ಕರ್ನಾಟಕ ಕರಾವಳಿ ಭದ್ರತಾ ಪಡೆ

0
1732

ಇದು ಒಂದು ಸಶ್ರಸ್ತ್ರ ಪಡೆಯಾಗಿದ್ದು ಭಾರತದ ಸಾಗರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ವ­ುತ್ತು ಕರ್ನಾಟಕದ ಕಾರ್ಯವ್ಯಾಪ್ತಿಯಲ್ಲಿ ಸಾಗರ ಕಾನೂನುಗಳನ್ನು ಜಾರಿಗೊಳಿಸುತ್ತದೆ.

ಕರ್ನಾಟಕ ಕರಾವಳಿ ಭದ್ರತಾ ಪೊಲೀಸ್ ಪಡೆಯನ್ನು 1999ರಲ್ಲಿ ಸ್ಥಾಪಿಸಲಾಯಿತು. ಆಗ ಇದು ಓರ್ವ ಪೊಲೀಸ್ ಮಹಾನಿರೀಕ್ಷಕರ ನೇತೃತ್ವದಲ್ಲಿ ಓರ್ವ ಪೊಲೀಸ್ ವರಿಷ್ಠಾಧಿಕಾರಿ (SP) ಮತ್ತು ಇತರ ಸಿಬ್ಬಂದಿಯನ್ನು ಹೊಂದಿತ್ತು.

ಕರಾವಳಿ ಭದ್ರತಾ ಪಡೆಯು ದಕ್ಷಿಣ ಕನ್ನಡದ ತಲಪಾಡಿಯಿಂದ  ಉತ್ತರ  ಕನ್ನಡದ ಸದಾಶಿವಗಢದವರೆಗೆ 320 ಕಿ.ಮೀ.ಗಳ (17 ದ್ವೀಪಗಳು) ಕರ್ನಾಟಕದ ಸಾಗರ ತೀರಗಳ ವ್ಯಾಪ್ತಿಯನ್ನು ಹೊಂದಿದೆ. ಇದು ಭಾರತೀಯ ನೌಕಾದಳ, ಮೀನುಗಾರಿಕಾ ಇಲಾಖೆ, ಕಂದಾಯ ಇಲಾಖೆ (ಕಸ್ಟಮ್ಸ್) ಮತ್ತು ಕೇಂದ್ರ ಹಾಗೂ ರಾಜ್ಯ ಪೊಲೀಸ್ ಪಡೆಗಳ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇದು ಮೀನುಗಾರರು ಮತ್ತು ಜಲಚರಗಳ ರಕ್ಷಣೆಗಾಗಿ ಸ್ಥಾಪನೆಗೊಂಡಿತು. ಸಾಗರ ಜಲಚರ ಪರಿಸರದ ಮತ್ತು ವಾತಾವರಣದ ರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ಇದರ ಉದ್ದೇಶ. ಕಸ್ಟಮ್ಸ್ ಇಲಾಖೆ ಮತ್ತು ಇತರ ಪ್ರಾಧಿಕಾರಗಳಿಗೆ ಕಳ್ಳಸಾಗಣೆ ನಿಗ್ರಹ ಕಾರ್ಯಾಚರಣೆಗಳಲ್ಲಿ ನೆರವು ನೀಡುವುದು ಇದರ ಗುರಿ. ಇದು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಜಲಗಡಿಯಲ್ಲಿ ಸಾಗರ ಕಾನೂನುಗಳನ್ನು ಅನುಷ್ಠಾನಗೊಳಿಸುತ್ತದೆ.

ಕರ್ನಾಟಕದಲ್ಲಿ ಮೊದಲನೆಯ ಕರಾವಳಿ ಸುರಕ್ಷತಾ ಪೊಲೀಸ್ ಠಾಣೆ ಮಲ್ಪೆಯಲ್ಲಿ ಸ್ಥಾಪನೆಗೊಂಡಿತು. ಇದು ಕರಾವಳಿ ಕರ್ನಾಟಕದಲ್ಲಿ ಪ್ರಾರಂಭಗೊಂಡ ಇಂಥ ಪ್ರಪ್ರಥಮ ಪೊಲೀಸ್ ಠಾಣೆಯಾಗಿದೆ. ತರುವಾಯ ಮಂಗಳೂರು, ಕಾರವಾರ, ಭಟ್ಕಳ ಮತ್ತು ಕುಮಟಾಗಳಲ್ಲೂ ಈ ರೀತಿಯ ಠಾಣೆಗಳು ಸ್ಥಾಪನೆಗೊಂಡವು. ಈ ಪೊಲೀಸ್ ಠಾಣೆಗಳು ಕರಾವಳಿಯಲ್ಲಿ ಭಯೋತ್ಪಾದಕರ ಆಕ್ರಮಣಗಳು ಮತ್ತು ಒಳನುಸುಳುವಿಕೆಯನ್ನು ತಡೆಗಟ್ಟುವ ಮತ್ತು ಕರಾವಳಿ ಕಾವಲು ಪಡೆಗೆ ನೆರವು ನೀಡುವ ಗುರಿ ಹೊಂದಿವೆ.

