ಬೆಂಗಳೂರು ಗಲಭೆ

0
959

11-08-2020ರ ರಾತ್ರಿ ಬೆಂಗಳೂರು ನಗರ ಹಿಂಸಾತ್ಮಕ ಘರ್ಷಣೆಗಳಿಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಸಂಬಂಧಿಯೊಬ್ಬರು ಪ್ರವಾದಿ ಮಹಮ್ಮದರ ಕುರಿತ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಅನ್ನು ಷೇರ್ ಮಾಡಿದ್ದು ಈ ಘಟನೆಗೆ ಕಾರಣವಾಯಿತು ಎನ್ನಲಾಗಿದೆ. ಶಾಸಕರ ಸೋದರ ಸಂಬಂಧಿಯ ಈ ಕೃತ್ಯವನ್ನು ಪ್ರತಿಭಟಿಸಲು ಜನರ ಒಂದು ಗುಂಪು ಶಾಸಕರ ನಿವಾಸದ ಮುಂದೆ ಜಮಾವಾಣೆಗೊಂಡಿತ್ತು. ಆದರೆ ಪ್ರತಿಭಟನೆ ಹಿಂಸಾತ್ಮಕ ರೂಪ ತಳೆಯಿತು.              

ಶಾಸಕರ ಮನೆಯ ಸುತ್ತ ಜನರ ಗುಂಪುಗಳು ಮತ್ತು ಪೊಲೀಸ್ ಪಡೆಗಳ ನಡುವೆ ಘರ್ಷಣೆ ಆರಂಭವಾಯಿತು. ನಂತರ ಈ ಸಂಘರ್ಷ ಕೆ.ಜಿ. ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆಗಳ ತನಕ ವಿಸ್ತರಿಸಿತು. ಶಸ್ತ್ರಾಸ್ತ್ರ ಸಜ್ಜಿತರಾಗಿ ಗಲಭೆ ಕೋರರು ನಡೆಸಿದ ದಾಳಿಯಲ್ಲಿ 30 ರಿಂದ 80 ಪೊಲೀಸ್ ಸಿಬ್ಬಂದಿ ಮತ್ತು ಘಟನೆಯನ್ನು ವರದಿ ಮಾಡಲು ಸ್ಥಳಕ್ಕೆ ತೆರಳಿದ್ದ ಕೆಲವು ಪತ್ರಕರ್ತರು ಗಾಯಗೊಂಡರು. ಪೊಲೀಸರು ಉದ್ರಿಕ್ತ ಗುಂಪನ್ನು ಚೆದುರಿಸಲು ಲಾಠಿಪ್ರಹಾರ, ಅಶ್ರವಾಯು ಸೆಲ್ ಪ್ರಯೋಗಿಸಿದರೂ ಫಲಿತಾಂಶ ಬರದಿದ್ದಾಗ ಅನಿವಾರ್ಯವಾಗಿ ಗೋಲಿಬಾರ್ ಮಾಡಬೇಕಾಯಿತು. ಪೊಲೀಸರ ಗುಂಡೇಟಿಗೆ ಮೂವರು ಬಲಿಯಾದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ, ಆಸ್ತಿಪಾಸ್ತಿಗೆ ಉದ್ರಿಕ್ತ ಜನರ ಗುಂಪು ಬೆಂಕಿ ಹಾಕಿತು. ಗಲಭೆ ಪೀಡಿತ ಪ್ರದೇಶಗಳಲ್ಲಿ ಕಫ್ರ್ಯೂ ವಿಧಿಸಲಾಯಿತು.

ಘಟನೆ ಇಸ್ಲಾಮಿಕ್ ಮೂಲಭೂತವಾದಿ ಪಕ್ಷ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ  (SಆPI)  ದಿಂದ  ಪ್ರೇರಿತವಾಗಿದೆ  ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಸಂಘಟನೆಯ ಕೆಲವು ಮುಖಂಡರೂ ಸೇರಿದಂತೆ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಯಿತು.

