ಛೇ. ಛೇ, ಇದೆಂತಹ ಉದ್ಘಟತನ, ಪೋಲಿಸರಲ್ಲಿ ಮನೋ ಬೇನೆಯೇ? ‘ನಾವು ಅತ್ಯಂತ ಧೈರ್ಯ ಶಾಲಿಗಳು, ನಮ್ಮನ್ನು ನೋಡಿ ಕಿಸೆಗಳ್ಳರು, ಕೊಲೆಗಡುಕರು, ಕುಡುಕರು, ಅನೈತಿಕ ವ್ಯವಹಾರಗಳಲ್ಲಿ ತೊಡಗಿದವರು ಕಾಲು ಕಿತ್ತುವರು’- ಹೀಗೆ ಅನೇಕ ಪೋಲಿಸ್ ಅಧಿಕಾರಿಗಳು ಉದ್ಗರಿಸಿಯಾರು! ಊಹೂಃ! ಇವರು ಹೇಳುವದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ, ಸಂಶಯವಿಲ್ಲ. ಆದರೆ! ಆದರೆ! ಆದರೆ! (ನಾನು ಮೂರು ಬಾರಿ ‘ಆದರೆ’ ಎಂಬ ಶಬ್ದವನ್ನು ಉಚ್ಚರಿಸಿದಾಗ, ಅದರಲ್ಲಿ ಕಿಂಚಿತ್ತಾದಾರೂ ಸತ್ಯ ಇರಲೇಬೇಕಲ್ಲವೇ?). ಪೋಲಿಸರು ಕೂಡಾ ನಮ್ಮ ನಿಮ್ಮಂತೆ ಮನುಷ್ಯರೇ, ಮನುಜರೇ, ವ್ಯಕ್ತಿಗಳೇ! ಅವರಿಗೂ ಶರೀರ, ದೇಹ, ಎಲ್ಲಕ್ಕೂ ಮಿಗಿಲಾಗಿ ‘ಮನಸ್ಸು’ ಇದ್ದೇ ಇರುತ್ತದೆ. ಹಾಗೂ ಅದು ಇರಲೇಬೇಕು ಕೂಡಾ!. ಮನಸ್ಸು ಇರದಿದ್ದರೆ, ಪೋಲೀಸರು ತಮ್ಮ ವೃತ್ತಿಯ ಘನತೆಯನ್ನಾದರೂ ಹೇಗೆ ಕಾಪಾಡಿಕೊಳ್ಳಬೇಕು? ತಮ್ಮ ಕಾರ್ಯಾಚರಣೆಯನ್ನಾದರೂ ಹೇಗೆ ಮಾಡಿಕೊಳ್ಳಬಲ್ಲರು? ಒಂದಂಶವಂತೂ ನಿಜ. ನೀವೆಲ್ಲರೂ ಅದನ್ನು
ನೆನಪಿಡಲೇಬೇಕು. ‘ಮನಸ್ಸೆಂಬುದು ಒಂದು ಮರ್ಕಟವಿದ್ದಂತೆ’, ‘ಮನಸ್ಸೇ ಮಹಾದೇವ’, ‘ಮನಸ್ಸಿದ್ದಲ್ಲಿ ಮಾರ್ಗವಿದೆ’ – ಹೀಗೆಯೇ ಸಾಗಬಹುದು ಮನಸ್ಸಿನ ಬಗ್ಗೆ. ಸುಪ್ತ ಹಾಗೂ ‘ಮ್ಯಾನಿಫೆಸ್ಟ್’ ವಿಚಾರಗಳು ಇರುತ್ತವೆಂದು ಸಿಗ್ಮಂಡ್ ಪ್ರಾಯ್ಡ್ ಎಂಬ ಓರ್ವ ಶ್ರೇಷ್ಠ ಮನೋ ವಿಜ್ಞಾನಿ ದಶಕರದ ಹಿಂದೆ ಪ್ರತಿಪಾದಿಸಿದ್ದರು. ಈ ಸಿದ್ದಾಂತ ಇಂದಿಗೂ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಅವರು ಹೇಳಿದ್ದೇನೆಂದರೆ- ‘ನಮ್ಮ ಮನದಲ್ಲಿ ಎರಡು ಭಾಗಗಳಿರುತ್ತವೆ, ಒಂದು ಜಾಗೃತ ಮನಸ್ಸು ಹಾಗೂ ಮಗದೊಂದು ಸುಪ್ತ ಮನಸ್ಸು’ ಎಂಬುದಾಗಿ. ಇದು ಎಲ್ಲರಿಗೂ ಅನುಸರಿಸುವದು.
