ವನಿತಾ ಸಹಾಯವಾಣಿಯು ಬೆಂಗಳೂರು ನಗರ ಪೊಲೀಸ್ ಮಹಿಳೆಯರ ನೆರವಿಗಾಗಿ, ರಕ್ಷಣೆಗಾಗಿ ಆರಂಭಿಸಿರುವ ಪ್ರಪ್ರಥಮ ಸಮುದಾಯ ಸಹಭಾಗಿತ್ವ ಧ್ಯೇಯೋದ್ದೇಶವಾಗಿದೆ.
1999ರಲ್ಲಿ ಬೆಂಗಳೂರು ನಗರ ಪೊಲೀಸರು ಸ್ಥಾಪಿಸಿರುವ ವನಿತಾ ಸಹಾಯವಾಣಿಯು ಸಂಕಷ್ಟದಲ್ಲಿರುವ ಮಹಿಳೆಯರಿಗೆ ತಕ್‍ಕ್ಷಣದ ರಕ್ಷಣೆ ಮತ್ತು ಬೆಂಬಲ ನೀಡುತ್ತದೆ. ‘ನಮ್ಮ 100’ ನಂಬರ್ ದೂರವಾಣಿಗೆ ಟೋಲ್ ಫ್ರೀ ಕರೆ ಮಾಡಿದರೆ ಸಾಕು ‘ವನಿತಾ ಸಹಾಯವಾಣಿ’ ಯ ನೆರವು ಲಭಿಸುತ್ತದೆ.
ವನಿತಾ ಸಹಾಯವಾಣಿಯು ಕೌಟುಂಬಿಕ ಹಿಂಸೆ, ಕಿರುಕುಳ, ದುರ್ಬಳಕೆ ಇತ್ಯಾದಿ ತೊಂದರೆಗಳಿಗೊಳಗಾದ ಮಹಿಳೆಯರಿಗೆ ಉಚಿತ ಟೆಲಿ-ಕೌನ್ಸೆಲಿಂಗ್, ಪೊಲೀಸ್ ನೆರವು, ಬಿಕ್ಕಟ್ಟಿನಲ್ಲಿ ಮಧ್ಯಸ್ಥಿಕೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ.
ವನಿತಾ ಸಹಾಯವಾಣಿಯು ಪೊಲೀಸ್ ಆಯುಕ್ತರ ಕಚೇರಿಯಿಂದ 24×7 ಕಾರ್ಯ ನಿರ್ವಹಿಸುತ್ತದೆ. ಇದು ಕಾಲೇಜುಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು ಮತ್ತು ಸಮುದಾಯಗಳಲ್ಲಿ ಮಹಿಳಾ ಸುರಕ್ಷತೆ ಮತ್ತು ಇತರ ಮಹಿಳಾ ಸಂಬಂಧಿತ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆiÉೂೀಜಿಸುತ್ತದೆ.
ಸಾಧಾರಣವಾಗಿ ಮಹಿಳೆಯರು ಅಥವಾ ಯುವತಿಯರು ಬೀದಿಕಾಮಣ್ಣರಿಂದ ಚುಡಾಯಿಸುವಿಕೆ, ಸಾಮಾಜಿಕ ಮಾಧ್ಯಮ/ಸೈಬರ್ ಅಪರಾಧ, ವಿವಾಹಪೂರ್ವ ಸಮಸ್ಯೆಗಳು, ವರದಕ್ಷಿಣೆ ಕಿರುಕುಳ, ಮಾನಸಿಕ/ಭಾವನಾತ್ಮಕ ಸಮಸ್ಯೆಗಳು, ಆತ್ಮಹತ್ಯೆಯ ಪ್ರವೃತ್ತಿ (ಮನೋಭಾವನೆ) ಇತ್ಯಾದಿ ತೊಂದರೆಗಳಿದ್ದಲ್ಲಿ ‘ವನಿತಾ ಸಹಾಯವಾಣಿ’ಯನ್ನು ಸಂಪರ್ಕಿಸಬಹುದಾಗಿದೆ.