ಇಸ್ಲಾಂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾಡಲಾಗಿತ್ತೆನ್ನಲಾದ   ಫೇಸ್ ಬುಕ್   ಪೋಸ್ಟ್ ಅನ್ನು ಶಾಸಕ ಮೂರ್ತಿ ಅವರ ಸೋದರ ಸಂಬಂಧಿ ಷೇರ್ ಮಾಡಿದರೆನ್ನುವ ಆರೋಪ ಕಾಳ್ಗಿಚ್ಚಿನಂತೆ ಹರಡಿದ್ದೇ ಈ ಗಲಭೆಗೆ ಮುಖ್ಯ ಕಾರಣವೆನ್ನಲಾಗಿದೆ. ಈ ಪೋಸ್ಟ್ ಇಡೀ ಪ್ರದೇಶದಲ್ಲಿ ವೈರಲ್ ಆಗುತ್ತಿದ್ದಂತೆ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ನಿವಾಸದ ಮುಂದೆ ಸೇರತೊಡಗಿದ ಗುಂಪು ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸತೊಡಗಿತು. ಈ ಕುರಿತು ದೂರು ಸಲ್ಲಿಸಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು ಎಂಬ ಸುದ್ದಿ ಹರಡಿ ಗುಂಪು ರೊಚ್ಚಿಗೆದ್ದು ದಾಂಧಲೆ ಆರಂಭಿಸಿತು.

ಆ ದಿನ ರಾತ್ರಿ ಎಂಟುಗಂಟೆ ಹೊತ್ತಿಗೆ ಜನರ ಚಿಕ್ಕ ಗುಂಪು ಶಾಸಕರ ಮನೆ ಮುಂದೆ ಜಮಾಯಿಸಿತು. ತದನಂತರ ಮಾಧ್ಯಮ ಸಂದೇಶ ರವಾನೆಗೆ ಹೊಣೆಯಾದವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ನೂರಾರು ಜನ ಡಿಜೆ ಹಳ್ಳಿ ಪೊಲೀಸ್ ಠಾಣೆಯ   ಮುಂದೆ   ಗುಂಪುಗೂಡಿದರು.   SಆPI ಸಂಘಟನೆಯ ಸದಸ್ಯರೂ ಈ ಗುಂಪಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದರು.

ಮಾಧ್ಯಮಗಳ ವರದಿಯ ಪ್ರಕಾರ ಆರಂಭದಲ್ಲಿ ನಿರ್ದಿಷ್ಟ ಕೋಮಿಗೆ ಸೇರಿದ 18-20 ಮಂದಿ ರಾತ್ರಿ 8-30ರಲ್ಲಿ ಶಾಸಕರ ಮನೆ ಮುಂದೆ ಪ್ರತಿಭಟನೆ ಆರಂಭಿಸಿದರು. ಶೀಘ್ರವೇ ಈ ಜನರ ಸಂಖ್ಯೆ 200ಕ್ಕೆ ಹಿಗ್ಗಿತು. ದೊಣ್ಣೆಗಳು, ಸೀಮೆಎಣ್ಣೆ ಮತ್ತು ಪೆಟ್ರೋಲ್ ಡಬ್ಬಗಳ ಜೊತೆಗೆ ಬಂದಿದ್ದ ಗುಂಪು ಕಲ್ಲು ತೂರಾಟದಲ್ಲಿ ತೊಡಗಿತು. ಶಾಸಕರ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿತು. ಶಾಸಕರ ಮನೆ ಮತ್ತು ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿತು. ಗುಂಪು ಮನೆಯಲ್ಲಿನ ಅಮೂಲ್ಯ ವಸ್ತುಗಳ ಲೂಟಿಯನ್ನೂ ಮಾಡಿತ್ತು. ಬೆಲೆಬಾಳುವ ಆಭರಣಗಳು, ಸೀರೆಗಳು ಮನೆಯಿಂದ ಕಾಣೆಯಾಗಿವೆ ಎಂದು ಮೂರ್ತಿ ನಂತರ ತಿಳಿಸಿದರು. ಗಲಭೆ ನಡೆದಾಗ ಶಾಸಕರು ಮತ್ತು ಅವರ ಕುಟುಂಬದವರು ಮನೆಯಲ್ಲಿರಲಿಲ್ಲ ಎನ್ನಲಾಗಿದೆ.

ಈ ವೇಳೆ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳೀಯ ಮುಖಂಡರನ್ನು ಕರೆಸಿ ಸಂಧಾನದ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ಈ ತಂಡಗಳು ಆರೋಪಿಯನ್ನು ಜೊತೆಗೆ ಕರೆತರದೇ ಹಿಂದಿರುಗಿದಾಗ ಆಕ್ರೋಶಗೊಂಡ ಜನರ ಗುಂಪು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿತಲ್ಲದೆ ಠಾಣೆಯ ಆಚೆ ನಿಲ್ಲಿಸಿದ ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿತು.              

