ಕನ್ನಡ ಚಲನಚಿತ್ರರಂಗ ಅಥವಾ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ (ಮಾದಕವಸ್ತು)ಗಳ ಜಾಲ ಇರುವ ವಿಷಯ ಬಹಿರಂಗಗೊಂಡಿದ್ದು ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಹಿಂದಿ ಚಿತ್ರರಂಗ ಅಥವಾ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ತನಿಖೆ ನಡೆಸುತ್ತಿರುವಾಗಲೇ ಚಿತ್ರರಂಗದ ನಟ-ನಟಿಯರಿಗೂ ಮಾದಕ ವಸ್ತು ನಶೆ ಚಟ ಇರುವ ವಿಷಯ ಬೆಳಕಿಗೆ ಬಂದಿದೆ. ಕನ್ನಡ ಚಿತ್ರರಂಗಕ್ಕೂ ಡ್ರಗ್ಸ್ ನಂಟು ಇರುವ ಸಂಗತಿ ಬಯಲಾಗಿದ್ದು ನಾಗರಿಕರನ್ನು ಬೆಚ್ಚಿಬೀಳಿಸಿದೆ.
ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಜಾಲವಿದೆ ಎಂದು ಪ್ರತಿಪಾದಿಸಿದ್ದು ಈ ಕುರಿತಂತೆ ಸಂಚಲನ ಸೃಷ್ಟಿಸಿತು. ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ಸಹೋದರ ಇಂದ್ರಜಿತ್ ಲಂಕೇಶ್ ಅವರು ಡ್ರಗ್ಸ್ ಪಿಡುಗಿನಲ್ಲಿ ಕೆಲವು ಖ್ಯಾತನಾಮರು, ನಟನಟಿಯರು ಮಾದಕ ವಸ್ತು ಜಾಲದ ನಂಟು ಹೊಂದಿರುವುದನ್ನು, ಇತ್ತೀಚಿಗೆ ನಿಧನರಾದ ಕನ್ನಡ ನಟ ಚಿರಂಜೀವಿ ಸರ್ಜಾ ಅವರ ಮರಣದ ಕುರಿತು ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಪ್ರತಿಪಾದಿಸಿದರು ಇಂದ್ರಜಿತ್ ಕನ್ನಡ ಸಿನಿಮಾರಂಗದ ಕೆಲವು ಉದಯೋನ್ಮುಖ ಕಲಾವಿದರು ವ್ಯಾಪಕವಾಗಿ ಕೆಲವು ನಿಷೇಧಿತ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾರೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಇಬ್ಬರು ನಟಿಯರ ಹೆಸರುಗಳನ್ನು ಪ್ರಸ್ತಾಪಿಸಿದ ಅವರು ಈ ನಟಿಯರಿಗಿರುವ ರಾಜಕಾರಣಿಗಳ ಪ್ರಭಾವದಿಂದಾಗಿ ಅವರ ವಿಚಾರಣೆ ನಡೆಯುತ್ತಿಲ್ಲ ಎಂದು ಪ್ರತಿಪಾದಿಸಿದರು.
