ದಿಟ್ಟ ಅಧಿಕಾರಿ ಡಾ. ರೋಹಿಣಿ ಕಟೋಚ್ ಸೆಪಟ್ ಐಪಿಎಸ್

0
812

ಡಾ. ರೋಹಿಣಿ ಕಟೋಚ್ ಸೆಪಟ್ ಐಪಿಎಸ್‍ರವರಂಥ ಪ್ರಾಮಾಣಿಕ, ದಿಟ್ಟ, ದಕ್ಷ ಪೊಲೀಸ್ ಅಧಿಕಾರಿ ದೊರೆತಿರುವುದು ರಾಜ್ಯ ಪೊಲೀಸ್ ಇಲಾಖೆಯ ಭಾಗ್ಯ ಎನ್ನಬಹುದಾಗಿದೆ.

ಇವರ ತಂದೆ ಡಾ. ವಿ.ಎಂ. ಕಟೋಚ್. ಹಿಮಾಚಲ ಪ್ರದೇಶ ಮೂಲದವರು ತಾಯಿ ಡಾ. ಕಿರಣ್ ಕಟೋಚ್ ಅವರು ರಾಜಸ್ಥಾನ ಮೂಲದ ಸಿಂಧಿ ಸಮುದಾಯದವರು. ಇವರಿಬ್ಬರೂ ಆಗ್ರಾದಲ್ಲಿ ಸಂಶೋಧಕ ವೈದ್ಯರಾಗಿದ್ದರು. ಇವರ ಮುದ್ದಿನ ಏಕೈಕ ಪುತ್ರಿಯಗಿ ಡಾ. ರೋಹಿಣಿ ಆಗ್ರಾದಲ್ಲೇ 08-07-1983ರಂದು ಜನಿಸಿದರು. ಆಗ್ರಾದ ಸೇಂಟ್ ಆಂಟೋನೀಸ್ ಪ್ರೌಢಶಾಲೆ ಮತ್ತು ಸೇಂಟ್ ಆಂಟೋನೀಸ್ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿವರೆಗಿನ ಶಿಕ್ಷಣ ಪೂರೈಸಿದರು. ಪಿಯುಸಿ ಬಳಿಕ ತಂದೆ-ತಾಯಿಗೆ ಸಿವಿಲ್ ಸರ್ವಿಸಸ್ ಪರೀಕ್ಷೆ ತೇರ್ಗಡೆಯಾಗುವ ಬಯಕೆ ಇರುವುದಾಗಿ ರೋಹಿಣಿ ತಿಳಿಸಿದರು. ಆದರೆ ವೈದ್ಯರಾಗಿದ್ದ ಇವರ ತಂದೆ-ತಾಯಿ ಮೊದಲು ವೈದ್ಯಕೀಯ ಶಿಕ್ಷಣ ಪಡೆಯುವಂತೆಯೂ ಅನಂತರ ಯೋಚನೆ ಮಾಡಿದರಾಯಿತು ಎಂದೂ ಸೂಚಿಸಿದರು.

ಅದರನ್ವಯ ರೋಹಿಣಿ ಅವರು ಡಾ. ವಿ.ಎಂ. ಮೆಡಿಕಲ್ ಕಾಲೇಜು, ಸೊಲ್ಲಾಪುರ ಇಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆದರು. ಬಳಿಕ ಮಾತಾಪಿತರು ರೋಹಿಣಿಯವರಿಗೆ ಸಿವಿಲ್ ಸರ್ವಿಸಸ್ ಪರೀಕ್ಷೆ ಬರೆಯಲು ಉತ್ತೇಜನ ನೀಡಿದರು. ಮೊದಲ ಪ್ರಯತ್ನದಲ್ಲಿ ಸಫಲರಾಗದಿದ್ದರೂ ರೋಹಿಣಿಯವರು ಎರಡನೇ ಪ್ರಯತ್ನದಲ್ಲಿ ಸಿವಿಲ್ ಸರ್ವಿಸಸ್ ಉತ್ತೀರ್ಣರಾಗುವಲ್ಲಿ ಯಶಸ್ವಿಯಾದರು.