ಇತರ ಇಬ್ಬರು ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಖಾನ್ ಮತ್ತು ರಿಜ್ವಾನ್ ಅರ್ಷದ್ ಅವರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಹಬಂದಿಗೆ ತರಲು ಯತ್ನಿಸಿದರು. ಆದರೆ ಆ ವೇಳೆಗಾಗಲೇ ಸನ್ನಿವೇಶ ನಿಯಂತ್ರಣ ಮೀರಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಅವರೂ ಸ್ಥಳಕ್ಕೆ ಆಗಮಿಸಿದರು.

ರಾತ್ರಿ 11 ರಿಂದ 12 ಗಂಟೆ ನಡುವೆ ಜನರ ಒಂದು ಗುಂಪು ಸ್ಥಳೀಯ ದೇವಾಲಯದ ಮುಂದೆ ಮಾನವ ಸರಪಳಿ ನಿರ್ಮಿಸಿ ಕಾವಲು ಕಾಯಲಾರಂಭಿಸಿತು. ಠಾಣೆಯೊಳಗೆ ಸಿಲುಕಿಕೊಂಡಿದ್ದ ಪೊಲೀಸ್ ಅಧಿಕಾರಿಗಳು ಮತ್ತು  ಸಿಬ್ಬಂದಿಯನ್ನು ರಕ್ಷಿಸಲು ಕರ್ನಾಟಕ  ರಾಜ್ಯ  ಮೀಸಲು  ಪೊಲೀಸ್  (ಏSಖP) ಪಡೆಯನ್ನು ಕರೆಸಬೇಕಾಯಿತು.  ಕೆಎಸ್ಆರ್ ಪಿ ಪಡೆಗಳು ಉದ್ರಿಕ್ತ ಗುಂಪನ್ನು ಚೆದುರಿಸಲು ಲಾಠಿ   ಪ್ರಹಾರ,   ಅಶ್ರುವಾಯು   ಸೆಲ್ ಗಳ ಪ್ರಯೋಗಮಾಡಿದರೂ ಪ್ರಯೋಜನ ಬಾರದಿದ್ದಾಗ ಉದ್ರಿಕ್ತ ಗುಂಪಿನ ಮೇಲೆ ಗಾಳಿಯಲ್ಲಿ ಬೆದರಿಕೆ ಗುಂಡುಗಳನ್ನು ಹಾರಿಸಲಾಯಿತು. ಆದರೂ ಗಲಭೆ ನಿಯಂತ್ರಣಕ್ಕೆ ಬರದಿದ್ದುದರಿಂದ ಗುಂಡುಗಳನ್ನು ಹಾರಿಸುವುದು ಅನಿವಾರ್ಯವಾಯಿತು. ಅದೃಷ್ಟವಶಾತ್ ಈ ಗಲಭೆ ಕೋಮು ಗಲಭೆಯ ರೂಪ ತಳೆಯಲಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದರು.

ಆ ರಾತ್ರಿ ಹತ್ತೂವರೆ ಗಂಟೆಯ ಸುಮಾರಿಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಮುತ್ತಿಗೆ ಹಾಕಿದ ಜನರ ಗುಂಪು ಬಳಿಕ ಅವರ ಸೋದರ ಸಂಬಂಧಿಯ ಮನೆಯನ್ನು ಮುತ್ತಿತು. ಶಾಸಕರ ಸೋದರ ಸಂಬಂಧಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸತೊಡಗಿತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆಗೆ ನುಗ್ಗಿ ದೊಂಬಿ ಎಬ್ಬಿಸಿ ಲೂಟಿಗೆ ಆರಂಭಿಸಿತು. ಮನೆಯಲ್ಲಿದ್ದವರು ಗೋಡೆ ಹಾರಿ ನೆರೆಮನೆಯಲ್ಲಿ ಆಶ್ರಯ ಪಡೆದರು. ಕುಟುಂಬದ ಕಾರಿಗೆ ಗುಂಪು ಅಗ್ನಿಸ್ಪರ್ಶ ಮಾಡಿತು.