ಪೋಲಿಸರಾಗಲೀ, ಪೋಲಿಸೇತರಾಗಲೀ, ಆರಕ್ಷಕ ಅಧಿಕಾರಿ ಆಗಲಿ, ರೋಗಿಯಾಗಿರಲಿ, ಹಾಜೀ ಮಸ್ತಾನರಂತಹ ಕಳ್ಳರೇ ಆಗಿರಲಿ, ಓರ್ವ ಮನೋವೈದ್ಯನಾಗಿರಲೀ- ಎಲ್ಲರಿಗೂ ಈ ಜಾಗೃತ ಮನಸ್ಸು ಹಾಗೂ ಅದಕ್ಕಿಂತ ಮಿಗಿಲಾಗಿ ಈ ಸುಪ್ತ ಮನಸ್ಸು ಕಾರ್ಯ ನಿರ್ವಹಿಸುವದು. ಪೋಲಿಸರ ಈಡೇರದ ಆಸೆಗಳು, ಆಕಾಂಕ್ಷೆಗಳು, ಅವರ ದುಃಖ ಎಲ್ಲವೂ ಈ ಸುಪ್ತ ಮನಸ್ಸಿನಲ್ಲಿಯೇ ಅಡಗಿಕೊಂಡು ಕುಳಿತುರುವದು! ಓರ್ವ ಅನುಭವೀ ಮನೋವೈದ್ಯನಾಗಿ ನಾನು ಇಂತಹವರ ‘ಸುಪ್ತ’ ಮನಸ್ಸನ್ನೇ ಪರೀಕ್ಷೆ ಮಾಡಿ, ಅವರ ಮನೋಸ್ಥಿತಿಯ ಅನುಗುಣವಾಗಿ ಸಲಹೆಗಳನ್ನು ನೀಡಿ, ಅವರ ಬದುಕಿಗೆ ನೆಮ್ಮದಿ, ಸಂತೋಷ, ಸುಖಗಳನ್ನು ತುಂಬಿದ್ದೇನೆಂದರೆ, ಅದು ನನ್ನ ಹೊಗಳಿಕೆ, ಹೆಗ್ಗಳಿಕೆ ಸುತರಾಂ ಅಲ್ಲವೇ ಅಲ್ಲ! ಏನೋ ಆ ದಯಾಮಯನಾದ ಭಗವಂತ ಇಂತಹ ಅವಕಾಶಗಳನ್ನು ನನಗೆ ಕಲ್ಪಿಸಿಕೊಟ್ಟಿದ್ದಾನೆ! ಅಂತಹ ವಿನೂತನ ಭಾವನೆಯನ್ನೇ ನಾನು ಯಾವತ್ತೂ ಹೊಂದಿರುವೆನು.