ಸಾಮಾನ್ಯವಾಗಿ ಮಹಿಳೆಯರು ಕುಡುಕ ಪತಿಯಿಂದ ಕಿರುಕುಳ, ಅತ್ತೆ-ಮಾವ-ಮೈದುನ-ನಾದಿನಿಯರಿಂದ ಹಿಂಸೆ, ಮಾನಸಿಕ ಮತ್ತು ದೈಹಿಕ ಹಿಂಸೆಯೊಂದಿಗೆ ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧ, ಪರಿತ್ಯಜಿಸುವಿಕೆ ಮತ್ತು ಪ್ರತ್ಯೇಕತೆ, ಪ್ರೇಮ ವಿವಾಹ, ವಂಚನೆ ಇತ್ಯಾದಿ ವಿವಾಹ ಪೂರ್ವ ಸಮಸ್ಯೆಗಳು ಮತ್ತು ಇತರರಿಂದ ವಂಚನೆಗೊಳಗಾಗುವುದು ಮುಂತಾದ ಸಮಸ್ಯೆಗಳನ್ನೆದುರಿಸುತ್ತಾರೆ.
ಟೋಲ್ ಫ್ರೀ ಸಂಖ್ಯೆ 1091ಕ್ಕೆ ಓರ್ವ ಮಹಿಳೆ ದೂರವಾಣಿ ಕರೆ ಮಾಡಿದರೆ ಅಥವಾ ಖುದ್ದಾಗಿ ಸಂಪರ್ಕಿಸಿದರೆ ‘ವನಿತಾ ಸಹಾಯವಾಣಿ’ಯು ಬಿಕ್ಕಟ್ಟಿನ ಪ್ರಕರಣದಲ್ಲಿ ಮಧ್ಯಸ್ಥಿಕೆ ಕಾರ್ಯ ಕೈಗೊಳ್ಳುತ್ತದೆ.
ವನಿತಾ ಸಹಾಯವಾಣಿಯ ಸಿಬ್ಬಂದಿ ವಿವಿಧ ಸ್ವಯಂಸೇವಾ ಸಂಸ್ಥೆ (ಓಉಔ) ಗಳ ಸ್ವಯಂಸೇವಕರು ಮತ್ತು ಸ್ಥಳೀಯ ಪೊಲೀಸರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಯಾವುದೇ ಸಂಕಷ್ಟದಲ್ಲಿರುವ ಮಹಿಳೆಯರನ್ನು ರಕ್ಷಿಸಲು ಬೆಂಗಳೂರು ನಗರ ಪೊಲೀಸ್ ಇಲಾಖೆಯು ಒಂದು ವಾಹನ ಒದಗಿಸಿದೆ. ಭಾವನಾತ್ಮಕವಾಗಿ ಸದೃಢರಾಗಿರುವ ಸಮರ್ಥ ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಇದರಲ್ಲಿದ್ದಾರೆ.
ಮಹಿಳೆಯರ ಪರವಾಗಿ ಕಾರ್ಯನಿರ್ವಹಿಸುವ ಸ್ವಯಂಸೇವಾ ಸಂಸ್ಥೆಗಳು ಸಹ ಈ ಕಾರ್ಯಜಾಲದಲ್ಲಿವೆ. ಮಹಿಳೆಯನ್ನು ಸಂರಕ್ಷಿಸಿದಾಗ ಆಕೆಗೆ ಆಶ್ರಯ ಅಗತ್ಯವಿದ್ದರೆ ಅಥವಾ ಪುನರ್ವಸತಿ ಅಥವಾ ತಾತ್ಕಾಲಿಕ ಸೂರಿನ ಆವಶ್ಯಕತೆ ಇದ್ದರೆ ಎನ್‍ಜಿಓದ ನೆರವು ಮತ್ತು ಮಧ್ಯಸ್ಥಿಕೆಯ ಪ್ರಶ್ನೆ ಉದ್ಭವಿಸುತ್ತದೆ. ತರಬೇತಾದ ಸ್ವಯಂಸೇವಕರು ವನಿತಾ ಸಹಾಯವಾಣಿಯಲ್ಲಿದ್ದಾರೆ.
ವನಿತಾ ಸಹಾಯವಾಣಿಯು ಮನೆಯಲ್ಲಿ, ಉದ್ಯೋಗ ಸ್ಥಳದಲ್ಲಿ ಮತ್ತು ಸಾರ್ವಜನಿಕವಾಗಿ ಎದುರಿಸುವ ಸಾಮಾಜಿಕ, ಭಾವನಾತ್ಮಕ, ಆರ್ಥಿಕ, ಮಾನಸಿಕ ಮತ್ತು ದೈಹಿಕ ಹಿಂಸೆಗಳಂತಹ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತದೆ.