ಇಂದ್ರಜಿತ್ ಲಂಕೇಶ್ ಅವರನ್ನು ಸಂಪರ್ಕಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸೆಂಟ್ರಲ್ ಕ್ರೈಂ ಬ್ರಾಂಚ್ (ಅಅಃ) ಅಧಿಕಾರಿಗಳು ಕನ್ನಡ ಚಲನಚಿತ್ರರಂಗದ ಮಾದಕವಸ್ತು ಜಾಲದ ಆಳ-ಅಗಲಗಳನ್ನು ಅರಿಯಲು ಇಂದ್ರಜಿತ್ ಅವರ ಸಹಕಾರ ಕೋರಿದರು. ಡ್ರಗ್ಸ್ ಪೆಡ್ಲರ್ ಗಳು ಅಥವಾ ಮಾದಕವಸ್ತು ಪೂರೈಕೆದಾರರ ಸ್ಥಳಗಳ ಮೇಲೆ ದಾಳಿ ನಡೆಸಿದ ಪೊಲೀಸರು ಈ ಡ್ರಗ್ಸ್ ಗಳನ್ನು ‘ಡಾರ್ಕ್ ನೆಟ್’ ಮೂಲಕ ಸರಬರಾಜು ಮಾಡಲಾಗುತ್ತಿತ್ತೆಂಬ ಅಂಶವನ್ನು ಪತ್ತೆ ಮಾಡಿದ್ದಾರೆ. ಮೂವರು ಆರೋಪಿತ ಡ್ರಗ್ಸ್ ಪೆಡ್ಲರ್ ಗಳಾದ ಎಂ. ಅನೂಪ್, ಅನಿಖಾ ಡಿ. ಮತ್ತು ಆರ್. ರವೀಂದ್ರನ್ ಎಂಬವರನ್ನು ಮಾದಕ ವಸ್ತುಗಳ ನಿಯಂತ್ರಣ ದಳದವರು ಬಂಧಿಸಿ ಅವರ ಬಳಿಯಿದ್ದ 1.25 ಕೋಟಿ ರೂ.ಗಳ ಮೌಲ್ಯದ ಎಸ್ ಡಿ, ಎಂಡಿಎಂ, ಎಕ್ಸ್ಟೆಸಿ, ಕೆನ್ನಬೀಸ್ ಮುಂತಾದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡರು.
ಬಂಧಿತ ಆರೋಪಿಗಳಲ್ಲೊಬ್ಬನಾದ ಮೊಹಮ್ಮದ್ ಅನೂಪ್ ಸ್ಯಾಂಡಲ್ ವುಡ್ ಡ್ರಗ್ಸ್ ಹಗರಣದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೀಶ್ ಕೊಡಿಯೇರಿಯ ಹೆಸರನ್ನು ತಿಳಿಸಿದ. ಇದಾದ ಕೂಡಲೇ ಅಅಃ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಕೇಶವ ಮೂರ್ತಿ ಮತ್ತು ಅವರ ಮಗ ಯಶಸ್ ಗೆ ಡ್ರಗ್ಸ್ ಹಗರಣ ಕುರಿತ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತು. ಯಶಸ್ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ನಡುವೆ ಕನ್ನಡ ನಟಿ ರಾಗಿಣಿ ದ್ವಿವೇದಿ ಅವರನ್ನು ಮಾದಕ ಜಾಲದ ನಂಟಿನ ಆರೋಪದ ಮೇರೆಗೆ ಬಂಧಿಸಲಾಯಿತು. ಬೆಂಗಳೂರು ನ್ಯಾಯಾಲಯವು ರಾಗಿಣಿ ಅವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ರಾಗಿಣಿ ಅವರ ನಿವಾಸದ ಮೇಲೆ ಸಿಸಿಬಿ ದಾಳಿಯೂ ನಡೆಯಿತು.