ರಾತ್ರಿ 11 ಗಂಟೆಯ ಹೊತ್ತಿಗೆ ನೆರೆಯ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಶಾಸಕರ ಸೋದರ ಸಂಬಂಧಿಗೆ ರಕ್ಷಣೆ ನೀಡಲಾಗಿದೆ ಎಂಬ ವದಂತಿ ಹರಡತೊಡಗಿ ಗುಂಪಿನ ಒಂದು ವರ್ಗ ಚೆದುರಿ ಕೆಜಿ ಹಳ್ಳಿ ಪೊಲೀಸ್ ಠಾಣೆಯತ್ತ ಧಾವಿಸಿತು. ಠಾಣೆಗೆ ನುಗ್ಗಲು ಯತ್ನಿಸಿದ ಗುಂಪನ್ನು ತಡೆದಾಗ ಘರ್ಷಣೆ ಆರಂಭವಾಯಿತು. ಠಾಣೆಯ ಹೊರಗಡೆ ನಿಲ್ಲಿಸಿದ್ದ ಕಾರುಗಳಿಗೆ ಉದ್ರಿಕ್ತ ಜನರ ಗುಂಪು ಬೆಂಕಿ ಹಚ್ಚಿತು. ಶಸ್ತ್ರಸಜ್ಜಿತ ಗುಂಪಿನ ದಾಳಿಯಲ್ಲಿ ಹಲವಾರು ಪೊಲೀಸರು ಮತ್ತು ಠಾಣೆಯ ಹೊರಗಿದ್ದ ಕೆಲವು ಪತ್ರಕರ್ತರು ಗಾಯಗೊಂಡರು. ಪೊಲೀಸರು ಗುಂಡು ಹಾರಿಸತೊಡಗಿದ ನಂತರವಷ್ಟೇ ಗುಂಪು ಚೆದುರಿತು.

ಪತ್ರಿಕೆಯೊಂದರ ಪ್ರಕಾರ ಗಲಭೆ ನಡೆಸಿದ ಗುಂಪಿನಲ್ಲಿ 2000ಕ್ಕೂ ಅಧಿಕ ಜನರಿದ್ದರು ಮತ್ತು ಪೊಲೀಸರ ಗುಂಡೇಟಿಗೆ ಮೂರು ಮುಂದಿ ಆಹುತಿಯಾದರು. ಪೊಲೀಸ್ ಗೋಲಿಬಾರ್ ನಿಂದ ಮೂವರು ಅಸುನೀಗಿರುವುದನ್ನು ಖಚಿತ ಪಡಿಸಿದರು. ಆಯುಕ್ತರು ಈ ಗಲಭೆಯಲ್ಲಿ 1000 ಜನರು ತೊಡಗಿದ್ದರು ಎಂದು ಪ್ರತಿಪಾದಿಸಿದರು. ನಸುಕಿನ ಜಾವ 1 ರಿಂದ 5 ಗಂಟೆಯ ನಡುವೆ ಪೊಲೀಸರು ರಸ್ತೆಗಳನ್ನು ತೆರವುಗೊಳಿಸಲು ಶುರುಮಾಡಿದರು ಮತ್ತು ಹಿಂಸೆಯಲ್ಲಿ ನಿರತರಾದವರನ್ನು ಗುರುತಿಸಿ ಬಂಧಿಸುವ ಕಾರ್ಯ ಆರಂಭಿಸಿದರು.

12-08-2020ರಂದು ಬೆಂಗಳೂರು ಪೊಲೀಸ್ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಈ ಹಿಂಸಾ ಕೃತ್ಯಕ್ಕೆ ಸಂಬಂಧಿಸಿ 110 ಜನರನ್ನು ಬಂಧಿಸಲಾಗಿದೆ, ಅವರ ವಿರುದ್ಧ ಕೊಲೆಯತ್ನ ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಹೊರಿಸಲಾಗಿದೆ ಎಂದು ವರದಿ ಮಾಡಿದರು. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಫ್ರ್ಯೂ ಮತ್ತು ನಗರದ ಉಳಿದೆಡೆ ಸೆಕ್ಷನ್ 144 (ನಿಷೇಧಾಜ್ಞೆ) ಅನ್ನು ವಿಧಿಸಲಾಯಿತು ಎಂದು ತಿಳಿಸಿದರು. ತರುವಾಯ ಪಂತ್ ಅವರು ಆಗಸ್ಟ್ 15ರ ಬೆಳಗ್ಗೆ 6 ಗಂಟೆವರೆಗೆ ಕಫ್ರ್ಯೂ ವಿಸ್ತರಿಸಿದರು.

ಪೊಲೀಸ್ ಗೋಲಿಬಾರ್ ಅನ್ನು ಸಮರ್ಥಿಸಿಕೊಂಡ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಕುಲದೀಪ್ ಜೈನ್ ಅವರು ಈ ಘಟನೆಯಲ್ಲಿ ಪೊಲೀಸರು ಕೈಗೊಂಡ ಕ್ರಮ ಸೂಕ್ತವಾಗಿದೆ ಎಂದರು. ಉದ್ರಿಕ್ತ ಗುಂಪನ್ನು ಸಮಾಧಾನಗೊಳಿಸಲು ಪೊಲೀಸರು ನಡೆಸಿದ ಯತ್ನ ವಿಫಲವಾಯಿತು, ಉದ್ರಿಕ್ತ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಿದರು, ಇದರಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಬೇಕಾಯಿತು ಎಂದು ಅವರು ವಿವರಿಸಿದರು. ಸನ್ನಿವೇಶವನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗುಂಡುಹಾರಿಸುವುದು ಅನಿವಾರ್ಯವಾಗಿತ್ತು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತಿಪಾದಿಸಿದರು.

