ಜನಸ್ನೇಹಿ ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಶಾಪುರ್‍ವಾಡ್ ಐಪಿಎಸ್

0
1002

ಪೊಲೀಸ್ ಇಲಾಖೆ ಎಂದರೆ ಜನರಿಗೆ ಹೆದರಿಕೆಯ ಭಾವನೆ ಇರುವುದು ಸರ್ವವಿದಿತ. ಅದರಲ್ಲೂ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿಮಾಡಲು ಶ್ರೀಸಾಮಾನ್ಯರಿರಲಿ, ಅಧಿಕಾರ ವರ್ಗದವರೇ ಹಿಂಜರಿಯುವುದುಂಟು. ಆದರೆ ಶ್ರೀ ರಾಹುಲ್ ಕುಮಾರ್ ಐಪಿಎಸ್ ಅವರು ಇದಕ್ಕಿಂತ ಭಿನ್ನ ನೆಲೆಯಲ್ಲಿ ನಿಲ್ಲಬಲ್ಲ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಜನಪರ ಐಪಿಎಸ್ ಅಧಿಕಾರಿ ಎಂಬ ಕೀರ್ತಿ ಗಳಿಸಿದ್ದಾರೆ.

ರಾಹುಲ್ ಅವರ ತಂದೆ ಮಹಾರಾಷ್ಟ್ರೀಯರು. ತಾಯಿ ಆಂಧ್ರ ಮೂಲದವರು. ಇವರ ದೊಡ್ಡಪ್ಪ ಸಬ್‍ಇನ್‍ಸ್ಪೆಕ್ಟರ್ ಆಗಿದ್ದವರು. ಇವರು ಮನೆಗೆ ಬಂದಾಗಲೆಲ್ಲ ಅವರಿಗೆ ಜನರು ನೀಡುತ್ತಿದ್ದ ಗೌರವ ಕಂಡು ತಾವೂ ಜನಪ್ರಿಯ ಪೊಲೀಸ್ ಅಧಿಕಾರಿ   ಆಗಬೇಕೆಂಬ   ಹಂಬಲ ಚಿಗುರೊಡೆಯುತ್ತಿತ್ತು.

ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ರಾಹುಲ್ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಗಳ ಪರೀಕ್ಷೆಗಳಲ್ಲಿ ಟಾಪರ್ ಆಗಿದ್ದವರು. ಹೆತ್ತವರ ಒತ್ತಾಯದ ಮೇರೆಗೆ ಎಂಜಿನಿಯರಿಂಗ್ ಪದವೀಧರರಾದರು. ಆದರೂ ಮನಸ್ಸಿನಲ್ಲಿ ಐಪಿಎಸ್ ಆಗುವ ತುಡಿತ ಮುಂದುವರೆದೇ ಇತ್ತು.

ವ್ಯಾಸಂಗ ಮುಂದುವರೆಸಿ ಮುಂಬೈನಲ್ಲಿ ಎಂಬಿಎ ಅಧ್ಯಯನ ಮಾಡುತ್ತಿದ್ದಾಗ 26/11ರ ಮುಂಬೈ ದಾಳಿ ಘಟನೆಯನ್ನು ಕಣ್ಣಾರೆ ಕಂಡರು. ಅಂದು ರಾಹುಲ್ ಊಟಮಾಡಿ ವಾಪಸಾಗುತ್ತಿದ್ದಾಗ ಒಮ್ಮೆಲೇ ಗುಂಡಿನ ಮೊರೆತ ಕೇಳಿಬಂತು. ಜನರು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದ್ದು ಕಂಡಿತು. ಉಗ್ರರು ನಡೆಸಿದ ಗುಂಡಿನ ದಾಳಿ ಮತ್ತು ಭದ್ರತಾ  ಪಡೆಗಳ ಕಾರ್ಯಾಚರಣೆಯನ್ನು ಖುದ್ದಾಗಿ ವೀಕ್ಷಿಸಿದ ರಾಹುಲ್ ಅವರ ಮನದಲ್ಲಿ ಐಪಿಎಸ್ ಅಧಿಕಾರಿ ಆಗಲೇಬೇಕು ಎಂಬ ಹಠ ಮಾಡಿ ಸದೃಢವಾಯಿತು.