ಇದಾದ ಕೂಡಲೇ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಅವರ ನಿವಾಸದ ಮೇಲೂ ದಾಳಿ ನಡೆಯಿತು. ನ್ಯಾಯಾಲಯದಿಂದ ಅನುಮತಿ ಪಡೆದು ಸಂಜನಾ ಗಲ್ರಾನಿ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದರು ಎಂದು ಪೊಲೀಸ್ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಖಚಿತಪಡಿಸಿದರು. ತರುವಾಯ ಸಂಜನಾ ಗಲ್ರಾನಿ ಅವರನ್ನು ಬಂಧಿಸಲಾಯಿತು. ಸಂಜನಾರ ಗೆಳೆಯ ರಿಯಾಲ್ಟರ್ ರಾಹುಲ್ ನ ಬಂಧನದ ಬಳಿಕ ಸಂಜನಾ ಅವರನ್ನೂ ವಿಚಾರಣೆಗೆ ಗುರಿಪಡಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರೇನ್ ಖನ್ನಾ ಎಂಬಾತನನ್ನು ದಸ್ತಗಿರಿ ಮಾಡಲಾಯಿತು. ಸಂಜನಾ ಅವರು ತಮ್ಮ ರಕ್ತದ ಸ್ಯಾಂಪಲ್ ಅನ್ನು ಪರೀಕ್ಷೆಗಾಗಿ ನೀಡದೆ ರಂಪಾಟ ನಡೆಸಿದರು. ರಕ್ತದ ಸ್ಯಾಂಪಲ್ ನೀಡಲು ನಿರಾಕರಿಸುವುದು ತನ್ನ ಮೂಲಭೂತ ಹಕ್ಕು ಎಂದು ತನ್ನ ವಕೀಲರು ತಿಳಿಸಿರುವುದಾಗಿ ಆಕೆ ಹೇಳಿದರು. ಬಳಿಕ ಸಂಜನಾರನ್ನು ಬಂಧಿಸಲಾಯಿತು.
ಅಅಃ ಕಳೆದ ತಿಂಗಳು ಒಂದು ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆ ಜಾಲವನ್ನು ಭೇದಿಸಿದಾಗ ಈ ಕುರಿತ ಹಳವಂಡಗಳು ಬೆಳಕಿಗೆ ಬರತೊಡಗಿದವು. ತನಿಖೆ ಮುಂದುವರಿಸಿದ ಎನ್ ಸಿ ಇನ್ನಷ್ಟು ವಿಚಾರಗಳನ್ನು ಅನಾವರಣಗೊಳಿಸಿತು.
ಬೆಂಗಳೂರಿನ ಸೆಂಟ್ರಲ್ ಕ್ರೈಂ ಬ್ರಾಂಚ್ (ಅಅಃ) ಕನ್ನಡ ಚಲನಚಿತ್ರರಂಗದ ಹಲವರನ್ನು ವಿಚಾರಣೆಗೆ ಗುರಿಪಡಿಸಿತು. 2006ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ ‘ಗಂಡ ಹೆಂಡತಿ’ ಚಿತ್ರದ ನಾಯಕಿ ಸಂಜನಾ ಗಲ್ರಾನಿ ಅವರು ಡ್ರಗ್ಸ್ ಪೆಡ್ಲರ್ ಗಳ ಒಡನಾಟ ಹೊಂದಿರುವ ಶಂಕೆಯ ಮೇರೆಗೆ ಬಂಧಿತರಾದರು. ‘ಗಂಡ ಹೆಂಡತಿ’ ಚಿತ್ರವು ಅನುರಾಗ್ ಬಸು ನಿರ್ದೇಶನದ ಸೂಪರ್ ಹಿಟ್ ಚಿತ್ರ ‘ಮರ್ಡರ್’ನ ರೀಮೇಕ್ ಆಗಿತ್ತು. ಸಂಜನಾ ಸೆರೆಯಾಗುವ ಮುನ್ನ ಸೆಪ್ಟೆಂಬರ್ 4 ರಂದು ಮಾಜಿ ಮಿಸ್ ಇಂಡಿಯಾ ರನ್ನರ್-ಅಪ್ ನಟಿ ರಾಗಿಣಿ ದ್ವಿವೇದಿ ದಸ್ತಗಿರಿಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಖ್ಯಾತರಾಗಿರುವ ಇವರಿಬ್ಬರೂ ಕಾಂಟ್ರಾಬ್ಯಾಂಡ್ ಮತ್ತು ಸಿಂಥೆಟಿಕ್ ಡ್ರಗ್ಸ್ ಗಳ ಸಂಗ್ರಹ ಮತ್ತು ವಿತರಣೆ ಮಾಡುತ್ತಿದ್ದರು ಎಂದು ಆರೋಪಿಸಲಾಯಿತು.
