ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಶ್ರೀ ಕಮಲ್ ಪಂತ್ ಐಪಿಎಸ್‍ರವರು ಅಧಿಕಾರ ಸ್ವೀಕರಿಸಿರುವುದು ನಗರದ ಜನತೆಯ ಸುಕೃತ ಎನ್ನಬಹುದಾಗಿದೆ. ಕಮಲ್ ಪಂತ್ ಅವರು ನೇರ ನಡೆ-ನುಡಿಯ, ಪ್ರಾಮಾಣಿಕ ಮತ್ತು ಫಲಿತಾಂಶ ಕೇಂದ್ರಿತ ಸೇವೆ ಮಾಡುವ ನಿಸ್ಪøಹ ಪೊಲೀಸ್ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಉತ್ತರಾಖಂಡ್ ಮೂಲದ ಕಮಲ್ ಪಂತ್ (56) ಅವರು 24-06-1964 ರಂದು ಡೆಹ್ರಾಡೂನ್‍ನಲ್ಲಿ ಜನಿಸಿದರು. ಆನ್ವಯಿಕ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಶ್ರೀಯುತರು 1990ರ ತಂಡದ IPS ಅಧಿಕಾರಿಯಾಗಿದ್ದಾರೆ. ಬೆಂಗಳೂರು ನಗರದ 34ನೇ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಶ್ರೀಯುತರು ಈ ಮುನ್ನ ಇಂಟೆಲಿಜೆನ್ಸ್ ಮುಖ್ಯಸ್ಥರಾಗಿ, ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ನಗರ ಕಾನೂನು-ಸುವ್ಯವಸ್ಥೆ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಕೆಎಸ್‍ಆರ್‍ಪಿ ಮತ್ತು ಆಡಳಿತ ಎಡಿಜಿಪಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಶ್ರೀ ಭಾಸ್ಕರರಾವ್ IPS ರವರಿಂದ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಶ್ರೀ ಕಮಲ್ ಪಂತ್ ಅವರು ಹೇಳಿದ್ದಿಷ್ಟು “ಕರ್ನಾಟಕ ಸರಕಾರ ನನ್ನ ಮೇಲೆ ನಂಬಿಕೆ ಇರಿಸಿ ಬೆಂಗಳೂರು ನಗರದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಪ್ರಸಕ್ತ ಸನ್ನಿವೇಶದಲ್ಲಿ ಕೊರೋನಾ ಪಿಡುಗು ನಿಯಂತ್ರಿಸುವುದು ಒಂದು ಸವಾಲಾಗಿದೆ. ಎಷ್ಟೋಜನ ಪೊಲೀಸರು ಕೋವಿಡ್ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುವಾಗಲೇ ಜೀವ ಕಳೆದುಕೊಂಡಿದ್ದಾರೆ. ನಮ್ಮ ಪೊಲೀಸ್ ಸಿಬ್ಬಂದಿಗೆ ಸುರಕ್ಷತೆ ಮತ್ತು ನೆಮ್ಮದಿ ಒದಗಿಸುವುದು ನಮ್ಮ ಕರ್ತವ್ಯವೂ ಪ್ರಥಮಾದ್ಯತೆಯೂ ಆಗಿದೆ. ಜೊತೆಗೆ ಬೆಂಗಳೂರು ನಗರ ಐಟಿ ಕೇಂದ್ರವಾಗಿರುವುದರಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿರುವುದು ಬೃಹತ್ ಆತಂಕ ಸೃಷ್ಟಿಸಿದೆ. ಈ ಅಪರಾಧಗಳನ್ನು ಮಟ್ಟಹಾಕಲು ನಾವು ಒತ್ತು ನೀಡುತ್ತಿದ್ದೇವೆ. ಮಾದಕ ವಸ್ತುಗಳ ಜಾಲ ದಮನ ಮತ್ತು ಮಹಿಳೆಯರಿಗೆ ಸುರಕ್ಷತೆ ಸಹ ನಮ್ಮ ಪ್ರಮುಖ ಆದ್ಯತೆಯಾಗಿದೆ. ಕೋವಿಡ್-19 ಪಿಡುಗಿನ ನಿಯಂತ್ರಣ ಪೊಲೀಸ್ ಇಲಾಖೆಯೊಂದರಿಂದಲೇ ಸಾಧ್ಯವಾಗದು. ನಾವು ದೊಡ್ಡ ವ್ಯವಸ್ಥೆಯೊಂದರ ಭಾಗವಾಗಿದ್ದೇವೆ. ಈ ಸಾಂಕ್ರಾಮಿಕ ರೋಗದ ನಿರ್ಮೂಲನೆಗೆ ಪೊಲೀಸರು ಸ್ವತಃ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ ಪೊಲೀಸ್ ಸಿಬ್ಬಂದಿಯಿಂದ ಯಾವುದೇ ಕರ್ತವ್ಯಲೋಪ, ನ್ಯೂನತೆಗಳು ಕಂಡುಬಂದಿದ್ದರೆ ನಾವು ಖಂಡಿತವಾಗಿಯೂ ಅದನ್ನು ಬಿಗಿಪಡಿಸುತ್ತೇವೆ. ಕಂಟೈನ್‍ಮೆಂಟ್ ವಲಯದ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ”.