ತಂದೆ-ತಾಯಿ ಪ್ರತಿಭಾನ್ವಿತ ಸಂಶೋಧಕ ವೈದ್ಯರಾಗಿದ್ದರೂ ಅವರ ಸಂಶೋಧನೆಗಳನ್ನು ನಾಗರಿಕ ಸೇವಾ ಅಧಿಕಾರಿಗಳೇ ಅನುಷ್ಠಾನಗೊಳಿಸಬೇಕಾಗಿದ್ದನ್ನು ಕಂಡ ರೋಹಿಣಿಯವರಿಗೆ ನಾಗರಿಕ ಸೇವಾ ಪರೀಕ್ಷೆ ಬರೆಯುವ ಅಭಿಲಾಷೆ ಮೂಡಿತು. ಇವರಿಗೆ ಐಎಎಸ್ ಅಧಿಕಾರಿ ಆಗುವ ಇಚ್ಛೆ ಇದ್ದಿತಾದರೂ ಕಡೆಗೆ 2008ರ ತಂಡದ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕ ಕೇಡರ್‍ನಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.

ಹಿಮಾಚಲ ಪ್ರದೇಶ ಮೂಲದವರಾಗಿದ್ದು ಆಗ್ರಾದಲ್ಲಿ ಹುಟ್ಟಿ ಬೆಳೆದವರಾಗಿದ್ದರೂ ಇವರು ಅದ್ಭುತ ಕನ್ನಡ ಮಾತನಾಡುತ್ತಾರೆ. ತರಬೇತಿ ಪಡೆಯುವಾಗ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಉಡುಪಿ ಮುಂತಾದೆಡೆ ಕಾರ್ಯ ನಿರ್ವಹಿಸುವಾಗ ಸ್ಥಳೀಯರ ಮತ್ತು ಸಹೋದ್ಯೋಗಿಗಳ ಸಹಕಾರದಿಂದ ಇಷ್ಟು ಚೆನ್ನಾಗಿ ಕನ್ನಡ ಕಲಿಯಲು ಸಾಧ್ಯವಾಯಿತು ಎಂದು ಡಾ. ರೋಹಿಣಿ ವಿನೀತರಾಗಿ ನುಡಿಯುತ್ತಾರೆ. ಜೊತೆಗೆ ಭಾಷೆಯ ಪ್ರಾಮುಖ್ಯತೆ ಅರಿವಾಗಿದ್ದೂ ಒಂದು ಕಾರಣ, ಕೆಲಸ ಚೆನ್ನಾಗಿ ಮಾಡಿದರೆ ಜನರೂ ಸಹಕಾರ ನೀಡುತ್ತಾರೆ ಎಂಬ ಅಂಶ ಮನವರಿಕೆಯಾಯಿತು ಎಂದು ಡಾ. ರೋಹಿಣಿಯವರು ಹೇಳುತ್ತಾರೆ.

2012ರಲ್ಲಿ ಕೋಲಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜಿತರಾದ ಡಾ. ರೋಹಿಣಿ ಅವರು ಬಹಳ ವಿನೂತನವಾದ ಕಾರ್ಯಯೋಜನೆಗಳನ್ನು ಹಮ್ಮಿಕೊಂಡರು. ಅಲ್ಲಿ ಇವರಿಗೆ ಮರೆಯಲಾಗದಂಥ ಮತ್ತು ಆತ್ಮತೃಪ್ತಿ ತಂದುಕೊಟ್ಟ ಪ್ರಕರಣ ಎಂದರೆ ಓರ್ವ ಹೆಣ್ಣುಮಗಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಇದು ಸಾಕ್ಷ್ಯಗಳು ಲಭಿಸಿರದ ಗೊಂದಲಮಯ ಪ್ರಕರಣವಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿ 22 ದಿನಗಳಲ್ಲಿ ಆರೋಪಪಟ್ಟಿ ಸಿದ್ಧಪಡಿಸಿ ತ್ವರಿತ ತನಿಖೆ ನಡೆಸಿ ಸಹೋದ್ಯೋಗಿಗಳು ಮತ್ತು ನ್ಯಾಯಾಧೀಶರ ಸಹಕಾರದ ಮೇರೆಗೆ ಆರೋಪಿಗಳಿಗೆ 45 ದಿನಗಳಲ್ಲೇ ಮರಣ ದಂಡಣೆ ಘೋಷಿಸಿದ್ದು ಒಂದು ಸಾಧನೆ.

ಇದರಿಂದ ಡಾ. ರೋಹಿಣಿಯವರಿಗೆ ಬಹಳಷ್ಟು ಆತ್ಮಸ್ಥೈರ್ಯ ಮೂಡಿ ಮುನ್ನುಗ್ಗುವ ಛಲ, ಹುಮ್ಮಸ್ಸು ಉಂಟಾಯಿತು ಮತ್ತು ನಾವು ಹೋರಾಟ ಮಾಡಿದರೆ ಗೆದ್ದೇಗೆಲ್ಲುತ್ತೇವೆ ಎಂಬ ಭರವಸೆ ದೃಢವಾಯಿತು.