ಈ ಪ್ರಕರಣದಲ್ಲಿ ಬಂಧಿತನಾದ ವೀರೇನ್ ಖನ್ನಾ ಹಲವರು ಪಾರ್ಟಿಗಳನ್ನು ಆಯೋಜಿಸುತ್ತಿದ್ದು ಈ ಪಾರ್ಟಿಗಳಲ್ಲಿ ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯರು ಪಾಲ್ಗೊಳ್ಳುತ್ತಿದ್ದರು ಎಂಬ ಆರೋಪವಿದೆ. ಖನ್ನಾ ರಾಗಿಣಿಗೆ ನಿಕಟನಾಗಿದ್ದ ಎಂದು ಹೇಳಲಾಗಿದೆ.
ವೀರೇನ್ ಖನ್ನಾ ಮನೆ ಮೇಲೆ ದಾಳಿ ನಡೆಸಿದಾಗ ಅಲ್ಲಿ ಪೊಲೀಸ್ ಸಮವಸ್ತ್ರ ದೊರೆತಿರುವುದು ಅಚ್ಚರಿಗೆ ಕಾರಣವಾಯಿತು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ನುಡಿದರು.
“ಈ ಪೊಲೀಸ್ ಸಮವಸ್ತ್ರವು ಬೆಲ್ಟ್, ಕ್ಯಾಪ್ ಮತ್ತು ಶೂಗಳನ್ನು ಹೊಂದಿದ್ದು ನಕ್ಷತ್ರಗಳ ಗುರುತು ಇರಲಿಲ್ಲ. ವೀರೇನ್ ಖನ್ನಾಗೆ ಪೊಲೀಸ್ ಸಮವಸ್ತ್ರ ಧಾರಣೆ ಖಯಾಲಿ ಇದ್ದಂತಿದೆ” ಎಂದು ಸಂದೀಪ್ ಪಾಟೀಲ್ ಅವರು ಪ್ರತಿಪಾದಿಸಿದರು.
ಪ್ರಕರಣದಲ್ಲಿ ಕೇಳಿಬಂದ ಮತ್ತೊಂದು ಪ್ರಮುಖ ಹೆಸರು ಕರ್ನಾಟಕದ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ. ಈತ ಹೆಬ್ಬಾಳದಲ್ಲಿರುವ ತನ್ನ ಬಂಗಲೆಯನ್ನು ಮದುವೆಗಳು ಮತ್ತು ಗಣ್ಯರು ಪಾಲ್ಗೊಳ್ಳುತ್ತಿದ್ದ ಪಾರ್ಟಿಗಳಿಗೆ ಬಾಡಿಗೆಗೆ ಕೊಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾದಕವಸ್ತು ನಿಯಂತ್ರಣ ದಳ (ಓಅಃ) ಕಳೆದ ತಿಂಗಳು ವಿವಿಧ ನಗರಗಲ್ಲಿ ನಡೆಸಿದ ದಾಳಿಗಳಲ್ಲಿ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಲಾಯಿತು. ದಾಳಿಯ ವೇಳೆ ಬೆಂಗಳೂರಿನ ಗಣ್ಯರ ಆಸ್ತಿಯ ಆವರಣಗಳಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿದ್ದು ಇವು ಗಣ್ಯರ, ಅದರಲ್ಲೂ ಸ್ಯಾಂಡಲ್ ವುಡ್ ನ ಸೇರಿದ್ದು ಎಂದು ಶಂಕಿಸಲಾಯಿತು.
ಈ ದಾಳಿಗಳ ಬಳಿಕ ರವೀಂದ್ರ ಎಂಬಾತನನ್ನು ಸೆರೆಹಿಡಿಯಲಾಯಿತು. ಈತನ ಬಳಿ ಇದ್ದ ಡೈರಿಯಲ್ಲಿ ಸ್ಯಾಂಡಲ್ ವು ಡ್ ನ ಸೆಲೆಬ್ರಿಟಿಗಳನೇಕರ ಹೆಸರುಗಳಿದ್ದವು. ಇತರ ಇಬ್ಬರು ಪೆಡ್ಲರ್ ಗಳಾದ ಅನೂಪ್ ಮತ್ತು ಅನೀಖಾರನ್ನು ಎಂಡಿಎಂಎ (ಎಕ್ಸ್ಟೆಸಿ) ಸೇರಿದಂತೆ ಹಲವಾರು ಮಾದಕ ವಸ್ತುಗಳನ್ನು ಹೊಂದಿದ್ದ ಆರೋಪದ ಮೇರೆಗೆ ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿದವು.