ಪೊಲೀಸ್   ಗೋಲಿಬಾರ್ ಗೆ   ಬಲಿಯಾದವರು ಗಲಭೆಕೋರರಲ್ಲ, ಸುಮ್ಮನೆ ರಸ್ತೆ ಬದಿ ನಿಂತು ಘಟನೆಯನ್ನು ವೀಕ್ಷಿಸುತ್ತಿದ್ದ ಮೂಕ ಪ್ರೇಕ್ಷಕರು ಎಂದು ಅವರ ಕುಟುಂಬದವರು ಆರೋಪಿಸಿದರು.

ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ಶಾಸಕರ ಸೋದರಸಂಬಂಧಿಯನ್ನು ದಸ್ತಗಿರಿ ಮಾಡಲಾಯಿತು. ಹೀಗಿದ್ದರೂ ಆತ ತನ್ನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ. ಪೋಸ್ಟ್ ಮಾಡುವ ಎರಡು ದಿನಗಳ ಹಿಂದೆ ಆತನ ಮೊಬೈಲ್ ಕಳವಾಗಿತ್ತು ಎಂದು ಅವನ ತಂದೆ ಪ್ರತಿಪಾದಿಸಿದರು. ಅವನ ಚಿಕ್ಕಪ್ಪ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಗಲಭೆಯಲ್ಲಿ ತಮ್ಮ ಪಿತ್ರಾರ್ಜಿತ ಆಸ್ತಿ ನಷ್ಟವಾಗಿದೆ ಎಂದು ಎಫ್ಐಆರ್ ದಾಖಲಿಸಿದರು. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಬೇಕು ಎಂದು ಅವರು ಕೋರಿದರು.

14-08-2020 ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಘಟನೆಯ ಸಂಬಂಧ ಇನ್ನೂ 60 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ತನ್ಮೂಲಕ ಪ್ರಕರಣದಲ್ಲಿ ಒಟ್ಟಾರೆ ಬಂಧಿತರಲ್ಲಿ ಬಿಬಿಎಂಪಿ ಕಾರ್ಪೊರೇಟರ್ ಒಬ್ಬರ ಪತಿಯೂ ಸೇರಿದ್ದು ಇವರು ಘಟನೆಯ ಸಂಚುಕೋರರಲ್ಲಿ ಓರ್ವರು ಎಂದು ಪ್ರಥಮ ಮಾಹಿತಿ ವರದಿ (ಈIಖ) ಯಲ್ಲಿ ಹೇಳಲಾಗಿದೆ.  ಇವರು  ಈIಖ  ನಲ್ಲಿ  7ನೇ  ಆರೋಪಿ. ಬಂಧಿತರಲ್ಲಿ 80 ಜನರನ್ನು ಬಳ್ಳಾರಿ ಬಂದೀಖಾನೆಗೆ ಸ್ಥಳಾಂತರಿಸಲಾಯಿತು.

ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ನೀಡಿದ ಹಲವಾರು ಮುಸ್ಲಿಂ ಮುಖಂಡರು ಅಲ್ಲಿ ಪ್ರಾರ್ಥನೆ ನೆರವೇರಿಸಿ ಮನೆಯನ್ನು ಪುನಃ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ತಾವು ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದು ಈ ಗಲಭೆ ನಡೆದದ್ದು ಆಶ್ಚರ್ಯಕರ ಎಂದು ಮೂರ್ತಿ ಹೇಳಿದರು. ಪೋಸ್ಟ್ ಅನ್ನು ಷೇರ್ ಮಾಡಿದವರ ವಿರುದ್ಧ ಕ್ರಮಕ್ಕೆ ಅವರು ಆಗ್ರಹಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು. ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರೂ ಗಲಭೆ ಮತ್ತು ಅವಹೇಳನಕಾರಿ   ಫೇಸ್ ಬುಕ್   ಪೋಸ್ಟ್  ಎರಡನ್ನೂ ಖಂಡಿಸಿದರು ಮತ್ತು ಶಾಂತಿ ಕಾಪಾಡಲು ಕರೆ ನೀಡಿದರು. ಇಡೀ ಗಲಭೆಗೆ ಪ್ರಚೋದನೆ ನೀಡಿದವರನ್ನು ಬಂಧಿಸುವಂತೆ ಸಲಹೆ ನೀಡಿದರು. ಹಿಂಸೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಯಿತು.