ಮದ್ಯ:
ಚಹ, ಕಾಫೀ, ಮುಂತಾದ ಪೇಯಗಳನ್ನು ಎಲ್ಲರೂ, ಸೇವಿಸುವರು, ಸ್ವಾದಿಸುವರು. ಅದರಂತಯೇ ನಶೆಯ ವಸ್ತು, ಈ ಮಾದಕ ವಸ್ತು ‘ಮದ್ಯ’! ದುರದೃಷ್ಟವಶಾತ್ ಈ ಮದ್ಯಸೇವನೆ ಹಲವು ಪೋಲಿಸರಲ್ಲಿ ಕೊಂಚ ಹೆಚ್ಚಿನ ಪ್ರಮಾಣದಲ್ಲಿಯೇ ಕಂಡು ಬರುತ್ತದೆ. ಅದಕ್ಕೆ ಕಾರಣಗಳೂ ಇಲ್ಲವೆಂದಲ್ಲ. ಪೋಲಿಸರ ದಿನಚರಿ (ಪೋಲಿಸ್ ಅಂದರೆ ಓರ್ವ ಸಾಮಾನ್ಯ ಪೇದೆಯಿಂದ ಹಿಡಿದು ಉನ್ನತಮಟ್ಟದ ಅಧಿಕಾರಿಯವರೆಗೂ), ಅವರ ಕಠೋರವಾದ ಜೀವನದ ಪರಿಶ್ರಮ, ಅನೇಕ ಬಾರಿ ನಿದ್ರಾಹೀನತೆಯ ದಿನಗಳು, ಯಾವತ್ತೂ ಮೇಲಿನಿಂದ ಆದೇಶಗಳು, ಟಾರ್ಗೆಟ್ಗಳು, ಒಂಟಿ ಜೀವನ, ದಾಂಪತ್ಯದಲ್ಲಿ ವಿರಸ, ಸಹೋದ್ಯೋಗಿಗಳೊಡನೆ ಕಲಾಪ- ಇಂತಹ ನೂರಾರು ಕಾರಣಗಳನ್ನು ನಾನು ಕೊಡಬಲ್ಲೆ- ಓರ್ವ ಪೋಲಿಸ್ ಅಧಿಕಾರಿ ಮದ್ಯಸೇವನೆಯಂತಹ ಪರಿಕ್ರಮ (?ಚಟ) ಕ್ಕೆ ಒಳಗಾಗಲು.
ಸೋಶಿಯಲ್ ಡ್ರಿಂಕಿಂಗ್:
‘ಸಾಮಾಜಿಕ ಕುಡಿತ’ – ಎಂಬುದಾಗಿ ಇದನ್ನು ಕನ್ನಡೀಕರಿಸಬಹುದು. ಸಾಮಾನ್ಯವಾಗಿ ಮೋಜಿಗೋಸ್ಕರ, ಸ್ನೇಹಿತರ ಜೊತೆಗೆ ‘ರಿಲ್ಯಾಕ್ಷೇಶನ್’ ಕ್ಷಣಗಳನ್ನು ಅನುಭವಿಸಲು, ಖುಷಿಯನ್ನು ಹೆಚ್ಚಿಕೊಳ್ಳುವಗೋಸ್ಕರ, ಅಲ್ಪ ಮಟ್ಟದ ‘ಮದ್ಯಸೇವನೆ’ಯನ್ನು ಮಾಡುವದು ತೀರಾ ಸಾಮಾನ್ಯ. ನಮ್ಮ ವೈದ್ಯ ಸಮುದಾಯವೂ ಇದಕ್ಕೆ ಹೊರತಲ್ಲ! ಹೇಗೆ ಹಲವು ಪೋಲಿಸ್ ಅಧಿಕಾರಿಗಳು ಒಂದು ‘ಹನಿ’ಯನ್ನು ಮುಟ್ಟುವದಿಲ್ಲವೋ, ಹಾಗೆಯೇ ಅನೇಕ ವೈದ್ಯರೂ ಕೂಡಾ ‘ಟೀ ಟೋಟಲರ್ಸ್ಗಳೇ’. (ಎಂದೂ, ಎಂದೆಂದೂ ಮದ್ಯ ಸೇವಿಸದವರನ್ನು ‘ಟೀ ಟೋಟಲರ್ಸ’ ಎಂಬುದಾಗಿ ಸಂಬೋಧಿಸುವದು ಬ್ರಿಟಿಶ್ರ ಕಾಲದಿಂದಲೂ ಬಂದು ಬಳುವಳಿ). ‘ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕು, ಸ್ವಾದಿಸಬೇಕು, ‘ಎಂಜಾಯ್’ ಮಾಡಬೇಕು’ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ! ಅದು ಕೂಡಾ ಓರ್ವ ಅನುಭವೀ ಮನೋವೈದ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಆದರೆ, ಒಂದೇ ಒಂದು ಎಚ್ಚರಿಕೆ ಎಂದರೆ ‘ಅತೀಯಾದರೆ ಅಮೃತವೂ ವಿಷವಾದೀತು!’. ಹಾಗೆಯೇ ‘ಮದ್ಯಪಾನ’ ಕೂಡಾ.
ಮದ್ಯಪಾನ ಒಂದು ರೋಗವೇ?
