ಖಡಕ್ ಅಧಿಕಾರಿ ಡಾ ವೈ.ಎಸ್. ರವಿಕುಮಾರ್ ಐಪಿಎಸ್

0
1027

ಈ ಪೊಲೀಸ್ ಅಧಿಕಾರಿ ವೈದ್ಯಕೀಯ ಪದವೀಧರರು. ಆದಾಗ್ಯೂ ಪೊಲೀಸ್ ಅಧಿಕಾರಿಯಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಬಹುದೆಂಬ ಹಿರಿಯಾಸೆಯಿಂದ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಇವರೇ ಖಡಕ್ ಐಪಿಎಸ್ ಅಧಿಕಾರಿ ಡಾ. ವೈ.ಎಸ್. ರವಿಕುಮಾರ್ ಐಪಿಎಸ್.

10-09-1978ರಂದು ಭದ್ರಾವತಿಯಲ್ಲಿ ಶಂಕರ್ ನಾಯಕ್-ಚಂದ್ರಮ್ಮ ದಂಪತಿಯ ಸುಪುತ್ರರಾಗಿ ರವಿಕುಮಾರ್ ಜನಿಸಿದರು. ತಂದೆ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು.

ಭದ್ರಾವತಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಉಡುಪಿಯ ಅದಮಾರು ಮಠದಲ್ಲಿ ಪಿಯುಸಿ ಶಿಕ್ಷಣ ಪಡೆದರು. 1997-2000ದ ನಡುವೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದರು. 2007ರ ತಂಡದ ಐಪಿಎಸ್ ಅಧಿಕಾರಿಯಾಗಿರುವ ಶ್ರೀಯುತರು 2007ರಲ್ಲಿ ಐಪಿಎಸ್ ಪರೀಕ್ಷೆ ತೇರ್ಗಡೆಯಾಗಿ 2008ರಲ್ಲಿ ಸೇವೆಗೆ ಸೇರ್ಪಡೆಗೊಂಡರು.

ಎಂಬಿಬಿಎಸ್ ಮಾಡಿಯೂ ಇವರು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಕಾರಣವೆಂದರೆ ಇವರು ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅಪಘಾತಗಳ ಸಂದರ್ಭಗಳಲ್ಲಿ ಜನರು ತಮ್ಮ ಮೇಲೆ ಕಾನೂನು ಕ್ರಮ ಜರುಗಬಹುದೆಂಬ ಭೀತಿಯಿಂದ ಅಪಘಾತವನ್ನು ಕಂಡೂಕಾಣದೆ ಇರುತ್ತಿದ್ದರು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರುತ್ತಿರಲಿಲ್ಲ. ಇಂಥ ಅಪಸವ್ಯಗಳನ್ನು ಕಂಡು ಮನನೊಂದ ಡಾ|| ರವಿಕುಮಾರ್‍ರವರು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ನಿರ್ಧರಿಸಿದರು.

2009 ರಿಂದ 2011ರ ವರೆಗೆ ಬೀದರ್ ಜಿಲ್ಲಾ ಎಎಸ್‍ಪಿಯಾಗಿ ಸೇವೆ ಸಲ್ಲಿಸಿದ ಶ್ರೀಯುತರು ಮುಂಬಡ್ತಿ ಪಡೆದು 2011-12ರ ಅವಧಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ಯಾಗಿ ಕಾರ್ಯನಿರ್ವಹಿಸಿದರು. ಬಳಿಕ 2012-13ರ ಅವಧಿಯಲ್ಲಿ ಧಾರವಾಡ ಜಿಲ್ಲಾ ಎಸ್‍ಪಿಯಾಗಿ, 2013-14ರಲ್ಲಿ ಚಿತ್ರದುರ್ಗ ಜಿಲ್ಲಾ ಎಸ್‍ಪಿಯಾಗಿ, 2014-16ರಲ್ಲಿ ಗುಪ್ತಚರ ದಳ (ಇಂಟೆಲಿಜೆನ್ಸ್) ಎಸ್‍ಪಿಯಾಗಿ ಕೆಲಸ ಮಾಡಿದರು. 2017ರಿಂದ ಇಲ್ಲಿಯ ತನಕ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೀದರ್ ಜಿಲ್ಲಾ ಎಎಸ್‍ಪಿಯಾಗಿ ಬೀದರ್ ಜಿಲ್ಲೆಯಲ್ಲಿ ವ್ಯಾಪಕವಾಗಿದ್ದ ಗಾಂಜಾ ಹಾವಳಿಯನ್ನು ತಹಬಂದಿಗೆ ತಂದದ್ದು ಇವರ ಉತ್ತಮ ಸಾಧನೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಸಾಕಷ್ಟು ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದಾರೆ. ಹಳ್ಳಿಹಳ್ಳಿಗೂ ತೆರಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಗ್ರಾಮೀಣ ಜನತೆಯಲ್ಲಿ ಸ್ಥೈರ್ಯ ತುಂಬಿದ್ದಾರೆ.