ಇದಾದ ಬಳಿಕ ಡಾ. ರೋಹಿಣಿಯವರು ಬೇರೆಬೇರೆ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಕೊಪ್ಪಳ ಎಸ್‍ಪಿ ಮತ್ತು ಬೆಂಗಳೂರು ಆಗ್ನೇಯ ವಿಭಾಗದ ಡಿಜಿಪಿಯಾಗಿ, ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ದಕ್ಷ ಸೇವೆ ಸಲ್ಲಿಸಿ ಹಿರಿಯ ಅಧಿಕಾರಿಗಳಿಂದ ಮತ್ತು ಜನತೆಯಿಂದ ಪ್ರಶಂಸೆಗೆ ಪಾತ್ರರಾದರು.

ತರುವಾಯ ಕೋಲಾರ ಜಿಲ್ಲೆಗೆ ವಾಪಸಾದರು. ಕೋಲಾರ ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಿಂದಲೂ ಎರಡು ಎಸ್‍ಪಿ ಹುದ್ದೆಗಳಿದ್ದು ಇವರ ಪತಿ ಡಾ. ರಾಮ್‍ನಿವಾಸ್ ಸೆಪಟ್ ಮತ್ತು ಡಾ. ರೋಹಿಣಿ ಕಟೋಚ್ ಸೆಪಟ್ ಅವರಿಬ್ಬರೂ ಇದೇ ಜಿಲ್ಲೆಯಲ್ಲಿ ಏಕಕಾಲದಲ್ಲಿ ಎಸ್‍ಪಿಗಳಾಗಿ ಕಾರ್ಯ ನಿರ್ವಹಿಸಿದ್ದು ವಿಶೇಷ. ಪತಿ-ಪತ್ನಿ ಇಬ್ಬರೂ ಒಂದೇ ಜಿಲ್ಲೆಯಲ್ಲಿ ಸಮಾನ ದರ್ಜೆಯ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡಿದ್ದು ರಾಜ್ಯ ಪೊಲೀಸ್ ಇಲಾಖೆಯಲ್ಲೇ ಅಪರೂಪದ ನಿದರ್ಶನ.

ಇವರ ಸಾಧನೆಯನ್ನು ಗುರುತಿಸಿ ನವದೆಹಲಿಯ ನ್ಯೂಸ್‍ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ 2015ರ ಶ್ರೇಷ್ಠ ಐಪಿಎಸ್ ಅಧಿಕಾರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಎಲ್ಲೇ ಕೆಲಸ ಮಾಡಿದರೂ ಗಾಂಜಾ, ಅಫೀಮು ದಂಧೆ, ಗೂಂಡಾಗಿರಿಯನ್ನು ನಿಯಂತ್ರಣಕ್ಕೆ ತರುವಲ್ಲಿ ದಿಟ್ಟತನ ಮೆರೆದ ಇವರನ್ನು ‘ಲೇಡಿ ಸಿಂಗಂ’ ಎಂದೇ ಶ್ಲಾಘಸಲಾಗುತ್ತದೆ.

ಏನೇ ಒತ್ತಡ ತಂದರೂ ಯಾವುದೇ ಪ್ರಕರಣದಲ್ಲಿ ಅನ್ಯರ ಹಸ್ತಕ್ಷೇಪಕ್ಕೆ ಇವರು ಆಸ್ಪದ ನೀಡುವುದಿಲ್ಲ. ಪೊಲೀಸ್ ಹುದ್ದೆಯಲ್ಲಿ ಕಾನೂನು ಉಲ್ಲಂಘನೆ ಆಗಬಾರದು, ನ್ಯಾಯ ಹಾಗೂ ಸಮಾನತೆಯನ್ನು ಕಾಪಾಡುವುದು ಅತಿಮುಖ್ಯ ಎನ್ನುವುದು ಇವರ ಅಭಿಪ್ರಾಯವಾಗಿದೆ.

