ಕವಿ ಹೃದಯದ ಪೊಲೀಸ್ : ರಘು ಬೆಟ್ಟಳ್ಳಿ

0
1395

ವೃತ್ತಿಯಲ್ಲಿ  ಪೊಲೀಸ್, ಪ್ರವೃತ್ತಿಯಲ್ಲಿ ಸಾಹಿತಿ ! ಆರಕ್ಷಕ ಸೇವೆ ಮತ್ತು ಅಕ್ಷರ ಸೇವೆಯನ್ನು ಸಮದೂಗಿಸಿಕೊಂಡು ಹೋಗುತ್ತಿರುವ ಕವಿ ಹೃದಯದ ಒಬ್ಬರು ಪೊಲೀಸ್ ಇಲಾಖೆಯಲ್ಲಿರುವುದು ಮೆಚ್ಚತಕ್ಕ ಸಂಗತಿಯಾಗಿದೆ. ಅವರೇ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೆಬಲ್ ಆಗಿ  ಸೇವೆ  ಸಲ್ಲಿಸುತ್ತಿರುವ  ಶ್ರೀ  ರಘು ಬೆಟ್ಟಳ್ಳಿ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಬೆಟ್ಟಹಳ್ಳಿಯಲ್ಲಿ ಹನುಮಂತರಾಯಪ್ಪ-ರತ್ನಮ್ಮ ದಂಪತಿಯ ಸುಪುತ್ರರಾಗಿ 09-09-1986 ರಲ್ಲಿ ಜನಿಸಿರುವ ರಘು ಅವರು ಬೆಟ್ಟಹಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುದೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ಕುದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಕುದೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ (ಪಿಯುಸಿ) ಶಿಕ್ಷಣ, ಬೆಂಗಳೂರಿನ ಬಸವನಗುಡಿಯ ಕಮಲಾ ನೆಹರೂ ಶಿಕ್ಷಕರ ತರಬೇತಿ ಶಾಲೆಯಲ್ಲಿ ಡಿ.ಎಡ್., ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರು.

ಬೆಂಗಳೂರು ಬಸವೇಶ್ವರನಗರ ಪೊಲೀಸ್  ಠಾಣೆಯಲ್ಲಿ  ಹೆಡ್ ಕಾನ್ ಸ್ಟೆಬಲ್  ಆಗಿ ವೃತ್ತಿಜೀವನ ನಡೆಸುತ್ತಿರುವ ಶ್ರೀ ರಘು ಅವರು ಇಲಾಖೆಯಲ್ಲಿ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪ್ರತಿಭೆ ಗುರುತಿಸಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಗೆ ಅತಿಥಿ ಉಪನ್ಯಾಸಕರನ್ನಾಗಿ ಇವರನ್ನು ಇಲಾಖೆಯು ನಿಯೋಜಿಸಿದೆ.

ಕವಿ ಹೃದಯದ ಶ್ರೀಯುತರು 2015ರಲ್ಲಿ ‘ಅಂತರಂಗದ ಅಂತರಗಂಗೆ’ ಕವನ ಸಂಕಲನ, 2018ರಲ್ಲಿ ‘ತಿರುವು’ ಕಾದಂಬರಿಯನ್ನು, 2020ರಲ್ಲಿ ‘ಶೂಟ್ ಕೊರೋನಾ’ ಆಲ್ಬಂಗೀತೆಯನ್ನು ಪ್ರಕಟಿಸಿದ್ದಾರೆ.

2018ರಲ್ಲಿ ಇವರ ‘ತಿರುವು’ ಕಾದಂಬರಿ ಬಿಡುಗಡೆಯಾಗಿದ್ದು ಕೃತಿ ಬಿಡುಗಡೆ ಸಮಾರಂಭದಲ್ಲಿ ಕವಿ ಡಾ|| ಸಿದ್ಧಲಿಂಗಯ್ಯ, ಸಾಹಿತಿ ಶೂದ್ರ ಶ್ರೀನಿವಾಸ್ ಮುಂತಾದ ಗಣ್ಯರು ರಘು ಅವರ ಪ್ರಯತ್ನವನ್ನು ಶ್ಲಾಘಿಸಿ ಇದೇ ಸಾಹಿತ್ಯ ಕೈಂಕರ್ಯವನ್ನು ಮುಂದುವರಿಸುವಂತೆ ಶುಭಹಾರೈಸಿದರು.

ಪ್ರಸ್ತುತ ರಘು ಅವರು ‘ಕಣ್ಮರೆ’ ಎಂಬ ಕಾದಂಬರಿ ಹೊರತರುವುದರಲ್ಲಿದ್ದಾರೆ. ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಅನೇಕ ಕವಿಗೋಷ್ಠಿಗಳಲ್ಲಿ  ಪಾಲ್ಗೊಂಡಿರುವ ರಘು ಅವರು 2014ರಲ್ಲಿ ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಹ್ವಾನಿತರಾಗಿದ್ದರು.

2015ರಲ್ಲಿ ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್ ನ  ಪಾರಮಾರ್ಥ ಸಿದ್ಧಿಪೀಠದಿಂದ ಅರಳುವ ಪ್ರತಿಭೆ ಪ್ರಶಸ್ತಿ, 2018ರಲ್ಲಿ ಸಾಕ್ಷಾತ್ಕಾರ ಚಾರಿಟೆಬಲ್ ಟ್ರಸ್ಟ್ (ರಿ) ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ರಾಜರಾಜೇಶ್ವರಿ ಪ್ರಶಸ್ತಿ, 2019ರಲ್ಲಿ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಯುವ ಕಾವ್ಯ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಹಾಸ್ಯಬ್ರಹ್ಮ ಎಂದೇ ಹೆಸರಾದ ಶ್ರೀ ಬೀಛಿhi  ಅವರು ಪೊಲೀಸ್ ಇಲಾಖೆಯಲ್ಲಿಯೇ ಸೇವೆ ಸಲ್ಲಿಸುತ್ತ ಅಮೂಲ್ಯವಾದ ಸಾಹಿತ್ಯ ಕೃತಿಗಳನ್ನು ಸೃಷ್ಟಿಸಿ ಅಪಾರ ಕೀರ್ತಿಶಾಲಿಗಳಾಗಿದ್ದನ್ನು ಶ್ರೀ ರಘು ಅವರು ನೆನಪಿಗೆ ತರುತ್ತಾರೆ.

ಕನ್ನಡ ತಾಯಿ ಭುವನೇಶ್ವರಿಯು ಶ್ರೀ ರಘು ಬೆಟ್ಟಹಳ್ಳಿಯವರಿಗೆ ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲಿಯೂ ಯಶಸ್ಸನ್ನು ದಯಪಾಲಿಸಲಿ. ತನ್ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಪುಷ್ಟಿಗೊಳ್ಳುವಂತಾಗಲಿ ಎಂದು ‘ಪತ್ರಿಕೆ’ ಹೃತ್ಪೂರ್ವಕವಾಗಿ ಹಾರೈಸುತ್ತದೆ.