“ನಾವು ನಿಮಗಾಗಿ ಇದ್ದೇವೆ. ನಮಗೆ ನಿಮ್ಮ ಸಹಕಾರ ಬೇಕಾಗಿದೆ. ನಾವು ನಿಮ್ಮ ವಿಶ್ವಾಸ ಗಳಿಸಬಲ್ಲೆವು, ನಿಮಗಾಗಿ ಸದಾಕಾಲ ಲಭ್ಯವಿರಬಲ್ಲೆವು ಎಂಬ ಖಚಿತ ಆತ್ಮವಿಶ್ವಾಸ ನಮ್ಮದಾಗಿದೆ. ನಾವು ಬೆಂಗಳೂರಿನ ಜನತೆಯ ಸಹಭಾಗಿತ್ವದಲ್ಲಿದ್ದಾಗ ಮಾತ್ರ ವ್ಯವಸ್ಥೆಯು ಚೆನ್ನಾಗಿ ಕಾರ್ಯನಿರ್ವಹಿಸಬಲ್ಲದು” ಎಂದು ಅವರು ನುಡಿದರು.
“ನಾನು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಹೆಮ್ಮೆ ಪಡುತ್ತೇನೆ. ಕೋವಿಡ್ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ ಪೊಲೀಸರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಇಂಥ ದುರ್ಭರ ಸನ್ನಿವೇಶ ನಿಭಾಯಿಸುವಲ್ಲಿ ಅವರು ಅದ್ಭುತ ಸೇವೆ ಸಂದಾಯ ಮಾಡಿದ್ದಾರೆ. ಈಗ ಕೋವಿಡ್ ಸೋಂಕಿತರಾಗಿರುವ ಪೊಲೀಸರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಪಂತ್ ಹೇಳಿದರು.
ಶ್ರೀ ಕಮಲ್ ಪಂತ್ ಅವರು ನಿಷ್ಕಳಂಕ ಸೇವಾ ದಾಖಲೆ ಹೊಂದಿರುವ ಖಡಕ್ ಅಧಿಕಾರಿ ಎಂಬ ಕೀರ್ತಿ ಗಳಿಸಿದ್ದಾರೆ. ತಮ್ಮ ಸೇವಾವಧಿಯಲ್ಲಿ ಕೆಲವು ಸೂಕ್ಷ್ಮ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
2013-14ರಲ್ಲಿ ನಗರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಅವರನ್ನು ಬಂದೀಖಾನೆ ಎಡಿಜಿಪಿಯಾಗಿ ನೇಮಕ ಮಾಡಲಾಯಿತು. ಈ ಅವಧಿಯಲ್ಲಿ ಅವರು ವಿಶೇಷ ತನಿಖಾ ತಂಡ (SIಖಿ) ದ ನೇತೃತ್ವ ವಹಿಸಿದ್ದರು. ಈ ತಂಡವನ್ನು ಲೋಕಾಯುಕ್ತ ಸಂಸ್ಥೆಯಲ್ಲಿನ ಆಂತರಿಕ ಭ್ರಷ್ಟಾಚಾರ ತನಿಖೆ ನಡೆಸಲು ರಚಿಸಲಾಗಿತ್ತು.
ಪಂತ್ ಅವರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಏSಖP) ಯ ಎಡಿಜಿಪಿಯಾಗಿ ಮತ್ತು 2016ರಲ್ಲಿ ಗ್ರೂಪ್ ‘ಸಿ’ ಪೊಲೀಸ್ ಸಿಬ್ಬಂದಿಯ ವೇತನ-ಭತ್ಯೆ ಪರಿಷ್ಕರಣೆಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಚಿಸಿದ ಔರಾದ್ಕರ್ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಳೆದ ಆಗಸ್ಟ್‍ನಲ್ಲಿ ಪಂತ್ ಅವರನ್ನು ಇಂಟೆಲಿಜೆನ್ಸ್ ವಿಭಾಗದ ಎಡಿಜಿಪಿಯಾಗಿ ನೇಮಕ ಮಾಡಲಾಗಿತ್ತು. ಶ್ರೀಯುತರು ವಿಶಿಷ್ಟ ಸೇವೆಗಾಗಿ 2007ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪೊಲೀಸ್ ಪದಕ ಪಡೆದರು. ಬಳಿಕ 2014ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇದೇ ಗೌರವವನ್ನು ಮತ್ತೊಮ್ಮೆ ಸ್ವೀಕರಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ “ಪೊಲೀಸ್ ಮತ್ತು ನಾಗರಿಕರ ನಡುವಿನ ಅಂತರ ಕಡಿಮೆ ಮಾಡಲಾಗುವುದು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಗೆ ಒತ್ತು ನೀಡಲಾಗುವುದು” ಎಂದು ಭರವಸೆ ನೀಡಿದರು.