ವಿಚಾರಣೆ ವೇಳೆ ಈ ಡ್ರಗ್ಸ್ ಗಳನ್ನು ಬೆಲ್ಜಿಯಂನ ಬ್ರಸೆಲ್ಸ್ ನಿಂದ ಪಡೆದುಕೊಳ್ಳಲಾಗುತ್ತಿತ್ತು ಎಂದು ಅನೀಖಾ ಬಾಯ್ಬಿಟ್ಟಿದ್ದಾಳೆ. ಆಕೆ ತನಗೆ ಸ್ಯಾಂಡಲ್ ವುಡ್ನ ಹಲವಾರು ಸೆಲೆಬ್ರೆಟಿಗಳ ಸಂಪರ್ಕ ಇರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ಮೊಬೈಲ್ ನಲ್ಲಿ ರಾಗಿಣಿ ದ್ವಿವೇದಿಯ ಹೆಸರೂ ಇತ್ತು. ಇದುವರೆಗೆ ಈ ಪ್ರಕರಣದಲ್ಲಿ ಹತ್ತಾರು ಮಂದಿಯ ಮೇಲೆ ಮೊಕದ್ದಮೆ ಹೂಡಲಾಗಿದ್ದು ಕೆಲವರನ್ನು ಬಂಧಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ರಾಗಿಣಿ ಮತ್ತು ಸಂಜನಾ ಪರ ವಕೀಲರು ತಮ್ಮ ಕಕ್ಷಿದಾರರನ್ನು ವಿನಾಕಾರಣ ಈ ಹಗರಣದಲ್ಲಿ ಸಿಲುಕಿಸಲಾಗುತ್ತಿದೆ, ಪೊಲೀಸ್ ತನಿಖೆಯಲ್ಲಿ ನ್ಯೂನತೆಗಳಿವೆ ಎಂದು ಆರೋಪಿಸಿದರು.
2009ರಲ್ಲಿ ‘ವೀರ ಮದಕರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಗಿಣಿ ಈ ಮುನ್ನ ಯಶಸ್ವಿ ರೂಪದರ್ಶಿ ಆಗಿದ್ದರು. ಅವರು ಮೋಹನ್ಲಾ ಲ್ (ಕಂದಹಾರ್ ಚಿತ್ರದಲ್ಲಿ) ಮತ್ತು ಮಮ್ಮೂಟಿ (ಫೇಸ್ ಟು ಫೇಸ್ ಚಿತ್ರದಲ್ಲಿ) ಸೇರಿದಂತೆ ಅಗ್ರಪಂಕ್ತಿಯ ನಾಯಕ ನಟರ ಜೊತೆ 30 ಕ್ಕೂ ಅಧಿಕ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಖನ್ನಾ ಮತ್ತು ರಾಗಿಣಿ ಆಪ್ತರಾಗಿದ್ದು ಹಲವಾರು ಪಾರ್ಟಿಗಳನ್ನು ಆಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖನ್ನಾ ಮತ್ತು ರಾಗಿಣಿ ಇಬ್ಬರೂ ತನಿಖೆಗೆ ಸಹಕರಿಸಲಿಲ್ಲ. ಖನ್ನಾ ಮನೆಯ ಮತ್ತು ಲಾಕರ್ ಕೀ ಕೇಳಿದಾಗ ತನ್ನ ಬಳಿ ಇಲ್ಲವೆಂದ. ಬಳಿಕ ಮನೆಯ ಬಾಗಿಲು ಒಡೆದು ಮನೆ ಪ್ರವೇಶಿಸಿ ಲಾಕರ್ ಒಡೆದು ಅದರಲ್ಲಿದ್ದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದರು.