ಇವರಿಗೆ ಒಂದು ದಿನವಾದರೂ ತಾವು ಡಾಕ್ಟರ್ ಅಗಿಯೂ ಈ ವೃತ್ತಿಗೆ ಬಂದದ್ದಕ್ಕೆ ಬೇಸರವಿಲ್ಲ. ತಾವು ಡಾಕ್ಟರ್ ಆಗಿಯೇ ಮುಂದುವರಿಯಬೇಕಾಗಿತ್ತು ಎಂದು ಒಂದು ಸಾರಿಯೂ ಅನ್ನಿಸಿಲ್ಲ. ಸಮವಸ್ತ್ರ ಧರಿಸಿದಾಗಿನಿಂದಲೂ ಈ ವೃತ್ತಿ ದೈವಕೃಪೆಯಿಂದ ಒಲಿದಿದೆ ಎಂದೇ ಭಾವಿಸಿರುವುದಾಗಿ ತಿಳಿಸುತ್ತಾರೆ.

ನನ್ನ ವೃತ್ತಿ ಜೀವನ ಪರಸ್ಪರ ಗೌರವದಿಂದ ಕೂಡಿದೆ ಜನರು ಅಪೇಕ್ಷಿಸುವುದನ್ನು ಪೊಲೀಸರು ಗೌರವಿಸಬೇಕು. ಅದೇ ರೀತಿ ಜನರು ಕೂಡ ಪೊಲೀಸರ ಕರ್ತವ್ಯ ನಿರ್ವಹಣೆಯನ್ನು ಗೌರವಿಸಬೇಕು ಎಂಬುದು ಇವರ ಕಳಕಳಿಯಾಗಿದೆ.

ಪ್ರಸ್ತುತ ಬೆಂಗಳೂರು ನಗರ ದಕ್ಷಿಣ ವಿಭಾಗದ ಪೊಲೀಸ್ ಉಪ ಆಯುಕ್ತ ಸೇವೆಸಲ್ಲಿಸುತ್ತಿದ್ದಾರೆ. ಇಲ್ಲಿ ಬಹುತೇಕ ಪೊಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವುದನ್ನು ಮನಗಂಡು ಇಲ್ಲಿಗೆ ಬಂದಾಗಿನಿಂದ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಪೈಕಿ ‘ಆಚೆಬನ್ನಿ’ ಶೀರ್ಷಿಕೆಯ ಕಾರ್ಯಕ್ರಮವನ್ನು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಆಯೋಜಿಸಲಾಗಿತ್ತು. ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡುವಂತೆ ಮಾಡುವುದು ಮೂಲ ಉದ್ದೇಶವಾಗಿತ್ತು, ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಆಚೆಬನ್ನಿ’ ಕಾರ್ಯಕ್ರಮವನ್ನು ಬಹಳಷ್ಟು ದಿನ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳು ನಟ-ನಟಿಯರು, ಕಲಾವಿದರು ಭಾಗವಹಿಸಿ ಬೆಂಬಲ ನೀಡಿದ್ದರು.

ಅದೇ ರೀತಿ ವಿನೂತನವಾಗಿ ಇವರ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗಳ ಸಿಬ್ಬಂದಿಯ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸುವ ಮೂಲಕ ಸಿಬ್ಬಂದಿಗಳ ನಡುವೆ ಏಕತೆ, ಸೌಹಾರ್ದ ಮತ್ತು ಶಕ್ತಿಯ ಪುನಶ್ಚೇತನಕ್ಕೂ ನಾಂದಿ ಹಾಡಲಾಯಿತು.

ಇವರು ಹಣದ ಹಿಂದೆ, ಅಧಿಕಾರದ ಹಿಂದೆ, ಪ್ರಚಾರದ ಹಿಂದೆ ಬಿದ್ದವರಲ್ಲ. ನಗುಮುಖದ ಈ ಅಧಿಕಾರಿ ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆ ಮತ್ತು ದುಷ್ಕರ್ಮಿಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ.

ಜೀವನದಲ್ಲಿ ನೆನಪಿಡಬೇಕಾದ ಶಿಕ್ಷಕರೆಂದರೆ ಶಾಲಾ ಶಿಕ್ಷಕರ ಜೊತೆಗೆ ತಂದೆ-ತಾಯಿಗಳೇ ಆಗಿದ್ದಾರೆ. ಏಕೆಂದರೆ ನಾವು ಇಂದು ಏನಾಗಿದ್ದೇವೋ ಅದಕ್ಕೆ ಅವರೇ ಕಾರಣ. ಹಣಗಳಿಕೆಗಿಂತ ನಿನ್ನ ಕೆಲಸದ ಪರಿಪೂರ್ಣತೆಯೇ ಮುಖ್ಯ. ನಿನ್ನ ವರ್ತನೆ ಸರಿಯಿದ್ದರೆ ದೇವರು ಧೈರ್ಯ ನೀಡುತ್ತಾನೆ ಎಂದು ನನ್ನ ತಂದೆ ತಾಯಿಗಳೇ ಸ್ಫೂರ್ತಿ ನೀಡಿದ್ದಾರೆ ಎಂದು ಡಾ. ರೋಹಿಣಿ ತಿಳಿಸುತ್ತಾರೆ.