ನಾಗರಿಕರಿಗೆ ಪೊಲೀಸ್ ಸಿಬ್ಬಂದಿಯ ಸೇವೆ ಶೀಘ್ರ ಲಭ್ಯವಾಗುವಂತೆ ಮಾಡುವುದು, ಮಾದಕ ವಸ್ತು ವ್ಯಸನದ ಪಿಡುಗಿನ ನಿರ್ಮೂಲನೆ ಮಾಡುವುದು ಶ್ರೀಯುತರ ಪ್ರಮುಖ ಕಾರ್ಯಸೂಚಿಯಾಗಿದೆ.
ಪೊಲೀಸ್ ಇಲಾಖೆ ಕುರಿತು ತಮ್ಮ ಸಿದ್ಧಾಂತವೇನು ಎಂದು ಪ್ರಶ್ನಿಸಿದಾಗ “ನನ್ನ ಸಿದ್ಧಾಂತ ಏನೆಂದರೆ ಪೊಲೀಸರು ನಗರದ ಜನತೆಗೆ ಸುಲಭ ಲಭ್ಯರಾಗುವುದಷ್ಟೇ ಅಲ್ಲ, ಅವರ ಮನೆ ಬಾಗಿಲಿಗೆ ಹೋಗಿ ಸೇವೆ ಸಲ್ಲಿಸುವಂತೆ ಮಾಡುವುದಾಗಿದೆ. ನಾನು ಪೂರ್ವನಿಗದಿತ ವೇಳೆಯಲ್ಲಿ ಜನತೆಗೆ ಯಾವಾಗ ಬೇಕಾದರೂ ಲಭ್ಯನಿರುತ್ತೇನೆ. ಸಮುದಾಯ ಪೊಲೀಸ್ ಸೇವೆ ಬಲಪಡಿಸುತ್ತೇನೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಮೊಹಲ್ಲಾ ಸಭೆಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿರುತ್ತೇನೆ. ಪ್ರಸ್ತುತ ಕ್ಷಿಪ್ರ ಪ್ರತಿಕ್ರಿಯಾ ಪಡೆಯಾಗಿರುವ ಹೊಯ್ಸಳ ಪಡೆಯನ್ನು ಶೀಘ್ರವೇ ಜನತೆಗೆ ಸುಲಭ ಲಭ್ಯವಾಗುವಂತೆ ಮಾಡುತ್ತೇನೆ. ಪ್ರಸ್ತುತ ಹೊಯ್ಸಳ ಪಡೆ ಕೋವಿಡ್ ಪೀಡಿತರ ನೆರವಿಗೆ ಮೀಸಲಾಗಿದ್ದು, ಶೀಘ್ರವೇ ಸಾರ್ವಜನಿಕರ ಕುಂದು ಕೊರತೆಯ ನಿವಾರಣೆಗೆ ಧಾವಿಸುವಂತೆ ವ್ಯವಸ್ಥೆ ಮಾಡಲಾಗುವುದು” ಎಂದರು.
ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಮಾದಕ ವಸ್ತುಗಳ ದಂಧೆಯನ್ನು ದಮನ ಮಾಡುವುದಾಗಿ ಸಂಕಲ್ಪ ತೊಟ್ಟಿದ್ದ ಪಂತ್ ಅವರು ಇದೀಗ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಡ್ರಗ್ಸ್ ದಂಧೆಯ ಕರಾಳ ಮುಖವನ್ನು ಬಯಲಿಗೆಳೆದಿದ್ದಾರೆ. ಕೆ.ಜಿ. ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣಗಳನ್ನು ಕೂಡ ಸಮರ್ಥವಾಗಿ ನಿಭಾಯಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಮ್ಮ ಪೊಲೀಸ್ ವ್ಯವಸ್ಥೆಯು ಅತ್ಯಂತ ವೃತ್ತಿಪರವೂ, ಪಾರದರ್ಶಕವೂ, ಜನಕೇಂದ್ರಿತವೂ ಆಗಿರುತ್ತದೆ. ಪೊಲೀಸ್ ಪಡೆಗಳು ಬಲಾಬಲ, ಸಾಮಥ್ರ್ಯ ಮೀರಿ ಜನತೆಗೆ ಲಭ್ಯವಾಗಿರುತ್ತವೆ ಎಂದು ಕಮಲ್ ಪಂತ್ ಭರವಸೆ ನೀಡಿದ್ದಾರೆ.
ಬೆಂಗಳೂರು ನಗರದ ಜನತೆಗೆ ಓರ್ವ ಉತ್ತಮ ಪೊಲೀಸ್ ಆಯುಕ್ತರು ದೊರೆತಿದ್ದಾರೆ. ಶ್ರೀ ಕಮಲ್ ಪಂತ್ ಅವರಿಗೆ ಭಗವಂತನು ಹೆಚ್ಚಿನ ಆಯುರಾರೋಗ್ಯ-ಸಿರಿಸಂಪದಗಳನ್ನು ಅನುಗ್ರಹಿಸಲಿ, ಅವರ ಕರ್ತೃತ್ವ ಶಕ್ತಿ ಹೆಚ್ಚಾಗಲಿ, ತನ್ಮೂಲಕ ನಾಡಿನ ಜನತೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅವರ ಸೇವೆ ದೊರಕುವಂತಾಗಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.