ಅಲ್ಪ ಮಟ್ಟದ ಮದ್ಯ ಸೇವನೆ, ಯಾವಾಗಲೊಮ್ಮೆ ಮದ್ಯವನ್ನು ಸೇವಿಸುವದು ‘ರೋಗ’ ಅಲ್ಲ. ಆದರೆ, ದಿನಂಪ್ರತಿ ಕುಡಿಯುವದು, ಮುಂಜಾನೆಯಯೇ ಎದ್ದ ತಕ್ಷಣ ಮದ್ಯ ಸೇವಿಸುವದು, ಒಬ್ಬಂಟಿಗನಾಗಿಯೇ ಕುಡಿಯುವರು, ಅಪಘಾತವಾದರೂ ಕುಡಿಯುವದು, ವಿವಾಹ ವಿಚ್ಛೇದನಗೊಂಡರೂ ಕುಡಿಯುವದು, ನೌಕರಿ ಕಳೆದುಕೊಂಡರೂ ಕುಡಿತ ಬಿಡಲಾಗದಿರುವದು, ತೀವೃವಾದ ‘ಲಿವರ್’ನ (ಯಕೃತ್) ‘ಸಿರೋಸಿಸ್ಸ್’ ರೋಗ ಉದ್ಭವಿಸಿದರೂ ಕುಡಿತದ ಸೆಳೆತದ ಕದಂಬ ಬಾಹುಗಳಿಂದ ಹೊರ ಬರಲಾರದು – ಇವೆಲ್ಲವೂ ಮನೋರೋಗದ ಲಕ್ಷಣಗಳು. ಅತೀಯಾದ ‘ಮದ್ಯಸೇವನೆ’ ಮನೋರೋಗವೆಂದು ಜಾಗತಿಕವಾಗಿ ಪರಿಗಣಿಸಲ್ಪಟ್ಟಿದೆ. ಊಹೂಂ! ಇದರಲ್ಲಿ ಯಾವುದೇ ಸಂಶಯ ಇಲ್ಲ! ಯಾವುದೇ ತರಹದ ಎಡವಟ್ಟು ಇಲ್ಲವೇ ಇಲ್ಲ.
‘ಮದ್ಯದ ಮೇಲೆ ಅವಲಂಬನೆ’
ಇದು ಒಂದು ಶಾರೀರಿಕ, ಮಾನಸಿಕ, ಸಾಮಾಜಿಕ, ವೈಜ್ಞಾನಿಕವಾದ ರೋಗ. ಈ ರೋಗಕ್ಕೆ ಚಿಕಿತ್ಸೆಯನ್ನು ನೀಡಬಲ್ಲ ಒಂದೇ ಒಂದು ಪರಿಣಿತ ವೈದ್ಯರೆಂದರೆ- ‘ಮನೋವೈದ್ಯರು’. ಅನೇಕ ಪೋಲಿಸರೂ ಈ ರೀತಿಯ ಮನೋವ್ಯಸನಕ್ಕೆ ಬಲಿ ಆಗಿರುವದನ್ನು ನಾವು, ನಮ್ಮ 40 ವರುಷದ ಪ್ರಾಕ್ಟೀಸ್ನಲ್ಲಿ ನೋಡಿದ್ದೇವೆ, ಕಂಡಿದ್ದೇವೆ, ದುಃಖಿತರಾಗಿದ್ದೇವೆ. ಆದರೆ, ಸುದೈವವೆಂದರೆ ಪೋಲಿಸರು ಅಜ್ಞಾನಿಗಳಲ್ಲ, ದಡ್ಡರಲ್ಲ, ಅವರೆಲ್ಲರೂ ಜಾಣರೇ, ಪ್ರತಿಭಾವಂತರೇ! ಮೆರಿಟೆಡ್ ವ್ಯಕ್ತಿಗಳೇ! ಏನೋ ಒಂದಿಲ್ಲಾ ಒಂದು ತರಹದ ಮಾನಸಿಕ ಒತ್ತಡಗಳಿಗೆ ಸಿಲುಕಿ, ಬೆಂದು, ಬಳಲಿ, ಹತಾಶೆಗೊಂಡು, ಹಲವರು ‘ಮದ್ಯವ್ಯಸನ’ ವೆಂಬ ರೋಗಕ್ಕೆ ಬಲಿ ಆಗಿರುತ್ತಾರೆ.