ಎಂಬಿಎ ತೇರ್ಗಡೆಯಾಗಿ ಕೈತುಂಬಾ ವೇತನ ಸಿಗುವ ಉದ್ಯೋಗಕ್ಕೆ ಸೇರ್ಪಡೆಯಾದರೂ ಆ ಉದ್ಯೋಗ ತೃಪ್ತಿ ತರದ ಕಾರಣ ಅದನ್ನು ತೊರೆದು ಯುಪಿಎಸ್‍ಸಿ ಪರೀಕ್ಷೆ ಪಾಸುಮಾಡಿ  ಐಪಿಎಸ್  ಸೇವೆಗೆ  ತಮ್ಮನ್ನು ಸಮರ್ಪಿಸಿಕೊಂಡರು. 2012ರ ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡರು.

ಮಹಾರಾಷ್ಟ್ರದ ನಾಂದೇಡ್ ಮೂಲದವರಾದ ರಾಹುಲ್ ಅವರು ಮೈಸೂರಿನಲ್ಲಿ ಆರಂಭಿಕ ತರಬೇತಿ ಪಡೆದು ಬಂಟ್ವಾಳದ ಎಎಸ್‍ಪಿಯಾಗಿ ನೇಮಕಗೊಂಡರು. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ನಿಯೋಜಿತರಾದರು. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆಸಲ್ಲಿಸಿದ ಶ್ರೀಯುತರು ಪ್ರಸ್ತುತ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಕ್ರೀಡಾಂಗಣ, ಮೈದಾನಗಳಲ್ಲಿ ಶ್ರೀಸಾಮಾನ್ಯರಂತೆ ಕಸರತ್ತು-ವ್ಯಾಯಾಮ ಮಾಡುತ್ತಾರೆ. ಹಾಸನ ಎಸ್‍ಪಿಯಾಗಿದ್ದಾಗ ಜನರ ನಡುವೆ ಇರುವ ಅಧಿಕಾರಿ ಎಂದೇ ಹೆಸರು ಮಾಡಿದವರು.

ರಂಗಸ್ವಾಮಿ ಎಂಬ ಖಾಸಗಿ ಕ್ಯಾಬ್ ಚಾಲಕನ ವಾಹನದ ದಾಖಲೆಗಳು ಸರಿಯಾಗಿಲ್ಲ ಎಂದು ಯಾರೋ ದೂರು ನೀಡಿದ್ದರಂತೆ. ಇದರಿಂದ ಕಂಗಾಲಾಗಿ ಪೊಲೀಸ್ ಠಾಣೆಗಳಿಗೆ ಎಡತಾಕಿ ನಿರಾಶರಾದ ರಂಗಸ್ವಾಮಿ ಅಂತಿಮವಾಗಿ ಹಾಸನ ಎಸ್‍ಪಿ ರಾಹುಲ್ ಕುಮಾರ್ ಅವರನ್ನು ಸಂಪರ್ಕಿಸಿದರು.