ಬಂಧಿತರಾಗುವ ಮುನ್ನ ರಾಗಿಣಿ ತನ್ನ ದೂರವಾಣಿ ಸಂಖ್ಯೆ ಬದಲಿಸಿದ್ದು ಪೊಲೀಸರ ಕರೆಗೆ ಸ್ಪಂದಿಸಲಿಲ್ಲ. ಬಳಿಕ ಆಕೆಯನ್ನು ಮನೆಯಲ್ಲಿ ಶೋಧಿಸಿ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಅರುಹಿದ್ದಾರೆ.
ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆತಂದಾಗ ಪರೀಕ್ಷೆಗೆ ರಾಗಿಣಿ ಮೂತ್ರದ ಬದಲು ನೀರು ನೀಡಿದ್ದು ದೊಡ್ಡ ಸುದ್ದಿಯಾಯಿತು.
ಆಕೆಯ ದೂರವಾಣಿ ಕರೆಗಳು ಮತ್ತು ಬ್ಯಾಂಕ್ ವಿವರಗಳಿಂದ ಹಗರಣದಲ್ಲಿ ಆಕೆಯ ಪಾತ್ರ ಶಂಕಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇವರೆಲ್ಲ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಲಾವುಮ್ ಪೆಪ್ಪರ್ ಸಾಂಬಾ ಎಂಬಾತನ ಗ್ರಾಹಕರಾಗಿದ್ದರು ಎಂದು ಶಂಕಿಸಲಾಯಿತು. ರಾಗಿಣಿಯ ಮತ್ತೋರ್ವ ಆಪ್ತ, ಪ್ರಾದೇಶಿಕ ಸಾರಿಗೆ ಕಚೇರಿಯ (ಖಖಿಔ) ಉದ್ಯೋಗಿ ಎಂದು ಗುರುತಿಸಲಾದ ಶಂಕರ್ ಎಂಬಾತ ಕೂಡ ಈ ಜಾಲದ ಶಂಕಿತನಾಗಿದ್ದಾನೆ. ಈತ ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಅಲ್ಲಿ ಮರಿಜುವಾನ ಮತ್ತು ಕೊಕೇನ್ ನಂತಹ ಮಾದಕವಸ್ತುಗಳ ಪ್ರಸರಣ ನಡೆಯುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿತು. ತಮ್ಮಿಬ್ಬರ ನಡುವೆ ಹರಿದಾಡಿದ್ದ ಮೆಸೇಜ್ ಗಳನ್ನು ರಾಗಿಣಿ ಡಿಲೀಟ್ ಮಾಡಿದ್ದರು. ಎನ್ನಲಾಗಿದೆ ಆದರೆ ಸೈಬರ್ ತಾಂತ್ರಿಕ ತಂಡ ಆಕೆಯ ಫೋನ್ ಗಳಿಂದ ಈ ಸಂದೇಶಗಳನ್ನು ಮರಳಿ ಪಡೆಯುವಲ್ಲಿ ಸಫಲವಾಯಿತು.