ಪತಿ ಡಾ. ರಾಮ್‍ನಿವಾಸ್ ಸೆಪಟ್ ಅವರು ಕೃಷಿಯಲ್ಲಿ ಪಿಹೆಚ್‍ಡಿ ಪದವೀಧರರಾಗಿದ್ದು ಅವರೂ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ಪ್ರೇಮವಿವಾಹವಾಗಿರುವ ಈ ದಂಪತಿಗೆ ಅದ್ವಿಕ್ ಎಂಬ ಮಗನಿದ್ದಾನೆ. ಇವರ ಪತಿಯ ತಂದೆ-ತಾಯಿ (ರೋಹಿಣಿ ಅವರ ಅತ್ತೆ-ಮಾವ) ಕೂಡ ಇವರ ಪೊಲೀಸ್ ಸೇವೆಗೆ ಪೂರ್ಣ ಸಹಕಾರ ನೀಡುತ್ತಾರೆ.

ಕೊರೋನಾ ಹೆಮ್ಮಾರಿ ನಾಡಿಗೆ ದಾಳಿ ಮಾಡಿದಾಗಿನಿಂದ ರಾಜ್ಯ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಅದರಲ್ಲೂ ಬೆಂಗಳೂರು ದಕ್ಷಿಣ ವಿಭಾಗದ ಉಪ ಆಯುಕ್ತರಾಗಿರುವ ಡಾ.ರೋಹಿಣಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ವಲಸಿಗರಿಗೆ, ಬಡವರಿಗೆ ಹೆಚ್ಚಿನ ಸಹಾಯ ಮಾಡುತ್ತಿದ್ದಾರೆ. ಮಾನವೀಯ ಸವಾಲಾಗಿ ಇದನ್ನು ಎದುರಿಸುವುದು ಕೂಡ ಪ್ರಮುಖವಾಗಿದೆ. ನಿಜವಾದ ಬಾಧಿತರನ್ನು ಪತ್ತೆ ಹಚ್ಚಿ ಅವರ ಪಟ್ಟಿ ಮಾಡಿಕೊಂಡು ನೆರವು ಕೊಡಿಸುತ್ತಿದ್ದಾರೆ.              

ಪ್ರತಿಯೊಂದು ಪೊಲೀಸ್ ಠಾಣಾವಾರು ಗುಂಪುಗಳನ್ನಾಗಿ ಮಾಡಿ ವಲಸಿಗರಿಗೆ, ನಿರಾಶ್ರಿತರಿಗೆ, ವಸತಿರಹಿತರಿಗೆ ಇವರ ಕಾರ್ಯವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಬಿಬಿಎಂಪಿ ಮತ್ತು ಸರ್ಕಾರದ ಕಡೆಯಿಂದ ಸಾಧ್ಯವಾದಷ್ಟು ನೆರವು ಕೊಡಿಸುತ್ತಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿಯವರು 70 ರಿಂದ 80 ವಾಟ್ಸ್ ಆ್ಯಪ್ ಗ್ರೂಪ್ ಮಾಡಿದ್ದು ಇವುಗಳಲ್ಲಿ ಸಾವಿರಾರು ಜನರು ಸೇರ್ಪಡೆಗೊಂಡಿದ್ದಾರೆ. ಇದರ ಉದ್ದೇಶ ಔಷಧ, ಆಹಾರ, ದಿನಬಳಕೆಯ ವಸ್ತುಗಳೂ ಸೇರಿದಂತೆ ತುರ್ತು ಅಗತ್ಯಗಳ ಬಗ್ಗೆ ನೆರವು ಬೇಕೆಂಬ ಸಂದೇಶ ಬಂದಲ್ಲಿ ತತ್‍ಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವುದು, ಔಷಧ ಕೊಡಿಸುವ ಕಾರ್ಯ ಮಾಡುತ್ತಿದ್ದಾರೆ. ಬಿ.ಪಿ., ಮಧುಮೇಹದಂತಹ ಸಮಸ್ಯೆಗಳಿರುವವರು, ಡಯಾಲಿಸಿಸ್ ಅಗತ್ಯವಿರುವವರಿಂದ ನೆರವು ಕೋರಿ ಸಂದೇಶ ಬಂದಲ್ಲಿ ತತ್‍ಕ್ಷಣವೇ ಸ್ಪಂದಿಸಲಾಗುತ್ತಿದೆ. ಕೆಲವೆಡೆ ದಾನಿಗಳು, ಸರ್ಕಾರ, ಕಾರ್ಮಿಕ ಇಲಾಖೆಯಿಂದ ಅಗತ್ಯ ನೆರವು ಒದಗಿಸಲಾಗುತ್ತಿದೆ.

