ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಭಾಸ್ಕರರಾವ್ ಐಪಿಎಸ್‍ರವರು ಸಾರ್ವಜನಿಕರಿಗೆ, ಅದರಲ್ಲೂ ಮಹಿಳೆಯರಿಗೆ ಸುರಕ್ಷತೆಗಾಗಿ ಮತ್ತು ಪೊಲೀಸರಿಂದ ರಕ್ಷಣೆ ಪಡೆಯಲು “ಸುರಕ್ಷಾ ಮೊಬೈಲ್ ಆ್ಯಪ್” ಅನ್ನು ಬಳಸಲು ಮನವಿ ಮಾಡಿದ್ದಾರೆ.
ತುರ್ತು ಸ್ಥಿತಿಯಲ್ಲಿ ಸಿಲುಕಿಕೊಂಡಾಗ “ಬೆಂಗಳೂರು ನಗರ ಪೊಲೀಸ್‍ಸುರಕ್ಷಾ ಆ್ಯಪ್”ಅನ್ನು ಡೌನ್‍ಲೋಡ್ ಮಾಡಿಕೊಂಡು ಕೆಂಪು ಬಟನ್ ಒತ್ತಿ, ಪೊಲೀಸರನ್ನು ಸಂಪರ್ಕಿಸಿ ಮತ್ತು ನಿಮ್ಮ ಬಂಧು-ಮಿತ್ರರನ್ನು ಜಾಗೃತಗೊಳಿಸಿ ಎಂದು ಫೇಸ್‍ಬುಕ್‍ನ ಸಿಟಿ ಪೊಲೀಸ್ ಅಧಿಕೃತ ಪುಟದಲ್ಲಿ ಮಾಡಿರುವ ಪೋಸ್ಟ್‍ನಲ್ಲಿ ರಾವ್ ವಿನಂತಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಈಗಾಗಲೇ “ಸುರಕ್ಷಾ ಮೊಬೈಲ್ ಆ್ಯಪ್”ಅನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಇದು ಪೊಲೀಸ್ ಕಂಟ್ರೋಲ್ ರೂಂ ಅನ್ನು ಅಲರ್ಟ್ ಮಾಡುತ್ತದೆ ಮತ್ತು ಪೊಲೀಸ್ ಗಸ್ತುವಾಹನವನ್ನು ಸಂಕಷ್ಟ ಪೀಡಿತ ಸ್ಥಳಕ್ಕೆ ಅತಿ ಸಮೀಪದ ತಾಣಕ್ಕೆ ನಿಯೋಜಿಸಲು ನೆರವು ನೀಡುತ್ತದೆ.
ನಗರದಲ್ಲಿ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಗೆ ಎರಡು ಗಸ್ತುವಾಹನಗಳೊಂದಿಗೆ ಪೊಲೀಸ್ ಪಡೆ ಸನ್ನದ್ಧವಾಗಿರುತ್ತದೆ. ತುರ್ತು ಕರೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲಾಗುತ್ತದೆ.
ಇತ್ತೀಚೆಗೆ ಹೈದರಾಬಾದ್ ಹೊರವಲಯದಲ್ಲಿ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾದ ಪ್ರಕರಣದ ಹಿನ್ನೆಲೆಯಲ್ಲಿ ಈ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.
ನಗರವಾಸಿಗಳ ಮತ್ತು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಆ್ಯಪ್‍ಅನ್ನು ಡೌನ್‍ಲೋಡ್ ಮಾಡಿಕೊಳ್ಳುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಇದರ ಜೊತೆಗೆ ಕೈಗೆಟುಕುವ ಆತ್ಮ ರಕ್ಷಣಾ ಸಾಧನಗಳಾದ ಪೆಪ್ಪರ್ ಸ್ಪ್ರೇಯನ್ನು ಹೊಂದಿರುವಂತೆ ಬೆಂಗಳೂರಿನ ಮೆಟ್ರೋದಲ್ಲಿಯೂ ಅವಕಾಶ ಮಾಡಿಕೊಡಲಾಗಿದೆ.