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ಪಶ್ಚಿಮ ಕರಾವಳಿಯುದ್ದಕ್ಕೂ ಕಟ್ಟೆಚ್ಚರ ವಿಧಿಸಲಾಯಿತು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಯಿತು. ಗುಪ್ತ ಭಯೋತ್ಪಾದಕ ಗುಂಪುಗಳು ದೇಶದಾದ್ಯಂತ ಇಂತಹುದೇ ಉಗ್ರಗಾಮಿ ದಾಳಿಗಳನ್ನು ನಡೆಸಬಹುದು ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಯಿತು. ಕರ್ನಾಟಕ ರಾಜ್ಯ ಕರಾವಳಿ ಭದ್ರತಾ ಪೊಲೀಸ್ ಪಡೆಯು ಕಡಲು ಕಿನಾರೆಯಾದ್ಯಂತ ತೀವ್ರ ಕಣ್ಗಾವಲು ಏರ್ಪಡಿಸಿತು.

ಕರ್ನಾಟಕ ರಾಜ್ಯ ಕರಾವಳಿ ಭದ್ರತಾ ಪೊಲೀಸ್ ಡಿಜಿಪಿ ಶ್ರೀ ಎ.ಎಂ. ಪ್ರಸಾದ್‍ರವರು ಮತ್ತು ಎಡಿಜಿಪಿ ಪ್ರತಾಪರೆಡ್ಡಿ ರವರು ಉಡುಪಿ ಜಿಲ್ಲೆಗೆ ಭೇಟಿನೀಡಿ, ಪರಿಶೀಲನೆ ನಡೆಸಿ, ಗಸ್ತು ಕಾರ್ಯವನ್ನು ತೀವ್ರಗೊಳಿಸಲು ಹಾಗೂ ಸಂಭವನೀಯ  ಸನ್ನಿವೇಶಗಳನ್ನೆದುರಿಸಲು  ಸನ್ನದ್ಧ ಸ್ಥಿತಿಯಲ್ಲಿರುವಂತೆ ಆದೇಶಿಸಿದರು.

ಕರ್ನಾಟಕ ರಾಜ್ಯ ಕರಾವಳಿ ಭದ್ರತಾ ಪೊಲೀಸ್ ಪಡೆಯು ಐದು ಪೊಲೀಸ್ ಠಾಣೆಗಳನ್ನೊಳಗೊಂಡಿದೆ. ಉಡುಪಿಯಲ್ಲಿ ಇದರ ಕೇಂದ್ರ ಕಚೇರಿಯಿದೆ. ಈ ಠಾಣೆ ಧಕ್ಕೆಯೊಂದಕ್ಕೆ ಹೊಂದಿಕೊಂಡಂತಿದೆ. ಈ ಧಕ್ಕೆಯು ದೋಣಿಗಳಿಗೆ ನಿಲುಗಡೆಯ ಸೌಲಭ್ಯ ಒದಗಿಸುತ್ತದೆ. ಈ ಪಡೆಯು ಅನೇಕ ಇಂಟರ್‍ಸೆಪ್ಟರ್ ಬೋಟ್‍ಗಳನ್ನು ಹೊಂದಿದೆ. ಕರಾವಳಿ ಪ್ರದೇಶಗಳಲ್ಲಿ 30 ಹೊರಠಾಣೆಗಳನ್ನು ಮತ್ತು 12 ಚೆಕ್‍ಪೋಸ್ಟ್‍ಗಳನ್ನು  ಹೊಂದಿದೆ.  ಇದರಲ್ಲಿರುವ ಸಿಬ್ಬಂದಿಗಳೆಲ್ಲ ನೌಕಾದಳ ಮತ್ತು ಕರಾವಳಿ ಕಾವಲುಪಡೆಯ ನಿವೃತ್ತ  ಅಧಿಕಾರಿಗಳು.  ಈ  ಪಡೆಯಲ್ಲಿ  ನೂರಾರು ಕಮಾಂಡೋಗಳಿದ್ದಾರೆ. ಇವರೆಲ್ಲರೂ ಭಯೋತ್ಪಾದನಾ ನಿಗ್ರಹ ಘಟಕದ ಆಂತರಿಕ ಭದ್ರತಾ ಕೇಂದ್ರ ಕಚೇರಿಯಲ್ಲಿ ತರಬೇತಿ ಪಡೆದಿದ್ದಾರೆ, ಈ ಘಟಕವು ಸಹಸ್ರಾರು ಸಿಬ್ಬಂದಿ, ಡಿಜಿಪಿ, ಎಡಿಜಿಪಿ ಮತ್ತು ಇಬ್ಬರು ಐಜಿಗಳನ್ನು ಹೊಂದಿದೆ. ತಲಾ  ಹತ್ತಾರು  ಸಹಸ್ರ  ಸಿಬ್ಬಂದಿಯನ್ನೊಳಗೊಂಡ  ಕ್ಷಿಪ್ರ ಪ್ರತಿಕ್ರಿಯಾ ತಂಡಗಳಿಂದ ಸುಸಜ್ಜಿತವಾಗಿದೆ. ಇದನ್ನು 10 ಕೆಎಸ್‍ಆರ್‍ಪಿ ಪ್ಲಟೂನ್‍ಗಳ ಸಹಿತ ರೂಪಿಸಲಾಗಿದೆ.