ಇವರ ಮಾರ್ಗದರ್ಶನದ ಪೊಲೀಸ್ ಬೀಟ್ ಸಿಸ್ಟಮ್‍ನಲ್ಲಿ ಮಾಹಿತಿ ಅರಿವಿಗೆ ಬರುತ್ತದೆ. ಪೊಲೀಸ್ ಗಸ್ತಿನ ವೇಳೆ ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂದು ಚೆನ್ನಾಗಿ ತಿಳಿದುಬರುತ್ತದೆ. ಸಾಕಷ್ಟು ಹಿಮ್ಮಾಹಿತಿ ಇರುವುದರಿಂದ ಸಮಸ್ಯೆಗಳ ಅರಿವು ಉತ್ತಮವಾಗಿ ಲಭಿಸಿ ನಿಭಾಯಿಸಲು ಸಾಧ್ಯವಾಗುತ್ತದೆ.

ಜಯನಗರ, ವಿ.ವಿ.ಪುರಂ, ಕುಮಾರಸ್ವಾಮಿ ಲೇಔಟ್, ತಲಘಟ್ಟಪುರ ಪೊಲೀಸ್ ಠಾಣೆಗಳಲ್ಲಿ ಸಮುದಾಯ ಪಾಕಶಾಲೆಗಳನ್ನು ಇವರು ಆರಂಭಿಸಿದ್ದಾರೆ. ಕೆಲವೆಡೆ ದಾನಿಗಳು ಆಹಾರ ತಯಾರಿಸಿ ತಂದು ವಿತರಿಸುತ್ತಾರೆ. ಕೆಲವೆಡೆ ದಿನಸಿ ಪದಾರ್ಥಗಳನ್ನು ನೀಡಲಾಗುತ್ತಿದ್ದು ಇವುಗಳ ಸಮರ್ಪಕ  ವಿತರಣೆಗೆ  ಪೊಲೀಸರ  ನೆರವು ಅತ್ಯವಶ್ಯಕವಾಗಿರುತ್ತದೆ.

ಕೊರೋನಾ ಸಮಯದಲ್ಲಿ ತೊಂದರೆ ಬರುವುದರಿಂದ ಗಸ್ತು ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಹೆಚ್ಚಿಸಲು ಯೋಜಿಸಿದ್ದಾರೆ. ಇದಕ್ಕಾಗಿ ಇರುವ ವಾಟ್ಸ್ ಆ್ಯಪ್ ಗ್ರೂಪ್‍ನಲ್ಲಿ ಸ್ವಯಂಸೇವಕರು, ದಿನಸಿ ವರ್ತಕರು ಇದ್ದು ಇವರ ನೆರವಿನೊಂದಿಗೆ ಆಯಾ ಬಡಾವಣೆ ಮಟ್ಟದಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಯೋಜಿಸಲಾಗಿದೆ. ಅಗತ್ಯವಿರುವವರು ಸಂದೇಶ ಹಾಕುತ್ತಾರೆ. ಅದನ್ನು ಫಾರ್ವರ್ಡ್ ಮಾಡಲಾಗುತ್ತದೆ. ವಯೋವೃದ್ಧ ತಂದೆ-ತಾಯಿಗಳಿರುವವರು, ಆಸ್ಪತ್ರೆಗೆ ಸಾಗಿಸಲು ಖಾಸಗಿ ವಾಹನ ಲಭ್ಯವಿಲ್ಲದವರು ಮುಂತಾದವರನ್ನು ಗುರುತಿಸಿ ಹೊಯ್ಸಳ ವಾಹನದಲ್ಲೇ ಆಸ್ಪತ್ರೆಗೆ ಒಯ್ಯುವ ಕೆಲಸ ಮಾಡಲಾಗುತ್ತದೆ.