ಇವರು ಚಿತ್ರದುರ್ಗದಲ್ಲಿ ಎಸ್‍ಪಿ ಆಗಿದ್ದಾಗ ಚಿತ್ರದುರ್ಗ-ದಾವಣಗೆರೆ ಗಡಿ ಭಾಗದಲ್ಲಿ ಅಪಘಾತಗಳು ಅಧಿಕವಾಗಿ ಸಂಭವಿಸುತ್ತಿದ್ದವು. ಇದರ ಕುರಿತು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಅಂಡರ್‍ಪಾಸ್ ನಿರ್ಮಾಣ ಮಾಡಿ ಅಪಘಾತಗಳ ಸಂಖ್ಯೆ ತಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಜಿಲ್ಲಾ ಎಸ್‍ಪಿ ಆಗಿದ್ದ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 30-40 ಟಿಪ್ಪರ್‍ಗಳು ಕಳುವಾಗಿದ್ದವು. ಈ ಪ್ರಕರಣವನ್ನು ಸವಾಲಾಗಿ   ಸ್ವೀಕರಿಸಿದ   ಡಾ ರವಿಕುಮಾರ್‍ರವರು ಈ ಪಿಡುಗನ್ನು ನಿಯಂತ್ರಣಕ್ಕೆ ತಂದರು.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಉಡುಪಿಯ ಪೇಜಾವರ ಶ್ರೀಗಳ ಜೊತೆ ಓಡಾಡಿ, ಕಾಡುಮೇಡುಗಳನ್ನೆಲ್ಲ ಜಾಲಾಡಿ ನಕ್ಸಲೀಯರನ್ನು ಪರಿವರ್ತಿಸಿ ಅವರನ್ನು ಮುಖ್ಯವಾಹಿನಿಗೆ   ಕರೆತರುವಲ್ಲಿ ಶ್ರಮಿಸಿದ್ದಾರೆ.

ಹೀಗೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದೆಡೆಯಲ್ಲೆಲ್ಲ ಒಳ್ಳೆಯ ಕೀರ್ತಿಗಳಿಸಿದ್ದಾರೆ, ಸ್ನೇಹಜೀವಿಯಾಗಿರುವ ಶ್ರೀಯುತರು ಸಿಬ್ಬಂದಿಯ ಜೊತೆಗೆ ಪ್ರೀತಿ-ವಿಶ್ವಾಸಗಳಿಂದ ಬೆರೆಯುತ್ತಾರೆ. ಉತ್ತಮ ಬರಹಗಾರರೂ ಆಗಿರುವ ಶ್ರೀಯುತರು ಕರಾವಳಿ ಭದ್ರತೆ ಕುರಿತು ಲೇಖನ ಬರೆದುಕೊಟ್ಟು ನಮ್ಮ ಪತ್ರಿಕೆಗೂ ಪ್ರೋತ್ಸಾಹ ನೀಡಿದ್ದಾರೆ.

ಭಗವಂತನು   ಶ್ರೀಯುತರಿಗೆ ಆಯುರಾರೋಗ್ಯ-ಸಿರಿ ಸಂಪತ್ತುಗಳನ್ನು ಅನುಗ್ರಹಿಸಲಿ, ಇನ್ನೂ ಹೆಚ್ಚಿನ ದಕ್ಷತೆಯಿಂದ ಸೇವೆ ಸಲ್ಲಿಸುವ ಶಕ್ತಿಯನ್ನು ಅನುಗ್ರಹಿಸಲಿ, ತನ್ಮೂಲಕ ನಾಡಿಗೆ ಜನತೆಯ ಬದುಕು ಹಸನಾಗಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.