ಅವರ  ದಾಖಲೆಗಳನ್ನು  ಪರಿಶೀಲಿಸಿದ  ರಾಹುಲ್ ಆ  ದಾಖಲೆಗಳು   ನಿಖರವಾಗಿರುವುದಾಗಿ ಖಚಿತಪಡಿಸಿಕೊಂಡದ್ದಲ್ಲದೆ ರಂಗಸ್ವಾಮಿಗೆ ಊಟಮಾಡಿಸಿ, ಪಾದರಕ್ಷೆ ಕೊಡಿಸಿ ಜೊತೆಗೆ 30,000 ರೂ.ಗಳನ್ನು ನೀಡಿ ಬದುಕು ರೂಪಿಸಿಕೊಳ್ಳುವಂತೆ ಬೆನ್ನುತಟ್ಟಿ ಕಳುಹಿಸಿದರು. ಇದು ಎಸ್‍ಪಿ ರಾಹುಲ್ ಅವರ ಮಾನವೀಯ ಮುಖದ ಪ್ರತಿಬಿಂಬವಾಗಿದೆ. ಆ ಕ್ಯಾಬ್ ಚಾಲಕ ರಂಗಸ್ವಾಮಿ ತನ್ನ ಕ್ಯಾಬ್ ವಾಹನದ ಮುಂಭಾಗದಲ್ಲಿ ಎಸ್.ಪಿ. ರಾಹುಲ್ ಅವರ ಹೆಸರು ಬರೆಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ದೇಶದ ಗಮನ ಸೆಳೆದ ಐಎಂಎ ಜ್ಯೂವೆಲರ್ಸ್ ಹಗರಣ ರಾಹುಲ್ ಕುಮಾರ್ ಅವರ ವಿಭಾಗದ ವ್ಯಾಪ್ತಿಗೆ ಬರುತ್ತದೆ. ರಾಹುಲ್ ಅವರು ಐಎಂಎ ಜ್ಯೂವೆಲರ್ಸ್ ಕಂಪನಿಯಿಂದ ವಂಚನೆಗೊಳಗಾದ ಹೂಡಿಕೆದಾರರು ಅವರ ಬಳಿ ಯಾವುದೇ ದಾಖಲೆಗಳಿದ್ದಲ್ಲಿ ಪೊಲೀಸರಿಗೆ ದೂರು ಸಲ್ಲಿಸುವಂತೆ ಮನವಿ ಮಾಡಿದ್ದರು. ಹೂಡಿಕಡದಾರ  ದೂರುಗಳನ್ನು ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದರು. 40,000 ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿ ಜನತೆಗೆ ತಮ್ಮಿಂದ ಏನು ಸಾಧ್ಯವೋ ಆ ನೆರವನ್ನು ನೀಡಿದ್ದರು.

ರಸ್ತೆಯಲ್ಲಿ ಕಸ, ತ್ಯಾಜ್ಯ ಪದಾರ್ಥಗಳನ್ನು ಎಸೆಯುವವರ ವಿರುದ್ಧ ಸಾರ್ವಜನಿಕರಿಗೆ ರೋಗ ಪ್ರಸರಣ ಮಾಡುವ ಆರೋಪದ ಮೇರೆಗೆ ನೂರಾರು ಪ್ರಕರಣಗಳನ್ನು ದಾಖಲು ಮಾಡಿಕೊಂಡು ಕ್ರಮ ಜರುಗಿಸಿದ್ದಾರೆ. ತನ್ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ನಗರದ ರಸ್ತೆಗಳ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ.

ಶ್ರೀ ರಾಹುಲ್ ಕುಮಾರ್ ಅವರು ಪ್ರಚಾರ ಬಯಸದೆ ಮಾನವೀಯ ಹಿನ್ನೆಲೆಯ ವೃತ್ತಿಜೀವನ ನಡೆಸುತ್ತಿದ್ದಾರೆ. ವಿನಯ, ಸರಳತೆಯೇ ಮೂರ್ತಿವೆತ್ತಂತಿದ್ದಾರೆ. ಇವರ ನಡೆ-ನುಡಿ ಸರಳ. ವೃದ್ಧಾಶ್ರಮಗಳಿಗೆ ಕೈಲಾದ ನೆರವು ನೀಡುತ್ತಾರೆ. ಅಪಘಾತಗಳಿಗೀಡಾದವರಿಗೆ ತತ್‍ಕ್ಷಣದ ತುರ್ತು ಚಿಕಿತ್ಸೆ ಕೊಡಿಸುತ್ತಾರೆ. ಎಲ್ಲರಂತೆಯೇ ನಾನೂ ಓರ್ವ ಎಂಬ ವಿನಮ್ರ ಗುಣದ ವ್ಯಕ್ತಿತ್ವದಿಂದ ಜನರ ಜೊತೆಗೆ ಬೆರೆಯುತ್ತಾರೆ.