ಈ ಕಾರ್ಯಕ್ಕೆ ತಂತ್ರಜ್ಞಾನ ಬಳಸಲಾಗುತ್ತಿದ್ದು ಪ್ರತಿಯೊಂದು ದಿನಸಿ ಅಂಗಡಿ, ತರಕಾರಿ ಅಂಗಡಿ, ಮೆಡಿಕಲ್ ಷಾಪ್‍ಅನ್ನು ಗೂಗಲ್ ಮ್ಯಾಪ್ ಮಾಡಲಾಗಿದೆ. ಇದರಿಂದ ಯಾವ ಅಂಗಡಿ ಎಲ್ಲಿದೆ ಎಂಬ ಅರಿವಾಗುತ್ತದೆ. ಅಗತ್ಯವಿರುವ ಜನರು ಗೂಗಲ್ ಮ್ಯಾಪ್ ಕ್ಲಿಕ್ ಮಾಡಿದರೆ ಅವರು ದೂರ ಹೋಗಬೇಕಾಗಿಲ್ಲ. ವಾಹನದಲ್ಲಿ ಹೋಗುವ ಅಗತ್ಯವಿರುವುದಿಲ್ಲ. ಪ್ರತಿ ಬೀದಿಯಲ್ಲಿ ಕೆಲವು ತರಕಾರಿ ಅಂಗಡಿಗಳಿಗೆ ರಸ್ತೆ ನಿಗದಿ ಪಡಿಸಲಾಗಿದೆ. ಮನೆಮನೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ದಾನಿಗಳು ಅವರಿಗೆ ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಪೂರೈಸಿದ್ದಾರೆ. ಇದರಿಂದ ಜನರು ಅನಗತ್ಯವಾಗಿ ಹೊರಬರಬೇಕಿಲ್ಲ. ತರಕಾರಿ ವ್ಯಾಪಾರಿಗಳು ಬರುತ್ತಿರುವುದು ಮುಂಚಿತವಾಗಿ ಗೊತ್ತಾಗುತ್ತದೆ. ಯಾವ ಯಾವ ಪ್ರದೇಶಗಳಲ್ಲಿ ಏನಾಗುತ್ತಿದೆ ಎಂದು ಡ್ರೋನ್‍ಗಳ ಕಣ್ಗಾವಲಿನ ಮೂಲಕ ತಿಳಿಯುತ್ತದೆ. ಇದು ಮೂರನೇ ಕಣ್ಣಿನಂತೆ ಕಾರ್ಯನಿರ್ವಹಿಸುತ್ತದೆ.

ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಉತ್ತರ ಕರ್ನಾಟಕ ಮುಂತಾದೆಡೆಗಳಿಂದ ವಲಸಿಗರು ಬೆಂಗಳೂರಿಗೆ ಬಂದಿದ್ದಾರೆ. ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ, ಎಲ್ಲಿ ಕಾರ್ಮಿಕರು ಇದ್ದಾರೆ ಎಂಬುದನ್ನರಿಯಲು ಸೆಲ್‍ಗಳನ್ನು ಸೃಷ್ಟಿಸಿದ್ದಾರೆ. ಯಾವ ಯಾವ ರೀತಿಯ ಕಾರ್ಮಿಕರಿದ್ದಾರೆ ಎಂದು ತಿಳಿಯಲಾಗುತ್ತಿದೆ.   ಕಾರ್ಮಿಕರ   ಹೊಣೆ ಮಾಲೀಕರದ್ದಾಗಿದ್ದರೂ ಅವರು ನೋಡಿಕೊಳ್ಳುತ್ತಿಲ್ಲ. ಭಾಷಾ ಸಮಸ್ಯೆ ಕೂಡ ಇದೆ. ಅವರಿಗೆ ಎಲ್ಲಿ, ಯಾರನ್ನು ನೆರವು ಕೇಳಬೇಕು ಎಂದು ತಿಳಿಯುತ್ತಿಲ್ಲ. ಕಾರ್ಮಿಕ ಇಲಾಖೆ ವತಿಯಿಂದ ಸಹ ಒಂದು ಸೆಲ್ ಶುರುವಾಗಿದ್ದು ಇಂಥವರಿಗೆ ಅದರ ಮೂಲಕ ನೆರವು ನೀಡಲಾಗುತ್ತಿದೆ.