ಈ ಘಟನೆಯಲ್ಲಿ ತಮ್ಮ ಪಾತ್ರವಿರುವುದನ್ನು ಅಲ್ಲಗಳೆದ SಆPI ಮುಖಂಡರು ಈ ಪ್ರಕರಣ ಘಟಿಸಲು ಪೊಲೀಸರ ನಿರ್ಲಕ್ಷ್ಯವೇ ಕಾರಣವಾಯಿತು ಮತ್ತು ಪೊಲೀಸರ ಕರ್ತವ್ಯಲೋಪದಿಂದ ಈ ಗಲಭೆ ನಡೆಯಲು ಆಸ್ಪದವಾಯಿತು ಎಂದು ಆಪಾದಿಸಿದರು. ಘಟನೆಯಲ್ಲಿ ಸುಮ್ಮನೆ ನಮ್ಮನ್ನು ಎಳೆದು ತರಲಾಗುತ್ತಿದೆ ಎಂದು ಅವರು ದೂರಿದರು.

ಈ ಗಲಭೆಗಳು ಕ್ಷಿಪ್ರವಾಗಿ ರಾಜಕೀಯ ಬಣ್ಣ ಪಡೆದುಕೊಳ್ಳತೊಡಗಿದವು. ರಾಜಕೀಯ ನೇತಾರರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾದರು. ಗಲಭೆಯಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂದು ಬಿಜೆಪಿಯ ಕೆಲವು ನಾಯಕರು ಆರೋಪಿಸಿದರು. “ಕಾಂಗ್ರೆಸ್ ತುಷ್ಟೀಕರಣ ನೀತಿ (ನಿರ್ದಿಷ್ಟ ಸಮುದಾಯದ ಓಲೈಕೆ) ಅನುಸರಿಸುತ್ತಿದ್ದು ಗಲಭೆ ಮಾಡುವುದನ್ನು ಒಂದು ಹಕ್ಕು ಎಂಬಂತೆ ಬಿಂಬಿಸುತ್ತಿದೆ”. ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಹರಿಹಾಯ್ದರು. “ಶಾಸಕರು ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಕಾಂಗ್ರೆಸ್ ಜಾತಿ ರಾಜಕಾರಣ ಮಾಡುತ್ತಿದ್ದು ಪರಿಶಿಷ್ಟ ಜಾತಿವಿರೋಧಿ ನೀತಿ ಅನುಸರಿಸುತ್ತಿದೆ” ಎಂದು ಕೆಲವು ಬಿಜೆಪಿ ಧುರೀಣರು ಕಟಕಿಯಾಡಿದರು. “ಸಂತೋಷ್ ಅವರ ಹೇಳಿಕೆಗಳು ಇಡೀ ಘಟನೆಯನ್ನು ರಾಜಕೀಕರಣಗೊಳಿಸುವಂತಿವೆ” ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಎಂ. ಖರ್ಗೆ ದೂಷಿಸಿದರು. ಈ ಘಟನೆ ಸಂಭವಿಸದಂತೆ ತಡೆಯುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ, ಇದು ಕಾನೂನು ಸುವ್ಯವಸ್ಥೆ ಮತ್ತು ಆಡಳಿತಯಂತ್ರದ ಸಂಪೂರ್ಣ ವೈಫಲ್ಯವನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್ ನ   ಕೆಲ ಮುಖಂಡರು   ಘಟನೆಯನ್ನು ಉಗ್ರವಾಗಿ ಟೀಕಿಸಿದರು.

