಾದಿಸಿದರು.
ತಮ್ಮ ಮಿತ್ರರಿಗೆ ಬರೆದ ಪತ್ರದಲ್ಲಿ “ಕಳೆದ ವರ್ಷ ಮಾನಸ ಸರೋವರದಲ್ಲಿ ನಾನು ಕೈಗೊಂಡ ಯಾತ್ರೆ ಜೀವನದಲ್ಲಿ ನನ್ನ ಆದ್ಯತೆಗಳನ್ನು ಉತ್ತಮವಾಗಿ ಯೋಜಿಸಲು ನೆರವು ನೀಡಿದೆ. 2018ರಲ್ಲಿ ದೀರ್ಘಕಾಲಿಕ ಅಸ್ವಸ್ಥತೆಯಿಂದ ಅಸುನೀಗಿದ 1999ರ ತಂಡದ ಖಡಕ್ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಮರಣ ನನ್ನ ಸ್ವಂತ ಜೀವನವನ್ನು ಮರುಪರಿಶೀಲಿಸಲು ಪ್ರೇರೇಪಿಸಿದೆ. ಎಲ್ಲ ಒಳ್ಳೆಯ ಕೆಲಸಗಳಿಗೂ ಅಂತ್ಯ ಎಂಬುದಿದೆ ಮತ್ತು ಇದು ನನ್ನ ಖಾಕಿ ಸೇವೆಯ ಸರದಿಯಾಗಿದೆ. ನನ್ನ ರಾಜೀನಾಮೆಯಿಂದ ಯಾರಿಗಾದರೂ ನೋವಾಗಿದ್ದರೆ ಅವರು ನನ್ನನ್ನು ಕ್ಷಮಿಸಲಿ. ಇದು ನನಗೆ ಮತ್ತು ನನ್ನ ಆಪ್ತರಿಗೆ ಭಾವುಕ ಕ್ಷಣವಾಗಿದೆ” ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಅಣ್ಣಾಮಲೈ ಅವರು ಬೆಂಗಳೂರು ದಕ್ಷಿಣ ಪೊಲೀಸ್ ಉಪ ಆಯುಕ್ತರಾಗಿ 2018ರ ಅಕ್ಟೋಬರ್‍ನಲ್ಲಿ ಅಧಿಕಾರ ವಹಿಸಿಕೊಂಡರು. ತಮಿಳುನಾಡಿನ ಮೂಲದ ಶ್ರೀಯುತರು ಕೊಯಮತ್ತೂರಿನ ಪಿಎಸ್‍ಜಿ ಕಾಲೇಜ್ ಆಫ್ ಟೆಕ್ನಾಲಜಿ ಮತ್ತು ಲಖನೌದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಪದವೀಧರರು. 2011ರ ತಂಡದ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ತಮಿಳುನಾಡಿನ ಕರೂರಿನವರು. 2013ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಗಿ ನೇಮಕಗೊಂಡ ಶ್ರೀಯುತರು 2015ರ ಜನವರಿ 1 ರಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಭಡ್ತಿ ಪಡೆದರು.
ಅಧಿಕಾರ ವಹಿಸಿಕೊಂಡ ಬಳಿಕ ಅವರು ಕರಾವಳಿ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಮತ್ತು ಜಿಲ್ಲೆಯಲ್ಲಿ ವ್ಯಾಪಕ ತೊಂದರೆ ಸೃಷ್ಟಿಸಿದ್ದ ಪುಂಡ ಬೈಕ್ ಸವಾರರನ್ನು ನಿಯಂತ್ರಿಸುವ ಮೂಲಕ ಉಡುಪಿ ಜಿಲ್ಲೆಯಾದ್ಯಂತ ‘ಸಿಂಗಂ’ ಎಂದು ಜನಪ್ರಿಯರಾಗಿದ್ದರು.
ಅಣ್ಣಾಮಲೈ ಅವರು ಕಾಲೇಜು ವಿದ್ಯಾರ್ಥಿಗಳು ಅದರಲ್ಲೂ ಮಣಿಪಾಲದಂಥ ವಿದ್ಯಾರ್ಥಿ ಪಟ್ಟಣದಲ್ಲಿ ರಾತ್ರಿ ಚಟುವಟಿಕೆಗಳನ್ನು ನಿರ್ಬಂಧಿಸಿ ಕಠಿಣ ನಿಯಮಗಳನ್ನು ಜಾರಿಗೆ ತಂದರು. ರೆಸ್ಟೋರೆಂಟ್ ಮತ್ತು ಬಾರ್‍ಗಳನ್ನು ರಾತ್ರಿ 11-30ಕ್ಕೆ ಬಲವಂತವಾಗಿ ಮುಚ್ಚಿಸಲಾಯಿತು. ಪಟ್ಟಣದ ವಿದ್ಯಾರ್ಥಿಗಳನ್ನು ಮಧ್ಯರಾತ್ರಿಯ ಬಳಿಕ ಪೊಲೀಸರು ಹಿಡಿದರೆ ಅವರು ತಮ್ಮ ಗುರುತು ಮತ್ತು ವಿವರಗಳನ್ನು ನೀಡುವಂತೆ ಸೂಚಿಸಲಾಯಿತು.