ಸಾರ್ವಜನಿಕವಾಗಿ ಕೊರೋನಾ ಇನ್ನೂ ಹೀಗೆಯೇ ಅಭಿವೃದ್ಧಿಯಾಗುತ್ತದೆಯೇ ಎಂದು ಹೇಳಲಾಗುವುದಿಲ್ಲ. ಇದು ಸಾರ್ವಜನಿಕರ ಕ್ಷೇಮದ ಸಮಸ್ಯೆಯಾಗಿದೆ. ಸಂತ್ರಸ್ತ ಜನತೆಗೆ ಡಾ. ರೋಹಿಣಿಯವರೇ ಸ್ವತಃ ನಿಂತು ಊಟ ಬಡಿಸಿದ್ದು ವಿಶೇಷ.

“ಅನವಶ್ಯಕವಾಗಿ ಬೇರೆಡೆಗೆ ಹೋಗಬೇಡಿ. ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಿ. ಸಾರ್ವಜನಿಕರ ಜೀವನವನ್ನು ಹಾಳು ಮಾಡಬೇಡಿ” ಇದು ಜನತೆಗೆ ಡಾ. ರೋಹಿಣಿಯವರ ಮನವಿ ಹಾಗೂ ಸಂದೇಶ. ತನ್ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಜನರು ಸಹ ಇವರಿಗೆ ಸ್ಪಂದಿಸುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಸ್ಯಾನಿಟೈಸಿಂಗ್ ಮತ್ತು ಸಾಮಾಜಿಕ ಅಂತರಗಳನ್ನು ಕಡ್ಡಾಯಗೊಳಿಸಿದ್ದಾರೆ. “ಮನೆಬಾಗಿಲಿಗೇ ಬರುವ ತರಕಾರಿ ಬಂಡಿಯವರು ಸಂಕಷ್ಟ ಪೀಡಿತರಾಗಿದ್ದಾರೆ. ಅವರಿಂದ ಹಣ್ಣು-ತರಕಾರಿಗಳನ್ನು ಖರೀದಿಸುವ ಮೂಲಕ ಅವರಿಗೆ ನೆರವಾಗಿ. ನಾವೆಲ್ಲರೂ ಮನೆಯಿಂದ ಹೊರಬರದೆ ಕೊರೋನಾವನ್ನು ಹಿಮ್ಮೆಟ್ಟಿಸೋಣ” ಎಂದು ಡಾ. ರೋಹಿಣಿ ಅವರು ಟ್ವೀಟ್ ಮಾಡಿದ್ದಾರೆ.

ಇವರ ಕಾರ್ಯವ್ಯಾಪ್ತಿಯಲ್ಲಿ ಇವರ ಅಧೀನ ಸಿಬ್ಬಂದಿ ಒಂದು ಗರ್ಭಿಣಿ ಕುದುರೆಯನ್ನು ಪಶುವೈದ್ಯಶಾಲೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೀದಿ ನಾಯಿಗಳೂ ಸೇರಿದಂತೆ ಪಶುಪಕ್ಷಿಗಳಿಗೂ ನೆರವಿನ ಹಸ್ತ ಚಾಚಿದ್ದಾರೆ.

ಖಾಕಿಧಾರಿಗಳನ್ನು ನೋಡಿ ಜನರು ಹೆದರುತ್ತಿದ್ದಾರೆ. ಆದರೆ ಕಾರ್ಪೊರೇಟರ್‍ಗಳು, ದಾನಿಗಳು, ಸಾರ್ವಜನಿಕರು ಸ್ಪಂದಿಸಿ ನೆರವು ನೀಡುತ್ತಿದ್ದು ನಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ಅನಾಹುತವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಡಾ. ರೋಹಿಣಿಯವರು ಭರವಸೆ ನೀಡಿದ್ದಾರೆ.

ಭಗವಂತನು   ಡಾ.ರೋಹಿಣಿಯವರಿಗೂ   ಅವರ ಕುಟುಂಬವರ್ಗದವರಿಗೂ   ಆಯುರಾರೋಗ್ಯ, ಸಿರಿಸಂಪದಗಳನ್ನು ಅನುಗ್ರಹಿಸಲಿ, ತನ್ಮೂಲಕ ಅವರ ಕಾರ್ಯದಕ್ಷತೆ ಹೆಚ್ಚಾಗಲಿ, ತನ್ಮೂಲಕ ನಾಡಿನ ಜನಜೀವನ ಹಸನಾಗಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.