ಗಲಭೆಕೋರರು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗಳ ಬಳಿಕ ಶಿವಾಜಿನಗರಕ್ಕೆ ಧಾವಿಸಲು ಯೋಜಿಸಿದ್ದರು, ಅಲ್ಲಿಯೂ ಗಲಭೆ ಎಸಗಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರು ಪ್ರತಿಪಾದಿಸಿದರು. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜಾತ್ಯತೀತ ಜನತಾದಳ (ಜೆಡಿಎಸ್) ವರಿಷ್ಠ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೂ ಸೇರಿದಂತೆ ಪ್ರತಿಪಕ್ಷ ನಾಯಕರನೇಕರು ಕೂಡ ಈ ಘಟನೆ “ಪೂರ್ವಯೋಜಿತ ಒಳಸಂಚು” ಎಂದು ಒಕ್ಕೊರಲಿನಿಂದ ಖಂಡಿಸಿದರು. ಉತ್ತರ ಪ್ರದೇಶದಲ್ಲಿ ಸಿಎಎ ವಿರುದ್ಧ ನಡೆದ ಗಲಭೆಗಳಲ್ಲಿ ಹಾನಿಗೀಡಾದ ಆಸ್ತಿ-ಪಾಸ್ತಿಗಳ ನಷ್ಟವನ್ನು ಹಾನಿಮಾಡಿದವರೇ ತುಂಬಿಕೊಡಬೇಕು ಎಂಬ ಕಾನೂನನ್ನು ಅಲ್ಲಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೂಪಿಸಿದ್ದಾರೆ. ಅದೇ ರೀತಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗಳಲ್ಲಿ ಹಾನಿಯನ್ನು ಗಲಭೆ ಕೋರರಿಂದಲೇ ತುಂಬಿಸಿಕೊಳ್ಳಬೇಕು ಎಂದುಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಆಗ್ರಹಿಸಿದರು.

ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯ ಸೋದರ ಸಂಸ್ಥೆ SಆPI ಈ ಗಲಭೆಗೆ ಪ್ರಚೋದನೆ ನೀಡಿತು ಎಂದು ಹಲವರು ಆರೋಪಿಸಿದರು. ಘಟನೆಯಲ್ಲಿ ಪಾತ್ರವಹಿಸಿದ ಆರೋಪದ ಮೇರೆಗೆ SಆPI ನ ಸ್ಥಳೀಯ ಮುಖಂಡರೊಬ್ಬರನ್ನು ಬಂಧಿಸಲಾಯಿತು. PSI ಸಂಘಟನೆ ದೆಹಲಿ ಮತ್ತು ಬೆಂಗಳೂರು ಗಲಭೆಗೆ ನಿಧಿ ಒದಗಿಸಿದೆ ಎಂದೂ ಆರೋಪಿಸಲಾಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಲಭೆಗಳು ನಡೆದ ಆರು ತಿಂಗಳುಗಳ ಒಳಗಾಗಿ ಬೆಂಗಳೂರು ಗಲಭೆಗಳು ಘಟಿಸಿವೆ. ಒಂದು ಸಾವಿರಕ್ಕೂ ಅಧಿಕ ಜನರು ಏಕಾಏಕಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಗಲಭೆ ನಡೆಸಿರುವುದು ಪೂರ್ವಯೋಜಿತ ಕೃತ್ಯವಲ್ಲದೆ ಬೇರೇನಲ್ಲ ಎಂದು ಕೆಲವರ ವಿಶ್ಲೇಷಣೆ.

ಪ್ರತ್ಯಕ್ಷದರ್ಶಿಗಳು ಹೇಳುವಂತೆ ಗಲಭೆಕೋರ ಗುಂಪು ಐದಾರು ಬಾರಿ ದಾಳಿ ನಡೆಸಿತು. ಮತ್ತು ಪ್ರತಿ ದಾಳಿಯ ಸಂದರ್ಭದಲ್ಲೂ ಗಲಭೆಕೋರರ ಗುಂಪಿನ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಹಿಂಸಾಕೃತ್ಯ ನಡೆಸಿದ ಜನರನ್ನು ಹೊರಗಿನಿಂದ ಕರೆತಂದಿರುವಂತಿದೆ, ದಾಳಿ ನಡೆಸಿದವರ ಗುರುತನ್ನು ಮರೆಮಾಚಲು ಅವರನ್ನು ಬೇರೆಡೆಯಿಂದ ಕರೆಸಿರುವ ಹಾಗಿದೆ ಎಂದು ಕೆಲವು ಜನರು ಅಭಿಪ್ರಾಯಪಟ್ಟರು.

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನು ಹಾನಿ ಮಾಡಿದವರಿಂದಲೇ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ನೇತೃತ್ವದ ಸರ್ಕಾರದ ಮಾದರಿಯನ್ನು ಅನುಸರಿಸುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರವು ಈ ಹಿಂಸಾತ್ಮಕ ಘಟನೆ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿತು. ಜಿಲ್ಲಾ ಮ್ಯಾಜಿಸ್ಟ್ರೇಟರೊಬ್ಬರು ಗಲಭೆಯ ತನಿಖೆ ನಡೆಸಲಿದ್ದಾರೆ ಎಂದು ಸರ್ಕಾರ ಪ್ರಕಟಿಸಿತು. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಗರದ ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಕಾರ್ಯದಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದವು ಮತ್ತು ದುಷ್ಕರ್ಮಿಗಳ ವಿರುದ್ಧ ತತ್ಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದವು.