ಈ ಪಡೆಯ ನಿರೀಕ್ಷಣಾ ನೌಕೆಗಳು 12 ಟನ್ ಭಾರ ಹೊರುವ ಸಾಮಥ್ರ್ಯ ಪಡೆದಿವೆ. ಇವುಗಳನ್ನು ಗೋವಾ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ ನಿರ್ಮಿಸಲಾಗಿದೆ. ಈ ಇಂಟರ್ ಸೆಪ್ಟರ್‍ಗಳು ಗುಂಡು ನಿರೋಧಕ ಕವಚಗಳು, ಜಿಪಿಎಸ್ ಮತ್ತು ಪರಿಸರಸ್ನೇಹಿ ಪರಿಕರಗಳನ್ನು ಹೊಂದಿವೆ. ಈ ಇಂಟರ್‍ಸೆಪ್ಟರ್‍ಗಳು ಗಂಟೆಗೆ 70 ಕಿ.ಮೀ. ವೇಗದಲ್ಲಿ ಚಲಿಸಬಲ್ಲವು. ರೇಡಾರ್‍ಗಳು ಮತ್ತು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್‍ನಿಂದ ಸುಸಜ್ಜಿತವಾಗಿವೆ. 12 ಟನ್‍ಗಳಷ್ಟು ತೂಕದ ಇಂಟರ್‍ಸೆಪ್ಟರ್ 12 ರಿಂದ 14 ಜನರನ್ನು ಹೊತ್ತೊಯ್ಯಲು ಸಮರ್ಥವಾಗಿದೆ. ಈ ಬೋಟ್‍ಗಳನ್ನು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು, ಅಕ್ರಮ ಚಟುವಟಿಕೆಗಳನ್ನು ಪತ್ತೆಮಾಡಲು, ನೌಕೆ-ದೋಣಿಗಳನ್ನು ಗುರುತಿಸಲು ಮತ್ತು ಕಣ್ಗಾವಲು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ.

320 ಕಿ.ಮೀ.ಗಳ ಸಾಗರ ತಟವು (ಕಾರವಾರದಿಂದ ಮಂಗಳೂರುವರೆಗೆ) 6 ಪ್ರಮುಖ ದ್ವೀಪಗಳನ್ನು ಒಳಗೊಂಡಿದೆ. ಅವು: ಸೆಂಟ್‍ಮೇರೀಸ್, ಕುಮಾರ ಗಢ, ಕಾಂತಿಗಢ, ಬಸವನ ದುರ್ಗ, ದೇವ್‍ಗಢ ಮತ್ತು ನೇತ್ರಾಣಿ, ಜೊತೆಗೆ ಎರಡು ಪ್ರಮುಖ ಬಂದರುಗಳು ಹಾಗೂ 13 ಚಿಕ್ಕ ಬಂದರುಗಳನ್ನು ಹೊಂದಿದೆ.