ಜುಲೈ 2016ರಲ್ಲಿ ಅವರು ಉಡುಪಿಯಿಂದ ವರ್ಗಾವಣೆಗೊಂಡು ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಂಡರು. ಅಲ್ಲಿಯೂ ಸೂಕ್ಷ್ಮ ಬಾಬಾ ಬುಡನ್‍ಗಿರಿ ಸಮಸ್ಯೆಯನ್ನು ನಿರ್ವಹಿಸಿದ ರೀತಿಗೆ ಪ್ರಶಂಸೆ ಗಳಿಸಿಕೊಂಡರು. 2017ರ ಡಿಸೆಂಬರ್‍ನಲ್ಲಿ ಜಿಲ್ಲೆಯ ಪ್ರಸಿದ್ಧ ಬಾಬಾ ಬುಡನ್‍ಗಿರಿ ದೇವಾಲಯದಲ್ಲಿ ಹಿಂಸಾಚಾರದ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸದಸ್ಯರ ನಡುವೆ ಶಾಂತಿ ಪಾಲನಾ ಸಭೆಯನ್ನು ಏರ್ಪಡಿಸಿದರು. ಈ ದೇವಾಲಯವು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಪವಿತ್ರ ಯಾತ್ರ್ರಾ ಸ್ಥಳವಾಗಿದೆ. ಪೊಲೀಸ್ ಇಲಾಖೆಯು ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರಿಂದ ಶಾಂತಿಯ ಪ್ರವರ್ಧನೆಯ ವ್ಯಂಗ್ಯಚಿತ್ರಗಳನ್ನು ಬರೆಸಿ ಚಿಕ್ಕಮಗಳೂರಿನ ಅನುಕೂಲ ಕಂಡ ಸ್ಥಳಗಳಲ್ಲೆಲ್ಲ ಆ ಚಿತ್ರಗಳನ್ನು ಪ್ರದರ್ಶಿಸಿ ಶಾಂತಿ ಸ್ಥಾಪನೆಗೆ ಶ್ರಮವಹಿಸಿತು.
ಜಿಲ್ಲೆಯಲ್ಲಿ ಎಸ್‍ಪಿಯಾಗಿ ಅವರ ಅಧಿಕಾರದ ಅವಧಿಯಲ್ಲಿ ಅಣ್ಣಾಮಲೈ ಮತ್ತು ಅವರ ಪೊಲೀಸ್ ಅಧಿಕಾರಿಗಳ ತಂಡವು ಹಲವಾರು ಮೋಜಿನ ಅಡ್ಡಗಳ ಮೇಲೆ ದಾಳಿ ನಡೆಸಿತು.
2018ರಲ್ಲಿ ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಕೂಡಲೇ ಅಣ್ಣಾಮಲೈ ಅವರಿಗೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಆದೇಶ ನೀಡಲಾಯಿತು.
ಆ ಸಮಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ರಾಮನಗರದ ರೆಸಾರ್ಟ್‍ವೊಂದರಲ್ಲಿ ಇರಿಸಲಾಗಿತ್ತು. ಆದರೆ ಎರಡು ದಿನಗಳ ಒಳಗಾಗಿಯೇ ಯಡಿಯೂರಪ್ಪನವರು ಸಿಎಂ ಹುದ್ದೆಯಿಂದ ನಿರ್ಗಮಿಸಿದ ಕಾರಣ ಈ ಆದೇಶ ಕಾರ್ಯರೂಪಕ್ಕೆ ಬರಲಿಲ್ಲ. ಬಳಿಕ ಅಣ್ಣಾಮಲೈ ಅವರು ಅದೇ ವರ್ಷದ ಅಕ್ಟೋಬರ್‍ನಲ್ಲಿ ಬೆಂಗಳೂರು (ದಕ್ಷಿಣ) ಪೊಲೀಸ್ ಉಪಆಯುಕ್ತರಾದರು.
ಅಚಿದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಿರಿಯ ರಾಜಕೀಯ ನೇತಾರರು ತಮಗೆ ಕರ್ತವ್ಯ ನಿರ್ವಹಿಸಲು ಸ್ವಾತಂತ್ರ್ಯ ನೀಡಿದ್ದಾರೆ ಎಂದು ಅಣ್ಣಾಮಲೈ ಅವರು ಕೃತಜ್ಞತೆ ಸಲ್ಲಿಸಿದರು.
ನೇರ, ಪ್ರಾಮಾಣಿಕ ಮತ್ತು ಧೈರ್ಯವಂತ ಅಧಿಕಾರಿ ಎಂದು ಅಣ್ಣಾಮಲೈ ಅವರು ಕರ್ತವ್ಯ ನಿರ್ವಹಿಸಿದೆಡೆಯಲ್ಲೆಲ್ಲ ಅತ್ಯಂತ ಜನಪ್ರಿಯರಾಗಿದ್ದರು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇವರ ವರ್ಗಾವಣೆಯಾದಾಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಳನ್ನು ಕೂಡ ನಡೆಸಿದ್ದರು.
ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾಗಿರುವ ಶ್ರೀ ಅಣ್ಣಾಮಲೈ ಐಪಿಎಸ್ ಅವರ ಸೇವೆಯ (ಯಾವುದೇ ರೂಪದಲ್ಲಿ) ಪ್ರಯೋಜನ ನಾಡಿಗೆ ಹೆಚ್ಚಿನದಾಗಿ ಲಭಿಸಿ ಅದರಿಂದ ಜನಜೀವನ ಹಸನಾಗಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.