ಸೋಶಿಯಲ್ ಡ್ರಿಂಕಿಂಗ್:
ಮೊದ ಮೊದಲು ಸುಮ್ಮನೆ ಹಾಳು ಹರಟೆಗೆಂದು ಆರಂಭಗೊಂಡ ಈ ಮದ್ಯ ಸೇವನೆ, ದಿನಗಳು, ವಾರಗಳು, ತಿಂಗಳುಗಳು, ವರುಷಗಳು ಉರುಳಿದಂತೆ ಒಂದು ‘ದೈನಂದಿನ ಚಟ’ ವಾಗಿಯೇ ಪರಿವರ್ತನೆಗೊಂಡೀತು! ಅದಕ್ಕೆ ಕಾರಣವೆಂದರೆ ‘ಟಾಲರನ್ಸ’ ! ಮೊದಲು ಬರೀ 60 ಎಮ್ಎಲ್ ವಿಸ್ಕಿಗೆ ಬರುತ್ತಿದ್ದ ‘ಕಿಕ್ಕು’ ಈಗ 90, 120 180 ಎಮ್.ಎಲ್. ಸೇವಿಸಿದರೂ ಬರಲಾರದ್ದು! ‘ಇನ್ನೂ ಬೇಕು, ಇನ್ನೂ ಬೇಕು, ಇನ್ನೂ ಹೆಚ್ಚಿನ ಪ್ರಮಾಣದ ಮದ್ಯ ಬೇಕು, ನಾನು ಇನ್ನೂ ಅನುಭವಿಸಬೇಕು, ನಾನು ಇನ್ನೂ ‘ಎಂಜಾಯ್’ ಮಾಡಬೇಕು, ನನ್ನ ಹತಾಶೆಗಳಿಗೆ ಪರಿಹಾರವೆಂದರೆ ಈ ಕುಡಿತ ಮಾತ್ರ’ – ಹೀಗೆಯೇ ಸಾಗಬಲ್ಲದು ಮದ್ಯವ್ಯಸನಿಗಳ ವಿಚಾರಲಹರಿ, ಅವರ ಮನಸ್ಸು, ಅವರ ಹಾವಭಾವ, ಅವರ ದೇಹದ ಭಾಷೆ! ಊಹೂಂ! ತಪ್ಪೆಣಿಸಬೇಡಿ. ನಾನು ಯಾರನ್ನೂ ದೂಶಿಸುತ್ತಿಲ್ಲ, ಅಲ್ಲಗೆಳೆಯುತ್ತಿಲ್ಲ. ಈ ಪಿಡುಗು, ಈ ಮನೋವ್ಯಾಕುಲತೆ ಹರಡುವದೇ ಹಾಗೆ, ಅಪ್ಪಿಕೊಳ್ಳುವದೇ ಹಾಗೆ, ಪಸರಿಸುವದೇ ಇಂತಹ ವಿಚಿತ್ರವಾದ ಶೈಲಿಯಿಂದ!.