ರಾಜಕೀಯ ನೇತಾರರು ಪಕ್ಷಭೇದ ಮರೆತು ಈ ಹಿಂಸಾತ್ಮಕ ಘಟನೆಯನ್ನು ಖಂಡಿಸಿದರು. ಗಲಭೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿದರು ಮತ್ತು ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಕಂದಾಯ ಸಚಿವ ಆರ್.ಅಶೋಕ್ ಅವರು ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಭೇಟಿ ನೀಡಿ ಸ್ಥೈರ್ಯ ತುಂಬಿದರು. ಶಾಸಕ ಮೂರ್ತಿ “ನನಗೆ ನನ್ನ ಅಣ್ಣನ ಮಗನೊಂದಿಗೆ ಹತ್ತು ವರ್ಷಗಳಿಂದ ಸಂಪರ್ಕ ಇಲ್ಲ” ಎಂದು ಹೇಳಿದರು. ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕೆಂದು ಅವರು ವಿನಂತಿಸಿದರು. ಅವರ ಅಣ್ಣನ ಮಗ ಪುಲಿಕೇಶಿ ನಗರ ನಿವಾಸಿ ನವೀನ್ 20 ರ ಆಸುಪಾಸಿನ ತರುಣನಾಗಿದ್ದು ತನ್ನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಈ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.

ಈ ಘಟನೆಯು 1986ರಲ್ಲಿ ಬೆಂಗಳೂರಿನಲ್ಲಿ 11 ಜನರ ಮರಣಕ್ಕೆ ಕಾರಣವಾದ ಪತ್ರಿಕೆಯೊಂದರ ಲೇಖನದ ಹಿನ್ನೆಲೆಯಲ್ಲಿ ನಡೆದ ಗಲಭೆಯನ್ನು ನೆನಪಿಗೆ ತರುತ್ತದೆ.

ಇಡೀ ಘಟನೆ ದುರದೃಷ್ಟಕರ. ಗಲಭೆಗೆ ಮೂವರು ಬಲಿಯಾಗಿದ್ದು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದ್ದು ವಿಷಾದಕರ. ಆದರೆ ಇಡೀ ಘಟನೆಯ ನಿಯಂತ್ರಣಕ್ಕೆ ನಗರದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತೋರಿದ ಸ್ಥೈರ್ಯ, ತಾಳ್ಮೆ ಮತ್ತು ಸಂಯಮಗಳು ಪ್ರಶಂಸಾರ್ಹವಾಗುತ್ತವೆ. ಗೋಲಿಬಾರ್ ನಡೆಸಲೇಬೇಕಾದಂಥ ಸನ್ನಿವೇಶ ಸೃಷ್ಟಿಯಾದಾಗಲೂ ಅನಿವಾರ್ಯವಾದಾಗ ಮಾತ್ರ ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಲಾಯಿತು. ಅಪಾರ ಸಂಯಮ ವಹಿಸಿ ಈ ಗಲಭೆ ನಗರದ ಇತರ ಭಾಗಗಳಿಗೆ ಹರಡದಂತೆ, ಕೋಮುಗಲಭೆಯ ಸ್ವರೂಪ ತಳೆಯದಂತೆ ನೋಡಿಕೊಂಡ ಪೊಲೀಸರ ಕೆಚ್ಚೆದೆಯ ಕ್ರಮ ಪ್ರಶಂಸಾರ್ಹವಾಗಿದೆ. ಇಲ್ಲವಾಗಿದ್ದಲ್ಲಿ ಇಡೀ ನಗರಕ್ಕೆ ಗಲಭೆ ಪ್ರಸರಿಸಿದ್ದರೆ ಊಹಿಸಿಕೊಳ್ಳಲೂ ಸಾಧ್ಯವಾಗದಂಥ ಅನಾಹುತಗಳಾಗಲು ಅವಕಾಶವಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಇಲಾಖೆ ಸಂಪೂರ್ಣ ಜಾಗೃತವಾಗಿದ್ದು ಎಚ್ಚರಿಕೆಯ ಹೆಜ್ಜೆಗಳನ್ನಿರಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದೆ. ಇದೊಂದು ಸ್ತುತ್ಯರ್ಹ ಕಾರ್ಯವಾಗಿದೆ.