2018ರ ಡಿಸೆಂಬರ್ 15ರಂದು ‘ಸುವರ್ಣ ತ್ರಿಭುಜ’ ಎಂಬ ಹೆಸರಿನ ನೌಕೆ ಸಾಗರದಲ್ಲಿ ಕಣ್ಮರೆಯಾಗಿರುವುದಾಗಿ ವರದಿಯಾಯಿತು. ಇದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಇತರ 20 ಬೋಟ್‍ಳೊಂದಿಗೆ ಮೀನುಗಾರಿಕೆಗೆ ತೆರಳಿತ್ತು. ಈ ವಿಷಯದಲ್ಲಿ ಆಕ್ರೋಶಗೊಂಡ ನೂರಾರು ಮೀನುಗಾರರು ರಸ್ತೆ ತಡೆ ಸೇರಿದಂತೆ ಹಲವು ವಿಧಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದರು. ಈ ಹಿನ್ನೆಲೆಯಲ್ಲಿ ಕರಾವಳಿ ಭದ್ರತಾ ಪೊಲೀಸ್ ಪಡೆ ಕಟ್ಟೆಚ್ಚರ ವಿಧಿಸಿತು.

ಐದು ತಿಂಗಳ ಬಳಿಕ ನೌಕಾದಳವು ಕಣ್ಮರೆಯಾಗಿದ್ದ ‘ಸುವರ್ಣ ತ್ರಿಭುಜ’ ದೋಣಿಯ ಅವಶೇಷಗಳನ್ನು ಪತ್ತೆಮಾಡಿತು. ಈ ದೋಣಿಯು 2018ರ ಡಿಸೆಂಬರ್ 13ರಂದು ಮೀನುಗಾರಿಕೆಗೆ ತೆರಳಿತ್ತು. ಆದರೆ ಎರಡು ದಿನಗಳ ಬಳಿಕ ಇದು ಇತರ ಮೀನುಗಾರಿಕಾ ದೋಣಿಗಳು ಮತ್ತು ಬಂದರಿನೊಂದಿಗೆ  ಸಂಪರ್ಕ  ಕಡಿದುಕೊಂಡಿತು. ಅಲ್ಲಿಂದೀಚೆಗೆ ಭಾರತೀಯ ನೌಕಾದಳ, ಕರಾವಳಿ ಕಾವಲುಪಡೆ ಮತ್ತು ಕರಾವಳಿ ಭದ್ರತಾ ಪೊಲೀಸ್ ಪಡೆಗಳು ನಾಪತ್ತೆಯಾಗಿದ್ದ ದೋಣಿ ಮತ್ತು ಅದರಲ್ಲಿದ್ದ ಸಿಬ್ಬಂದಿಯ ಶೋಧಕಾರ್ಯಚರಣೆ ನಡೆಸಿದ್ದವು.

2019ರ ಮಾರ್ಚ್ ತಿಂಗಳಲ್ಲಿ ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಣ್ಮರೆಯಾಗಿದ್ದ ಮೀನುಗಾರರ ಕುಟುಂಬಗಳನ್ನು ಭೇಟಿಮಾಡಿ ಧೈರ್ಯ ತುಂಬಿದರು. ನಂತರ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೂ ಸುವರ್ಣ ತ್ರಿಭುಜದಲ್ಲಿದ್ದು ಕಣ್ಮರೆಯಾದ ಮೀನುಗಾರರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರಧನ ವಿತರಿಸುವುದಾಗಿ ಅವರು ಭರವಸೆ ನೀಡಿದರು. ಅಂದಿನ ಗೃಹಸಚಿವ ಎಂ.ಬಿ. ಪಾಟೀಲ್, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಸಹ ಸ್ಥಳಕ್ಕೆ ಭೇಟಿ ನೀಡಿದರು.

ನೌಕೆ ಕಣ್ಮರೆಯಾದ ಬಳಿಕ ಹಡಗುಗಳು ಮತ್ತು ಹೆಲಿಕಾಪ್ಟರ್‍ಗಳ ಮೂಲಕ ಸಾಕಷ್ಟು ಶ್ರಮವಹಿಸಿ ಶೋಧಕಾರ್ಯಾಚರಣೆ ನಡೆಸಲಾಯಿತು.

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರವು ಹೆಚ್ಚಿನದಾಗಿ ಪೊಲೀಸ್  ಪಡೆಗಳನ್ನು  ಸುಸಜ್ಜಿತಗೊಳಿಸಲಿ, ಮೀನುಗಾರರಿಗೆ ಈ ರೀತಿಯ ಅವಘಡಗಳು ಸಂಭವಿಸದೇ ಇರಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.