ನಿದ್ರಾಹೀನತೆ:
ಅನೇಕ ಪೋಲಿಸರಲ್ಲಿ ‘ನಿದ್ರಾಹೀನತೆ’ ಒಂದು ಅತ್ಯಂತ ಸಾಮಾನ್ಯವಾದ ಮನೋದೈಹಿಕವಾದ ರೋಗ. ನಮಗೆ ಹೇಗೆ ಹಸಿವು, ಬಹಿರ್ದೆಶೆ, ಮಲಮೂತ್ರ ವಿಸರ್ಜನೆ ಸಾಮಾನ್ಯವೋ, ಹಾಗೆಯೇ ನಮ್ಮ ಈ ‘ನಿದ್ರೆ’ ಕೂಡಾ. ನಾವೆಲ್ಲರೂ ದೇವರು ಹಾಕಿಕೊಟ್ಟ ಒಂದು ‘ಸರ್ಕೇಡಿಯನ್ ರಿದಮ್’ ಅಥವಾ ‘ಬಯಲಾಜಿಕಲ್ ಕ್ರಾಕ್’ಗೆ ‘(ಜೈವಿಕ ಗಡಿಯಾರ) ಒಳಪಟ್ಟವರೇ. ಈ ಜೈವಿಕ ಗಡಿಯಾರ ಅಭಾಸಗೊಂಡಾಗ, ವಿಕೃತಗೊಂಡಾಗ, ಈ ‘ದೇಹವೆಂಬ ಮಶೀನ’ ಕೈಕೊಟ್ಟಾಗ, ಪೋಲಿಸರು ‘ಮದ್ಯ’ದ ದಾಸರಾಗಬಲ್ಲರು. ಹಾಗೂ ವಿಪರೀತ ಮದ್ಯಸೇವನೆಯಿಂದ ಹಲವರಿಗೆ ನಿದ್ರೆಯೂ ಆವರಿಸÀದು. ನಿದ್ರೆ ಬಂದರೂ ಅದು ಮುಂಜಾವಿನ 3 ಅಥವಾ 4 ಗಂಟೆಯವರೆಗೆ ಮಾತ್ರ. ಮತ್ತೆ ಬೆಳ್ಳಂ ಬೆಳಗ್ಗೆನೇ ಎಚ್ಚರವಾಗಿ ಅನೇಕರು ‘ಬಾರ್ ಅಂಗಡಿಗಳ’ ಮುಂದೆ ಸರದಿಯ ಸಾಲಿನಲ್ಲಿ ನಿಲ್ಲುವರು. ದುರ್ದೈವವಶಾತ್ ಹಲವರು, ಈ ಹಾಳು ಮದ್ಯದಿಂದಲೇ ಮರಣವನ್ನು ಹೊಂದಿಯಾರು.
ಪೋಲೀಸ್ ಸಮುದಾಯದಲ್ಲಿ ಮನೋಬೇನೆಗಳಾದ ಆತಂಕ, ಖಿನ್ನತೆ, ಡಿಪ್ರೇಶನ್, ಮದ್ಯವ್ಯಸನ, ಪಿ.ಟಿ.ಎಸ್.ಡಿ. (ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಸಾಮಾನ್ಯ ಎಂಬುದರ ಸಂಗತಿ ಅನೇಕರಿಗೆ ತಿಳಿದಿಲ್ಲ. ಮೇಲ್ದರ್ಜೆಯ ಪೋಲಿಸ್ ಅಧಿಕಾರಿಗಳಿಗೂ, ಸಾಮಾನ್ಯ ಪೋಲಿಸ್ ಪೇದೆಗಳಿಗೂ ಹಾಗೂ ಎಲ್ಲಕ್ಕೂ ಮಿಗಿಲಾಗಿ ಘನ ಸರ್ಕಾರಕ್ಕೂ!
ಮುಂದಿನ ಸಂಚಿಕೆಗಳಲ್ಲಿ ‘ಮದ್ಯಪಾನ’ದ ವಿಪರೀತವಾದ ಲಕ್ಷಣಗಳು, ಚಿಕಿತ್ಸೆಗಳ ಕುರಿತು ಬರೆಯುವೆ. ಒಂದಂಶ ಮಾತ್ರ ನಿಜ, ದಿಟ. ‘ಮದ್ಯವ್ಯಸನ’ ಎಂಬ ಮನೋ ರೋಗಕ್ಕೆ ನಾವು ಖಂಡಿತವಾಗಿಯೂ ಚಿಕಿತ್ಸೆ ನೀಡಿದ್ದೇವೆ, ಗುಣ ಪಡಿಸಿದ್ದೇವೆ, ಎಲ್ಲರಿಗೂ ಶುಭವಾಗಲಿ.
ಡಾ|| ವಿನೋದ ಜಿ. ಕುಲಕರ್ಣಿ
ಎಮ್.ಡಿ. (ಮುಂಬೈ) ಡಿ.ಪಿ.ಎಂ.(ಮುಂಬೈ),
ಎಲ್ಎಲ್.ಬಿ, ನರ ಹಾಗೂ ಮನೋರೋಗ ತಜ್ಞರು,
ಮಾನಸ ಮನೋವೈದ್ಯಕೀಯ ಸಂಸ್ಥೆ,ವಿದ್ಯಾನಗರ
ಹುಬ್ಬಳ್ಳಿ – 580021
ಮೊಬೈಲ್ – 9844089068