ಬೆಳಗಾದೊಡನೆ  ಶ್ರೀ  ಸಾಮಾನ್ಯರಂತೆ  ಹೊರಾಂಗಣ ಜಾಗಿಂಗ್, ಜಿಮ್ ವ್ಯಾಯಾಮಗಳನ್ನು ಮಾಡುತ್ತಾರೆ. ಸಾರ್ವಜನಿಕರ ದೂರು-ದುಮ್ಮಾನಗಳನ್ನು ಸ್ವೀಕಾರ ಮಾಡುತ್ತಾರೆ. ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುತ್ತಾರೆ. ಕಾರ್ಯಬಾಹುಳ್ಯದ ನಡುವೆಯೂ ಜನತೆಯ ತೊಂದರೆಗಳನ್ನು ಪರಿಹರಿಸುವ ರಾಹುಲ್‍ಕುಮಾರ್ ಯಾವುದೇ ದರ್ಪವಿಲ್ಲದ, ನಿಸ್ಪøಹ, ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಜನಾನುರಾಗಿಯಾಗಿದ್ದಾರೆ.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ “ ನಾವು ಯಾವುದೇ ಜಾಗಕ್ಕೆ ಹೋದರೂ ಆ ಸ್ಥಳದ ಭಾಷೆ ಕಲಿತು ಜನರ ಬಳಿಗೆ ಹೋಗಿ ಸಾರ್ವಜನಿಕರ ಸಮಸ್ಯೆಯನ್ನು ನಮ್ಮ ಸಮಸ್ಯೆ ಎಂಬಂತೆ ಪರಿಗಣಿಸಿದರೆ ಸಾರ್ವಜನಿಕರೂ ನಮ್ಮನ್ನು ಸ್ವೀಕರಿಸುತ್ತಾರೆ” ಎಚಿದಿದ್ದರು.

ಅದೇ ಕಾರ್ಯಕ್ರಮದಲ್ಲಿ “ನಾನು ಬೆಂಗಳೂರಿಗೆ ಕಾಲಿರಿಸಿದೊಡನೆ ನಾನು ಕನ್ನಡ ನಾಡಿಗೆ ಬಂದಿದ್ದೇನೆ, ಇಲ್ಲಿನ ಭಾಷೆ ಕಲಿತು ಕನ್ನಡಿಗನಾಗಿಯೇ ವೃತ್ತಿ ಜೀವನ ನಡೆಸಬೇಕು ಎಂದು ನಿರ್ಧರಿಸಿದೆ. ನಾಲ್ಕು ತಿಂಗಳ ಪ್ರೊಬೇಷನರಿ ಅವಧಿಯಲ್ಲಿಯೇ ಶ್ರಮವಹಿಸಿ ಕನ್ನಡ ಕಲಿತೆ” ಎಂದು ಪ್ರತಿಪಾದಿಸಿದ್ದರು.

ಇತ್ತೀಚೆಗೆ ಅನಾಥಾಶ್ರಮದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ರಾಹುಲ್‍ಕುಮಾರ್ ಅವರು ಸ್ವತಃ ಆಶ್ರಮದ ಪುಟಾಣಿಗಳಿಗೆ ಊಟ ಬಡಿಸಿ ಗಮನ ಸೆಳೆದರು.

ಇಚಿಥ ಓರ್ವ ದಕ್ಷ-ಪ್ರಾಮಾಣಿಕ-ಜನಸ್ನೇಹಿ ಅಧಿಕಾರಿ ದೊರಕಿರುವುದು ನಾಡಿನ ಜನತೆಯ ಸುಕೃತ ಎನ್ನಬಹುದು. ಶ್ರೀ  ರಾಹುಲ್‍ಕುಮಾರ್  ಅವರಿಗೆ  ಭಗವಂತನು ಆಯುರಾರೋಗ್ಯ, ಸಿರಿಸಂಪದಗಳನ್ನು ಅನುಗ್ರಹಿಸಲಿ, ತನ್ಮೂಲಕ ಅವರ ಸೇವೆಯ ಪ್ರಯೋಜನ ನಾಡಿನ ಜನತೆಗೆ ಅಧಿಕಾಧಿಕವಾಗಿ ಲಭಿಸಿ ಜನತೆಯ ಬದುಕು ಹಸನಾಗಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.