ಅದೇ ರೀತಿ 40ಕ್ಕೂ ಅಧಿಕ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ಗಲ್ರಾನಿ 2006ರಲ್ಲಿ ‘ಒರು ಕಾದಲ್ ಸೆಯಿವೀರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ಖ್ಯಾತಿ ಪಡೆದವರು. ಅವರ ಸಹೋದರಿ ನಿಕ್ಕಿ ಗಲ್ರಾನಿಯೂ ನಟಿಯಾಗಿದ್ದಾರೆ. ಸಂಜನಾ ದೇಶ ವಿದೇಶಗಳಲ್ಲಿ ನಡೆಯುತ್ತಿದ್ದ ಕ್ಯಾಸಿನೋಗಳಿಗೆ ಹಲವಾರು ಸಲ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ತನಿಖೆ ಮುಂದುವರಿದಂತೆ ತಾರಾ ದಂಪತಿ ದಿಗಂತ್ ಮತ್ತು ಐಂದ್ರಿತಾರೇ ಅವರನ್ನೂ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಯಿತು. ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್, ರಾಜಕೀಯ ಮುಖಂಡ ಆರ್.ವಿ. ದೇವರಾಜ್ ಅವರ ಪುತ್ರ ಯುವರಾಜ್ ಅವರನ್ನು ಕರೆಸಿ ವಿಚಾರಣೆಗೆ ಗುರಿಪಡಿಸಲಾಯಿತು.
ರಾಗಿಣಿ ನಟಿಸಿದ್ದ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರೆನ್ನಲಾದ ಶಿವಪ್ರಕಾಶ್ ಎಂಬಾತನನ್ನೂ ಪ್ರಕರಣದಲ್ಲಿ ಮುಖ್ಯ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ವೈಭವ್ ಜೈನ್, ಪ್ರಶಾಂತ್ ರಂಕಾ, ಆದಿತ್ಯ ಆಳ್ವ, ಪ್ರಶಾಂತ್ ಬಾಬು, ಸೈಮನ್, ರಾಹುಲ್ ತೋನ್ಸೆ, ಅಶ್ವಿನ್, ವಿಜಯ್ ಮತ್ತು ವಿದೇಶೀಯ ಲಾವುಮ್ ಪೆಪ್ಪರ್ ವಿರುದ್ಧ ಪ್ರಥಮ ಮಾಹಿತಿ ವರದಿ (ಈIಖ) ದಾಖಲಾಗಿದೆ.
ಈ ನಡುವೆ ಕರ್ನಾಟಕ ಪೊಲೀಸರು ಹಲವಾರು ಕಡೆಗಳಲ್ಲಿ ದಾಳಿ ನಡೆಸಿ ಡ್ರಗ್ ಪೆಡ್ಲರ್ ಗಳನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಶೀಜಿನ್, ವಿಧುಸ್ ಮತ್ತು ಸುಬ್ರಮಣಿ ಎಂಬ ಅಂತಾರಾಜ್ಯ ತಂಡದ ಮೂವರನ್ನು ಬಂಧಿಸಿ 2.1 ಕೆ.ಜಿ. ಹಶೀಷ್ ಮತ್ತು 2 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ. “ಇದು ಇತ್ತೀಚೆಗೆ ಡ್ರಗ್ಸ್ ಅದರಲ್ಲೂ ಹಶೀಷ್ ನ ಭಾರಿ ಪ್ರಮಾಣದ ಜಪ್ತಿಯಾಗಿದೆ.” ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘಿಸಿದ್ದಾರೆ. ಬಂಧಿತ ಮೂವರು ಕೇರಳದವರಾಗಿದ್ದಾರೆ ಮತ್ತು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಬಂಧಿತರಲ್ಲಿ ಓರ್ವನಾದ ವಿಧುಸ್ ಯುನೈಟೆಡ್ ಕಿಂಗ್ ಡಮ್ ನ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ ಎಂದು ಸಂದೀಪ್ ಪಾಟೀಲ್ ವಿವರಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಅಥಣಿ ಪೊಲೀಸರು ಸಾಗರ್ ಕಟ್ಟಿಕರ್ ಮತ್ತು ಗುರುಲಿಂಗ ಧೋಲೆ ಎಂಬ ಮಹಾರಾಷ್ಟ್ರದ ನಿವಾಸಿಗಳನ್ನು ದಸ್ತಗಿರಿ ಮಾಡಿ 2 ಕೆ.