ಈ ಸುರಕ್ಷಾ ಆ್ಯಪ್ ಬಳಕೆದಾರಸ್ನೇಹಿಯಾಗಿದೆ. ಕೆಂಪು ಪ್ಯಾನಿಕ್ ಬಟನ್ ಅನ್ನು ಒತ್ತಿದಾಗ ಏಳು ಸೆಕೆಂಡ್‍ಗಳ ಒಳಗಾಗಿ ಉತ್ತರ ಬರುತ್ತದೆ. ಪೊಲೀಸ್ ಠಾಣೆಯ ಕಾರ್ಯವ್ಯಾಪ್ತಿಯ ವಿಷಯವು ಕರೆ ಸ್ವೀಕರಿಸಿದ ಬಳಿಕ ಪೇದೆ ಕಾರ್ಯಪ್ರವೃತ್ತರಾಗುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಭಾಸ್ಕರರಾವ್‍ರವರು ಭರವಸೆ ನೀಡಿದ್ದಾರೆ.
ಬೆಂಗಳೂರು ಸಿಟಿ ಪೊಲೀಸ್ 505 ಸುರಕ್ಷಾ ಆ್ಯಪ್ ಒಂದು ಪೂರ್ಣ, ಸಮಗ್ರ, ವ್ಯಕ್ತಿಗತ ಸುರಕ್ಷತಾ ಆ್ಯಪ್ ಆಗಿದೆ. ಇದು ಪೊಲೀಸರ ಕಾರ್ಯದಕ್ಷತೆಯಿಂದ ಸದಾ ಸಜ್ಜಾಗಿರುತ್ತದೆ. ಈ ಆ್ಯಪ್ ನಿಮ್ಮ ಸ್ಮಾರ್ಟ್‍ಫೋನ್ ಅನ್ನು ಒಂದು ವಿಶಿಷ್ಟ ವೈಯಕ್ತಿಕ ಸುರಕ್ಷತಾ ಉಪಕರಣವನ್ನಾಗಿ ಪರಿವರ್ತಿಸಿ ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣೆ ಪಡೆಯಲು ನೆರವು ನೀಡುತ್ತದೆ.
ಪೊಲೀಸರಿಗೆ ಸೇವೆಯ ಒಂದು ಕರೆಯನ್ನು ಕೆಂಪು ಪ್ಯಾನಿಕ್ ಬಟನ್ ಒತ್ತುವ ಮೂಲಕ ತಲುಪಿಸಬಹುದಾಗಿದೆ. ಇದನ್ನು ನಿಮ್ಮ ಸೆಲ್‍ಫೋನ್‍ನಿಂದಲೇ ಮಾಡಬಹುದಾಗಿದೆ.
ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‍ನಿಂದ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಈ ಆ್ಯಪ್ ಬಳಕೆದಾರರಿಗೆ ಆರಂಭದಿಂದಲೇ ಸಂಪರ್ಕಗಳ ಮೂಲಕ ವಿವರಗಳನ್ನು ದಾಖಲಿಸಲು ಅನುವು ಮಾಡಿಕೊಡಲಿದೆ.
ಸಕಲ ಮಹಿಳೆಯರು ಈ ಆ್ಯಪ್‍ನ ಸದುಪಯೋಗ ಪಡೆದು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಈಗಾಗಲೇ ನೂರಾರು ಮಹಿಳೆಯರು ಈ ಆ್ಯಪ್‍ನಿಂದ ಪ್ರಯೋಜನ ಪಡೆದು ಇದರ ಬಗ್ಗೆ ಹಿಮ್ಮಾಹಿತಿ ನೀಡುತ್ತಿದ್ದಾರೆ ಮತ್ತು ಇದರ ಅರಿವು ಇಲ್ಲದವರಿಗೆ ಪ್ರೇರೇಪಿಸುತ್ತಿದ್ದಾರೆ. ಬೆಂಗಳೂರು ಪೊಲೀಸರು ಕೂಡ ಮಹಿಳೆಯರ ಜಾಗೃತಿಗಾಗಿ ಸಕಲ ಸಾಮಾಜಿಕ ಜಾಲತಾಣಗಳಲ್ಲಿ ಟಿಕ್-ಟಾಕ್ ವಿಡಿಯೋಗಳನ್ನು ಮಾಡಿ ಹರಿಯಬಿಡುತ್ತಿದ್ದಾರೆ.
ಅಧಿಕಾಧಿಕ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸುವಲ್ಲಿ ಈ ಆ್ಯಪ್ ಸಫಲವಾಗಲಿ ಎಂದು “ಪತ್ರಿಕೆ’ ಹಾರೈಸುತ್ತದೆ.