ವನಿತಾ ಸಹಾಯವಾಣಿಯು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಕಾರ್ಯಾಚರಣೆ ನಡೆಸುತ್ತದೆ. 18 ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಸಂಕಷ್ಟದಲ್ಲಿರುವ ಸ್ತ್ರೀಯರಿಗೆ ಪೊಲೀಸ್ ಮಧ್ಯಸ್ಥಿಕೆ ಮತ್ತು ರಕ್ಷಣೆಯನ್ನು ಇದು ಒದಗಿಸುತ್ತದೆ.
ವನಿತಾ ಸಹಾಯವಾಣಿಯು ಒಂದು ಸಮರ್ಪಿತ ವಾಹನ ಹೊಂದಿದ್ದು, ಇದು ದಿನದ 24 ಗಂಟೆಗಳೂ ಸೇವೆಗೆ ಲಭ್ಯವಿರುತ್ತದೆ. ರಕ್ಷಣೆ ಕೋರಿ ಒಂದೇ ಒಂದು ಕರೆ ಬಂದೊಡನೆ ಪೊಲೀಸ್ ವಾಹನವು ಮಹಿಳಾ ಆಪ್ತಸಮಾಲೋಚಕರು, ಮಹಿಳಾ ಕಾನ್‍ಸ್ಟೇಬಲ್ ಮತ್ತು ಇತರ ಮಹಿಳಾ ಪೊಲೀಸ್ ಸಿಬ್ಬಂದಿ ಸಹಿತ ರಕ್ಷಣಾ ಸ್ಥಳಕ್ಕೆ ಧಾವಿಸುತ್ತದೆ.
ಮಹಿಳಾ ಕಕ್ಷಿದಾರರಿಗೆ ಉಚಿತ ವೈದ್ಯಕೀಯ ತಪಾಸಣೆ ಸೌಲಭ್ಯ ಒದಗಿಸಲಾಗುವುದು. ವನಿತಾ ಸಹಾಯವಾಣಿಯು ರಕ್ಷಿಸಲ್ಪಟ್ಟ ನಂತರ ಆಶ್ರಯವಿಲ್ಲದ ಮಹಿಳೆಯರಿಗೆ ಅಲ್ಪಾವಧಿ ವಾಸ್ತವ್ಯಕ್ಕೆ ಅವಕಾಶ ಒದಗಿಸುತ್ತದೆ.
ಸರ್ಕಾರ ನೇಮಿಸಿದ ವಕೀಲರೊಬ್ಬರು ವಾರಕ್ಕೆ ಒಂದು ದಿನ (ಪ್ರತಿ ಬುಧವಾರ) ವನಿತಾ ಸಹಾಯವಾಣಿಯ ಆವರಣದಲ್ಲಿ ಲಭ್ಯರಿದ್ದು ಉಚಿತ ಕಾನೂನು ನೆರವು ಮತ್ತು ಸಲಹೆಗಳನ್ನು ನೀಡುತ್ತಾರೆ.
ತಮ್ಮ ಜೀವನವನ್ನು ಪುನರ್ ರೂಪಿಸಿಕೊಳ್ಳುವ ಅಗತ್ಯವಿರುವ ಮಹಿಳೆಯರಿಗೆ ವನಿತಾ ಸಹಾಯವಾಣಿಯು ವೃತ್ತಿಪರ ತರಬೇತಿಯನ್ನು ನೀಡುವ ಮೂಲಕ ಅವರಿಗೆ ಪುನರ್ವಸತಿ ಕಲ್ಪಿಸುತ್ತದೆ.
ವನಿತಾ ಸಹಾಯವಾಣಿಯು ವಿವಿಧ ಸ್ತರಗಳ ಮತ್ತು ವರ್ಗಗಳ ಜನರಿಗೆ ಮಹಿಳೆಯರ ಹಕ್ಕುಗಳು, ಸುರಕ್ಷತೆ, ದೌರ್ಜನ್ಯ ಮತ್ತು ಸಂರಕ್ಷಣೆ ಕುರಿತು ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ.
– ಶ್ರೀನಿವಾಸ ಗುಡಿ