ಜಿ. ಮರಿಜುವಾನಾವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಬೆಂಗಳೂರು ಸಿಸಿಬಿ ತಂಡವು ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಭೇದಿಸಿ ಒಟ್ಟಾರೆ 2.65 ಕೆ.ಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಒಂದು ಕೋಟಿ ರೂ.ಗಳಿಗೂ ಅಧಿಕ ಎನ್ನಲಾಗಿದೆ. ಆರೋಪಿಗಳು ಶಾಲಾ ಕಾಲೇಜುಗಳ ಹುಡುಗರಿಗೆ ಡ್ರಗ್ಸ್ ಲೇಪಿತ ಸಿಹಿ ತಿನಿಸುಗಳು, ಚಾಕೋಲೇಟ್ ಗಳನ್ನು ನೀಡಿ ಪ್ರಲೋಭನೆಗೊಳಪಡಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಇದು ಚಟವಾದ ಬಳಿಕ ಅಧಿಕ ಬೆಲೆಗೆ ಇವುಗಳನ್ನು ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂ ಡ್ರಗ್ಸ್ ಗೆ 6000 ರೂ. ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
ಖಚಿತ ಮಾಹಿತಿ ಮೇರೆಗೆ ಕಲಬುರಗಿಯ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು ನಾಲ್ಕರು ಡ್ರಗ್ಸ್ ಪೆಡ್ಲರ್ ಗಳನ್ನು ಸೆರೆಹಿಡಿದು 1350 ಕೆ.ಜಿ ಕೆನ್ನಬೀಸ್ ಅನ್ನು ಜಪ್ತಿ ಮಾಡಿದ್ದಾರೆ.
ಜ್ಞಾನ ಶೇಖರ್ (37), ಸಿದ್ಧುನಾಥ ಲವಾಟಿ (22), ಚಂದ್ರಕಾಂತ್ (34) ಮತ್ತು ನಾಗನಾಥ್ (39) ಬಂಧಿತ ಆರೋಪಿಗಳು. ಚಂದ್ರಕಾಂತನನ್ನು ವಿಚಾರಣೆಗೊಳಪಡಿಸಿದಾಗ ಆತನ ತೋಟದ ಮನೆಯ ನಿರ್ದಿಷ್ಟ ಜಾಗಕ್ಕೆ ಕರೆದೊಯ್ದ. ಅಲ್ಲಿ ನಾವು ಮಣ್ಣನ್ನು ಅಗೆದಾಗ ಮರದ ನೆಲಬಾಗಿಲು ಕಾಣಿಸಿತು. ಅದನ್ನು ತೆರೆದಾಗ ನೆಲಮಾಳಿಗೆಯಲ್ಲಿ ಬಾಕ್ಸ್ ಗಳಲ್ಲಿ ಸುತ್ತಿಟ್ಟಿದ್ದ 1350 ಕೆ.ಜಿ. ಕೆನ್ನಬೀಸ್ ಪತ್ತೆಯಾಯಿತು. ಆರೋಪಿ ಚಂದ್ರಕಾಂತ ಒಡಿಶಾದಲ್ಲಿ ಬೆಳೆದ ಕೆನ್ನಬೀಸ್ ಅನ್ನು ತೆಲಂಗಾಣಕ್ಕೆ ತರಕಾರಿ ಲಾರಿಯಲ್ಲಿ ಸಾಗಿಸಿ ಅಲ್ಲಿಂದ ತಂದು ತನ್ನ ಕುರಿದೊಡ್ಡಿಯ ನೆಲದಡಿ ಅಡಗಿ ಇರಿಸಿದ್ದ” ಎಂದು ಪೊಲೀಸ್ ಉಪ ಆಯುಕ್ತ (ಕೇಂದ್ರ) ಅನುಚೇತ್ ವಿವರಿಸಿದರು.
ಎಲ್ಲ ನಾಲ್ವರು ಆರೋಪಿಗಳ ಮೇಲೆ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ಶೇಷಾದ್ರಿಪುರಂ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಅವರು 2 ಲಕ್ಷ ರೂ.ಗಳ ಬಹುಮಾನ ನೀಡಿ ಗೌರವಿಸಿದರು.